ಇದು ಮನೆಯೇ ?
ಅಸ್ವಾಭಾವಿಕ ಏಕಾಂತಗಳ
ಭಯಾನಕ ಮೌನಗಳ
ಕತ್ತಲೆಯ ಕೋಣೆಗಳ
ಇದು ಮನೆಯೇ ?
ಹೊರಗಿನ ಊಟಗಳ
ಉರಿಯದ ಒಲೆಗಳ
ತೀರದ ಹಸಿವೆಗಳ
ಇದು ಮನೆಯೇ ?
ಪ್ರೀತಿ ಇಲ್ಲದ ಹೃದಯಗಳ
ಸುಳ್ಳು ಅನುಮಾನಗಳ
ಮುಗಿಯದ ಅಹಂಕಾರಗಳ
ಮೇಲಿನ ಸಾಲುಗಳಿರುವ ಬ್ಲಾಗನು ನೋಡಿ ನನಗೆ ಮೊದಲಿಗೆ ಆಶ್ಚರ್ಯವಾಗಿತ್ತು. ಇಸವಿ 2011 ರ ಜುಲೈನಿಂದ ಡಿಸೆಂಬರ್ ವರೆಗೆ ಈ ಬ್ಲಾಗಿನಲ್ಲಿ ಮುನ್ನೂರಕ್ಕು ಹೆಚ್ಚು ಕವಿತೆ ಲೇಖನಗಳು ಬರೆಯಲ್ಪಟ್ಟಿದ್ದವು. ಇಸವಿ 2012 ರಲ್ಲಿ ಜನವರಿಯಿಂದ ಇಲ್ಲಿಯವರೆಗೆ ನಾಲ್ಕು ನೂರು ಚಿಲ್ಲರೆ ಕವಿತೆಗಳು ಬರಹಗಳು!! ಬರೀ ಕ್ರಿಕೆಟ್ ನಲ್ಲಷ್ಟೇ ಮುನ್ನೂರು, ನಾನೂರು ರನ್ ಗಳನ್ನು ಕೇಳಿಯಷ್ಟೇ ಗೊತ್ತಿದ್ದ ನನಗೆ ಈ ರೀತಿ ಕವಿತೆಗಳ ಸೆಂಚುರಿಗಳನ್ನು ಸದ್ದಿಲ್ಲದೆ ಮಾಡುತ್ತಿರುವ ಈ ಅಣ್ಣನ ಕನ್ನಡದ ಮೇಲಿನ ಪ್ರೀತಿಗೆ ಹೀಗೊಂದು ಸಲಾಮು ನೀಡಬೇಕೆನಿಸಿತು. "ನಾನೊಬ್ಬ ಸಾಧಾರಣ ಬರಹಗಾರ. ಸಣ್ಣ ವಯಸ್ಸಿನಿಂದ ನನಗೆ ಓದುವುದು ಎಂದರೆ ತುಂಬಾ ಇಷ್ಟ. ಬಾಲ್ಯದಿಂದ ಮನದಲ್ಲಿದ್ದ ಇಚ್ಛೆಯನ್ನು ಹೊರ ತಂದು ಅದನ್ನು ಇಲ್ಲಿ ಗೀಚುತ್ತಿದ್ದೇನೆ. ನಿಮ್ಮ ಆಶೀವಾ೯ದ ಮತ್ತು ಪ್ರೋತ್ಸಾಹದೊಂದಿಗೆ ಬ್ಲಾಗ್ ಲೋಕದಲ್ಲಿ ನನ್ನ ಬರಹದ ಪ್ರಯಾಣ ಸಾಗಲಿ." ಎಂದು ತನ್ನ ಬ್ಲಾಗಿನಲಿ ತನ್ನ ಪರಿಚಯದ ನುಡಿ ನುಡಿದಿರುವ ಅಣ್ಣನ ಬ್ಲಾಗಿನ ಹೆಸರು ಇನ್ನೊಂದು ಜೀವನ..
ಸಂದೇಶ ಬರುವ ತನಕ ಪತ್ರ ಇನ್ನೊಂದು ಬರೆದು ಇಡುವೆ
ನನಗೆ ಗೊತ್ತಿದೆ ಅವಳು ಏನು ಬರೆದಿರಬಹುದು ಉತ್ತರದಲಿ
ನಾವು ಹೆಚ್ಚು ಜನ ಮಿರ್ಜಾ ಗಾಲಿಬ್ ರ ಹೆಸರನ್ನು ಕೇಳಿದ್ದೇವಾ ಹೊರತು ಓದಿಕೊಂಡಿರುವುದಿಲ್ಲ. ಅಂತಹ ಗಾಲಿಬ್ ರ ಚಂದದ ದ್ವಿಪದಿಗಳನ್ನು ಕನ್ನಡಕ್ಕೆ ಅನುವಾದಿಸುವ ಈ ಅಣ್ಣನ ಪ್ರಯತ್ನ ನೋಡಿ ನಿಜಕ್ಕೂ ಖುಷಿಯಾಯಿತು. ಗಾಲಿಬ್ ರ ಜೊತೆ ಜೊತೆಗೆ ಮಹಾತ್ಮ ಕಬೀರರ ದೋಹ, ಹಿಂದಿಯ ಚಿತ್ರಗೀತೆಗಳ ಕನ್ನಡಾನುವಾದ ಎಲ್ಲವನು ಶ್ರಧ್ದೆಯಿಂದ ಈ ಸಹೋದರ ಮಾಡುತ್ತಿರುವುದು ಖುಷಿಯ ಸಂಗತಿ.. ಅನುವಾದ ಎಷ್ಟು ಕಷ್ಟದ ಕೆಲಸ ಎಂದು ಅನುವಾದಿಸಲು ಪ್ರಯತ್ನಿಸಿದಾಗಲೇ ತಿಳಿಯುವುದು.. ಕಷ್ಟಕರವಾದ ಕೆಲಸವಾದ ಅನುವಾದಗಳ ಇವರು ಮಾಡಿರುವುದು ನಿಜಕ್ಕೂ ಶ್ಲಾಘನೀಯ..
ಅವನ ಅಪರಾಧ ಸಾಬೀತಾಯಿತು.
ಯಾರೋ ಅವನಿಗೆ ಕೇಳಿದರು.
"ನೀನು ಮಾಡಿದ ಅಪರಾಧ ಏನು ?
ಅವನು " ನನ್ನ ಅಪರಾಧ ನ್ಯಾಯಾಲಯದಲ್ಲಿ ಸತ್ಯ ಹೇಳಿದ್ದು"
ಪುಟಗಟ್ಟಲೇ ಕಥೆ ಕವನಗಳನ್ನು ಕುಳಿತು ಓದಿಕೊಳ್ಳಲು ಸಮಯವಿಲ್ಲದಿದ್ದಾಗ ನಮ್ಮನ್ನು ಒಮ್ಮೊಮ್ಮೆ ಓದಿಗೆ ಹಚ್ಚುವ ಸಾಹಿತ್ಯ ಪ್ರಕಾರಗಳು ಎಂದರೆ ಪುಟ್ಟ ಪುಟ್ಟ ಹನಿಗವನಗಳು ಹಾಗೂ ಮಿನಿ ಕಥೆಗಳು. ಈ ಸಹೋದರ ಮೇಲಿನ ತರಹದ ಮಿನಿ ಕಥೆಗಳ ಪ್ರಕಾರದ ಮೇಲೂ ಕೈಯಾಡಿಸಿದ್ದಾರೆ. ದೂರದ ದುಬೈನಲ್ಲಿದ್ದರೂ ಕನ್ನಡ ಮೇಲಿನ ಅಭಿಮಾನ ಇವರಲ್ಲಿ ನಮ್ಮೆಲ್ಲರಿಗಿಂತ ದುಪ್ಪಟ್ಟಿದೆ ಎನ್ನುವುದಕ್ಕೆ ಅವರ ರಚನೆಗಳೇ ಸಾಕ್ಷಿ. ಕನ್ನಡದ ಒಬ್ಬ ಅಪ್ಪಟ ಪ್ರೇಮಿಯಾದ ಸಹೋದರ ಹರೀಶ್ ಶೆಟ್ಟಿ ಶಿರ್ವ ಅವರೊಂದಿಗೆ ನಡೆಸಿದ ಮಾತುಕತೆಯ ತುಣುಕುಗಳು ಇಗೋ ನಿಮಗಾಗಿ ಗೆಳೆಯರೇ..
ಶ್ರೀ ಹರೀಶ್ ಶೆಟ್ಟಿ ಶಿರ್ವ |
"ನಾನೊಬ್ಬ ಸಾಧಾರಣ ಬರಹಗಾರ.
ನನ್ನನ್ನು ಕವಿ ಎನ್ನುವುದು ಸೂಕ್ತವಲ್ಲ ಅಂಥ ನನ್ನ ಭಾವನೆ.
ನನ್ನ ಊರು ಉಡುಪಿ ಶಿರ್ವ, ಮಂಚಕಲ್, ನನ್ನ ಜನ್ಮ ಆದದ್ದು ಅಲ್ಲಿ, ಆದರೆ ನನ್ನ ಜನ್ಮದ ನಂತರ ನನ್ನ ಪಾಲಕರು ಮುಂಬೈಗೆ ಬಂದು ಅಲ್ಲಿ ಸೆಟಲ್ ಆದರು. ನನ್ನ ತಂದೆಯ ಹೋಟೆಲ್ ಇತ್ತು ಮುಂಬೈಯಲ್ಲಿ, ಅದರಿಂದ ನನ್ನ ಬಾಲ್ಯ, ಶಿಕ್ಷಣ ಎಲ್ಲ ಮುಂಬೈಯಲ್ಲೇ ಆದದ್ದು. ನಾನು ಕನ್ನಡ ಶಾಲೆಯಲ್ಲಿ ಕಲಿತ್ತದ್ದು ,ಆಗ ಮುಂಬೈಯಲ್ಲಿ ಕೆಲವೇ ಕನ್ನಡ ಶಾಲೆ ಇತ್ತು. ಅದರಲ್ಲಿ ಒಂದು ನಾನು ಕಲಿತ ಶಾಲೆ ಮುಂಬೈ ಮಾಹಿಮ್'ಲ್ಲಿ , ಸರಕಾರಿ ಶಾಲೆ, ಆದರೆ ಶಿಕ್ಷಣ ಉತ್ತಮವಾಗಿತ್ತು. ಶಾಲೆ ಮುಗಿಸಿ ಕಾಲೇಜ್ ತನಕ ಮುಂಬೈಯಲ್ಲೇ ನನ್ನ ಶಿಕ್ಷಣ. ಕಾಲೇಜ್ ಮುಗಿಸಿದ ನಂತರ ತಂದೆಯಂತೆ ಹೋಟೆಲ್ ವ್ಯಾಪಾರಕ್ಕೆ ಹೋಗದೆ ನಾನು ಹೊರಗೆ ಕೆಲಸ ಮಾಡಲು ಶುರು ಮಾಡಿದೆ, ಆದರೆ ಅಲ್ಲಿ ಸರಿ ಆಗದೆ ಪುನಃ ತಂದೆಯ ವ್ಯಾಪಾರಕ್ಕೆ ಬಂದೆ. ಹೀಗೆಯೇ ತುಂಬಾ ಸಮಯ ವ್ಯಾಪಾರದಲ್ಲಿ ಇದ್ದು ಪುನಃ ಬೇಜಾರಾಗಿ ಪುನಃ ಹೊರಗೆ ಅಕೌಂಟೆಂಟ್ ಆಗಿ ಕೆಲಸ ಸೇರಿದೆ. ಹೀಗೆಯೇ ಸಮಯ ಕಳೆದಂತೆ ಪರದೇಶಕ್ಕೆ ಬಂದು ಅಲ್ಲಿ ಕೆಲಸ ಸೇರಿದೆ. ರಜೆಗೆ ಎಂದು ಭಾರತಕ್ಕೆ ಬಂದವನು ಮದುವೆ ಆಗಿ ಪುನಃ ಮುಂಬೈಯಲ್ಲಿ ಸೆಟಲ್ ಆದೆ. ಆದರೆ ಜೀವನ ಚಕ್ರ ನನ್ನನ್ನು ಪುನಃ ಪರದೇಶಕ್ಕೆ ದೂಡಿ ಈಗ ಪರಿವಾರ ಸಮೇತ ನಾನು ದುಬೈಯಲ್ಲಿ ವಾಸಿಸುತ್ತಿದ್ದೇನೆ.
ಸತ್ಯ ಹೇಳಬೇಕೆಂದರೆ ಈ ಜೀವನದ ಜಂಜಾಟದಲ್ಲಿ ನಾನು ಕನ್ನಡದಿಂದ ತುಂಬಾ ತುಂಬಾ ದೂರ ಆಗಿದೆ. ಆದರೆ ಫೇಸ್ ಬುಕ್ ನಿನಗೆ ತುಂಬಾ ತುಂಬಾ ಧನ್ಯವಾದ. ೨೦೦೯'ಲ್ಲಿ ಫೇಸ್ ಬುಕ್'ಲ್ಲಿ ಅಕೌಂಟ್ ತೆರೆಯುವಾಗ , ನಾನು ಸ್ವಪ್ನದಲ್ಲೂ ಯೋಚಿಸಲಿಲ್ಲ ಇದು ನನ್ನನ್ನು ಕನ್ನಡದ ಇಷ್ಟು ಹತ್ತಿರ ತರಬಹುದೆಂದು. ಕನ್ನಡದ ಅನೇಕ ತಾಣಗಳನ್ನು ನೋಡುತ , ನನಗೆ ಅದರಲ್ಲಿ ರುಚಿಯಾಗಿ ನಾನು ಸಹ ನನ್ನದೆ "ಕರ್ನಾಟಕ ದಿನ ವಾರ್ತೆಗಳು" ಎಂಬ ಒಂದು ಕನ್ನಡ ತಾಣ ಶುರು ಮಾಡಿದೆ. ಹೀಗೆಯೇ ಅನ್ಯರ ಕವನ , ಕಾವ್ಯ , ಪೋಸ್ಟ್ ಮಾಡುತ ಮಾಡುತ ನಾನು ಸಹ ನನ್ನ ಜೀವನದ ಹಲವು ಘಟನೆಗಳನ್ನು ಫೇಸ್ ಬುಕ್ ನೋಟ್ಸ್ ನಲ್ಲಿ ಬರೆದೆ.
ಒಂದು ದಿವಸ ನಾನು ಬರೆದ ಒಂದು ಕಥೆ " ಪಕ್ಯ " "ಕರ್ನಾಟಕ ದಿನ ವಾರ್ತೆಗಳು" ದಲ್ಲಿ ಪೋಸ್ಟ್ ಮಾಡಿದೆ. ಇಲ್ಲಿ ಮಾನ್ಯ ಶ್ರೀ ರವಿ ಮೂರ್ನಡ್ ಅವರ ಕೃಪಾ ದೃಷ್ಟಿ ನನ್ನ ಹಾಗು ನನ್ನ ಈ ಕಥೆಯ ಮೇಲೆ ಮೇಲೆ ಬಿತ್ತು . ಅವರು ನನ್ನ ಈ ಕಥೆಯನ್ನು "ನಿಲುಮೆ"ಯಲ್ಲಿ ಕಳುಹಿಸಿ ಮುದ್ರಿಸಿದ್ದರು. ಇಂದನ್ನು ಕಂಡು ನನಗೆ ತುಂಬಾ ಆನಂದ ಹಾಗು ಇದರ ನಂತರ ಶ್ರೀ ರವಿ ಮೂರ್ನಡ್ ಅವರು ನನ್ನ ಇನ್ನೊಂದು ಕಥೆ "ಸರದಾರ್ ಅಂಕಲ್ " ಸಹ "ನಿಲುಮೆ"ಯಲ್ಲಿ ಮುದ್ರಿಸಿದ್ದರು. ಈ ಪ್ರೋತ್ಸಹನದಿಂದ ಮೆಲ್ಲ ಮೆಲ್ಲ ನಾನು ಕವಿತೆ ಬರೆಯಲು ಶುರು ಮಾಡಿದೆ ಹಾಗು ಸಂತ ಕಬೀರ್ ಅವರ ದೋಹಗಳನ್ನು ಅನುವಾದಿಸಲು ಶುರು ಮಾಡಿದೆ. ನನಗೆ ಬರೆಯುವ ಒಂದು ಚಟ ಆಯಿತು .ಆದರೆ ಕನ್ನಡದಿಂದ ಹಲವು ಸಮಯ ದೂರ ಇದ್ದ ಕಾರಣ ನಾನು ಬರೆಯುವಾಗ ಹಲವು ತಪ್ಪುಗಳು ಆಗುತಿತ್ತು. ಆದರೆ ತುಂಬಾ ತುಂಬಾ ಧನ್ಯವಾದಗಳು " ಕನ್ನಡ ಬ್ಲಾಗ್ " ಎಂಬ ಸುಂದರ ತಾಣದ ನಿರ್ವಾಹಕರಾದ ಮಾನ್ಯ ಶ್ರೀ ರವಿ ಮೂರ್ನಡ್ ಹಾಗು ನನ್ನ ಇತರ ಎಲ್ಲ ಮಿತ್ರರಿಗೆ ಅವರು ನನ್ನನ್ನು ತಿದ್ದಿ ತಿದ್ದಿ ನನ್ನನ್ನು ಸುಧಾರಿಸಿದರು. ಅವರಿಗೆಲ್ಲ ನನ್ನ ಕೋಟಿ ಕೋಟಿ ವಂದನೆಗಳು. ನನ್ನ ಅನೇಕ ಧನ್ಯವಾದಗಳು ನನ್ನ ಕವನಗಳನ್ನು ಅತಿ ಪ್ರೀತಿಯಿಂದ ಓದುವ ನನ್ನ ಓದುಗರಿಗೆ.
ಕೊನೆಗೆ ಕೇವಲ ಎರಡು ಮಾತು ....
ಕನ್ನಡ....
ನೀನೊಂದು ಭಾಷೆಯಲ್ಲ
ನನ್ನನ್ನು ನಿರ್ಮಿಸಿದ ಚಿತ್ರಕಾರ
ನಿನ್ನ ವಿನಃ ನಾನು ಅಪೂರ್ಣ
ನೀನು ಹೂವು ಆದರೆ ನಾನು ಕೇವಲ ದಾರ"
ಎಂದು ಚಂದವಾಗಿ ಮಾತನಾಡಿದ ಹರೀಶಣ್ಣನ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಅವರ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ. ಸಮಯವಿದ್ದಾಗ ಒಮ್ಮೆ ಅವರ ಬ್ಲಾಗಿಗೆ ಭೇಟಿ ಕೊಡಿ..
http://harishshettyshirva.blogspot.in/
ಹರೀಶಣ್ಣನ ಕೆಲವು ಹಿಂದಿ ಗೀತೆಗಳ ಅನುವಾದದ ಚಂದದ ಸಾಲುಗಳು.. ನಿಮಗಾಗಿ ಗೆಳೆಯರೇ ಖುಷಿಯಿಂದ ಓದಿಕೊಳ್ಳಿ..
ನಾನು ಕಂಡಿದ್ದೇನೆ
ಆ ಕಣ್ಣಲ್ಲಿ ಮಿಂಚುವ ಹೊಳಪು
ಕೈಯಿಂದ ಮುಟ್ಟಿ ಅದಕ್ಕೆ
ಸಂಬಂಧದ ಆರೋಪ ನೀಡ ಬೇಡ
(ಹಾಡು: ಹಮ್ ದೇಖಾ ಹೈ ಉನ್ ಆಂಖೋ ಮೆ)
****
ಜೀವನ ತುಂಬಿದ ನಿನ್ನ ಕಣ್ಣು
ಒತ್ತಾಯಿಸುತ್ತದೆ ಜೀವಿಸಲು ...ಜೀವಿಸಲು
ಸಾಗರವೂ ಹಂಬಲಿಸುತ ಇರುತ್ತದೆ
ನಿನ್ನ ರೂಪ ರಸವನ್ನು ಸವಿಯಲು ...ಸವಿಯಲು!
(ಹಾಡು: ಜೀವನ್ ಸೆ ಭರೀ ತೆರೀ ಆಂಕೆ)
*****
ಮತ್ತದೇ ಸಂಜೆ
ಅದೇ ದುಃಖ ಅದೇ ಏಕಾಂತವಿದೆ
ಹೃದಯ ಸಾವರಿಸಲು
ನಿನ್ನ ನೆನಪು ಪುನಃ ಬಂದಿದೆ
(ಹಾಡು: ಫಿರ್ ವಹೀ ಶಾಮ್ ವಹೀ ಘಮ್ ವಹೀ ತಹ್ನಾಯಿ ಹೈ)
*****
ಮತ್ತೆ ಸಿಗೋಣ
ಪ್ರೀತಿಯಿಂದ
ನಟರಾಜು :))
ಶ್ರೀ ಹರೀಶ್ ಶೆಟ್ಟಿ ಶಿರ್ವ ರವರಿಗೆ.
ಪ್ರತ್ಯುತ್ತರಅಳಿಸಿನಂಗಂತೂ ಹಿಂದಿ ಉರ್ದು ಗೊತ್ತಿಲ್ಲ.
ಅದರಲ್ಲೂ ಗಜಲುಗಳನ್ನು ಅರ್ಥ ಮಾಡಿಕೊಳ್ಳಿ ಅಂದರೆ ಎಲ್ಲಾಗುತ್ತದೆ.
ನಮ್ಮಂಥವರಿಗೆ ನಿಮ್ಮಂಥವರ ಅನುವಾದ ಮಾಡಿದ ಸಾಲುಗಳದ್ದೊಂದೇ ಉಳಿದ ದಾರಿ.
ಅಂತಹುದರಲ್ಲಿ ತಾವು ತಮ್ಮ ಕೆಲಸ ಚೊಕ್ಕವಾಗಿ ಮಾಡುತ್ತಿದ್ದೀರ.
ಇನ್ನೂ ಮುಂದೆ ತಮ್ಮ ಅನುವಾದಗಳನ್ನು ಪ್ರಕಟಿಸುತ್ತಿರಿ.ಶುಭವಾಗಲಿ.
ನಟ್ಟೂ:ನೀನು ಬುಡಮ್ಮ, ಹೇಳೋದೇ ಬೇಡ ಸೂಪರ್ರಾಗಿ ಬರಿದಿದ್ದೀಯ, ಬರೀತೀಯ:)
ಎಲೆಮರೆಕಾಯಿಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ತುಂಬಾ ತುಂಬಾ ಧನ್ಯವಾದಗಳು ನಟರಾಜು ನಿಮಗೆ...........ಈ ಪುಟ್ಟ ಬರಹಗಾರನನ್ನು ಬಹಳವಾಗಿ ಪ್ರೋತ್ಸಾಹಿಸ್ಸಿದ್ದಿರಿ, ನಿಮಗೆ ನನ್ನ ಪ್ರೀತಿಯ ಕೃತಜ್ಞತೆಗಳು .....ನನ್ನನ್ನು ಮೆಚ್ಚಿ ಹೊಗಳಿದ ಸರ್ವರಿಗೆ ತುಂಬಾ ತುಂಬಾ ಧನ್ಯವಾದಗಳು.......
ಪ್ರತ್ಯುತ್ತರಅಳಿಸಿಶೀರ್ವರನ್ನು ನಾನು ಮೆಚ್ಚುಗೆಯಿಂದ ನೋಡುತ್ತೇನೆ.
ಪ್ರತ್ಯುತ್ತರಅಳಿಸಿಅವರ ವಿಷಯ ವೈವಿದ್ಯತೆ ಮತ್ತು ಅದನ್ನು ಬರೆದುಕೊಡುವ ಸರಳತೆ ನನಗೆ ಯಾವಾಗಲು ಮೆಚ್ಚುಗೆಯೇ.
ಅವರ ’ಅಗಲಿಕೆ’ ಕವಿತೆಯು ಅವರ ಸರಳ ಅನನ್ಯ ಶೈಲಿಗೆ ಸರ್ವೋತ್ತಮ ಉದಾಹರಣೆ.
ಅಗಲಿಕೆ
ನಾನು ಇಲ್ಲಿ, ನೀನು ಅಲ್ಲಿ
ಜೀವನ ಚಲ್ಲಾ ಪಿಲ್ಲಿ...
______________
ನೀ ಹೋದ ನಂತರ ಮನೆ ಖಾಲಿ ಖಾಲಿ
ಅಡುಗೆ ಮನೆಯಲ್ಲಿ ಮೌನ
ಅಂಗಳದಲ್ಲಿ ಇಲ್ಲ ರಂಗೋಲಿ...
______________
ನನ್ನ ಬಿಟ್ಟು ನೀ ದೂರವಾದೆ
ಈಗ ನಿನ್ನ ಸಂಸಾರ ಬೇರೆ
ನನಗೆ ಅಗಲಿಕೆಯ ಉಡುಗೊರೆ....