ಗುರುವಾರ, ಆಗಸ್ಟ್ 23, 2012


ಎಲೆ ಮರೆ ಕಾಯಿ 

ಷಟ್ಪದಿ ರಗಳೆಗಳನರಗಿಸಿಕೊಳಲು ನಾನರಿಯೆ. 
ಪಂಪರನ್ನರೇನಂದರೆಂದು ನಾ ತಿಳಿಯೆ. 
ಭಾಷೆ ಬರದ ತಬ್ಬಲಿ ನಾನಾದೆನೆಂದು ಬಿಕ್ಕುತಿರೆ,
ದತ್ತ ಕುವೆಂಪುರವರ ಕಂಪು ಎಲ್ಲೆಡೆ ಪಸರಿಸೆ,
ತಿಳಿಗನ್ನಡಾಂಬೆ ತಿರುಗಿ ಕೈ ಬೀಸಿ ಕರೆಯೆ, 
ತಾಯ್ಮಡಿಲ ಸುಖದಿ ನಿಟ್ಟುಸಿರಿಟ್ಟೆ, ಮನತಣಿಯೆ!

ನಮ್ಮ ನಡುವೆ ಕಾಣ ಸಿಗುವ ಹೆಚ್ಚಿನ ಬ್ಲಾಗಿಗರಲ್ಲಿ ಯಾರೂ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ನಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರಲ್ಲ. ಎಲ್ಲರೂ ಒಂದು ರೀತಿಯಲ್ಲಿ ತಮಗೆ ಅನಿಸಿದ್ದನ್ನು ಗೀಚುತ್ತಾ ಹೋದವರೇ. ಹಾಗೆ ಗೀಚುತ್ತಲೇ ಚಂದದ ಬರಹಗಾರರಾಗಿ ಕೆಲವರು ರೂಪುಗೊಂಡರೆ ಇನ್ನೂ ಕೆಲವರು ಗೀಚಿದ್ದು ಸಾಕೆಂದು ಬರೆದಿಟ್ಟಿದ್ದನ್ನು ಎತ್ತಿಟ್ಟವರು ಇದ್ದಾರೆ. ಒಬ್ಬ ಕನ್ನಡಿಗನಿಗೆ ತನಗಿಷ್ಟ ಬಂದ ಭಾವನೆಗಳಿಗೆ ಅಕ್ಷರಗಳ ರೂಪ ಕೊಡುವ ಶಕ್ತಿಯನ್ನು ನೀಡುವುದು ಕನ್ನಡಾಂಬೆ. ಆ ಶಕ್ತಿಯನ್ನು ನಿರಂತರವಾಗಿ ತುಂಬಿಕೊಳ್ಳುತ್ತಾ ಹೋಗುವವರೇ ಅಲ್ಲವೇ ಶಕ್ತ ಬರಹಗಾರರಾಗುವುದು. ಮೇಲಿನ ಕವನದ ಸಾಲುಗಳು "ಭಾವ ಸೆಲೆ" ಎಂಬ ಬ್ಲಾಗಿನಲ್ಲಿ ಕಂಡಾಗ ನನ್ನೊಳಗೆ ಹೀಗೊಂದು ಭಾವ ಲಹರಿ ಹರಿಯತೊಡಗಿತು. ಅಂದ ಹಾಗೆ ಆ ಬ್ಲಾಗಿನ ಮಾಲಿಕರು ತಮ್ಮ ಬ್ಲಾಗ್ ಕುರಿತು ಹೀಗೆ ಚಂದವಾಗಿ ಹೇಳಿದ್ದಾರೆ "ಭಾವನೆಗಳನ್ನು ಕವನಗಳ ಚೌಕಟ್ಟಿನಲ್ಲಿ ಜೋಡಿಸಿದಾಗ ಅನಿವರ್ಚನೀಯ ಆನಂದದ ಅನುಭವವಾಗುವುದು ಸಹಜವಿರಬಹುದು. ಮನದಲ್ಲಿ ಹರಿಯುವ ಹತ್ತು ಹಲವು ಭಾವಗಳಿಗೆ ಎಡೆಯೇ ಈ 'ಭಾವಸೆಲೆ'."

ಕನಸಿಗೆ ಉಣಿಸಿ, ಕೊಬ್ಬಿಸಿ ಬೆಳೆಸಿ
ಆಡಲಾಣತಿಯಿಟ್ಟೆ ಜೀವ ತುಂಬಿಸಿ
ಕುಸಿಯಿತಲ್ಲೇ ಹೊಸಿಲ ಕಂಡು ಹೆದರಿ!

ಭಾವವಿಹಂಗಕೆ ಹಿಡಿ ಜೀವ ನೀಡಿ,
ಹಾರಲಪ್ಪಣೆ ಕೊಟ್ಟೆ, ಸೇಚ್ಛೆಯಲಿ,
ರೆಕ್ಕೆ ಕಿತ್ತಿತು, ಪಂಜರವ ಬಿಡಲು ಹೆದರಿ!

ಪ್ರಾಸ ತುಂಬಿದ ಕವನಗಳನ್ನು ಒಮ್ಮೆಗೆ ನೋಡಿದರೆ ಕೆಲವರಿಗೆ ತುಂಬಾ ಸುಲಭವಾಗಿ ಕವನಗಳು ಅರ್ಥವಾಗಿ ಖುಷಿಯಾದರೆ, ಪ್ರಾಸವಿಲ್ಲದ ಕವಿತೆಗಳ ಓದಿ ಅಭ್ಯಾಸವಿರುವ ಇನ್ನೂ ಕೆಲವರು ಕವಿತೆ ಎಂದರೆ ಪ್ರಾಸವಲ್ಲ ಎಂದು ಹೇಳಿಬಿಡುತ್ತಾರೇನೋ. ಆದರೆ ಪ್ರಾಸಗಳಿಂದ ಕೂಡಿದ ಕವಿತೆಗಳೂ ಸಹ ಅರ್ಥಗಂಭಿತವಾಗಿರುತ್ತವೆ ಎಂದು ಬರೆದು ತೋರಿಸುವವರು ಕೆಲವೇ ಮಂದಿ. ಮೇಲಿನ ಕವನದ ಸಾಲುಗಳ ಬರೆದಿರುವ ನಮ್ಮ ನಡುವಿನ ಈ ಚಂದದ ಕವಯಿತ್ರಿಯ ಕವನಗಳು ಒಮ್ಮೆಗೆ ನೋಡಿದರೆ ಪ್ರಾಸಬದ್ದ ಕವಿತೆಗಳಂತೆ ಕಂಡರೂ ಒಬ್ಬ ಸಾಮಾನ್ಯ ಓದುಗನಾಗಿ ಇವರ ಕವನಗಳ ಓದಿದರೆ ನಿಜಕ್ಕೂ ಆ ಕವನಗಳು ನಮಗೆ ಹತ್ತಿರವಾಗುತ್ತವೆ.

ಬದುಕಲಿ ಸೇರಿದರು, ಚದುರಿದರು
ನೋವನಿತ್ತರು, ನಲಿವ ಕೊಟ್ಟರು.
ಕಣ್ಣೊರೆಸಿದರು, ಮನಮಿಡಿದರು.
ಯಾರಪ್ಪಣೆಯಿಲ್ಲದೇ ಬುತ್ತಿಯೊಳಹೊಕ್ಕರು!

ಮೇಲಿನ ಸಾಲುಗಳ ನೋಡುತ್ತಲೇ ನಮ್ಮ ಬದುಕಿನಲ್ಲಿ ಬಂದು ಹೋದ ಸಂಬಂಧಗಳೆಲ್ಲಾ ಒಮ್ಮೆ ಕಣ್ಣ ಮುಂದೆ ಹಾಯ್ದು ಹೋದಂತೆ ಅನಿಸುತ್ತಿದೆ ಅಲ್ಲವೇ.. ಅಂದ ಹಾಗೆ ಇಂತಹ ಚಂದದ ಕವನಗಳನ್ನು ಬರೆಯುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಅತಿಥಿ ಡಾ. ಲತಾ ದಾಮ್ಲೆಯವರು. ಇವರು ವೃತ್ತಿಯಲ್ಲಿ ವೈದ್ಯೆ ಜೊತೆಗೆ ಅಧ್ಬುತವಾದ ಚಿತ್ರ ಕಲಾವಿದೆ. ಇವರ ಕಲಾಕೃತಿಗಳು ನೋಡಲು ತುಂಬಾ ಮನಮೋಹಕವಾಗಿರುತ್ತವೆ. ಇವರು ಒಳ್ಳೆಯ ಹಾಡುಗಾರ್ತಿ ಸಹ. ಸಾಹಿತ್ಯ, ಸಂಗೀತ, ಕಲೆ ಮತ್ತು ಸೌಂದರ್ಯದ ಜೊತೆ ಮಾನವೀಯತೆ ಒಬ್ಬ ವ್ಯಕ್ತಿಯಲ್ಲಿ ಮಿಳಿತವಾಗಿ ಹೋದರೆ ಆ ವ್ಯಕ್ತಿಯ ವ್ಯಕ್ತಿತ್ವವೇ ಭಿನ್ನವಾಗಿ ಕಾಣುತ್ತದೆ ಅಲ್ಲವೇ.. ಸಹೃದಯಿಗಳೇ ಅಂತಹ ಸುಂದರ ವ್ಯಕ್ತಿತ್ವದ ಡಾ. ಲತಾ ದಾಮ್ಲೆಯವರು ತಮ್ಮ ಬಗ್ಗೆ ಕೊಟ್ಟಿರುವ ಕಿರು ಪರಿಚಯದ ತುಣುಕುಗಳು ಇಗೋ ನಿಮಗಾಗಿ..

ಡಾ. ಲತಾ ದಾಮ್ಲೆ

"ನನ್ನ ಬಗ್ಗೆ ಹೇಳಿಕೊಳ್ಳುವುದು ಎಲ್ಲದಕ್ಕಿಂತ ಅತ್ಯಂತ ಮುಜುಗರದ ಕೆಲಸ. ಆದರೂ ನಟರಾಜ್ ಮನಸ್ಸು ನೋಯಿಸಲಾರದೆ ಇದಕ್ಕೆ ಒಪ್ಪಿಕೊಂಡಿದ್ದೇನೆ. ನಾನು ಒಬ್ಬ ಆಯುರ್ವೇದ ವೈದ್ಯೆ ಹಾಗೂ ಔಷಧಿ ಸಂಶೋಧಕಿ. ಮೂಲತ: ಕುಂದಾಪುರದಲ್ಲಿರುವ ಬೈಂದೂರು ನನ್ನ ಹುಟ್ಟೂರು. ಸಧ್ಯಕ್ಕೆ ಕಳೆದ ೧೮ ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ’ರೇರ್‍’ ಹೆಸರಿನ ಚಿಕಿತ್ಸಾಲಯ ನಡೆಸುತ್ತಿದ್ದೇನೆ. ಅನೇಕ ರೋಗಗಳಲ್ಲಿ ಸಂಶೋಧನೆ ನಡೆಸಿ ಆಯುರ್ವೇದ ಔಷಧಿಗಳನ್ನು ಕಂಡುಹಿಡಿಯುವತ್ತ ನಿರತವಾಗಿ ನಮ್ಮ ತಂಡ ಶ್ರಮಿಸುತ್ತಿದೆ. ಉದಾ: ಸೋರಿಯಾಸಿಸ್, ಮಧುಮೇಹ, ಅಸ್ತಮಾ ಇತ್ಯಾದಿಗಳು.

ಇನ್ನು ನನ್ನ ಸಾಹಿತ್ಯಾಸಕ್ತಿಯ ಬಗ್ಗೆ ಹೇಳುವುದಾದರೆ, ಭಾಷೆಯ ಬಗ್ಗೆ ವಿಶೇಷತ: ಕನ್ನಡದ ಮೇಲೆ ಎಂದಿನಿಂದಲೂ ಎಲ್ಲಿಲ್ಲದ ಒಲವು. ಬರೆಯುವ ಗೀಳು ಸದಾ ಇತ್ತು. ಅಗತ್ಯಕ್ಕೆ ತಕ್ಕಂತೆ ವಿಷಯ ಬದಲಾಗುತ್ತಿತ್ತು. ಈಗ ಸಾಧಾರಣವಾಗಿ ವೈದ್ಯಕೀಯ ವಿಷಯಗಳ ಬಗ್ಗಿನ ಲೇಖನಗಳೇ ಹೆಚ್ಚು. ಮನಸ್ಸಿನ ಭಾವನೆಗಳನ್ನು ತಮ್ಮಂಥ ಸಹೃದಯರೊಂದಿಗೆ ಹಂಚಿಕೊಳ್ಳಲು ಚಿಕ್ಕದಾಗಿ 'ಭಾವಸೆಲೆ' ಎಂಬ ಬ್ಲಾಗನ್ನು ಮಾಡಿದ್ದೇನೆ. ಇದಕ್ಕೂ ಒಂದು ರೀತಿಯಲ್ಲಿ ನಟರಾಜ್ ಅವರ ಪ್ರೀತಿಯ ಒತ್ತಾಯವೇ ಕಾರಣ ಎನ್ನಬಹುದು. ಇದಲ್ಲದೇ 'ಚಿತ್ರ ಕಲೆ' ಹಾಗೂ ಸಂಗೀತ ನನ್ನ ಇನ್ನಿತರ ಹವ್ಯಾಸಗಳು. ಇವೆರಡಕ್ಕೂ ಅಂತರ್ಜಾಲದಲ್ಲಿ ಪ್ರತ್ಯೇಕ ಸ್ಥಳಗಳನ್ನು ಇಟ್ಟಿದ್ದೇನೆ. ಆದರೆ ಸಮಯಾಭಾವದಿಂದ ಯಾವುದಕ್ಕೂ ಸಂಪೂರ್ಣ ಸಮಯ ನೀಡಲಾಗುತ್ತಿಲ್ಲ. ಬಿಡಲೂ ಆಗುತ್ತಿಲ್ಲ. ಒಂದು ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದೇನೆ. ತಮ್ಮೆಲ್ಲರ ಪ್ರೋತ್ಸಾಹದ ನುಡಿಗಳು ನನ್ನ ಈ ಎಲ್ಲ ಕಾರ್ಯಕ್ಕೆ ಬಲ್ಯದಾಯಿ. ಈ ಕನ್ನಡ ಬ್ಲಾಗ್ ಪರಿಚಯ ಆದಮೇಲೆ ನನ್ನ ಸಾಹಿತ್ಯ ಕೃಷಿ ಸ್ವಲ್ಪ ತ್ವರೆಗೊಂಡಂತಿದೆ. ಈ ತಾಣಕ್ಕೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಮ್ಮಿಯೇ. ಇದೊಂದು ಭುವನೇಶ್ವರಿಯ ಗುಡಿಯೇ ಹೌದು."

ಎಂದು ಮಾತು ಮುಗಿಸಿದ ಲತಾ ಅಕ್ಕನ ಮಾತುಗಳು ನಿಮಗೆ ಇಷ್ಟವಾದವು ಎಂದುಕೊಳ್ಳುವೆ.. ಅವರ ಸಾಹಿತ್ಯ, ಕಲೆ ಮತ್ತು ಸಂಗೀತಕ್ಕೆ ಸಂಬಂಧಿಸಿದ ಮೂರು ವೆಬ್ ತಾಣಗಳ ಕೊಂಡಿಯನ್ನು ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಕಣ್ಣಾಡಿಸಿ ಗೆಳೆಯರೇ..

http://dr-lathadamle.blogspot.in/

http://lathadamle.blogspot.in/

http://soundcloud.com/dr-latha-damle

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

5 ಕಾಮೆಂಟ್‌ಗಳು:

 1. ಲತಾ ಮೇಡಂ ನನಗೆ ಕನ್ನಡ ಬ್ಲಾಗಿನಲ್ಲಿ ಪರಿಚಯವಾದ ಕವಿಯತ್ರಿ. ಆಕೆಯ ಭಾಷಾ ಬಳಕೆ ಮತ್ತು ಲಾಲಿತ್ಯ ಪೂರ್ಣತೆ ನನಗೆ ತುಂಬಾ ಇಷ್ಟ.

  ಇಷ್ಟು ದಿನ ಇವರ ಬ್ಲಾಗುಗಳನ್ನು ನೋಡಲಾಗದ ನನ್ನ ಮೌಢ್ಯತೆಗೆ ಕ್ಷಮೆ ಇರಲಿ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದ ಬದ್ರಿಯವರೇ. ಕ್ಷಮೆ ಕೇಳಬೇಡಿ ದಯವಿಟ್ಟು. ನಿಮ್ಮಂತಹ ಸಜ್ಜನರ ಪ್ರೋತ್ಸಾಹವೇ ನನ್ನ ಬ್ಲಾಗ್ ಬೆಳೆಯಲು ರಸಗೊಬ್ಬರ.

   ಅಳಿಸಿ
 2. ಸಮಯ ಸಿಕ್ಕಿದಾಗ ಖಂಡಿತಾ ಲತಾ ಅವರ ಬ್ಲಾಗೆ ಭೇಟಿ ನೀಡುತ್ತೇವೆ...ನಟರಾಜ್....ಇಬ್ಬರಿಗೂ ಶುಭವಾಗಲಿ... :)

  ಪ್ರತ್ಯುತ್ತರಅಳಿಸಿ
 3. ಲತಾರವರೇ,
  ಕೆಲವರು ಹೇಳುತ್ತಾರೆ;
  ವೈದ್ಯಕೀಯ ಅಥವಾ ಇಂಜಿನಿಯರ್ ಕ್ಷೇತ್ರದಲ್ಲಿರುವವರಿಗೆ (ಕನ್ನಡ) ಸಾಹಿತ್ಯದ ಮೇಲೆ ಆಸಕ್ತಿ ಕಮ್ಮಿ.
  ಜೊತೆಗೆ ಅವರುಗಳ ಗುರಿಯೇನಿದ್ದರೂ ಬರೀ ಸಂಪಾದನೆ.
  ಆದರೆ ನಾನು ಅದನ್ನು ಯಾವಾಗಲೂ ಅಲ್ಲಗೆಳೆಯುತ್ತೇನೆ.
  ನೀವು ಅದನ್ನು ಈ ಸಾಹಿತ್ಯ ಕೃಷಿ ಕೆಲಸದ ಮೂಲಕ ತೋರಿಸುತ್ತಿದ್ದೀರ.
  ಶಹಬ್ಬಾಷ್!!
  ನಿಮ್ಮ ಸಾಹಿತ್ಯ ಕೃಷಿ ಹೀಗೆಯೇ ಮುಂದುವರೆಯಲಿ.

  ಜೊತೆಗೆ,ಡಾಕ್ಟರ್ ರ ಇನ್ನೊಂದು ಮುಖವನ್ನೂ(!) ಪರಿಚಯಿಸಿದ ನಟ್ಟುಗೂ ಧನ್ಯವಾದಗಳು:)

  ಪ್ರತ್ಯುತ್ತರಅಳಿಸಿ
 4. ಲತಕ್ಕ ಸಾಹಿತ್ಯದ ವಿಚಾರಕ್ಕೆ ನಂತರ ಬರುತ್ತೇನೆ.. ನಿಮ್ಮ ಚಿತ್ರಗಳ ರಮಣೀಯತೆಯನ್ನು ಇದೇ ಮುಖಪುಸ್ತಕದಲ್ಲಿ ಕಣ್ತುಂಬಿಸಿಕೊಂಡಿದ್ದೆ.. ಇಂದು ನಿಮ್ಮ ಗಾನ ಮಾಧುರ್ಯಕ್ಕೆ ಮೂಕಾಗಿದ್ದೇನೆ.. ದೇವರು ನಿಮ್ಮಲ್ಲಿ ಕಲೆ ಮತ್ತು ಸಂಗೀತವನ್ನು ತುಂಬಿದ್ದಾನೆ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಿಮ್ಮದು.. ಆ ಕೆಲಸದಲ್ಲಿ ನಿಮ್ಮನ್ನಾಗಲೆ ತೊಡಗಿಸಿಕೊಂಡಿದ್ದೀರಿ.. ಆ ಕಾರ್ಯ ಅಡೆತಡೆಗಳಿಲ್ಲದೆ ಸಾಗಲಿ ಎಂಬ ಹಾರೈಕೆ ನನ್ನದು..
  ಇನ್ನು ಸಾಹಿತ್ಯದ ಬಗ್ಗೆ ಹೇಳಬೇಕೆಂದರೆ.. ನಿಮ್ಮ ಮೊದಲ ರಚನೆಗಳೆ ನಮ್ಮೆಲ್ಲರ ಮನಸ್ಸೆಳೆದವು.. ಕನ್ನಡ ನಾಡಿನ ಆಸ್ತಿಯಾಗಬಲ್ಲ ಕವಯಿತ್ರಿ ನೀವು.. ನಿಮ್ಮ ರಚನೆಗಳು ಸಿಪ್ಪೆ ಸುಲಿದ ಬಾಳೆ ಹಣ್ಣಿನಂತೆ ಸಲೀಸಾಗಿದ್ದು, ಓದುತ್ತಿದ್ದಂತೆ ಗಂಟಲಲ್ಲಿ ಕರಗಿ ಮನದೊಳಗಿನ ಪರಮಾತ್ಮ ಸಂತೃಪ್ತನಾಗುತ್ತಾನೆ.. ಲಯ, ಗೇಯತೆ ಮತ್ತು ಪಕ್ವವಾದ ಭಾವ ನವ್ಯ ಸಾಹಿತ್ಯದ ಜೀವಾಳ.. ಅದು ನಿಮಗೆ ಧಾರಾಳವಾಗಿ ಒಗ್ಗಿ ಬಂದಿದೆ.. ಜೀವನದಲ್ಲಿ ಇನ್ನು ಹೆಚ್ಚಿನ ಎತ್ತರವನ್ನು ಏರಿ ನಿಮ್ಮ ವೃತ್ತಿ ಮತ್ತು ಪ್ರವೃತ್ತಿಗಳೆಲ್ಲದರಲ್ಲೂ ಹೆಸರಾಗಲಿ ಎಂಬ ಹಾರೈಕೆ ನನ್ನದು..:)))
  ಒಂದು ಪರಿಪೂರ್ಣ ವ್ಯಕ್ತಿತ್ವದ ಪರಿಚಯ ಮಾಡಿಸಿದ್ದೀರಿ ನಟಣ್ಣ.. ಸಂತಸವಾಯ್ತು..

  ಪ್ರತ್ಯುತ್ತರಅಳಿಸಿ