ಶುಕ್ರವಾರ, ನವೆಂಬರ್ 2, 2012


ಎಲೆ ಮರೆ ಕಾಯಿ 
"ನಾನು ನಂದು ಅನ್ನೋ ಸ್ವಾರ್ಥ ಬಿಟ್ಟು ನಿಂಗೆ ಕೆಟ್ಟದಾದ್ರೂ ಪರವಾಗಿಲ್ಲ ಬೇರೆಯವರಿಗೆ ಒಳ್ಳೆಯದಾಗಲಿ ಅನ್ನೋ ಒಳ್ಳೆ ಮನಸಿಟ್ಟು ಬೇರೆಯವರನ್ನ ನೋಡು. ವಿಕಾರವಾಗಿರೋದು ನನ್ನ ಮುಖ ಅಲ್ಲ ನಿನ್ನ ಮನಸ್ಸು. ಕೆಟ್ಟ ಮನಸಿಟ್ಟು ನೋಡುದ್ರೆ ಎಲ್ಲಾ ವಿಕಾರವಾಗೆ ಕಾಣ್ಸುತ್ತೆ. ಒಳ್ಳೆ ಮನಸಿಟ್ಟು ನೋಡು ಎಲ್ಲಾ ಸುಂದರವಾಗೇ ಕಾಣ್ಸುತ್ತೆ Idiot."

"ಈ open world ನಲ್ಲಿ ಕೆಟ್ಟ ಮನಸ್ಸು, ಮೋಸ,  ಸ್ವಾರ್ಥಗಳಿಂದ ಮನುಷ್ಯರು ಹೊಡೆದಾಡ್ತಾರೆ. ಅದೇ underworld ನಲ್ಲಿ ಮಚ್ಚು ಕತ್ತಿಗಳಿಂದ ಹೊಡೆದಾಡ್ತಾರೆ. ಆ  ಮಾನಸಿಕ ಯುದ್ದಕ್ಕಿಂತ ಈ ದೈಹಿಕ ಯುದ್ದಾನೆ ಮೇಲು."

ಮೇಲಿನ ಸಂಭಾಷಣೆಯ ಸಾಲುಗಳು ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ "ಜನ ಚೇಂಜ್ ಕೇಳ್ತಾರೆ" ಅನ್ನೋ ಡೈಲಾಗ್ ನಿಮಗೆ ಖಂಡಿತಾ ನೆನಪಿರುತ್ತದೆ. ಹೌದು ನಮ್ಮ ಕನ್ನಡದ ಕುವರ ಉಪ್ಪಿಯವರ ಡೈಲಾಗ್ ಗಳು ಇವು. ಗೊತ್ತು ಗುರಿ ಇಲ್ಲದ ಯಾರೋ ಅನ್ಯ ಭಾಷೆಯ ನಿರ್ದೇಶಕರುಗಳ ಚಿತ್ರಗಳ ನೋಡಿ ಅವರಿಗೆ ಸಿಕ್ಕಾಪಟ್ಟೆ ಮರ್ಯಾದೆ ನೀಡೋ ನಾವು ನಮ್ಮದೇ ಕನ್ನಡದ ಪ್ರತಿಭೆಗಳನ್ನು ಕಂಡೂ ಕಾಣದಂತೆ ಇದ್ದು ಬಿಡುತ್ತೇವೆ. ನಮ್ಮ ಕನ್ನಡದ ಪ್ರತಿಭೆಗಳನ್ನು ಪ್ರಮೋಟ್ ಮಾಡಲು, ಅವರ ಕುರಿತು ಒಳ್ಳೆಯ ಮಾತನಾಡಲು ಹಿಂಜರಿದು ನವೆಂಬರ್ ಬಂತೆಂದರೆ ಕನ್ನಡ ಕನ್ನಡ ಎಂದು ಬೊಬ್ಬಿಡುತ್ತೇವೆ. ಒಂದೆರಡು ಹಿಟ್ ಚಿತ್ರಗಳನ್ನಷ್ಟೇ ನೀಡಿರುವ ನಿರ್ದೇಶಕರುಗಳಿಗೆ ಗ್ರೇಟ್ ಡೈರೆಕ್ಟರ್ ಅನ್ನೋ ಪಟ್ಟ ಕೊಡುವ ನಾವು ಹತ್ತಾರು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕನಿಗೆ ಅವನ ಮಾತು ಒರಟು ಅನ್ನೋ ಕಾರಣಕ್ಕೆ ಬೇರೆಯದೇ ಹಣೆಪಟ್ಟೆ ಕಟ್ಟುಬಿಡುತ್ತೇವೆ.  ಉಪ್ಪಿ ಎಂದರೆ ಕೆಲವರಿಗೆ ಕನ್ನಡದ ಹೀರೋ ಎಂದಷ್ಟೇ ಗೊತ್ತಿದೆ. ಆದರೆ ಉಪ್ಪಿ, ಉತ್ತಮ ನಿರ್ದೇಶಕ, ಸಂಭಾಷಣೆಕಾರ, ಗೀತ ರಚನೆಕಾರ ಎಂಬ ವಿಷಯ ಎಷ್ಟು ಜನಕ್ಕೆ ಗೊತ್ತೋ ಗೊತ್ತಿಲ್ಲವೋ ತಿಳಿಯದು. ಉಪ್ಪಿಯ ಒಬ್ಬ ದೊಡ್ಡ ಅಭಿಮಾನಿಯಾಗಿ ತನ್ನ "ಉಪೇಂದ್ರ ಎಂಬ MODERN ವೇದಾಂತಿ !!" ಎಂಬ ಲೇಖನವೊಂದರಲ್ಲಿ ಉಪ್ಪಿಯ ಚಿತ್ರಗಳ ಸಂಭಾಷಣೆಯೊಂದಿಗೆ ಲೇಖನವನ್ನು ಶುರು ಮಾಡಿ ಉಪ್ಪಿಯನ್ನು ಚೆನ್ನಾಗಿ ವಿಶ್ಲೇಷಿಸಿರುವ ಗೆಳೆಯನ ಬ್ಲಾಗಿನ ಹೆಸರು ಅಂತರಂಗದ ಉವಾಚ.

ನಮ್ಮ ಮಾತುಗಳು ಬೆರೆತುಹೋದರೆ
ಮೂಡಿರುವ ಕುತೂಹಲ ಕಡಿಮೆಯಾಗಬಹುದು
ಮೌನದ ಮಜಾ ಮರೆಯಾಗಬಹುದು
ಅವಿತಿರುವ ಭಾವನೆಗಳಿಗೆ ಅರ್ಥ ಬಂದುಬಿಡಬಹುದು
ಆದರೆ,
ಈ ಮೌನ ಸಂಭಾಷಣೆ ಸಾಕಾಗಿದೆ ಗೆಳತಿ

ಮೇಲಿನ ಚಂದದ ಸಾಲುಗಳ ಬರೆದಿರುವ ಈ ಗೆಳೆಯ ಹೇಳುವಂತೆ ತಾನು ವೃತ್ತಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸದಲ್ಲಿದ್ದರೂ ಸಾಕಷ್ಟು ಪ್ರವೃತ್ತಿಗಳಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲದಿಂದ ಮನಸ್ಸಿಗೆ ತೋಚಿದ್ದನ್ನು  ಬ್ಲಾಗಿನಲ್ಲಿ ನೀರಾಳವಾಗಿ ಗೀಚಬಹುದು ಎಂಬ ಧೈರ್ಯದಿಂದ ಈ ಬ್ಲಾಗ್ ಮಾಡಿದ್ದಾರಂತೆ. ತನ್ನ ಪಿಯುಸಿ ಮತ್ತು ಇಂಜಿನಿಯರಿಂಗ್ ದಿನಗಳ ಕವಿತೆಗಳನ್ನು ಒಂದೆಡೆ ತನ್ನ ಬ್ಲಾಗಿನಲ್ಲಿ ಹಾಕಿರುವ ಗೆಳೆಯ ತಾನು ಭಾವುಕ ಎಂದು ಹೇಳಿಕೊಳ್ಳುತ್ತಲೇ ತನ್ನ ಸರಳ ಶೈಲಿಯಿಂದ ನಮ್ಮ ಮನ ಸೆಳೆಯುತ್ತಾರೆ. ಬ್ಲಾಗ್ ಲೋಕದಲ್ಲಿ ಗುರುತಿಸಿಕೊಳ್ಳುವುದು ಒಂದು ಕಲೆ. ಅಂತರ್ಜಾಲ ತಾಣದಲ್ಲಿ ತನ್ನ ಬ್ಲಾಗ್ ಲಿಂಕ್ ಅನ್ನು ಆಗಾಗ ಹಂಚಿಕೊಳ್ಳುವುದರ ಮೂಲಕ ಹೆಚ್ಚು ಹೆಚ್ಚು ಜನಗಳಿಗೆ ನಮ್ಮ ಬರಹಗಳು ತಲುಪಲು ಅನುಕೂಲವಾಗುತ್ತದೆ. ನಮ್ಮ ಲೇಖನಗಳನ್ನು ನಾವೇ ಇತರರೊಡನೆ ಹಂಚಿಕೊಳ್ಳದಿದ್ದರೆ ನಮ್ಮ ಬರಹಗಳು ಮತ್ತು ನಾವು ಎಲೆ ಮರೆ ಕಾಯಿಯಾಗಿಯೇ ಉಳಿದುಬಿಡುತ್ತೇವೆ. ಯಾವುದೋ ಕೆಲಸದ ಒತ್ತಡದಲ್ಲಿ ಇಲ್ಲವೇ ಪ್ರೋತ್ಸಾಹದ ಕೊರತೆಯಿಂದ ಬರಹಗಳನ್ನು ಬರೆಯುವುದನ್ನೇ ನಿಲ್ಲಿಸಿಬಿಡುವ ಅಪಾಯ ಬರಹಗಾರನಿಗೆ ಇರುತ್ತದೆ. ಅಂತಹ ಅಪಾಯಗಳಿಂದ ಈ ಗೆಳೆಯ ಪಾರಾಗಿ ತನ್ನ ಸಾಹಿತ್ಯ ಕೃಷಿಯಲ್ಲಿ ಇನ್ನೂ ಈ ಗೆಳೆಯ ಹೆಚ್ಚು ತೊಡಗಲಿ ಎಂಬುದು ಈ ಲೇಖನದ ಆಶಯ. ಅಂದ ಹಾಗೆ ಈ ಗೆಳೆಯನ ಬ್ಲಾಗಿನ ಉಪ ಶೀರ್ಷಿಕೆ ಎಲೆ ಮರೆ ಕಾಯಿ. ಈ ಎಲೆ ಮರೆ ಕಾಯಿ ಎಲೆ ಮರೆಯಲ್ಲೇ ಉಳಿಯದಿರಲಿ.. ಪಕ್ವವಾಗಿ ಹಣ್ಣಾಗಲಿ..

ಬರೆಯ ಹೊರಟರೇ ಬರೀ 
ಪ್ರಣಯದ ಕಲರವಗಳು 
ಮುಗಿಯದ ಪ್ರೇಮ ಪಲ್ಲವಿಗಳು 
ಹಿತ ನೀಡೋ ಚರಣಗಳು 
ಹಾಡಬೇಕಷ್ಟೇ, ಶೃತಿ ತಪ್ಪದೆ 
ಕೇಳುಗರ ಕಿವಿ ತಣಿಸಲು..!!!

ಎಂದು ಹಾಡುವ ಇಚ್ಚೆ ತೋರಿದ್ದ ಗೆಳೆಯ ಯಾಕೋ ತುಂಬಾ ಮೌನವಹಿಸಿದ ಹಾಗೆ ಕಾಣುತ್ತೆ. ಮೇಲೆ ಹೇಳಿದ ಹಾಗೆ ತನ್ನ ಬ್ಲಾಗಿನಲ್ಲಿ ಹೆಚ್ಚು ಲೇಖನಗಳನ್ನಾಗಲಿ ಕವನಗಳನ್ನಾಗಲಿ ಈ ಗೆಳೆಯ ಹಾಕಿಕೊಳ್ಳದಿದ್ದರೂ ಇವರ ಬರವಣಿಗೆಯಲ್ಲಿ ಒಂದು ಪ್ರಬುದ್ಧತೆ ಇದೆ ಎಂಬುದು ಎದ್ದು ಕಾಣುತ್ತದೆ. ಇವರಿಂದ ಮತ್ತಷ್ಟು ಲೇಖನಗಳು ಬರಹಗಳು ಕವನಗಳು ಬರಲಿ ಎಂದು ಹಾರೈಸುತ್ತಾ ಇವತ್ತಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಇಂದಿನ ಅತಿಥಿಯಾಗಿರುವ ಪ್ರದೀಪ್ ಲಿಂಗರಾಜಶೆಟ್ಟಿಯವರ ಕಿರು ಪರಿಚಯ ಅವರದೇ ಮಾತಿನಲ್ಲಿ ಗೆಳೆಯರೇ ಇಗೋ ನಿಮಗಾಗಿ..

ಪ್ರದೀಪ್ ಲಿಂಗರಾಜಶೆಟ್ಟಿ

"ನನ್ನ ಹೆಸರು ಪ್ರದೀಪ್ ಲಿಂಗರಾಜಶೆಟ್ಟಿ. ಹುಟ್ಟಿದ್ದು ತುಮಕೂರು ಜಿಲ್ಲೆಯ ಚೇಳೂರು ಎಂಬ ಗ್ರಾಮದಲ್ಲಿ. ಅಲ್ಲಿಯ ಸರ್ಕಾರಿ ಶಾಲೆಯಲ್ಲಿ ನನ್ನ ಪ್ರೌಢ ಶಿಕ್ಷಣ. ಪಿ.ಯು.ಸಿ. ಹಾಗೂ ಇಂಜಿನಿಯರಿಂಗ್ ಗಾಗಿ ಆಶ್ರಯಿಸಿದ್ದು ತುಮಕೂರನ್ನು. ಸುಮಾರು 4 ವರ್ಷಗಳಿಂದ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ. ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಸಾಹಿತ್ಯದಲ್ಲಿ ತೊಡಗಿಕೊಳ್ಳಲು ಆಸಕ್ತಿ ಚಿಗುರಿತಾದರೂ, ಬರೆಯಲು ಶುರುವಿಟ್ಟಿದ್ದು ಪಿ.ಯು.ಸಿ. ಓದುವಾಗ. ನನ್ನ ಹಾಸ್ಟೆಲ್ ರೂಮ್ ಮೇಟ್ ಆಗಿದ್ದ ನಟರಾಜು ಎಂಬುವವರು ಬರೆಯುತಿದ್ದ ಕವನಗಳು ನಾನೂ ಸಾಹಿತ್ಯದಲ್ಲಿ ತೊಡಗಿಕೊಳ್ಳಲು ಪ್ರೇರೆಪಿಸಿದವು.

ನನಗೆ ಕನ್ನಡ ಸಾಹಿತ್ಯದ ಎಲ್ಲ ದಿಗ್ಗಜರ ರಚನೆಗಳು ಇಷ್ಟವಾಗುತ್ತವೆ. ಒಬ್ಬೊಬ್ಬ ಸಾಹಿತಿಯೂ ಒಂದೊದು ವಿಚಾರಕ್ಕೆ, ಅವರ ರಚನೆಯ ಶೈಲಿಗೆ ನನಗೆ ತುಂಬಾ ಇಷ್ಟವಾಗುತ್ತಾರೆ. ಹೆಚ್ಚು ಓದುವುದು ಆತ್ಮಕಥೆಗಳನ್ನು. ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ ಸಾಹಿತ್ಯ ರಚನೆಯಲ್ಲಿ ವಿಜ್ಞಾನವನ್ನ ಅಳವಡಿಸಿಕೊಂಡಲ್ಲಿ ನಮ್ಮ ಕನ್ನಡ ಸಾಹಿತ್ಯ ಹೆಚ್ಚು ಪರಿಣಾಮಕಾರಿಯಾಗಿ, ಗುಣಮಟ್ಟದ್ದಾಗಿ ಹೊರಬರುತ್ತೆ ಎಂಬುದನ್ನು ಬಲವಾಗಿ ನಂಬುವವನು ನಾನು. ಕಾರಂತರ ವೈವಿಧ್ಯಮಯ ಬದುಕು ನನ್ನನ್ನು ಯಾವಾಗಲೂ ಬೆರಗುಗೊಳಿಸುತ್ತೆ. ಕನ್ನಡ ನನ್ನ ಮಾತೃ ಭಾಷೆ, ಮಾತನಾಡುವಾಗ, ಕನ್ನಡ ಓದುವಾಗ ಯಾವುದೇ ಭಾಷೆ ನೀಡದ ಸುಖವನ್ನು ಇದರಿಂದ ನಾನು ಪಡೆದಿದ್ದೇನೆ.

ಕನ್ನಡದಲ್ಲಿ ಬೇಕಾದಷ್ಟು ಸಾಹಿತ್ಯ ಪ್ರಕಾರಗಳಿವೆ. ದಿಗ್ಗಜರುಗಳು ರಚಿಸಿದ ಶ್ರೀಮಂತ ಸಾಹಿತ್ಯವಿದೆ. ಇದಕ್ಕೆ ಸಾಕ್ಷಿ ಭಾರತದಲ್ಲೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಗೌರವ. ಅವುಗಳೆಲ್ಲವುಗಳ ಅಧ್ಯಯನ, ತಿಳಿಯದಿರುವವರಿಗೆ ಸಣ್ಣ ಮಾರ್ಗದರ್ಶನ ನನ್ನ ಕನಸು.
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್"

ಅತಿ ಚಿಕ್ಕದಾಗಿ ಚೊಕ್ಕವಾಗಿ ತನ್ನ ಪರಿಚಯ ಮಾಡಿಕೊಂಡ ಗೆಳೆಯ ಪ್ರದೀಪ್ ರವರ ಪರಿಚಯ ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಪ್ರದೀಪ್ ರವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ ಅವರ ಬ್ಲಾಗಿನ ಮೇಲೆ ಸಮಯವಿದ್ದಾಗ ಕಣ್ಣಾಡಿಸಿ..
http://antharangadaaavaacha.blogspot.in/

ಗೆಳೆಯ ಪ್ರದೀಪ್ ರವರ ಬರಹಗಳ ಒಂದೆರಡು ತುಣುಕುಗಳನ್ನು ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ....

ಅಮ್ಮನ ಅಕ್ಕರೆಯ ಮಡಿಲಿನಲ್ಲಿ ಮಲಗಿ ಪಡೆದ ಸುಖ, ಅಪ್ಪನ ಜೊತೆ ತೊಡಗಿ ಮುಳುಗಿಹೋದ ಸ್ನೇಹಭರಿತ ಚರ್ಚೆಗಳು ನೀಡೋ ತಿಳುವಳಿಕೆ, ಒಡಹುಟ್ಟಿದವರೊಡನೆ ಕಿತ್ತಾಡಿ, ಗುದ್ದಾಡಿ ಹಲವನ್ನ ನಮ್ಮದಾಗಿಸಿಕೊಂಡ ಕ್ಷಣಗಳು, ನೆರೆಹೊರೆಯವರಲ್ಲಿ ಬೆರೆತುಹೊದಾಗ ಎಲ್ಲರೂ ನಮ್ಮವರು ಎಂದು ಮೂಡುವ ಭಾವನೆಗಳು, ಯಾರ ಜೀವನದಲ್ಲಿ ಸಂಭವಿಸುವುದಿಲ್ಲವೋ ಅವರದೊಂದು ಅಪೂರ್ಣ ಜೀವನವೇ ಸರಿ.
*****
ಚದುರಿದ ಮೋಡಗಳು ಒಟ್ಟಾಗುವುದು 
ಇಳೆಗೆ ಮಳೆ ತರಲು ತಾನೇ 
ಋತುಮಾನಕೆ ತಲೆದೂಗಿ ಎಲೆಗಳುದುರುವುದು
ಹೊಸ ಚಿಗುರು ಬಯಸಿ ತಾನೇ
ಕಲ್ಪನೆಗೆ ನಿಲುಕಿದ ಒಡನಾಡಿ ಸಿಕ್ಕಾಗ
ಮನ ಸೋಲುವುದು ಸಹಜ ತಾನೇ..!!!
*****
ಭಾಷೆ ವಿಶೇಷ ರೂಪ  ತಾಳದು 
ಭಾವನೆಗಳು ಬೆಂಬಲಕ್ಕಿಲ್ಲದಿದ್ದರೆ 
ಭಾವನೆಗಳು ಬರಹವಾಗವು 
ವಿಷಯಗಳು ದೊರಕದಿದ್ದರೆ 
ವಿಷಯಗಳು ತಲುಪುವುದೇ ಇಲ್ಲ 
ಪಕ್ವ ಅನುಭವವಿರದಿದ್ದರೆ 
ಅನುಭವಿಸಿ ಬರೆದ  ಬರಹಕೆ ಬೆಲೆ ಬೆಲೆ ಬಾರದು 
ಆನಂದಿಸುವ, ಆಸ್ವಾದಿಸುವ ಮನಸುಗಳಿರದಿದ್ದರೆ..!!!

ಮತ್ತೆ ಸಿಗೋಣ
ಪ್ರೀತಿಯಿಂದ
ನಟರಾಜು :))

2 ಕಾಮೆಂಟ್‌ಗಳು:

  1. I became fan of pradeep as he wrote superb lines about my favourite Uppi !!
    Good work nattu!!

    ಪ್ರತ್ಯುತ್ತರಅಳಿಸಿ
  2. ೬೩ ನೇ ಕಂತಾಗಿ ರೂಪಗೊಂಡ ಎ.ಮ.ಕಾ ತುಂಬಾ ಇಷ್ಟವಾಯಿತು.

    ಅನುಭವಿಸಿ ಬರೆದ ಬರಹಕೆ ಬೆಲೆ ಬೆಲೆ ಬಾರದು
    ಆನಂದಿಸುವ, ಆಸ್ವಾದಿಸುವ ಮನಸುಗಳಿರದಿದ್ದರೆ..!!!

    ಎಂದು ಬರೆಯುವ ಪ್ರದೀಪ್ ಲಿಂಗರಾಜಶೆಟ್ಟಿಯವರು ಇನ್ನೂ ಜನಮಾನ್ಯರಾಗಲಿ. ಉಜ್ವಲವಾಗಿ ಬರೆಯಲಿ.

    ಪ್ರತ್ಯುತ್ತರಅಳಿಸಿ