ಸೋಮವಾರ, ನವೆಂಬರ್ 19, 2012

ಎಲೆ ಮರೆ ಕಾಯಿ 

ಖಾಲಿ ಹಾಳೆಯ ಮೇಲೆ
ಕಸಿವಿಸಿಯ ಮಸಿಯ ಹಸಿ
ಭಾವಗಳ ವಿಶ್ರಾಮಕೆ
ಬಿಳಿ ಹಾಳೆಯ ಹಾಸಿಗೆ

ಆಂತರ್ಯದ ತೊಟ್ಟಿಲು
ಲೇಖನಿಯ ಮಸಿಯ ಬಟ್ಟಲು
ಅದ್ದಿ-ಬಸಿದು ಬರೆಯುತಿರುವೆ
ಅಂತರಾಳ ಮುಟ್ಟಲು..

ಮೇಲಿನ ಸಾಲುಗಳನ್ನು ಓದುತ್ತಿದ್ದಂತೆ ಹಿರಿಯ ಲೇಖಕರಾದ ಗುಲ್ಜಾರ್ ರವರು ಸಂದರ್ಶನವೊಂದರಲ್ಲಿ ಹೇಳಿದ್ದ "ನಮ್ಮ ದುಃಖ, ದುಗುಡ, ದುಮ್ಮಾನಗಳ ಹೀರಿಕೊಳ್ಳುವ ಶಕ್ತಿ ಬರವಣಿಗೆಗೆ ಇದೆ" ಎನ್ನುವಂತಹ ಮಾತು ನೆನಪಾಯಿತು. ಕಷ್ಟ ಬಂದಾಗ ಎಲ್ಲರಿದ್ದರೂ ಯಾರೂ ಇಲ್ಲದಂತಹ ಭಾವ ನಮ್ಮನ್ನು ಒಮ್ಮೊಮ್ಮೆ ಆವರಿಸಿಬಿಡುತ್ತದೆ. ಆಗ ಯಾಕೋ ಯಾರೊಡನೆಯೂ ಮಾತು ಬೇಕೆನಿಸುವುದಿಲ್ಲ. ಯಾರನ್ನು ನೋಡಲು ಸಹ ಮನಸ್ಸು ಇಚ್ಚಿಸುವುದಿಲ್ಲ. ದುಃಖ ನಮ್ಮೊಳಗೆ ಮಡುಗಟ್ಟುತ್ತಾ ಹೋಗುತ್ತದೆ. ಕೆಲವರು ಹತ್ತಿರ ಎನಿಸಿಕೊಂಡವರ ಜೊತೆ ಒಂದಷ್ಟು ಮನದ ದುಗುಡಗಳನ್ನು ಹಂಚಿಕೊಂಡರೂ ನಾವು ಹಗುರಾಗುತ್ತೇವೋ ಏನೋ ಗೊತ್ತಿಲ್ಲ. ಆದರೆ ಡೈರಿಯೊಂದನ್ನು ಬರೆದಿಡುವ ಅಭ್ಯಾಸವಿದ್ದರೆ ಖಂಡಿತಾ ನಾವು ಬರೆದು ಬರೆದು ಹಗುರವಾಗಬಹುದು. ಒಬ್ಬ ಆತ್ಮೀಯ ಗೆಳೆಯನಿಗಿಂತ ಎತ್ತರದ ಸ್ಥಾನದಲ್ಲಿ ನಮ್ಮ ಡೈರಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು. ನೋವಿನಿಂದ ಹೊರ ಬರಬೇಕು ಎಂದರೆ ನಾವು ಮಾತನಾಡುವುದಕ್ಕಿಂತ ಹೆಚ್ಚು ಬರೆಯಬೇಕು ಎನಿಸಿದ್ದು ಭಾವ ದರ್ಪಣ ಎಂಬ ಚಂದದ ಬ್ಲಾಗಿನಲ್ಲಿ ಮೇಲಿನ ಕವಿತೆಯ ಸಾಲುಗಳನ್ನು ಕಂಡಾಗ..

ಭಾವ ದರ್ಪಣದ ಒಡತಿಯ ಲೇಖನಗಳ ಕುರಿತಾಗಲಿ, ಕವಿತೆಗಳ ಕುರಿತಾಗಲಿ ಮಾತನಾಡಲು ಯಾಕೋ ನನ್ನಲ್ಲಿ ಶಕ್ತಿ ಇಲ್ಲ. ಅವರ ಬರವಣಿಗೆಯ ತುಣುಕೊಂದನ್ನು ಈ ಕೆಳಗೆ ನೀಡಿರುವೆ.. ನೀವೇ ಮನಸ್ಸಿಟ್ಟು ಓದಿಕೊಳ್ಳಿ..

"ಇಂದು ಸಂಜೆ ಏನೋ ಅಳುಕು ಮನದಲ್ಲಿ.. ಏನು ಅಂತ ಗೊತ್ತಿಲ್ಲ.. ಅರ್ಥಾನೂ ಆಗ್ತಿಲ್ಲ.. ಯಾವುದೋ ನೋವಿನ ಎಳೆ.. ಏನೋ ತಳಮಳ..

ಕತ್ತಲಲ್ಲಿ ಏನೋ ತಡಕಾಡುತ್ತಿರೋ ಅನುಭವ..ಒಂದೊಂದು ಸಲ ಬದುಕೇ ಕತ್ತಲಲ್ಲಿ ಗೊತ್ತಿರದ ವಸ್ತುವಿಗಾಗಿ ತಡಕಾಡುವುದೇನೊ ಅನ್ನೋ ಭಾವನೆ.. ಈ ಮನಸು, ಅದರ ಅಸ್ತಿತ್ವ ಅದರ ಆಳ.. ಅದರ ನಿರೀಕ್ಷೆ.. ಅದರ ತಳಮಳ ಎಲ್ಲ ನೋಡಿದರೆ.. ನನಗೆ ನಾನೇ ಅಪರಿಚಿತಳು ಅನಿಸುತ್ತೆ..ಅಂಥದರಲ್ಲಿ ಇನ್ನೊಂದು ಮನಸು ನನ್ನನ್ನು ಅರ್ಥ ಮಾಡಿಕೊಳ್ಳಲಿ ಅನ್ನುತ್ತೆ ಈ ಮುಗ್ಢ ಮೂರ್ಖ ಮನಸು..ಎಷ್ಟು ಗೊಂದಲಮಯ ಅಲ್ವಾ??  ದಿನದ ರಭಸದ ಜಂಜಾಟಗಳಲಿ.. ಹೊರ-ಪ್ರಪಂಚದ ಸೊಗಸು ಸವಿಯುವ ಗದ್ದಲದಲ್ಲಿ.. ದಿನ-ನಿತ್ಯದ ಕೆಲಸದ ಭರಾಟೆಯಲ್ಲಿ.. ಮೆಲ್ಲನೆ ಇಣುಕಿ ನೋಡುತ್ತೆ ಮನ.. ಇದ್ದರೂ ಇಲ್ಲದಂತಿರೋ ಇದು.. ಒಂದೊದು ಸಲ ಇಲ್ಲದ ತಲ್ಲಣ ಹುಟ್ಟಿಸುತ್ತೆ.. ಮನಸು ಅನ್ನೊದೇ ಇಲ್ಲದಿದ್ರೆ..?! ಅದರಿಂದಾಗೋ ಪ್ರಯೋಜನಗಳು ಮತ್ತು ಹಾನಿಗಳ ಬಗ್ಗೆನೇ ಪುಟಗಟ್ಟಲೇ ಬರೀಬಹುದೇನೋ.. ಈ ಮನಸು ಮತ್ತೆ ಬುಧ್ಧಿ ಒಟ್ಟಿಗೆ ಕೆಲಸ ಮಾಡೊ ರೀತಿ ಮಾತ್ರ ನನಗೆ ಅಚ್ಚರಿ ಹುಟ್ಟಿಸುತ್ತೆ.. ಒಂದು ಸಲ ಮನಸಿಗೆ ಬುದ್ಧಿ ಇಷ್ಟ ಆಗಲ್ಲ ಇನ್ನೊಂದು ಸಲ ಬುದ್ಧಿಗೆ ಮನಸು ಇಷ್ಟ ಆಗಲ್ಲ.. ಮತ್ತೊಮ್ಮೆ ಎರಡೂ ಗೆಳೆಯರು.. ಈಗ ಬರೀತಿದಿನಲ್ಲ.. ಇದು ಮನಸು ಅನ್ಲಾ? ಅಥವ ಬುದ್ಧಿ ನಾ?

ಏನೇ ಇರಲಿ ಮನಸಿಗೆ ಅನಿಸಿದ್ದನ್ನು ವ್ಯಕ್ತ ಪಡಿಸೋಕೆ ಇರೋ ಈ ಮುದ್ದಾದ ಭಾಷೆಗೆ.. ಈ ಹಾಳೆಗೆ.. ಈ ಲೇಖನಿಗೆ ನಾನು ಚಿರ-ಋಣಿ.. ಇವಿರಲಿಲ್ಲ ಅಂದರೆ.. ನನ್ನ ಆಂತರಿಕ ಬದುಕನ್ನು ಊಹಿಸಿಕೊಳ್ಳೋದೇ ಅಸಾಧ್ಯ..."

ಎನ್ನುವ ನಮ್ಮ ನಡುವಿನ ಉತ್ತಮ ಯುವ ಲೇಖಕಿಯರಲ್ಲಿ ಮಂಜುಳಾ ಬಬಲಾದಿಯವರೂ ಸಹ ಒಬ್ಬರು. ಅವರ ಜೊತೆ ಹಿಂದೊಮ್ಮೆ ಎಲೆ ಮರೆ ಕಾಯಿಗಾಗಿ ನಡೆಸಿದ ಮಾತುಕತೆ ಸಹೃದಯಿಗಳೇ ಇಗೋ ನಿಮಗಾಗಿ..

ಮಂಜುಳಾ ಬಬಲಾದಿ

"ನಲ್ಮೆಯ ನಟರಾಜ್,
ನಿಮ್ಮ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಗೆ ಆಹ್ವಾನಿಸಿದ್ದಕ್ಕೆ ನಾನು ಅಭಾರಿ. ಈಗ ಬರೆಯಲು ಕೂತರೆ ಏನು ಬರೆಯಬೇಕೆಂಬ ಭಾರಿ ಪ್ರಶ್ನೆ? ಈ ಘಳಿಗೆಯಲ್ಲಿ ನನಗನಿಸಿದ್ದು, ನಿಮ್ಮ ಮುಂದೆ ಅರುಹುತ್ತಿದ್ದೇನೆ ಅಷ್ಟೇ. ನಾನು ಹುಟ್ಟಿದ್ದು ಜಮಖಂಡಿ, ಬೆಳೆದದ್ದು ಕರ್ನಾಟಕ (ಬ್ಯಾಂಕ್ ಉದ್ಯೋಗಿಯಾಗಿದ್ದ ನಮ್ಮ ತಂದೆ ಜೊತೆ ಊರೂರು ಸುತ್ತಿದ್ದು), ಕೊನೆಗೆ ಕಾಲೇಜು ದಿನಗಳಿಂದ ನಮ್ಮದಾಗಿಸಿಕೊಂಡ ಊರು ಧಾರವಾಡ. ಬದುಕಿನ ಅಚ್ಚುಗಳು ನನಗಾಗಿ ಮೊದಲೇ ತಯಾರಾಗಿದ್ದವೇನೋ ಅನ್ನುವ ಥರದಲ್ಲಿ.. ಶಾಲೆಯಲ್ಲಿ ಜಾಣೆಯೆನಿಸಿಕೊಂಡಿದ್ದ ನಾನು ಸರಾಗವಾಗಿ ಬಿ.ಈ. ಓದಿಬಿಟ್ಟೆ. ನನಗೆ ತಿಳಿಯುವ ಮೊದಲೇ ದೊಡ್ಡ ಸಾಫ್ಟ್ ವೇರ್ ಸಂಸ್ಥೆಯಲ್ಲಿ ಕೆಲಸ. "ಇದ್ದುದೆಲ್ಲವ ಬಿಟ್ಟು.. " ಎನ್ನುವ ಹಾಗೆ, ಈಗ ಸಾಫ್ಟ್ ವೇರ್  ಡೆವೆಲಪ್‌ಮೆಂಟ್ ಬಿಟ್ಟು ಕಂಟೆಂಟ್ ಡೆವೆಲಪ್ ಮಾಡಲು ತೊಡಗಿದ್ದೇನೆ . ಬದುಕಿನ ಅನಿಶ್ಚಿತತೆಗಳನ್ನು ಪ್ರೀತಿಸುತ್ತ!

ಚಿಕ್ಕವಳಿದ್ದಾಗಿಂದ ಬರೆಯುವ ಗೀಳು, ಓದುವು ಹುಚ್ಚು.. ಆದರೆ ಅದು ನನ್ನಲ್ಲಿರುವ ಪ್ರತಿಭೆ ಎಂದು ನಾನೆಂದೂ ಗುರುತಿಸಲೇ ಇಲ್ಲ! ಹೀಗೆ ಮನಸಿನ ಸಂತೋಷಕ್ಕೆ ಕೆಲವೊಮ್ಮೆ, ಸಮಾಧಾನಕ್ಕೆ ಮಗದೊಮ್ಮೆ, ಬರೆಯುತ್ತಲೇ ಹೋದೆ.. ಹಲವಾರು ಬಾರಿ ಅದನ್ನು ಹಂಚಿಕೊಳ್ಳುವ ಗೋಜಿಗೂ ಹೋಗದೇ.. ನಂತರ ಪರಿಚಯವಾದದು ಬ್ಲಾಗ್ ಪ್ರಪಂಚ.. ಬರಹಗಳಿಂದ ಚಿರಪರಿಚಿತರಾಗಿದ್ದ ಹಲವರು, ವೈಯಕ್ತಿಕವಾಗಿ ಪರಿಚಯವಾಗಲೇ ಇಲ್ಲ.. (ಫೇಸ್‍ಬುಕ್ ಬಂದ ಮೇಲೆ ಎಲ್ಲ ಬದಲಾಯಿತು.. ನನಗೆ ಖುಶಿಯಾಗುವ ತೆರದಲ್ಲಿ ನನಗೆ ಇಂತಹವರ ಬರಹವೇ ಇಷ್ಟ ಅಂತ ಹೇಳುವುದು ಕಷ್ಟ.. ಮನಸಿಗೆ ಹತ್ತಿರವಾಗುವಂಥ ಎಲ್ಲವನ್ನೂ ನಾ ಓದುತ್ತೇನೆ.. ’ಕೆ.ಎಸ್. ನಿಸಾರ್ ಅಹ್ಮದ್’ ಅವರ ಕವನಗಳು ನನಗೆ ಹಲವಾರು ಬಾರಿ ಸ್ಫೂರ್ತಿ ನೀಡಿವೆ.. ಹೀಗೇ ಸಾಗಿದೆ ಬರಹ, ಓದು, ಬದುಕು ಮತ್ತು ಕನಸು.. ಎಲ್ಲ ಉದಯೋನ್ಮುಖ ಬರಹಗಾರರಿಗಿರುವಂತೆ, ಜನ-ಮನಕ್ಕೆ ಹತ್ತಿರವಾಗುವಂಥ ಕವನ ಸಂಕಲನವೊಂದನ್ನು ಹೊರ ತರಬೇಕೆನ್ನುವುದು ಕನಸು.. (ಅಥವಾ ಕನಸಿನ ಆರಂಭವೆನ್ನಲೇ? ) ಅದು ಇಷ್ಟೇ ಸಮಯದಲ್ಲಿ ನನಸಾಗಬೇಕು ಎಂಬ ಹಟವೂ ನನಗಿಲ್ಲ.. ’ಕಾಲ ಕೂಡಿ ಬಂದಾಗ’ ಖಂಡಿತ ಕನಸುಗಳು ಈಡೇರುವವು ಎಂದು ಬಲವಾಗಿ ನಂಬುವವಳು ನಾನು."

ಎಂದು ಮಾತು ಮುಗಿಸಿದ ಮಂಜುಳಾರವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಮಂಜುಳಾರವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಓದಿ ಗೆಳೆಯರೇ..
http://bhava-darpana.blogspot.in/

ಮಂಜುಳಾರವರ ಒಂದೆರಡು ಕವನಗಳನ್ನು ಈ ಕೆಳಗೆ ನೀಡಿರುವೆ.. ಮನಸ್ಸಿಟ್ಟು ಓದಿಕೊಳ್ಳಿ ಗೆಳೆಯರೇ..

ಮನಸೆಂಬ ಕೂಸಿಗೆ
ಕನಸುಗಳ ತುತ್ತನುಣಿಸಿ
ಭಾವನೆಗಳ ಮುತ್ತನಿಟ್ಟು
ಕಲ್ಪನೆಗಳ ಆಟಿಕೆ ನೀಡಿ
ಪ್ರೀತಿಯ ಅಕ್ಕರೆಗರೆದು
ಮಂದಹಾಸವ ಉಡುಗೊರೆ
ನೀಡಿದ ನಿನಗೆ
ನನ್ನ ಹೃತ್ಪೂರ್ವಕ ನಮನ
ನಿನಗಾಗಿ ನನ್ನ ಈ ಪುಟ್ಟ ಕವನ
*****

ಮನಸೊಂದು ಕುಡಿಯೊಡೆದ
ಮಧುರ ದಿನ
ಕನಸೊಂದು ಕಣ್ಬಿಟ್ಟ
ಮಧುರ ಕ್ಷಣ
ತನುವಲ್ಲಿ ತನುವರಳಿ
ಭುವಿಗೆ ಮರಳಿದ ದಿನ...

ಆ ಮನಸು ಮಡಿಲಾಗಿ
ಈ ಮನಸು ಮಗುವಾಗಿ
ಮನಸೆಲ್ಲ ನಗುವಾಗಿ
ನಕ್ಕು-ನಗಿಸಿದ ದಿನ
ಅತ್ತು-ಅಳಿಸಿದ ದಿನ

ಒಡಲ ಒಗಟು ಜೀವವಾದ ದಿನ
ಜೀವ ನಂಟು ಉಸಿರು ಪಡೆದ ದಿನ
ಕತ್ತಲಿಂದ ಬೆಳಕಿಗೆ ಕಣ್ಬಿಟ್ಟ ದಿನ
ಹೊಚ್ಚ ಹೊಸ ಬದುಕ ತೆರೆದಿಟ್ಟ ದಿನ

ನವ ಜೀವಕೆ ನಾಂದಿಯಾದ
ಆ ಸೋಜಿಗದ ದಿನ
ಪ್ರತಿ ವರುಷ ಮರಳುವುದು
ನೆನಪುಗಳ ನಗೆ ಚೆಲ್ಲಿ
ಮತ್ತೆ ಮರೆಯಾಗುವುದು
ಈ ಜನುಮ ದಿನ!
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು





3 ಕಾಮೆಂಟ್‌ಗಳು:

  1. ನನಗೆ ಸೋಜಿಗವೆನಿಸುವುದು ಮಂಜುಳಾರ ದೃಷ್ಟಿ ಮತ್ತು ಸೃಷ್ಟಿಯ ಬಗೆಗೆ. ಆಕೆ ಬೆಳಕನ್ನು ನೋಡುವ ರೀತಿಯೇ ವಿಭಿನ್ನ.

    ಬರಹ, ಕಾವ್ಯ ಮತ್ತು ಪ್ರವಾಸ ಕಥನಗಳಲ್ಲಿ ಆಕೆ ಪಳಗಿದ ಕೈ.

    ೬೫ನೇ ಎ.ಮ.ಕಾಗೆ ಹೇಳಿ ಮಾಡಿಸಿದ ಸಮಕಾಲೀನ ಸಾಹಿತಿ.

    "ಪ್ರೀತಿ ಈಗ ಉಸಿರಾಡುತಿದೆ
    ತನ್ನದೇ ಸ್ವಂತಿಕೆಯಿಂದ.."
    ಎನ್ನುವ ಅವರ ಸರಳತೆ ನಮಗೂ ಮೈಗೂಡಲಿ.

    ಪ್ರತ್ಯುತ್ತರಅಳಿಸಿ
  2. ಮಂಜುಳಾರನ್ನ ಇಲ್ಲಿ ನೋಡಿ ಖುಷಿಯಾಯಿತು .
    ಅವರ ಕವಿತೆಗಳು ಬದರಿ ಸರ್ ಹೇಳಿದಂತೆ ಭಿನ್ನವಾಗಿ ನಿಲ್ಲುತ್ತವೆ.
    ಇಬ್ಬರೂ ಬರೆಯುತ್ತಿರಿ

    ಪ್ರತ್ಯುತ್ತರಅಳಿಸಿ
  3. ಮಂಜುಳಾರನ್ನ ಇಲ್ಲಿ ನೋಡಿ ಖುಷಿಯಾಯಿತು .
    ಅವರ ಕವಿತೆಗಳು ಬದರಿ ಸರ್ ಹೇಳಿದಂತೆ ಭಿನ್ನವಾಗಿ ನಿಲ್ಲುತ್ತವೆ.
    ಇಬ್ಬರೂ ಬರೆಯುತ್ತಿರಿ

    ಪ್ರತ್ಯುತ್ತರಅಳಿಸಿ