ಗುರುವಾರ, ಡಿಸೆಂಬರ್ 6, 2012


ಎಲೆ ಮರೆ ಕಾಯಿ 
ವರ ಸಿಕ್ಕಿದ ಭ್ರಮೆಯಲ್ಲಿ 
ಜಗವ ಮರೆತವಳು 
ನಶೆಯ ಮತ್ತಲ್ಲಿ
ಹರೆಯದ ಕೊಳ ಈಜಿದವಳು 

ಅವನೋ ಕೊಡವಿಕೊಂಡು ಎದ್ದನು 
ಇವಳು ಎಡವಿ ಬಿದ್ದಳು 
ನಿಲ್ಲೆಂದರೆ ಅಂವ ಕೇಳ 
ಬಾರದಿರೆಂದರೆ ಬಸಿರು ಕೇಳ 

ಇಂತಹ ಕವಿತೆಯನ್ನು ಹೆಣ್ಣೊಬ್ಬಳಷ್ಟೇ ಚಂದವಾಗಿ ಕಟ್ಟಿಕೊಡಬಲ್ಲಳು. ಅವಿವಾಹಿತ ಹೆಣ್ಣನ್ನು ಬೆಡ್ ರೂಮಿನ ಹಾಸಿಗೆಯ ಮೇಲಷ್ಟೇ ಕಾಣುವ ಗಂಡಿಗೆ  ಅವಳ ಜೊತೆ ಸುಖಿಸಿ ಎದ್ದ ನಂತರದ ಪರಿಣಾಮಗಳ ಅರಿವು ಎಷ್ಟಿರುತ್ತದೋ ಏನೋ ತಿಳಿಯದು. ಅವಳ ಜೊತೆ ಸುಖಿಸುವ ಮುನ್ನ ಒಂದು ಕ್ಷಣ ಆಸ್ಪತ್ರೆಯ ಬೆಡ್ ಮೇಲೆ ಆ ಹೆಣ್ಣನ್ನು ಊಹಿಸಿಕೊಂಡರಷ್ಟೇ ಆ ಕ್ಷಣದ ಹೆಣ್ಣು ಗಂಡಿನ ನೋವು, ಹತಾಶೆ, ಅಸಹಾಯಕತನ, ಭಯವನ್ನು ಅವನು ಕಾಣಲು ಸಾಧ್ಯ. ಆ ಭಯ ಇಬ್ಬರಲ್ಲೂ ಮೂಡಿದ್ದೇ ಆದರೆ ಅಂತಹ ಸ್ಥಿತಿ ಬಾರದಿರಲಿ ಎಂದು ಕೆಲವರು ತಮ್ಮ ಆಸೆಗಳನ್ನು ನಿಗ್ರಹಿಸಿದರೆ ಮತ್ತೆ ಕೆಲವರು ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಸುಖಿಸಿಬಿಡಬಹುದು ಅಥವಾ ಇನ್ನೂ ಕೆಲವರು ಯಾವ ಕ್ರಮಗಳನ್ನು ಅನುಸರಿಸದೆ ಅದೃಷ್ಟ ಕೈ ಕೊಟ್ಟರೆ ಸಮಸ್ಯೆಯಲ್ಲಿ ಸಿಲುಕಬಹುದು. ಮೇಲಿನ ಕವಿತೆಯ ಸಾಲುಗಳನ್ನು ಓದುತ್ತಲೇ ಹೆಣ್ಣಿನ ಒಳ ತುಮುಲ ಯಾಕೋ ಮನಸಿನ ಒಳಗೆ ಬಂದು ನಿಂತಂತಾಯಿತು. ಅದರ ಜೊತೆಗೆ ಹಿರಿಯ ಕವಿ ದೊಡ್ಡ ರಂಗೇ ಗೌಡರು ಬರೆದ "ಪ್ರೀತಿ ಪ್ರೇಮ ನಡೆಯೋ ವೇಳೆ ತಪ್ಪೋದಿಲ್ಲ ರಾಸಲೀಲೆ.. ಕದ್ದು ಮುಚ್ಚಿ ನಡೆಸೋ ವೇಳೆ ಮನಸ್ಸಿನಲ್ಲಿ ತೂಗುಯ್ಯಾಲೆ" ಎಂಬ ಸಾಲುಗಳೂ ಸಹ ನೆನಪಾದವು.

"ಸ್ವಲ್ಪ ದಿನದಿಂದ ಬಹಳನೇ ಬಾಬಜ್ಜನ ನೆನಪು....ಸಿಕ್ಕಾಪಟ್ಟೆ ಅನ್ನುವಷ್ಟು ಜಾಸ್ತಿಯಾಗಿತ್ತು...ಅಜ್ಜನ ಗುಳಿ ಬಿದ್ದ ಕೆನ್ನೆ ಹಿಂಡಿ, ಜೋಬಲ್ಲಿನ ಎಂಟಾಣೆ ರಸಗುಲ್ಲಕ್ಕೆ ಆಸೆಯಾಗಿತ್ತು....ಜಗಳ ಕಾದು ಸೋಲಿಸಬೇಕೆನಿಸಿತ್ತು... ಮುದ್ದಿನ ಅಜ್ಜನ ಬಳಿ ಆಟವಾಡಬೇಕೆನ್ನುವ ಹುಮ್ಮಸ್ಸು.. ಹಮ್ಮು ಬಿಮ್ಮಿಲ್ಲದ ಅಜ್ಜ ಎಂದರೆ ಅದೇನೋ ಅದಮ್ಯ ಅಕ್ಕರೆ.."

ಮೇಲಿನ ಚಂದದ ಸಾಲುಗಳ ಬರೆದ ಇಂತಹ ಲೇಖಕಿ ಸಹೋದರಿಯರ ಬರಹಗಳನ್ನು ಓದಿದಾಗ ಹೀಗೆ ಅನಿಸುತ್ತೆ. ನಾವು ಪ್ರಪಂಚವನ್ನು ಸುತ್ತುತ್ತೇವೆ ಆದರೆ ಅವರು ನಮ್ಮಷ್ಟು ಪ್ರಪಂಚ ಸುತ್ತುವುದಿಲ್ಲ. ಬದಲಿಗೆ ತಾವು ಇದ್ದಲ್ಲಿಯೇ ಪ್ರಪಂಚವೊಂದನ್ನು ಕಾಣುತ್ತಾರೆ ಇಲ್ಲ ಪ್ರಪಂಚವೊಂದನ್ನು ಕಟ್ಟುತ್ತಾರೆ. ಅವರು ಕಟ್ಟುವ ಪ್ರಪಂಚದಲ್ಲಿ ಅಜ್ಜಿ ತಾತ ಅಪ್ಪ ಅಮ್ಮ ಮನೆ ಮಕ್ಕಳು ಕೈದೋಟ ಅಡುಗೆ ಊಟ ಆಟೋಟ ಇಂತಹ ಪುಟ್ಟ ಪುಟ್ಟ ಸಂಗತಿಗಳಿಗೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಅದನ್ನು ಮೀರಿದ ಪ್ರಪಂಚವನ್ನು ಅವರು ಕಟ್ಟುವುದಾದರೆ ಅದು ತಾವಷ್ಟೇ ಬಿಡುವಿನ ವೇಳೆಯಲ್ಲಿ ವಿಹರಿಸಲು ಕಟ್ಟಿಕೊಳ್ಳುವ ಪ್ರಪಂಚ. ಅದು ಅವರ ಪಾಲಿಗೆ ತಮ್ಮನ್ನೋ ತಮ್ಮ ಮಕ್ಕಳನ್ನೋ ಕಿನ್ನರಿಯರಂತೆ ಊಹಿಸಿಕೊಂಡು ಖುಷಿಪಡುವ ಒಂದು ಕಲ್ಪನಾ ಲೋಕ. ಅಂತಹ ಖುಷಿಯ ಪ್ರಪಂಚವನ್ನು ನಮ್ಮ ಬರಹಗಳಲ್ಲಿ ನಾವೇಕೆ ಕಟ್ಟಿಕೊಡಲು ವಿಫಲರಾಗುತ್ತೇವೆ ಎಂದು ಪದೇ ಪದೇ ಅನಿಸುತ್ತದೆ. ತನ್ನ ಅಜ್ಜನ ಕುರಿತು ಪುಟ್ಟ ಮಗುವಿನಂತೆ ಈ ಸಹೋದರಿ ಬರೆದ ಸಾಲುಗಳ ನೋಡಿ ಯಾಕೋ ಹಾಗೆ ಅನಿಸಿತು.

ಇಬ್ಬರಿಗೂ ಗೊತ್ತಿತ್ತು
ಒಬ್ಬರಿಗೊಬ್ಬರು ದಕ್ಕುವುದಿಲ್ಲವೆಂದು
ಆದರೂ ಅದ್ಯಾವ ಮಾಯೆ ಆವರಿಸಿತ್ತು..?
ಗೊತ್ತಿದ್ದೂ ಮಾಡಿದ ತಪ್ಪಿಗೆ ಶಿಕ್ಷೆ ಇಷ್ಟು ಘೋರವಾಗಿರುತ್ತಾ?
ಅಷ್ಟಕ್ಕೂ ಅದು ತಪ್ಪಾ?
ಇಬ್ಬರೂ ಬೆನ್ನು ಮಾಡಿ ಹೊರಟಿದ್ದಾರೆ...
ಅವಳಿಗೆ ಅವನಿಲ್ಲ..
ಅವನಿಗೆ ಅವಳಿಲ್ಲ..
ಯಾತನೆ ಬಾಳೆಲ್ಲ.. :'(

ಹೀಗೆ ಅಧ್ಬುತವಾಗಿ ಬರೆಯುವ ನಿಜಕ್ಕೂ ಎಲೆ ಮರೆ ಕಾಯಿ ಎನ್ನಬಹುದಾದ ಪ್ರತಿಭೆ ಸುಷ್ಮಾ ಮೂಡುಬಿದಿರೆ. ಸಹೋದರಿ ಸುಷ್ಮಾ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಈ ವಾರದ ಎಲೆ ಮರೆ ಕಾಯಿಯಲ್ಲಿ ಸಹೃದಯಿಗಳೇ ಇಗೋ ನಿಮಗಾಗಿ..

ಸುಷ್ಮಾ ಮೂಡುಬಿದಿರೆ

"ಹೆಸರು ಸುಷ್ಮಾ ಮೂಡುಬಿದಿರೆ.. ಊರು ಜೈನಕಾಶಿ ಎಂದೇ ಪ್ರಖ್ಯಾತವಾದ ಮೂಡಬಿದಿರೆ.

ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಊರಲ್ಲೇ... ದ್ವೀತಿಯ ಪಿಯುಸಿ ವರೆಗಿನ ವ್ಯಾಸಂಗವೂ ಅಲ್ಲೇ...ಸದ್ಯ ಪದವಿ ಶಿಕ್ಷಣ, ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜ್ ನಲ್ಲಿ. ಊರೆಂದರೆ ಅದಮ್ಯ ಮೋಹ, ಪ್ರೀತಿ.. ಜೀವನದ ಏಳುಬೀಳು ಅಲ್ಲಿಂದ ಇಲ್ಲಿಗೆ ಎಳೆದುಕೊಂಡು ಬಂದಿದ್ದರೂ ಊರಿನೆಡಗಿನ ಸೆಳೆತ ಸೂಜಿಗಲ್ಲಿನಂತೆ ಸೆಳೆಯುತ್ತಲೇ ಇದೆ.. ಇಲ್ಲಿನ ಕಾಂಕ್ರಿಟ್ ಕಾಡು ನಮ್ಮೂರಿನ ಹಸುರಿನ ಸೊಬಗಿಗೆ ಸಮಾನಾಗಿ ನಿಲ್ಲುವುದೇ ಇಲ್ಲಾ.. ಇದು ಹೊಟ್ಟೆ ಪಾಡಾದರೆ, ಅದು ಜೀವನಾಡಿ..  ಅಮ್ಮ,ಅಪ್ಪ ತಮ್ಮಂದಿರೆಡೆಗೆ ನಿಲ್ಲದ ತುಡಿತ.. ಇಂತಿಪ್ಪ ಭಾವನೆಯ ನನಗೆ ನಟಣ್ಣನ "ಬಿಟ್ಟು ಬಂದ ಮಣ್ಣಿಗೂ ಮಡಿಲಿಗೂ ಮರಳುವುದು ಸುಲಭವಲ್ಲ..." ಈ ಮಾತು fb ನಲ್ಲಿ ಓದಿದಾಗಿನಿಂದ ಬಹಳ ಕಾಡುತ್ತದೆ..

ಬರವಣಿಗೆ ಹೇಗೆ ಆರಂಭವಾಯಿತು ಎನ್ನುವುದರ ಬಗ್ಗೆ ನನಗಿನ್ನೂ ಸ್ಪಷ್ಟ ಅರಿವಿಲ್ಲ..ಮೊದಲು ಬರೆದ ಕವನ, ಕತೆಯ ನೆನಪೂ ನನಗಿಲ್ಲ..ಅದನ್ನೆಲ್ಲಾ ಜೋಡಿಸಿಟ್ಟುಕೊಳ್ಳಬೇಕೆನ್ನುವ ಜ್ಞಾನವೂ ಇರಲಿಲ್ಲ.. ಓದುವ ಹುಚ್ಚು ಅಪ್ಪ ಅಮ್ಮ ಮತ್ತು ಅಜ್ಜನ ಬಳುವಳಿ.. ಬಾಲ್ಯದಲ್ಲಿ ನೋಡುತ್ತಿದ್ದ ಶಕ್ತಿಮಾನ್, ಆರ್ಯಮನ್, ಶಕಲಕ ಬೂಮ್ ಬೂಮ್ ಧಾರಾವಾಹಿಗಳು, ತುಂತುರು, ಬಾಲಮಂಗಳದ ಮಾಮಿ ಕಾಲಂ, ಡಿಂಗ,ಶಕ್ತಿಮದ್ದು ಗಳು ಕಾಲ್ಪನಿಕ ಶಕ್ತಿಯನ್ನು ವಿಸ್ತರಿಸಿದ್ದಿರಬೇಕು..ನನ್ನ ಅಮ್ಮ ನಾ ಬರೆದ ಪ್ರತಿಯೊಂದಕ್ಕೂ ಮೊದಲ ಓದುಗಿ..ಅಮ್ಮನ ಬೆಂಬಲವೇ ನನ್ನ ಶಕ್ತಿ .ಅಮ್ಮನ ಪ್ರೋತ್ಸಾಹ ವಿಲ್ಲದೆ ಯಾವುದೂ ಸಾಧ್ಯವಾಗುತ್ತಿರಲಿಲ್ಲ..ನನ್ನನ್ನು ಅವಳು ಅಣಿಗೊಳಿಸುತ್ತಿದ್ದ ರೀತಿಯೇ ನನ್ನ ವ್ಯಕ್ತಿತ್ವಕ್ಕೆ ಕಾರಣ. ಅಮ್ಮನೊಂದಿಗೆ ಸಾಥ್ ನೀಡುತ್ತಿದ್ದ ಅಜ್ಜ, ಮಾವ.. ನನ್ನ ಕುಟುಂಬಕ್ಕೆ ನನ್ನ ಮೊದಲ ಥ್ಯಾಂಕ್ಸ್..

ನಾನು, ನನ್ನ ಪ್ರಾಥಮಿಕ ಶಾಲಾ ಹಂತದಲ್ಲೇ ಬಹಳಷ್ಟು ಕಾದಂಬರಿಗಳನ್ನು ಓದಿ ಮುಗಿಸಿದ್ದು..ಮುಖ್ಯವಾಗಿ ಅಮ್ಮನಿಷ್ಟದ ಪ್ರಕಾರವಾದ ಸಾಮಾಜಿಕ ಕಾದಂಬರಿಗಳು(ಅಮ್ಮನ ವಿರೋಧದ ನಡುವೆಯೂ ಓದಿ ಬಿಟ್ಟಿದ್ದೆ..) ಮೂರನೇಯ ತರಗತಿಯಲ್ಲಿ ಇದ್ದಾಗ ಸಣ್ಣ ಪುಟ್ಟ ಚುಟುಕುಗಳನ್ನು ನನ್ನದೇ ಆದ ದಾಟಿಯಲ್ಲಿ ಎದ್ದೆ-ಬಿದ್ದೆ-ಒದ್ದೆ ಮುಂತಾದ ಪ್ರಾಸಗಳನ್ನು ಉಪಯೋಗಿಸಿ ಬರೆಯುತ್ತಿದ್ದೆ. 5ನೇ ತರಗತಿಯಲ್ಲಿದ್ದಾಗ ಮೊದಲ ಬಾರಿಗೆ ಪ್ರತಿಭಾಕಾರಂಜಿಯ ಕತೆ ಹೇಳುವ ಸ್ಪರ್ಧೆಗೆ ಸ್ವಂತವಾಗಿ ಕತೆ ರಚಿಸಿ, ಸಭೆಗೆ ಪ್ರಸ್ತುತ ಪಡಿಸಿ ಬಹುಮಾನ ಪಡೆದಿದ್ದೆ.ಅದಕ್ಕೆ ಕಾರಣವಾಗಿದ್ದು ನಳಿನಿ ಟೀಚರ್. ಅಲ್ಲಿಂದ ಸಣ್ಣ ಪುಟ್ಟ ಕತೆ ಬರೆಯುವ ಹವ್ಯಾಸ ಆರಂಭವಾಯಿತು.. ಹೈ ಸ್ಕೂಲ್ ಜೀವನ ನನ್ನ ಜೀವನದ ಬಹು ಮುಖ್ಯ ತಿರುವು. ಅಲ್ಲೇ ನಾನು ಮುನಿರಾಜ್ ಸರ್ ಅಂತಹ ಗುರುಗಳನ್ನು ಪಡೆದ್ದಿದ್ದು. ನಿತೇಶ್ ಸರ್ ಅಂತಹ ಸ್ನೇಹಜೀವಿ ಶಿಕ್ಷಕರನ್ನು ಪಡೆದಿದ್ದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಾನು ಭಾಗವಹಿಸಲು ಮುಖ್ಯ ಪ್ರೇರಕ ಶಕ್ತಿಯೇ ಅವರುಗಳು. ಚರ್ಚಾ ಸ್ಪರ್ಧೆ, ಭಾಷಣ, ಪ್ರಬಂಧ, ನಾಟಕ ಹೀಗೆ ಭಾಗವಹಿಸುತ್ತಿದ್ದೆ. ನಾನು ಓದಿದ ಪುಸ್ತಕಗಳಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಓದಿದ್ದು ಆ ಕಾಲಘಟ್ಟದಲ್ಲೇ..ನೆಹರು ಪರದೆ ಸರಿಯಿತು,ಗಾಂಧಿ ಮತ್ತು ಗೋಡ್ಸೆ, ಸಾವರ್ಕರ್, ಭಗತ್ ಸಿಂಗ್, ಬದುಕಲು ಕಲಿಯಿರಿ...ಹೀಗೆ ಪುಸ್ತಕಗಳ ಪಟ್ಟಿ ಬೆಳೆಯುತ್ತದೆ..

ಇದಾದ ಮೇಲೆ ಬ್ಲಾಗಿನಂಗಳ ಮತ್ತು ಮುಖಪುಟ ನನ್ನಮೇಲೆ ಪ್ರೋತ್ಸಾಹದ ಸುರಿಮಳೆಯನ್ನೇ ಸುರಿಸಿದೆ.. ನಾ ಬರೆದ ಲೇಖನ,ಕವಿತೆಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಪ್ರೋತ್ಸಾಹ ನೀಡಿದೆ, ತಪ್ಪಾದಾಗ ತಿದ್ದಿದೆ. ಎಲ್ಲೊ ಇದ್ದು ತನ್ನ ಪಾಡಿಗೆ ತಾನು ಆತ್ಮ ಸಂತೋಷಕ್ಕಾಗಿ ಬರೆಯುತ್ತಿದವಳನ್ನು ಜಗತ್ತಿನ ಮುಂದೆ ತಂದು ನಿಲ್ಲಿಸಿದೆ..ಬ್ಲಾಗ್ ಬಂಧುಗಳ ಸಹೃದಯತೆಗೆ ಹೇಗೆ ಥ್ಯಾಂಕ್ಸ್ ಹೇಳಲಿ? ಮೌನರಾಗ ಮತ್ತು ಕನಸು ಕಂಗಳ ತುಂಬಾ.. ಎನ್ನುವ 2 ಬ್ಲಾಗ್ ಗಳನ್ನು ಎರಡು ವರುಷಗಳಿಂದ ನಡೆಸುತ್ತಾ ಬಂದಿದ್ದೇನೆ. ಬರೆದಿದ್ದು, ಓದಿದ್ದು ತೀರಾ ಕಡಿಮೆ..ಆ ನಿಟ್ಟಿನಲ್ಲಿ ನಾನಿನ್ನೂ ಬಹಳ ಚಿಕ್ಕವಳು. ಕನಸು ಕಂಗಳ ತುಂಬಾ ಬಣ್ಣದ ಕನಸುಗಳಿವೆ. ನನಸಾಗಲು ನನ್ನ ಶ್ರಮ, ನಿಮ್ಮ ಆಶೀರ್ವಾದ, ದೈವ ಕೃಪೆ ಅತ್ಯಗತ್ಯ. ಬ್ಲಾಗ್ ನಲ್ಲಿ ಆರಂಭದ ದಿನಗಳಿಂದಲೂ ಪ್ರೋತ್ಸಾಹಿಸುತ್ತಾ ಬಂದ ರವಿ ಮೂರ್ನಡ್ ಸರ್, ಅಜಾದ್ ಸರ್, ಗೌಡ್ರು, ಶಶೀ, ಸುರೇಖಾ, ಬದರಿ ಸರ್, ಅಣ್ಣ ಮಂಜು, ಗೆಳೆಯ ವಿನಯ್ ಯಿಂದ ಹಿಡಿದು ಇತ್ತೀಚಿನ ಸಂಧ್ಯಾ, ಚಿನ್ಮಯ್ ಮತ್ತು ಹೆಸರಿಸಲಾಗದ ಅಷ್ಟೂ ಜನಕ್ಕೂ ನನ್ನ ಕೋಟಿ ಕೋಟಿ ನಮನಗಳು..
ಮಾತುಕತೆಗೆ ಕರೆದು ಎಲೆಮರೆಕಾಯಿಯಲ್ಲಿ ನನಗೂ ಒಂದು ಜಾಗ ನೀಡಿದ್ದಕ್ಕೆ ಸಹೋದರ ನಟರಾಜ್ ಅವರಿಗೂ ಧನ್ಯವಾದ..

ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ.. ತಪ್ಪು ಒಪ್ಪು ತಿಳಿಯದೇ ಅಂಜಿಕೆ ಅಳುಕಿನಿಂದಲೇ ನನ್ನ ಪರಿಚಯ ಮಾಡಿಕ್ಕೊಟ್ಟಿದ್ದೇನೆ ಇಷ್ಟವಾದರೆ ಒಪ್ಪಿಸಿಕ್ಕೊಳ್ಳಿ, ತಪ್ಪಿದ್ದರೆ ತಿದ್ದಿ ಬುದ್ಧಿ ಹೇಳಿ...
ಧನ್ಯವಾದಗಳೊಂದಿಗೆ
ಇಂತಿ ನಿಮ್ಮ,
ಸುಷ್ಮಾ ಮೂಡುಬಿದಿರೆ."

ಎಂದು ಚಂದವಾಗಿ ತನ್ನ ಪರಿಚಯ ಮಾಡಿಕೊಂಡ ಸುಷ್ಮಾರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಸಹೃದಯಿಗಳೇ.. ಸುಷ್ಮಾರವರ ಬ್ಲಾಗುಗಳ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಅವರ ಬ್ಲಾಗುಗಳ ಮೇಲೆ ಒಮ್ಮೆ ಕಣ್ಣಾಡಿಸಿ..
http://mounaraaga-suvi.blogspot.in/
http://kanasukangalathumbaa.blogspot.in/

ಸುಷ್ಮಾರವರ ಬರಹದ ಮತ್ತೊಂದು ಚಂದದ ತುಣುಕು ಇಗೋ ನಿಮಗಾಗಿ..

"ಮದುವೆ ಎನ್ನುವುದೊಂದು ಆಗುವುದಕ್ಕಿಂತ ಮುಂಚೆ ನಾವು ಹುಡುಗಿಯರು  ತೀರಾ ಭಿನ್ನವಾಗಿ ಯೋಚಿಸುತ್ತಿರುತ್ತೇವೆ...ಗಂಡುಬೀರಿ, ಬಜಾರಿ ಅನಿಸಿಕೊಂಡದಾರೂ ಗಂಡು ಮಕ್ಕಳಿಗೆ ನಾವು ಸಮ ಎನ್ನುವುದನ್ನ ಸಾಬೀತು ಮಾಡ ಹೊರಡುತ್ತೇವೆ...ಜಿದ್ದಿಗೆ ಬಿದ್ದಾದರೂ ಪೈಪೋಟಿ ನೀಡುತ್ತೇವೆ...ಮದುವೆ, ಮನೆ, ಗಂಡ, ಮಕ್ಕಳು...ಥತ್, ನಮ್ಮ ಸ್ವಾತಂತ್ರ್ಯ ಕಿತ್ತುಕೊಳ್ಳಲೇ ಮಾಡಿರೋ ವ್ಯವಸ್ಥೆ ಎಂದು ತಾಸುಗಟ್ಟಲೆ ಗೆಳತಿಯರ ಮಧ್ಯ  ಭಾಷಣ ಬಿಗಿದಿರುತ್ತೇವೆ... ಇಷ್ಟಾದರೂ ಮನೆಯಲ್ಲಿ ಹಿಡಿದು ಮದುವೆ ಮಾಡೇ ಮಾಡುತ್ತಾರೆ...ಸರಿ ಮದುವೆಯಾಗಿತ್ತಲ್ಲ ಮಕ್ಕಳಂತೂ ಸದ್ಯದ ವಿಚಾರ ಅಲ್ಲಾ...ಎರಡು-ಮೂರು  ವರ್ಷ ಗ್ಯಾಪ್ ಇರಲಿ ಎಂದುಕೊಳ್ಳುತ್ತಲೇ ಮಡಿಲು ತುಂಬಿರುತ್ತದೆ...ಇಲ್ಲಿಯ ತನಕ 'ನಾವೂ ಗಂಡಿನ ಹಾಗೆ' ಅಂದುಕೊಂಡ ಮುಖವಾಡ ಕಳಚುವುದು ಈಗಲೇ...ಇದು ಅಮ್ಮನಾಗುವ ಖುಷಿ...ಹೆಣ್ತನ, ತಾಯ್ತನ ಜಾಗೃತವಾಗುವ ಹೊತ್ತು.. ಪೂರ್ತಿಯಾಗಿ ಮಾತೃ ಭಾವವನ್ನು ಆಸ್ವಾದಿಸುವ ಹೊತ್ತು.. ಗಂಡಾಗಿ ಇಂತಹ ಆನಂದ ಪಡೆಯಲು ಸಾದ್ಯವೇ ಎಂದೆಣಿಸುವಾಗ ಬಜಾರಿ ಕಳೆದು ಹೋಗುತ್ತಾಳೆ.. ಮೊಗ್ಗು ಅರಳುವ ಸಮಯದ ನಾವಿನ್ಯ ಭಾವದ ಹೆಣ್ಣು ಮೈದಳೆಯುತ್ತಾಳೆ.."

ಮತ್ತೆ ಸಿಗೋಣ

ಇತಿ
ನಿಮ್ಮ ಪ್ರೀತಿಯ
ನಟರಾಜು :))





5 ಕಾಮೆಂಟ್‌ಗಳು:

  1. ಶುಭಾಶಯಗಳು. ಒಳ್ಳೆಯ ಕವನವದು, ಮೊದಲಿಗೆ ಕೋಟ್ ಮಾಡಿದ್ದು :)

    ಪ್ರತ್ಯುತ್ತರಅಳಿಸಿ
  2. ಮೊದಲ ಬಾರಿ ಗೆ ಸುಷ್ಮಾ ಹೇಳಿದ ಮೇಲೆ ಬ್ಲಾಗಿದೆ ಹೋದೆ..ಸಖತ್ತಾಗಿದೆ ಬ್ಲಾಗಿನ ಆಶಯ...ಮುಂದುವರೆಯಲಿ....ಅಭಿನಂದನೆಗಳು Sushma Moodbidri ,ಧನ್ಯವಾದ Nataraju Seegekote

    ಪ್ರತ್ಯುತ್ತರಅಳಿಸಿ
  3. ಸುಶ್ಮ ಪುಟ್ಟಿಯ ಲೇಖನಗಳನ್ನು ಓದಿದಾಗ ಮೊದಲ ಭಾವ ಬರುವುದು ಅಂತರಂಗದ ಮೃದಂಗ..ಈ ಭಾವ ಬಲು ಕಾಡುತ್ತದೆ..ನಾವೇ ಆ ಕವಿತೆಯಲ್ಲೋ, ಕಥೆಯಲ್ಲೋ, ಪ್ರಬಂಧದಲ್ಲೋ ಇದ್ದೆವೇನೋ ಎನ್ನುವ ಕಾಡುವಷ್ಟು ಆಪ್ತತೆಯೇ ಅವರ ಬರಹದ ಶಕ್ತಿ...ಸುಲಲಿತವಾಗಿ ಓಡಿಸಿಕೊಂಡು ಹೋಗುವ ಅವರ ಭಾಷಾ ಪ್ರಯೋಗ ಇಷ್ಟವಾಗುತ್ತದೆ..ಅಭಿನಂದನೆಗಳು ಸುಷ್ಮಾ ಪುಟ್ಟಿ....ಸಹೋದರ ನಟರಾಜ್ ಇಂತಹ ಅನೇಕ ಎಲೆ ಮರೆ ಕಾಯಿಗಳನ್ನು ಪರಿಚಯಿಸುತ್ತಿರುವ ನಿಮ್ಮ ಪ್ರಯತ್ನ ಅಭಿನಂದನೆಗೆ ಅರ್ಹ...ನಾನು ನನ್ನದು ಎಂದು ತಿರುಗುತ್ತಿರುವ ಈ ಸಮಾಜದಲ್ಲಿ ಇಂತಹ ಒಂದು ಕಾರ್ಯ ನಿಜಕ್ಕೂ ಮನತನಿಸುತ್ತದೆ..ಅಭಿನಂದನೆಗಳು ನಟರಾಜ್!!!

    ಪ್ರತ್ಯುತ್ತರಅಳಿಸಿ
  4. ಯುವ ಕವಿಗಳಲ್ಲಿ ನನಗೆ ಕಾಣುವುದು ಹೆಚ್ಚಿಗೆ ಪ್ರೇಮ ಬರಹಗಳು.

    ಸುಷ್ಮಾರವರು ನನಗೆ ಮೆಚ್ಚುಗೆಯಾಗುವುದು ಆ ಪ್ರೇಮ ಕಾವ್ಯದಲ್ಲೂ ಅಡಗಿಸುವ ಒಳ ತೋಟಿಯಿಂದ. ಈಗಲೀ ಗಟ್ಟಿ ಕವಿತೆ ಬರೆಯುವ ಈಕೆ ಮುಂದೆ ಇನ್ನೂ ಹೆಚ್ಚು ಹೆಚ್ಚು ಪ್ರಬುದ್ಧವಾಗುತ್ತ ಸಾಗುತ್ತಾರೆ.

    ಮುಂದೆ ಇವರ ಸಾಹಿತ್ಯ ಪಠ್ಯ ಪುಸ್ತಕದಲ್ಲೂ ಸೇರುತ್ತದೆ.

    ಕಥೆ, ಲಘು ಬರಹ, ಕವನ, ಹನಿಗವನ ಪ್ರಕಾರಗಳಲ್ಲಿ ಉತ್ತಮ ಪ್ರಯತ್ನಗಳಿಂದ ನಮ್ಮೆಲ್ಲರ ಮನಗೆದ್ದಿರುವ ಸುಷ್ಮಾರವರು ಇನ್ನೂ ಬೆಳಗಲಿ ಎಂಬುದು ನಮ್ಮ ಹಾರೈಕೆ.

    ಪ್ರತ್ಯುತ್ತರಅಳಿಸಿ
  5. ಬ್ಲಾಗ್ ಲೋಕದ ಗೆಳೆಯರ ಈ ಪ್ರೋತ್ಸಾಹಕ್ಕೆ ಯಾವ ರೀತಿ ಕೃತಜ್ಞತೆ ಹೇಳಬೇಕೆಂದು ತಿಳಿಯುತ್ತಿಲ್ಲ...
    ಎಲೆ ಮರೆ ಕಾಯಿಯಲ್ಲಿ ನನಗೊಂದು ಅವಕಾಶ ಕೊಟ್ಟ ನಲ್ಮೆಯ ನಟಣ್ಣ, ಪ್ರತಿ ಬಾರಿಯೂ ಬೆನ್ನು ತಟ್ಟಿ ಹುರಿದುಂಬಿಸುವ ಎಲ್ಲಾ ಬ್ಲಾಗ್ ಬಂಧುಗಳಿಗೆ ನಾನು ಚಿರಋಣಿ..ನಿಮ್ಮ ಬೆಂಬಲ ಸದಾ ಹೀಗೆ ಈ ಕಿರಿಯಳ ಮೇಲೆ ಇರಲಿ...

    -ಸುಷ್ಮಾ ಮೂಡುಬಿದಿರೆ

    ಪ್ರತ್ಯುತ್ತರಅಳಿಸಿ