ಗುರುವಾರ, ಸೆಪ್ಟೆಂಬರ್ 20, 2012


ಎಲೆ ಮರೆ ಕಾಯಿ ೫೭
ನನಗಿಂತ ನಿನ್ನ 
ಹೊತ್ತ ಹೃದಯ 
ಭಾರವಾಯಿತೆನೆಗೆ,
ಎಷ್ಟು ತಡೆದರೂ 
ನಿನ್ನೆಡೆಗೆ ವಾಲುತಿಹುದು,
ನಿನ್ನಯ ಪ್ರೇಮದಿ
ಸಮತಟ್ಟಾಗಿದ್ದ
ಮನದ ನೆಲವೂ..
ಇಳಿಜಾರಾಯ್ತೆ!!

ಮಕ್ಕಳು ಜಾರು ಬಂಡೆ ಕಂಡರೆ ಸಾಕು ಅವರು ಬೇರೆಯದೇ ಪ್ರಪಂಚಕ್ಕೆ ಹೊಕ್ಕಿ ಬಿಡುತ್ತಾರೆ. ಅಲ್ಲಿ ತಮ್ಮ ಜೊತೆಗಿರುವ ಅಪ್ಪ ಅಮ್ಮ ಯಾರೂ ಸಹ ಕಣ್ಣಿಗೆ ಕಾಣುವುದಿಲ್ಲ. ಅವರ ಕಣ್ಣಿಗೆ ಜಾರುಬಂಡೆಯೊಂದು ಬೆಟ್ಟದ ಹಾಗೆ. ಅವರು ಎಷ್ಟೇ ಪುಟ್ಟ ಮಕ್ಕಳಾಗಿದ್ದರೂ ಯಾರ ಸಹಾಯವನ್ನು ತೆಗೆದುಕೊಳ್ಳದೆ ಜಾರು ಬಂಡೆಯನ್ನು ಹತ್ತುವ ಪ್ರಯತ್ನ ಮಾಡುತ್ತಾರೆ. ಹಾಗೆ ಹತ್ತಿ ಜಾರು ಬಂಡೆಯ ಶಿಖರವ ತಲುಪಿದ ಮೇಲೆ ಆ ಇಳಿಜಾರಿನಲ್ಲಿ ಜಾರುತ್ತಾ ಬರುವಾಗ ಖುಷಿಯಿಂದ ಹಿಗ್ಗಿ ಬಿಡುತ್ತಾರೆ. ಜಾರುತ್ತಾ ತಮ್ಮ ಪಾದ ನೆಲವನ್ನು ಮುಟ್ಟಿದ ಮರುಕ್ಷಣ ಮತ್ತೆ ಜಾರು ಬಂಡೆಯನ್ನು ಏರಲು ಓಡುತ್ತಾರೆ. ಜಾರು ಬಂಡೆಯನ್ನು ಹತ್ತುವ ಕೆಲಸ ಯಾಕೋ ಅವರಿಗೆ ಕಷ್ಟದ ಕೆಲಸವಾಗಿ ಕಾಣುವುದಿಲ್ಲ. ಯಾಕೆಂದರೆ ಅಲ್ಲಿ ಜಾರುವಾಗ ಇರುವ ಸುಖವೇನೆಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಹಾಗೆಯೇ ಪ್ರೇಮಿಯೂ ಸಹ ಪ್ರೇಮವೆಂಬ ಜಾರುಬಂಡೆಯಂತಹ ಬೆಟ್ಟವನ್ನು ಎಷ್ಟೇ ಕಷ್ಟಗಳೂ ಎದುರಾದರೂ ಹತ್ತಿ ಅಲ್ಲಿ ಜಾರುತ್ತಾ ಸುಖಿಸುತ್ತಾನೆ. ಮಕ್ಕಳು ಮತ್ತು ಪ್ರೇಮಿಗಳು ತಮ್ಮ ತಮ್ಮ ಜಾರುಬಂಡೆಗಳ ಆಟದಲ್ಲಿ ಜಾರಿ ಜಾರಿ ಬಟ್ಟೆಯನ್ನು ಹರಿದುಕೊಳ್ಳುವುದು, ಮೈ ಕೈ ತರಚಿಕೊಳ್ಳುವುದು ಸಾಮಾನ್ಯ.. :)) ಯಾಕೋ ಮೇಲಿನ ಕವನದ ಸಾಲುಗಳ ಓದಿ ಅಬ್ಬಬ್ಬಾ!! ಎನಿಸಿಬಿಟ್ಟಿತು. ಕವಿಗಳ ಹೋಲಿಕೆಗಳೇ ಹಾಗೆ ನಾವು ಕಲ್ಪಿಸಿಲಾರದನ್ನು ಅವರು ಕಲ್ಪಿಸಿ ನಮ್ಮನ್ನು ಬೆರಗುಗೊಳಿಸಿಬಿಡುತ್ತಾರೆ. ಮನದ ನೆಲವನ್ನು ಇಳಿಜಾರಿಗೆ ಹೋಲಿಸಿ ನನ್ನಲ್ಲಿ ಹೀಗೊಂದು ಭಾವನಾ ಲಹರಿಗಳ ಎಬ್ಬಿಸಿದ ಗೆಳೆಯನ ಬ್ಲಾಗಿನ ಹೆಸರು ಹಿಂದಿನ ಹೆಸರು ಸೌಂಡ್ ಆಫ್ ಹಾರ್ಟ್ ಈಗ ಅದರ ಹೆಸರು "ಹೃದಯವಾಣಿ".

"ಮುಂಜಾನೆ ಏಳುವುದೆಂದರೆ ಅದೇಕೋ ಗೊತ್ತಿಲ್ಲ, ಪುಟಾಣಿ ಮಗು ತನ್ನ ಬಳಿ ಇದ್ದ ಆಟಿಕೆಯನ್ನು ಕೇಳಿದಾಗ ಕೊಡದೇ ಇದು ನನ್ನದು -ಇದು ನನ್ನದು, ನಾ ಯಾರಿಗೂ ಕೊಡುವುದಿಲ್ಲವೆಂದು ಮಾಡುವ ಮೊಂಡಾಟದಂತೆ ಮನವು ಮುಂಜಾನೆಯ ಅರೆನಿದ್ರೆಯನ್ನು ಬಿಟ್ಟುಕೊಡಲು ಹಿಂಜರಿಯುತಿತ್ತು."

ಹಾಗೆ ಮೊಂಡಾಟ ಮಾಡುವ ಮನಸ್ಸನ್ನು ಪುಸಲಾಯಿಸಿ ಜಾಗಿಂಗ್ ಗೆ ಹೊರಡುವ ಹುಡುಗ ದಾರಿ ಮಧ್ಯದಲ್ಲಿ ಕೋಗಿಲೆಯ ದನಿ ಕೇಳಿ ಅದನು ಅನುಕರಿಸಿ ಅದು ಮತ್ತೆ ಮತ್ತೆ ಕೂಗುವಂತೆ ಮಾಡುವುದ ಕುರಿತು ಓದುವಾಗ ಯಾಕೋ ಖುಷಿಯಾಗುತ್ತದೆ. ಈ ಗೆಳೆಯನ ಲೇಖನ ಓದುತ್ತಿದ್ದಂತೆ ಕಾಲೇಜಿನ ದಿನಗಳಲ್ಲಿ ಕೋಳಿಗಳ ರೇಗಿಸಿ ಕೂಗಿಸುತ್ತಿದ್ದ ದಿನಗಳು ಯಾಕೋ ನೆನಪಿಗೆ ಬರುತ್ತವೆ. ನಮ್ಮ ಈ ಕವಿ ಗೆಳೆಯ ಬೆಳೆದು ದೊಡ್ಡವನಾಗಿದ್ದರೂ ಇನ್ನೂ ತನ್ನ ಮುಗ್ದತೆಯನ್ನು ಕಾಯ್ದಿಟ್ಟುಕೊಂಡಿರುವುದು ಖುಷಿಯ ವಿಚಾರ.

ಮಚ್ಚಿನಂತೆ ಹರಿತವಾದ ನಿನ್ನ ಸೌಂದರ್ಯದಿ 
ತೆಂಗಿನಕಾಯಿಯಂತಹ ಎನ್ನಯ ಮನದ ಸಿಪ್ಪೆಯನ್ನು ಸುಲಿದು 
ಅಂತರಂಗವೆಂಬ ಕಳಶವ ಬೇಧಿಸಿ 
ಹೃದಯವೆಂಬ ತಿಳಿಯಾದ ಬಿಳಿ ಕವಚದೊಳಗೆ
ಎಳನೀರಿನಂತೆ ಸವಿಯಾಗಿದ್ದ ನನ್ನನ್ನೇ ಹೀರಿಬಿಟ್ಟೆಯಲ್ಲೇ !!

ನೋಡಿ ಮುಗ್ದರಿಗೆ ಎಂತಹ ಸ್ಥಿತಿ ಬರುತ್ತೆ ಅಂತ :)). ಸುಮ್ಮನೆ ತಮಾಷೆಗೆ ಹಾಗಂದೆ. ಶಿವ ಶಂಭುಲಿಂಗನನ್ನು ಸದಾ ನೆನೆಯುತ್ತಾ ಬಹುಶಃ ತನ್ನ ಮನದಲ್ಲಿ ಮೂರ್ನಾಲ್ಕು ಕೋಣೆಗಳ ಮಾಡಿ ಒಮ್ಮೆ ಪ್ರೇಮದಲ್ಲಿ, ಒಮ್ಮೆ ಆಧ್ಯಾತ್ಮದಲ್ಲಿ, ಒಮ್ಮೆ ಹಾಸ್ಯದಲ್ಲಿ, ಹೆಚ್ಚಾಗಿ ಫೇಸ್ ಬುಕ್ ನಲ್ಲಿ ಕಳೆದು ಬಿಡುವ ನಮ್ಮ ನಡುವಿನ ಪುಟ್ಟ ಗಣಿ ಅಂದರೆ ಗಣೇಶ್ ಜಿ ಪಿ ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ವಿಶೇಷ ಅತಿಥಿ. ಗಣಿ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಗಣೇಶ .ಜಿ.ಪಿ

"ಅಲ್ಲಿ ಇಲ್ಲಿ ಗೀಚೋ ಮಗುನ ನಿಮಗೆಲ್ಲ ಪರಿಚಯ ಮಾಡುಸ್ತಿನಿ ಅಂತ ನಮ್ಮ ನಟಣ್ಣ ಸ್ಯಾನೆ ತಲೆ ತಿಂದುಬಿಟ್ರು, ಅವರ ಆತ್ಮೀಯತೆಗೆ ಮಣಿದು ನಿಮ್ಮೆಲ್ಲರ ಮುಂದೆ ತಲೆಭಾಗಿಸಿ ನಮಸ್ಕರಿಸುತ್ತ ಅಪ್ಪ -ಅಮ್ಮರ ನೆನೆಯುತ್ತ :)) ಆ ನನ್ನ ಶಂಭುಲಿಂಗನ ಪಾದಕಮಲಗಳನ್ನು ಸ್ಮರಿಸುತ್ತ, ನನ್ನ ಪರಿಚಯ ಮಾಡಿಕೊಳ್ಳುತ್ತಿದ್ದೇನೆ, ಅಪ್ಪ -ಅಮ್ಮಂದಿರೆ, ಅಕ್ಕ -ಅಣ್ಣಂದಿರೆ, ಮತ್ತು ನೆಚ್ಚಿನ ಗೆಳೆಯ- ಗೆಳತಿಯರೆ,, ಇದೇನಪ್ಪ ಇದು ರಾಜಕಾರಣಿ ತರ ಶುರು ಹಚ್ಹ್ಕೊಬಿಟ್ಟ ಅನ್ಕೋಬೇಡಿ ನಿಮಗೆ ಮರ್ಯಾದೆ ಕೊಡಬೇಕಾದ್ದು ನನ್ನ ಧರ್ಮ ಅದಕ್ಕಷ್ಟೇ :))) ನಾನು ಸ್ವಲ್ಪ ಕುಯ್ಯೋದು ಜಾಸ್ತಿ ಒಂತರ ಲೆಕ್ಚರ್ ಅಂತಾರಲ್ಲ ಹಂಗೆ ಸ್ವಲ್ಪ ಸಹಿಸ್ಕೊಬೇಕು ದಯವಿಟ್ಟು. :))).

ನಾವು ಗಣೇಶ .ಜಿ.ಪಿ ಅಂತ ಹೇಳ್ಬಿಟ್ಟು ಎಲ್ಲ ಪ್ರೀತಿಯಿಂದ ಗಣಿ ಅಂತಾರೆ ,ನನ್ನ ಅಪ್ಪ ಹವಾಲ್ದಾರ್ , ಅಮ್ಮ ಗೃಹಿಣಿ ,ಇನ್ನು ಒಬ್ಬ ಪ್ರೀತಿಯ ಪುಟ್ಟ ತಮ್ಮ ನಾಲ್ವರ ಒಂದು ಪುಟ್ಟ ಸಂಸಾರ  ನಮ್ಮ ತಂದೆಯ ಊರು ಅರಸೀಕೆರೆ , ರೈತರಾಗಿದ್ದ ತಂದೆಗೆ ಪೋಲಿಸ್ ಪೇದೆ ಹುದ್ದೆ ಸಿಕ್ಕಿದ್ದರಿಂದ ಮೈಸೂರಿಗೆ ನಮ್ಮ ಪಯಣ ಬೆಳೆಯಿತು. ಅಪ್ಪನ ಪರಿಶ್ರಮ ಶಿಸ್ತಿನ ಹಾರೈಕೆ ನಮ್ಮಲ್ಲಿ ಸದ್ಗುಣಗಳ ಆಗರ (ಸ್ವಲ್ಪ ಬಿಲ್ಡ್ ಅಪ್ಗೆ ) ತುಂಬಿತು.  ನಮ್ಮದು ಮಧ್ಯಮ ವರ್ಗದ ಕುಟುಂಬ, ಜೀವನದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ನಡೆಯುತ್ತಿತ್ತು. ಪ್ರಾಥಮಿಕ ಹಂತದಿಂದಲೂ ನನಗೆ ಚಿತ್ರ ಬರೆಯುವುದು, ಮತ್ತಿತರ ಕ್ರಿಯಾಶೀಲತೆಯಲ್ಲಿ ತುಂಬಾ ಆಸಕ್ತಿ ಹಾಗಾಗಿ ನಿರಂತರ ಚಟುವಟಿಕೆಗಳಲ್ಲಿ ಮುಳುಗಿರುತ್ತಿದ್ದೆ  ಎಲ್ಲ ವಿಭಾಗದಲ್ಲೂ ಭಾಗಿಯಾಗಬೇಕೆಂಬ ಹುಚ್ಚು ಬಯಕೆ ಆದದ್ದರಿಂದ ಸದಾ ಕಾಲ ಪ್ರಯತ್ನದಲ್ಲೇ ಇರುತ್ತಿದ್ದೆ. ಓದಿನಲ್ಲಿ ಏನು ಕಡಿಮೆ ಇರಲಿಲ್ಲ. ಪ್ರೋತ್ಸಾಹ ಸಿಗದೇ ಇದ್ದರು ಎಲ್ಲ ಸ್ಪರ್ಧೆಗಳಲ್ಲಿ ಸತತವಾಗಿ ಭಾಗವಹಿಸುತ್ತಿದ್ದೆ. ಮತ್ತೆ ಹೈಸ್ಕೂಲಿನಲ್ಲಿದ್ದಾಗ ನಮಗೆ ವಿ.ರಾಜಪ್ಪ ಎಂಬ ಕನ್ನಡ ಶಿಕ್ಷಕರಿದ್ದರು ಅವರ ಭೋದನಾ ಶೈಲಿ ನನ್ನ ಮನ ಹೊಕ್ಕಿತ್ತು ಆ ಸಮಯದಲ್ಲೇ ದ. ರಾ .ಬೇಂದ್ರೆಯವರ, ಕುವೆಂಪುರವರ ಕವಿ-ಕಾವ್ಯ ಪರಿಚಯ ಮತ್ತೆ ಅವರ ಕಾವ್ಯ ಶೈಲಿಯನ್ನು ಪಟ್ಯದಲ್ಲಿ ನೋಡಿ, ಅದರಲ್ಲೂ ನಮ್ಮ ರಾಜಪ್ಪ ಗುರುಗಳಿಂದ ಅದನ್ನು ಕೇಳುತಿದ್ದರೆ ಮನಕ್ಕೆ ಹಬ್ಬವೋ ಹಬ್ಬ. ಹೀಗೆ ನಾನು ಶ್ರೇಷ್ಠ ಕವಿಗಳ ಭಾವಚಿತ್ರ ಬರೆದು ಏನು ಗೀಚೋದು ಎಂದು ಭಾವಕ್ಕೆ ಒಳಗಾಗಿದ್ದೆ ಆಗ ಬರೆದ ಬದುಕಿನ ಮೊತ್ತ ಮೊದಲ ಕವನ ಇದು (೮ನೆ ತರಗತಿಯಲ್ಲಿದ್ದಾಗ )

ಕಂದ
ಅಲ್ಲಿ ನೋಡು ಆಡುವ ಕಂದ
ಅದು ಆಡುವ ನೋಟವೇ ಚಂದ !!
ಆ ಕಂದ ಮುತ್ತಿತ್ತರೆ ಮಕರಂದ
ಅದನ್ನು ಸವಿದರೆ ಜೇಂಕಾರದ ಆನಂದ !!

ನಂತರ ಕವನ ಇರಲಿ ಅದರ ಜೊತೆಗೆ ಚಿತ್ರ ಬರೆಯುವುದು ಕೂಡ ಕ್ಷೀಣಿಸುತ್ತಾ ಹೋಯ್ತು ಹೈಸ್ಕೂಲಿನಲ್ಲಿ ವಚನಕಮ್ಮಟ ಎಂಬ ಸ್ಪರ್ಧೆ ಆಯೋಜಿಸಿದ್ದರು ಅದರಲ್ಲಿ ಭಾಗವಹಿಸಿದ ನಾನು ವಚನಗಳನ್ನು ಪಟಪಟನೆ ನುಡಿಯುತ್ತಿದೆ, ಎಲ್ಲರು ಕಂಡು ಬೆರಗಾಗುತಿದ್ದರು, ದುರಾದೃಷ್ಟವಶ ಅಂತರ ಸ್ಕೂಲಿನ ವಿಭಾಗದಲ್ಲಿ ಸಮಾದಾನಕರ ಬಹುಮಾನಕ್ಕೆ ತೃಪ್ತಿ ಪಡಬೇಕಾಯ್ತು. ಆಗಲೇ ಸಣ್ಣ ಪುಟ್ಟ ಉತ್ತೇಜಿಸುವ ಪುಸ್ತಕಗಳನು ಕೊಂಡುಕೊಳ್ಳುತ್ತಿದ್ದೆ. ಬಿಡುವಾದಾಗ ಓದುತಿದ್ದೆ. ಕಾಲೇಜಿನಲ್ಲಿ ಒಂದೆರಡು ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ, ಮತ್ತೆ ಅಂತರಕಾಲೇಜು ವಿಭಾಗದಲ್ಲಿ ಭಾಗವಹಿಸಿದಾಗ ಪ್ರೋತ್ಸಾಹವಿಲ್ಲದೆ ಮತ್ತೆ ಮರುಕ ಪಟ್ಟೆ.  ಹೀಗೆ ಇದ್ದ ಕ್ರಿಯಾಶೀಲತೆಗಳಿಗೆ ಪ್ರೋತ್ಸಾಹ ಸಿಗದೇ ಎಲ್ಲ ನೀರಿಲ್ಲದೆ ಬಾಡುವ ಹೂಗಳಾದವು. ಓದಿ ವೈದ್ಯನಾಗಬೇಕೆಂದಿದ್ದೆ ದುಡ್ಡಿನ ಮೂಟೆ ಬೇಕೆಂದು ತಿಳಿದು ಮತ್ತು ಸರಿಯಾದ ಮಾರ್ಗದರ್ಶನವಿಲ್ಲದೆ ಏಕೋ ಮನಸ್ಸು ಆಸೆ ಕೈ ಬಿಟ್ಟಿತ್ತು. ನಂತರ ಇಂಜಿನಿಯರಿಂಗ್ ಸೇರಿದೆ. ಆಗಾಗ ಡೈರಿ ಗೀಚುವ ಹವ್ಯಾಸ ಇತ್ತು ಅದು ಆಗಾಗ ಸೋಮಾರಿತನಕ್ಕೆ ಸಿಕ್ಕಿ ಬಳಲುತಿತ್ತು, ಹಾಗೆ ಕಾಲೇಜಿನ ಹುಡುಕುತನ ಹುಡುಗಾಟದ ಬದುಕು ಒಳ್ಳೆಯ ನೀತಿ ಪಾಟವನ್ನೇ ಕಲಿಸಿತು ಎನ್ನಬಹುದು. ನಂತರ ಇಂಜಿನಿಯರಿಂಗ್ ಪದವಿ ಮುಗಿಸಿ, ಹೈದರಾಬಾದಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಡಿಸೈನ್ ಇಂಜಿನಿಯರ್ ಆಗಿ ಒಂದು ವರ್ಷ ಕಾರ್ಯ ನಿರ್ವಹಿಸಿದೆ. ಅಪ್ಪ - ಅಮ್ಮರ ಅನಾರೋಗ್ಯ ಜೊತೆಗೆ ಸ್ನಾತಕೋತ್ತರ ಪದವಿ ಮುಗಿಸುವ ಹಂಬಲ ಶಂಭುಲಿಂಗನ ದಯೆ ಎನ್ನಬಹುದು ನನಗೂ ಅನಾರೋಗ್ಯ ಕಾಡಿತ್ತು ಜೊತೆಗೆ ನನ್ನಲ್ಲಿದ್ದ ನನ್ನತನ ಸ್ವಂತ ಆಲೋಚನೆಗಳಿಗೆ ಮರುಜೀವ ಕೊಡುವ ಹಂಬಲವು ಜೊತೆಗೆ ಹಿರಿ ಮಗನೆಂಬ ಜವಾಬ್ದಾರಿ ಹೆಚ್ಚಾಗಿತ್ತು ಅದಕ್ಕೆ ಆಗೋದೆಲ್ಲ ಒಳ್ಳೇದಕ್ಕೆ ಅಲ್ಲವೇ ಅಂತ ತಲೆ ಕೆಡಿಸ್ಕೊಳ್ಳದೆ ರಾಜಿನಾಮೆ ಇತ್ತು ಬಂದೆ.

ಕಾಲೇಜು ಶುರುವಾಗಲು ತುಂಬಾ ದಿನವಿರುವುದರಿಂದ ಕಾಲಹರಣಕೆಂದು ಈ ಅಂತರ್ಜಾಲದ ಫೆಸುಬುಕ್ಕಿಗೆ ಬರುತ್ತಿದ್ದೆ, ಆಗಲೇ ಕಂಡದ್ದು ಕನ್ನಡ ಬ್ಲಾಗ್, ಡೈರಿಯಲ್ಲಿ ವಿಮರ್ಶಿಸುತ್ತಿದ್ದ ಅಕ್ಷರಗಳು ಜೀವ ಪಡೆದು  ಬ್ಲಾಗಿನ, ಕವಿತೆಗಳ, ಕಥೆಗಳ ಓದತೊಡಗಿದವು, ಆಗಿನ ವಚನಾಮೃತದ ಸವಿಯೂ ಇನ್ನು ಮಾಸಿರಲಿಲ್ಲ ಅನ್ಸುತ್ತೆ ಅದರ ಜೊತೆಗೆ, ಅನುಭವ ಸಾತ್ ನೀಡ್ತು, ಕಾಣದ ಹಾಗೆ ನನ್ನ ಹೃದಯದ ದನಿ ಕೇಳತೊಡಗಿತ್ತು, ಕೈಬೆರಳುಗಳು ಕುಣಿಯತೊಡಗಿದ್ದವು. ಪ್ರಸಾದ್ ಮತ್ತು ಪಮ್ಮಿ ಗೊತ್ತೇ ಇರಬೇಕು ನಿಮಗೆ ಅವರ ಅಣ್ಣನಾಗಿರುವುದರಿಂದ ಅವರು ಈ ಅಣ್ಣನ ಹೃದಯದ ಮಾತುಗಳ ಅರಿತವರು ಅದನ್ನು ಬೇರೆಯವರು ಕೇಳಲಿ ಎಂದು ಹೊರ ತರುವಂತೆ ಹೇಳಿದರು, ಬ್ಲಾಗ್ ಮೊದಲಿಂದಲೂ ಬರೆಯಬೇಕು ಅಂದ್ಕೊಂಡು ಒಂದು ಬ್ಲಾಗ್ ಓಪನ್ ಮಾಡಿ ಆಂಗ್ಲದಲ್ಲಿ ಏನೇನೋ ಗೀಚಿದ್ದೆ. ನಿಮ್ಮನ್ನೆಲ್ಲ ನೋಡಿದ ಮೇಲೆ ಮಾತೃ ಭಾಷೆಯ ಹಿಡಿತವಿರುವಾಗ ಬೇರೆ ಭಾಷೆ ಏಕೆ ಎಂದು ಕನ್ನಡ ಬ್ಲಾಗನ್ನು ತಟ್ಟಿದೆ ಅದು ಹಾಗೆ ಬಾಗಿಲು ತಗಿದು ಮಿಡಿಯತೊಡಗಿತು :)

ಈ ಕನ್ನಡ ಬ್ಲಾಗನ್ನು ಪರಿಚಯಿಸಿದ ಆ ನನ್ನ ಇಬ್ಬರು ಪುಟ್ಟ ಕೂಸುಗಳಿಗೆ ಎಷ್ಟು ಧನ್ಯವಾದಗಳು ತಿಳಿಸಿದರೂ ಸಾಲದು ಮತ್ತೆ ಕನ್ನಡ ಬ್ಲಾಗ್ ಎಂಬ ವೇದಿಕೆ ಕೇವಲ ಒಂದು ಸಾಮಾನ್ಯ ವೇದಿಕೆಯಲ್ಲ ಇದು ಮನಸ್ಸಿನ ಆಳದಲ್ಲಿ ಅಡಗಿರುವ ನೆನಪಿನ ಮತ್ತು ಅನುಭವಗಳ ಗಣಿ ಇದ್ದ ಹಾಗೆ ಇಲ್ಲಿನ ಎಲ್ಲ ಸದಸ್ಯರ ಹಾರೈಕೆಯಲ್ಲಿ ದೂಳು ಕುಳಿತಿದ್ದ ನನ್ನ ಕನ್ನಡ ಸಾಹಿತ್ಯದ ಕೃಷಿಗೆ ಒಂದು ಆಯಾಮ ಸಿಕ್ಕಿದಂತಾಯ್ತು :))) ನಿಜವಾಗಲು ಫೆಸ್ಬುಕ್ಕು ಎಂಬ ಅಡ್ಡಾದಲ್ಲಿ ಕನ್ನಡ ಬ್ಲಾಗಿನ ಕನ್ನಡ ಸಾಹಿತ್ಯ ಕೃಷಿ ಅಮೋಘ ಎಲ್ಲ ನಿರ್ವಾಹಕ ಬಳಗಕ್ಕೂ ನನ್ನ ಅಭಿನಂದನೆಗಳು:))) ಕನ್ನಡ ಬ್ಲಾಗಿನ ಸದಸ್ಯ ಎಂಬ ಹೆಮ್ಮೆಯ ಗರ್ವ ಇದೆ :))) ಎಲ್ಲರ್ಗೂ ಒಬ್ಬ ಕಿರಿಯನಾಗಿ ಒಂದು ಸಣ್ಣ ಕಿವಿಮಾತು ಈ ಜೀವನ ಕ್ಷಣಿಕ ಇರುವಷ್ಟು ದಿನ ನಿಸ್ವಾರ್ಥ ಮನೋಭಾವದಿಂದ ವಸುದೈವ ಕುಟುಂಬ ಎಂಬಂತೆ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳೋಣ ಕಲಹಕ್ಕೆ ಎಡೆ ಮಾಡಿಕೊಡದೆ ತಗ್ಗಿ ನಡೆದರೆ ಮೆಚ್ಚುವನು ನಮ್ಮ ಶಂಭುಲಿಂಗ ನಾನು ಎಂಬ ಭಾವ ಇರದೇ ನಮಗಿಂತ ಮೇಲೊಬ್ಬ ಇದ್ದಾನೆ ಎಂಬ ಭಾವ ಇಟ್ಟುಕೊಳ್ಳಿ ಅದು ನಿಮ್ಮ ಇಷ್ಟ ದೈವ ಇರಬಹುದು( ಆಸ್ತಿಕರಿಗೆ ) ,,, ನಾಸ್ತಿಕರಿಗೆ (ನಿಮ್ಮ ಆತ್ಮವೇ ಪರಮಾತ್ಮ ನೀವು ಅವನ ಪಾಲಕರು ಅಷ್ಟೇ ) ಎಂದು ಈ ಅಲ್ಪನ ಪರಿಚಯ ಮುಗಿಸಿದ್ದೇನೆ. ದಯವಿಟ್ಟು ಇಷ್ಟವಾದಲ್ಲಿ ತಲೆಗೆ ಹಚ್ಚಿ ಕೊಳ್ಳದೆ ಹೃದಯಕ್ಕೆ ಹಾಕಿಕೊಳ್ಳಿ ಇಷ್ಟವಾಗದಿದ್ದರೆ ತಲೆಗೆ ಬಿಟ್ಟುಬಿಡಿ ಅದು ಮರೆಸಿಬಿಡುತ್ತೆ :))) ಶಂಭುಲಿಂಗ ಎಲ್ಲರ್ಗೂ ಒಳ್ಳೆಯದನ್ನೇ ಮಾಡ್ಲಿ :))))"

ಎಂದು ಮಾತು ಮುಗಿಸಿದ ಗಣಿ ಜಾಸ್ತಿ ಕೊರೆದಿದ್ದರೆ ಗಣಿ ಬ್ಲಾಗಿನ ಲಿಂಕ್ ಕೆಳಗೆ ನೀಡಿರುವೆ. ಅಲ್ಲಿ ಹೋಗಿ ನಿಮ್ಮ ಕೋಪ ತೀರಿಸಿಕೊಳ್ಳಿ.. :)))

http://ganeshagp.blogspot.in/

ಗಣಿಯ ಒಂದು ಕವನ ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ..

ನಿನ್ನಯ ಕದನವೆಂಬ ಆಟಕೆ
ಈ ಜಡ -ಜಟಿಲವೆಂಬ
ಶಾರೀರವ ಮಾಡಿ ,
ಸಕಲ ಇಂದ್ರಿಯಗಳನಿತ್ತು
ಅವ ಮೂದಲಿಸಿ ,
ಲಾಲಿಸಿ -ಪಾಲಿಸಿ ,
ಕುಣಿಸಿ -ದಣಿಸಿ ,
ನೋವು-ನಲಿವೆಂಬ
ಕಷ್ಟ - ಕಾರ್ಪಣ್ಯಗಳನಿತ್ತು ,
ಕೊನೆಗೆ ಸಾಯಿಸಿ ಪರಾರಿಯಾಗುವ
ದುರಾತ್ಮವೆ, ಈ ಕದನಕೆ
ನೀನಿತ್ತಿದ್ದು ,ಏಕಾತ್ಮವಲ್ಲ !
ದ್ವಂದಾತ್ಮ !!
ಆಟದಿ ಸೋಲುಣಿಸಲಿತ್ತ
ಪ್ರೇತಾತ್ಮ ಒಂದಾದರೆ,
ಅದರೆದುರು ನೀ ಗೆಲ್ಲಲಿತ್ತ
ಆತ್ಮವೇ ಪರಮಾತ್ಮ !!!
ನಡುವೆ ನರಳುತಿಹುದು
ಎನ್ನಯ ಜೀವಾತ್ಮ ! :(:(


ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

2 ಕಾಮೆಂಟ್‌ಗಳು:

  1. ಗಣೇಶ,ಒಬ್ಬ ಸಂವೇದನಾಶೀಲ ಆಪ್ತತೆಯ ಸ್ನೇಹಶೀಲ ಮುಗ್ಧ ಕವಿಜೀವಿ.ಭಾವಸ್ಪುರಣತೆಗೆ ವಿಶೇಷ ಒತ್ತು ನೀಡಿ ಮನದಾಳದ ಆಶಯಗಳನ್ನು ಉಣ ಬಡಿಸುತ್ತಾರೆ.ಸ್ನೇಹಕ್ಕೆ ಇನ್ನೊಂದು ಹೆಸರು ಎನ್ನಬಹುದು.ಅಷ್ಟು ಪರಮಾತ್ಮೀಯರಾಗುತ್ತಾರೆ.ನಮ್ಮ ಕನ್ನಡ ಬ್ಲಾಗಿಗೆ ಅಡ್ಮಿನ್ ಆಗಿ ಬರಮಾಡಿಕೊಳ್ಳುವಾಗ ಅತ್ಯಂತ ಸಂತಸವಾಗಿತ್ತು.ಪ್ರಸ್ತುತ ಬಹುಬೇಗನೆ ಅವರ ಪರಿಚಯವನ್ನು ನಟರಾಜು ಇಲ್ಲಿ ನೀಡಿ ಗಣೇಶ್ ಅವರ ವ್ಯಕ್ತಿತ್ವವನ್ನು ಚಂದಾಗಿ ಅನಾವರಣಗೊಳಿಸಿದರು.ನಮ್ಮ ಹೆಮ್ಮೆಯ ಈ ಗಣೇಶ ಅವರ ಕವಿತೆಗಳನ್ನು ಓದಿ ಸ್ಪೂರ್ಥಿ ಪಡೆದಿದ್ದೇನೆ,ಆಸ್ವಾದಿಸಿದ್ದೇನೆ.ಶುಭವಾಗಲಿ.ಇಬ್ಬರಿಗೂ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ