ಎಲೆ ಮರೆ ಕಾಯಿ ೫೮
ತಂದೆ ತಾಯಿಯರ ಮನೆಯ ತೊರೆದು
ಅಣ್ಣ ತಂಗಿಯ ಸ್ನೇಹ ಮರೆತು
ನಂಬಿ ನಿನ್ನಂಗಳಕೆ ಬಂದಿಹಳು
ತನ್ನ ಪ್ರೀತಿ ಎಲ್ಲಾ ನಿನಗೆರೆದು
ನಿನ್ನ ಕೊಂಚ ವಾತ್ಸಲ್ಯವ ಬಯಸಿಹಳು
ಏಕೆ ತಿಳಿಯದಾಗಿದೆ ನಿನಗೆ .., ಅವಳ ಕೂಗು?
ಕೆಲವರು ಬೆಳಿಗ್ಗೆ ಎದ್ದು ರೆಡಿಯಾಗಿ ಮೈಗೆ ಬಟ್ಟೆಯನ್ನು ಹೊಟ್ಟೆಗೆ ತಿಂಡಿಯನ್ನು ಆತುರಾತುರವಾಗಿ ತುರುಕಿ ಹೊರಟರೆಂದರೆ ಮತ್ತೆ ರಾತ್ರಿಯವರೆಗೂ ಮನೆಯ ಕಡೆ ಮುಖ ಮಾಡುವುದಿರಲಿ ಮನೆಯಲ್ಲಿರುವ ಮಡದಿಗೋ ಮಕ್ಕಳಿಗೋ ಒಂದು ಫೋನ್ ಸಹ ಮಾಡುವುದಿಲ್ಲ. ರಾತ್ರಿ ಮನೆಗೆ ಬಂತೆಂದರೆ ಮತ್ತೆ ಆಫೀಸಿನ ಟೆನ್ಷನ್ ಗಳನ್ನು ತಲೆಯಲ್ಲಿ ತುಂಬಿಕೊಂಡು ದುಡಿದಿದ್ದಕ್ಕಿಂತ ಹೆಚ್ಚು ದಣಿದು ಮತ್ತೆ ಬೆಳಿಗ್ಗೆ ಎದ್ದು ಆಫೀಸಿಗೆ ಓಡಿಬಿಡುವ ಯೋಚನೆಯಲ್ಲೇ ನಿದ್ದೆಗೆ ಜಾರಿಬಿಡುತ್ತಾರೆ. ಆಫೀಸಿಗೆ ಹೋದ ಮೇಲೆ ಒಂದೇ ಒಂದು ಸಲ ಫೋನ್ ಮಾಡಿ ಊಟ ಮಾಡಿದೆಯಾ ಏನ್ ಮಾಡ್ತಾ ಇದ್ದೀಯ ಎಂದು ಪ್ರೀತಿಯಿಂದ ಮಾತನಾಡಿಸಿದರೆ ಸಾಕು, ಮನೆಗೆ ಬಂದ ಮೇಲೆ ಕಾಫಿಯನ್ನೋ, ಚಹಾವನ್ನೋ ಹೀರುತ್ತಾ ಒಂದಷ್ಟು ಹೊತ್ತು ಜೊತೆಯಲ್ಲಿ ಸಮಯ ಕಳೆದರೆ ಸಾಕು ಎಂದುಕೊಳ್ಳುತ್ತಾ ಇಂತಹ ಸಣ್ಣ ಪುಟ್ಟ ಆಸೆಗಳ ಮನದಲ್ಲಿ ತುಂಬಿಕೊಂಡು, ಅಂತಹ ಆಸೆಗಳು ನಿರಾಸೆಯಾದಾಗ ಇಂತಹವನನ್ನು ಕಟ್ಟಿಕೊಂಡು ತಪ್ಪು ಮಾಡಿದೆ ಎಂದು ಬೈದುಕೊಂಡು ಬದುಕುವ ಹೆಣ್ಣು ಮಕ್ಕಳು ಈ ಪ್ರಪಂಚದಲ್ಲಿ ಅಸಂಖ್ಯ. ಅಂತಹವರಲ್ಲಿ ಅನೇಕರ ಪಾಲಿಗೆ ತನ್ನ ಸಂಗಾತಿಯ ಜೊತೆಯಲ್ಲಿ ಊಟ ಮಾಡೋದು, ರಸ್ತೆಯಲ್ಲಿ ಕೈ ಕೈ ಹಿಡಿದು ನಡೆಯುವುದು ಸಹ ಒಂದು ಕನಸಾಗಿರುತ್ತದೆ. ಇದಕ್ಕೆ ವಿರುದ್ಧವೆಂಬಂತೆ ಮನೆಗೆ ಬೇಕಾಗಿರುವುದು ಹಣ, ತನ್ನ ಆಫೀಸ್ ತನ್ನ ಸರ್ವಸ್ವ, ಹೆಣ್ಣು ಬಯಸುವುದು ಚಿನ್ನ, ಬೆಳ್ಳಿ, ರೇಶ್ಮೆ ಸೀರೆ ಎಂದು ತಪ್ಪಾಗಿ ತಿಳಿದುಕೊಂಡವರಂತೆ ದಿನ ನಿತ್ಯದ ಖರ್ಚಿಗೆಂದು, ಹಬ್ಬ ಹರಿದಿನಗಳಲಿ ಶಾಪಿಂಗ್ ಗೆ ಎಂದು ಒಂದಷ್ಟು ದುಡ್ಡು ಕೊಟ್ಟು ಬಾಳ ಸಂಗಾತಿ ಎನಿಸಿಕೊಂಡವನಾದ ತನ್ನ ಕರ್ತವ್ಯ ಮುಗಿಯಿತು ಎಂದುಕೊಳ್ಳುವವರು ಕೊನೆಗೆ ಮನೆಯಲ್ಲಿ ಜಗಳಗಳಾದ ತತ್ವಜ್ಞಾನಿಗಳಂತೆ ಹೆಣ್ಣನ್ನು ಅರ್ಥಮಾಡಿಕೊಳ್ಳೋದು ಕಷ್ಟ ಎಂದುಬಿಡುತ್ತಾರೆ. ಯಾರೂ ಬಯ್ಯುಕೋಬೇಡಿ. :)) ಇಂತಹ ಸೂಕ್ಷ್ಮ ವಿಚಾರ ಮೇಲ್ನೋಟಕ್ಕೆ ಚರ್ಚಾಸ್ಪದ ವಿಷಯವಾಗಿ ಕಂಡರೂ ಒಮ್ಮೆ ಚಿಂತಿಸಬೇಕಾದ ವಿಷಯ ಕೂಡ ಆಗಿರುತ್ತದೆ. ಮೇಲಿನ ಕವಿತೆಯ ಸಾಲನ್ನು ಓದುತ್ತಲೇ ಹೀಗೊಂದು ಭಾವನಾಲಹರಿ ಹರಿಯುತ್ತಾ ಹೋಯಿತು. ಅಂದ ಹಾಗೆ ಈ ಕವಿತೆ ನನ್ನ ಕಣ್ಣಿಗೆ ಬಿದ್ದದ್ದು ಭಾವಪ್ರಿಯ ಎಂಬ ಬ್ಲಾಗಿನಲ್ಲಿ..
ಯಾಕೋ ಇಂದಿಂದು ಕನಸುಗಳದೇ ಕಾರುಬಾರು
ಇರುಳ ತೋಳಲಿ ನಿದ್ದೆಗೆ ಜಾರುತಲಿ
ಲಗ್ಗೆ ಇಡುವವು ಮುಖಗಳು ಸಾವಿರಾರು ..
ಮುಖ ಪರಿಚಯವೇ ಇಲ್ಲದ ಮುಖಗಳು
ನಸು ನಕ್ಕು ಶೂನ್ಯದಡೆಗೆ ಜಾರಿದರು
ತಿರುಗಿ ನೋಡಿದೊಡನೆ ಅಲ್ಯಾರೂ ಇಹರು
ಇಂತಹ ಚಂದದ ಸಾಲುಗಳ ಈ ಕವಿ ಗೆಳೆಯ ನಮ್ಮ ಮುಂದೆ ಇಟ್ಟಾಗ ಎಷ್ಟೊಂದು ಮುಖಗಳು ಸುಮ್ಮನೆ ಕಣ್ಣ ಮುಂದೆ ಬಂದು ಹೋದಂತೆ ಭಾಸವಾಗುತ್ತದೆ. ಈ ಕವಿ ಗೆಳೆಯ ಮೊದಲಿಗೆ ಒಬ್ಬ ಒಳ್ಳೆಯ ಓದುಗ ಎನ್ನಬಹುದು. ತಾನು ಓದುವ ಪ್ರತಿ ಕವನ ಮತ್ತ ಬರಹಗಳಿಗೆ ಮೆಚ್ಚುಗೆಯ ಟಿಪ್ಪಣಿ ಬರೆಯುವುದ ಕಂಡರೆ ಇವರಲ್ಲಿರುವ ಓದುಗನಿಗೆ ಒಂದು ಸಲಾಮು ಹೊಡೆಯಬೇಕು ಎನಿಸುತ್ತದೆ. ಇವರ ಕವನಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಅವು ಪ್ರಬುದ್ದತೆ ಪಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ ಎಂದೆನಿಸಿದರೂ ಬರೆಯುತ್ತ ಬರೆಯುತ್ತಲೇ ಚಂದದ ಕವಿಯಾಗುವತ್ತ ಹೆಜ್ಜೆಯಿಟ್ಟಿರುವ ಈ ಕವಿ ಗೆಳೆಯನ ಕವಿತೆಗಳು ಪಕ್ವತೆಯತ್ತ ಹೊರಳುತ್ತಿರುವುದು ಅಲ್ಲಲ್ಲಿ ಕಣ್ಣಿಗೆ ಎದ್ದು ಕಾಣುತ್ತವೆ ಸಹ. ಈ ಗೆಳೆಯನ ಒಳಗೆ ಉತ್ತರ ಕರ್ನಾಟಕದ ದೇಶೀ ಸೊಗಡು ಸುಮ್ಮನೆ ಮರೆ ಮಾಚಿ ಕುಳಿತಿದೆ ಎನಿಸುತ್ತದೆ. ಧಾರವಾಡದ ಭಾಷೆಯ ಗಮ್ಮತ್ತನ್ನು ಕವಿತೆಗಳ ಬರಹಗಳ ರೂಪದಲ್ಲಿ ನಮಗೆ ನೀಡುವಂತೆ ಈ ಗೆಳೆಯನಿಗೆ ಒಂದು ಮನವಿ. ಅವರು ಉತ್ತರ ಕರ್ನಾಟಕದ ಕನ್ನಡದಲ್ಲಿ ಬರೆದಿರೋ ಒಂದು ಮುದ್ದಾದ ಸರಳ ಕವಿತೆಯ ಸಾಲು ಇಗೋ ನಿಮಗಾಗಿ...
ಸೀರಿ ಉಡಾಕ ಅಕೀಗ ಬರಬೇಕು
ಹಣಿಯಾಗ ಬೊಟ್ಟಿಡಬೇಕು
ತಲಿತುಂಬಾ ಹೂ ಮುಡಿದಿರಬೇಕು
ತಳಕು ಬಳುಕೋ ನಾಚುವ ಬಳ್ಳಿಯಾಗಿರಬೇಕು
ರೊಟ್ಟಿ ಮಾಡಕ ಬರಬೇಕು
ಮನೀನು ಸ್ವಚ್ಛಗ ಇಡಬೇಕು
ಇಷ್ಟವಾಯಿತಾ ಸಹೃದಯಿಗಳೇ ಈ ಗೆಳೆಯನ ಕವಿತೆಯ ಸಾಲುಗಳು. ಕನ್ನಡ, ಇಂಗ್ಲೀಷ್, ಹಿಂದಿ ಈ ಮೂರೂ ಭಾಷೆಗಳಲ್ಲೂ ಸಾಹಿತ್ಯ ಕೃಷಿ ಮಾಡುವ ಸಾಹಸ ಮಾಡತ್ತಿರುವ ಈ ಗೆಳೆಯ ತನ್ನ ವಿಷಯ ವಸ್ತುಗಳ ವಿಸ್ತಾರವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲಿ ಎಂದು ಹಾರೈಸುತ್ತಾ ಇವತ್ತಿನ ಎಲೆ ಮರೆ ಕಾಯಿಯ ವಿಶೇಷ ಅತಿಥಿ ಸುನಿಲ್ ರಾಮಕೃಷ್ಣ ಅಗಡಿ ಚಿಕ್ಕದಾಗಿ ಹೇಳಬೇಕೆಂದರೆ ಸುನಿಲ್ ಅಗಡಿಯವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ...
ಸುನಿಲ್ ರಾಮಕೃಷ್ಣ ಅಗಡಿ |
"ನನ್ನ ಹುಟ್ಟು ಊರು "ಧಾರವಾಡ " ಪ್ರಖ್ಯಾತ ಕವಿಗಳಾದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಹುಟ್ಟಿ, ಬೆಳೆದ, ಕವನಗಳ ರಚಿಸಿದ ನೆಲ. ಹವಾಮಾನ ಅನುಕೂಲಕರವಾಗಿದ್ದು ಯಾವಾಗಲು ಹಸಿರು ವನಸಿರಿಯಿಂದ ಕಂಗೊಳಿಸುತ್ತಿರುತ್ತದೆ. ಇಲ್ಲಿಯ ಬಾಬು ಸಿಂಗ್ ಪೇಡ ಅಥವಾ ಧಾರವಾಡ ಲೈನ್ ಬಜಾರ್ ಪೇಡ ಜಗತ್ ಪ್ರಖ್ಯಾತಿಯನ್ನು ಪಡೆದಿದೆ. ಧಾರವಾಡ ಭಾರತೀಯ ಸಂಸ್ಕೃತಿ ಬಿಂಬಿಸುವ ಸಾಹಿತ್ಯ, ಶಾಸ್ತ್ರಿಯ ಸಂಗೀತ ಹಾಗು ವಿದ್ಯಾಭ್ಯಾಸಕ್ಕೆ ಖ್ಯಾತಿಯನ್ನು ಪಡೆದ ಕರ್ನಾಟಕ ವಿಶ್ವವಿದ್ಯಾನಿಲಯ ಒಳಗೊಂಡಿದೆ. ವೀರ ರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತೆ ಮುಂತಾದವರು ಹೋರಾಡಿದ ಐತಿಹಾಸಿಕತೆ ನಮ್ಮ ಈ ನಾಡಿಗಿದೆ.
ನಾನು ಚಿಕ್ಕವನಿದ್ದಾಗಿನಿಂದಲೂ ಕನ್ನಡ ಬರೆಯುವುದಲ್ಲಿ ಸ್ವಲ್ಪ ಮಂದ ಸ್ವಭಾವ, ಹೀಗೊಂದು ರೂಢಿಯನ್ನು ಬೆಳೆಸಿಕೊಳ್ಳುತ್ತೇನೆ ಎಂದೂ ನಂಬಿರಲಿಲ್ಲ, ಇರಲಿ ನನ್ನ ಕವನಗಳ ಬರಿಯುವ ಹವ್ಯಾಸ ಶುರುವಾಗಿದ್ದು ೨೨-೦೩-೨೦೦೨ ರಿಂದ, ನಾನು ಅಭಿಯಂತರ ಪದವಿಯ ಅಭಾಸ ಮಾಡುತ್ತಿರುವಾಗ. ಸಹಜವಾಗಿಯೇ ನನ್ನ ಜೀವನದಲ್ಲಿ ಬಂದು ಹೋಗುವ ವಿಷಯಗಳ ಮೇಲೆ, ವ್ಯಕ್ತಿಗಳ ಮೇಲೆ, ನಿಸರ್ಗದ ಮೇಲೆ, ನನ್ನ ಅಚ್ಚುಮೆಚ್ಚಿನ ಸ್ನೇಹಿತರ ಮೇಲೆ ಅವರ ಸ್ವಭಾವಗಳನ್ನ ಗಣನೆಗೆ ತೆಗೆದುಕೊಂಡು ಬರೆಯಲಾರಂಬಿಸಿದೆ. ಹೂವುಗಳು ಎಂದರೆ ನನಗೆ ತುಂಬಾನೇ ಇಷ್ಟ. ನಾನು ಬರೆದ ಮೊದಲ ಕವನ,
"ಹೂವ ನನ್ನ ಜೀವ "
ಚೈತ್ರದ ಮುಂಜಾವಿನಲ್ಲಿ ಅರಳಿ,
ಇಬ್ಬನಿಯ ಹನಿಗಳ ಚೆಲ್ಲಿ,
ತಿಳಿಯ ಕಂಪನ್ನು ಸೂಸುತ,
ಎಳೆಯ ಬಿಸಿಲಲ್ಲಿ ನಗುತ್ತ,
ನೋಡುಗರ ಮನಸನ್ನು ಸೆಳೆಯುತ್ತಾ...
ಈ ಸೊಬಗನ್ನು ಕಂಡ ನಾನೇ ಧನ್ಯ ..!
ಹಬ್ಬದ ಸಂದರ್ಭದಲ್ಲಿ ಬರೆದ ಒಂದು ಕವನವು "ರಾಯಚೂರು ವಾಣಿ " ೨೦೦೨ ದೀಪಾವಳಿಯ ವಿಶೇಷಾಂಕದಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು . ಆ ಕವನ ಈ ಕೆಳಗಿನಂತಿದೆ ..
" ದೀಪಾವಳಿ "
ಮತ್ತೆ ಬಂತು ದೀಪಾವಳಿ
ಜೀವನದ ಕತ್ತಲನ್ನು ಓಡಿಸುತ್ತಾ
ಜನರ ಭಾಗ್ಯ ಬೆಳಗಿಸುತ್ತ
ಎಲ್ಲೆಲ್ಲೂ ಸಂತೋಷದ ಅಲೆ ಎಬ್ಬಿಸುತ್ತ....ಬಂತು ದೀಪಾವಳಿ.
ಮತ್ತೆ ಬಂತು ದೀಪಾವಳಿ
ತುಂಬುತ್ತ ರಂಗು ರಂಗಿನ ಹೋಳಿ
ಬೀದಿಯಲೆಲ್ಲಾ ಪಟಾಕಿಗಳ ಹಾವಳಿ
ಹರಡುತ್ತಾ ಸಂಭ್ರಮದ ಧೂಳಿ ...ಬಂತು ದೀಪಾವಳಿ
ಮತ್ತೆ ಬಂತು ದೀಪಾವಳಿ
ಬಡವನ ಮನೆಯಲ್ಲಿ ಮಣ್ಣಿನ ಹಣತೆ
ಸಿರಿವಂತನ ಅರಮನೆಯಲ್ಲಿ ಬೆಳ್ಳಿಯ ಹಣತೆ
ಯಾವ ಹಣತೆಯಾದರೇನು ಎಲ್ಲದರಲ್ಲೂ ದೀಪದ ಬೆಳಕೇ ...ಬಂತು ದೀಪಾವಳಿ
ಮತ್ತೆ ಬಂತು ದೀಪಾವಳಿ
ಎಲ್ಲೆಲ್ಲಾ ಚೆಲ್ಲುತ್ತ ಬೆಳಕು
ಕಿನ್ನರಲ್ಲಿ ಹುಟ್ಟಿಸುತ್ತಾ ನಡುಕು
ಎಲ್ಲರ ಮುಖದಲ್ಲಿ ನಗೆಯ ಹೊಳಪು
ಎಲ್ಲೆಲ್ಲೂ ಚಿಮ್ಮುತ್ತ ಆನಂದದ ಹೊನಲು .
ಹೀಗೆ ಬರೆಯುತ್ತಾ ಬರೆಯುತ್ತಾ ಹೆಚ್ಚು ಹೆಚ್ಚೆಚ್ಚು ಬರೆಯುತ್ತಾ ಹೋದೆ. ಕವನಗಳು ನನ್ನ ಮನಸಿನ ಭಾವನೆಗಳನ್ನ ಭಿನ್ನಹಿಸುವ ಮಾಧ್ಯಮವಾಯಿತು, ಆದ ಕಾರಣದಿಂದನೆ ನಾನು "ಭಾವಪ್ರಿಯ" ಭಾವನೆಗಳನ್ನ ಪ್ರೀತಿಸುವವನು ಎಂದರ್ಥ.
ಇನ್ನು ಸಾಹಿತ್ಯದ ಬಗ್ಗೆ ಹೆಚ್ಚು ತಿಳಿದವನಲ್ಲ, ಸುಮ್ಮನೆ ಮನಸಿನ ಭಾವನೆಗಳನ್ನ ಗೀಚುತ್ತ ಹೋದಂತೆ ಗೆಳೆಯರು ಚೆನ್ನಾಗಿದೆ ಹೀಗೆ ಮುಂದುವರೆಸು ಎಂದು ಪ್ರೋತ್ಸಾಹಿಸಿದರು ಹಾಗೆ ಮುಂದುವರೆಸಿದ್ದೇನೆ, ಹೆಚ್ಚು ಓದುವ ಹವ್ಯಾಸವು ಇಲ್ಲಾ ಆದರೆ ಕನ್ನಡ ಬ್ಲಾಗಿನಲ್ಲಿ ಗೆಳೆಯರು ಹಂಚಿಕೊಳ್ಳುವ ಕತೆ ಕವನಗಳನ್ನ ಓದುತ್ತೇನೆ. ಕನ್ನಡದ ಅಭಿಮಾನವೇ ನನಗೆ ಬರೆಯುವಂತೆ ಪ್ರೇರೇಪಿಸುತ್ತದೆ. ಸಾಹಿತ್ಯದ ಕೃಷಿ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಇದೆ ಆದರೆ ನೀವುಗಳೇ ದಾರಿ ತೋರಬೇಕು. ಸಾಹಿತ್ಯ ಕೃಷಿಯ ಕನಸ್ಸೆಂದರೆ ಎಂದಾದರೂ ಒಂದು ದಿನ ಚಲನ ಚಿತ್ರಗಳಿಗೆ ಹಾಡುಗಳು ಬರೆಯಬೇಕು...ಜಯಂತ್ ಕಾಯ್ಕಿಣಿ .., ಯೋಗರಾಜ್ ಭಟ್ಟ ರಂತೆ ಹೆಸರು ಪಡೆಯಬೇಕು ಅನ್ನುವುದು ಒಂದು ಮಹದಾಸೆ ನನ್ನದು. ನನ್ನ ಕವನಗಳು ಬಹಳಷ್ಟು ಹಾಡುಗಳು ಇದ್ದ ಹಾಗೆ ಇರುತ್ತವೆ ಅದಕ್ಕೆ ನೀನು ಯಾಕೆ ಚಲನ ಚಿತ್ರಗಳಿಗೆ ಹಾಡುಗಳು ಬರೆಯಬಾರದು ಎಂದು ಸ್ನೇಹಿತರು ಕೇಳುತ್ತಿರುತ್ತಾರೆ.
ವೃತ್ತಿಯಲ್ಲಿ ನಾನು ಮೆಕ್ಯಾನಿಕಲ್ ಅಭಿಯಂತರ, ಕಳೆದು ೬ ವರ್ಷಗಳಿಂದ ಜನರಲ್ ಮೋಟೊರ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಇದಕ್ಕೂ ಮುಂಚೆ ೩ ವರ್ಷ ಕೈನೆಟಿಕ್ ಕಂಪನಿಯಲ್ಲಿ ಅಹಮದ್ ನಗರ್, ಮಹಾರಾಷ್ಟ್ರದಲ್ಲಿ ಉದ್ಯೋಗ ಮಾಡುತ್ತಿದ್ದೆ. ವೃತ್ತಿ ಜೀವನ ಹೀಗೆ ಸಾಗಿದೆ.
ನನ್ನ ಕವನಗಳನ್ನ ಓದಿದ ಗೆಳೆಯರೊಬ್ಬರು ನನಗೆ ಕನ್ನಡ ಬ್ಲಾಗ್ ಪರಿಚಯ ಮಾಡಿಸಿದರು, ಸ್ವಲ್ಪ ದಿನ ಎಲ್ಲರೂ ಹಂಚಿಕೊಳ್ಳುವ ಬರಹಗಳನ್ನ ಇಲ್ಲಿ ಓದುತ್ತಿದ್ದೆ, ಕವಿ ಗೆಳೆಯರು ಓದಿ ಮೆಚ್ಚಿಕೊಂಡು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳುವುದು ತುಂಬಾನೇ ಖುಷಿ ಕೊಟ್ಟಿತು, ನನ್ನ ಕವನಗಳನ್ನ ಹಂಚಿಕೊಳ್ಳಲು ಹಾಗು ಪ್ರತಿಯಾಗಿ ಕವನಗಳ ಗುಣಮಟ್ಟ ಹೆಚ್ಚಿಸಿಕೊಳ್ಳಲು, ಸಾಹಿತ್ಯದಲ್ಲಿ ಬೆಳೆಯಲು ಕೂಡ ಸಹಾಯ ಆಗುತ್ತಿದೆ, ಅಲ್ಲದೆ ಕನ್ನಡವ ಉಳಿಸಿ ಬೆಳೆಸಲು ನಮ್ಮ ಕನ್ನಡದ ಬ್ಲಾಗು ಮಾಡುತ್ತಿರುವ ಕೆಲಸ ಶ್ಲಾಘನೀಯ. ಇನ್ನು ಹೆಚ್ಚು ಮರಿ ಕವಿಗಳಿಗೆ ಈ ವೇದಿಕೆ ದಾರಿ ದೀಪವಾಗಲಿ. ಕನ್ನಡ ಬ್ಲಾಗನ್ನು ಹುಟ್ಟು ಹಾಕಿದ ಎಲ್ಲಾರಿಗೂ, ನಡೆಸಿ ಬೆಳೆಸಿಕೊಂಡು ಹೋಗುತ್ತಿರುವ ಎಲ್ಲ ಹಿರಿಯ ಕವಿಗಳಿಗೂ ಹೃತ್ಪೂರ್ವಕ ಅಭಿನಂದನೆಗಳನ್ನ ಸಲ್ಲಿಸುತ್ತೇನೆ. ನಟರಾಜು ನಿಮ್ಮ ಕವಿ ಪರಿಚಯದ ಲೇಖನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ, ಕನ್ನಡ ಬ್ಲಾಗ್ ಕವಿಗಳನ್ನ ಪರಿಚಯಿಸುವ ನಿಮ್ಮ ಪ್ರಯತ್ನ ಮೆಚ್ಚಲೇ ಬೇಕು. ತಮಗೂ ಸಹ ಅಭಿನಂದನೆಗಳು."
ಎಂದು ಮಾತು ಮುಗಿಸಿದ ಗೆಳೆಯ ಸುನಿಲ್ ರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ..
http://bhavapriya.blogspot.in/
ಗೆಳೆಯ ಸುನಿಲ್ ರವರ ಕವನಗಳ ಒಂದೆರಡು ಕವನಗಳ ಸಾಲುಗಳ ನಿಮಗಾಗಿ ನೀಡಿರುವೆ ಖುಷಿಯಿಂದ ಓದಿಕೊಳ್ಳಿ ಗೆಳೆಯರೇ..
ಅಕ್ಕ ಪಕ್ಕದ ಮನೆಯ ಜೋಡಿ ಹಕ್ಕಿ
ಯಾರ ಹುಡುಕುವೆ ಹೆಕ್ಕಿಹೆಕ್ಕಿ
ಅತ್ತ, ಇತ್ತ, ಮೇಲೆ ಕೆಳಗೆ
ಆ ಗೂಡಲಿ, ಈ ಮರದಲಿ,
ಏನನ್ನು ನೋಡುತಿರುವೆ ಇಣುಕಿ ಇಣುಕಿ?
*****
ಮೋಡಗಳ್ಯಾಕೋ ಧರೆಗೆ ಬಂದಾವ ಇಂದು..
ಸೌಮ್ಯದಿ ಚಲಿಸುತ್ತ ..ಯಾರನ್ನೋ ಆರಿಸುತ್ತ ..
ತವಕದಿ ಮುನ್ನುಗ್ಗುತ್ತಾ ..ಸುಯ್ಯನೆ ಕೂಗಿ ಕರೆಯುವಂತೆ ..!
ಅತ್ತಾಗೆ ಕಪ್ಪಗು ಅಲ್ಲ ಇತ್ತಾಗ ಬೆಳ್ಳಗೂ ಅಲ್ಲ
ತಿಳಿ ಕಪ್ಪು ಸವರಿದ ಹಾಗೆ ಮುಖದಾಗ
ಬಿಡಿ ಬಿಡಿಯಾಗಿ ಹೊರಟಾಳ ...ಇವಳ ಚಲನವು ಯಾರ ಕಡೆಗೋ ?
******
ಮತ್ತೆ ಸಿಗೋಣ
ಪ್ರೀತಿಯಿಂದ
ನಟರಾಜು :))
ಸುಂದರ ಭೇಟಿ..ಸುಂದರ ರಸಾನುಭವ...ಧಾರವಾಡ ಭಾಷೆ, ಪೇಡ, ಕವಿ, ಎಲ್ಲವು ಸುಮಧುರ ಭಾವಗಳ ಕಣಜ..ಸುನಿಲ್ ರಾಮಕೃಷ್ಣ ಅಂಥಹ ಸಹೃದಯ ಕವಿ, ಜೀವಿಯನ್ನು ಪರಿಚಯಿಸಿದ ಹಾಗು ಇಂತಹ ಅನೇಕ ಅನಾವರಣಗೊಂಡ ಪ್ರತಿಭೆಗಳನ್ನ ಅನಾವರಾಣ ಮಾಡುತ್ತಿರುವ ನಿಮ್ಮ ಶ್ರಮ ನಿಜಕ್ಕೂ ಶ್ಲಾಘನೀಯ..ಅಭಿನಂದನೆಗಳು..
ಪ್ರತ್ಯುತ್ತರಅಳಿಸಿಅಗಡಿ ಸಾಹೇಬರು, ಇನ್ನೂ ಹೆಚ್ಚು ಮಿನುಗಲಿ.
ಪ್ರತ್ಯುತ್ತರಅಳಿಸಿ