ಗುರುವಾರ, ಆಗಸ್ಟ್ 30, 2012

ಎಲೆ ಮರೆ ಕಾಯಿ ೫೪ 
ಸತ್ತುಹೋಗಬೇಕೆಂದ ರಾತ್ರಿಗಳೆಲ್ಲಾ, 
ಅತ್ತು ಶರಣಾಗಿದ್ದೇನೆ, ನಿದಿರೆಗೆ ... 
ಹಾಗೇ !!! 
ಸತ್ತುಹೋದ ಆ ರಾತ್ರಿಗಳು, 
ನಿಶ್ಯಕ್ತ -ನಿರ್ಧಾರಗಳು, 
ಅತೃಪ್ತ -ಆತ್ಮಗಳಾಗಿವೆ... 

ಮೇಲಿನ ಕವಿತೆಯ ಸಾಲುಗಳನ್ನು ಓದುತ್ತಲೇ ಅಬ್ಬಾ! ಎನಿಸಿಬಿಟ್ಟಿತು. ನಮ್ಮ ಕನ್ನಡ ಬ್ಲಾಗಿನಲಿ ಈ ಕವಿತೆಯ ಓದಿದ ಗೆಳೆಯರೊಬ್ಬರು ಹೀಗೆ ಪ್ರತಿಕ್ರಿಯೆ ನೀಡಿದ್ದರು. "ಗೆಳೆಯ ಕವಿತೆಯ ಸಾಲುಗಳಲ್ಲಿ ಜೀವಂತಿಕೆ ಇದೆ .. ಧಗ್ದ ಮನದ ಅಂತರಾಳದ ನಾದವೊಂದು ಹಾಗೆ ಸುಮ್ಮನೆ ಹಾದುಹೋದಂತೆ.. ಸತ್ತುಹೋದ ಆ ರಾತ್ರಿಗಳು, ನಿಶ್ಯಕ್ತ ನಿರ್ಧಾರಗಳು, ಅತೃಪ್ತ ಆತ್ಮಗಳಾಗಿವೆ... ಎಂಬುದು ಒಂದು ಸುಂದರ ಪ್ರತಿಮೆ ...ಕವಿತೆಯ ಜೊತೆಗಿನ ನಿನ್ನ ಒಡನಾಟ ನಿರಂತರವಾಗಿ ಜಾರಿಯಲ್ಲಿರಲಿ .. ಕವಿತೆ ಧ್ಯಾನ ಕಣೋ ಗೆಳೆಯ ಅದು ತಪಸ್ಸು .." ನಮ್ಮ ಕವಿ ಗೆಳೆಯನ ಈ ಕವಿತೆಗೆ ಗೆಳೆಯನೊಬ್ಬರ ಹೀಗೊಂದು ಚಂದದ ಪ್ರತಿಕ್ರಿಯೆ ನೋಡಿ ಹೌದಲ್ವಾ ಕವಿತೆ ಎಂದರೆ ಒಂದು ಧ್ಯಾನ ಹಾಗು ತಪಸ್ಸಲ್ಲವೇ ಎನಿಸಿತು. ಎಷ್ಟೋ ಕವಿಗಳು ಧ್ಯಾನಕ್ಕೆ, ತಪಸ್ಸಿಗೆ ಜಗವನ್ನೇ ಮರೆತು ಕುಳಿತಾಗಲೇ ಅಲ್ಲವೇ ಅವರು ಹೆಣೆಯುವ ಪದಗಳ ಸರಮಾಲೆಗಳು ಚಂದದ ಕವಿತೆಗಳಾಗುವುದು.. ಒಮ್ಮೆಮ್ಮೊ ಧ್ಯಾನಕ್ಕೆ ಕುಳಿತ ಕವಿಯ ಎದುರು ರಂಭೆ ಮೇನಕೆಯರು ನರ್ತಿಸಿದಾಗ ಪ್ರೇಮ ಕವಿತೆಗಳು, ಧ್ಯಾನಕ್ಕೆ ಬೇರೆ ಇನ್ಯಾರಾದರೂ ಭಂಗ ತಂದರೆ ಸಿಟ್ಟಿನ ಕವಿತೆಗಳು ಹುಟ್ಟಿಬಿಡುತ್ತವೆ.

ನಿಶ್ಯಕ್ತ ನಾಯಿಮರಿಯೊಂದು
ತನ್ನ ಬಾಲವನ್ನಾ ಅಲ್ಲಾಡಿಸುತ್ತಿದೆ, ದೇಹವೇ ಅಲುಗಾಡಿಸುತಿದೆ ಎಂಬಂತೆ...
ನಿಯತ್ತು ಮರೆತ ನಾಯಕ ನಸುನಗುತಿರುವಾ ಮೀಸೆಯೊಳಗೆ, 
ಕಿಸೆ ತುಂಬಿದ ಖುಷಿಯೊಳಗೆ

ನಮ್ಮ ವ್ಯವಸ್ಥೆಗಳ ಕುರಿತು ಕವಿತೆಗಳು, ವ್ಯಂಗ್ಯ ಚಿತ್ರಗಳು ನಿತ್ಯ ನಮಗೆ ಕಾಣಸಿಗುತ್ತವೆ. ಅವುಗಳು ನಮಗೆ ಹತ್ತಿರವಾಗುವುದು ಅವುಗಳ ಸರಳತೆಗಳಿಂದ. ಹೇಳಬೇಕಾದುದನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಹೇಳಿ ಮುಗಿಸಿಬಿಡುವ ಪರಿ ಯಾಕೋ ಹೆಚ್ಚು ಸಲ ಬೇಗ ಮನಸ್ಸಿಗೆ ನಾಟಿಬಿಡುತ್ತದೆ. ಕವನಗಳನ್ನು ಹೀಗೆಯೇ ಬರೆಯಬೇಕು ಎಂಬ ಯಾವುದೇ ಚೌಕಟ್ಟಿಲ್ಲದೇ ಬರೆಯುವ ಕವಿತೆಗಳೂ ಸಹ ಚೌಕಟ್ಟಿನೊಳಗಿನ ಚಿತ್ರಗಳ ಹಾಗೆ ಒಮ್ಮೊಮ್ಮೆ ಸುಂದರವಾಗಿ ಕಾಣುತ್ತವೆ. 

"ಸಭಾಂಗಣದಲ್ಲಿ ಉಪನ್ಯಾಸಕ ದೊಡ್ಡ ದೊಡ್ಡ ಡೈಲಾಗ್ ಡೆಲಿವರಿ ಮಾಡ್ತಾ "ಪ್ರಾಣಿ ಹಿಂಸೆ ಮಾಡಬಾರದು ಹಾಗೇ ಹೀಗೆ" ಅಂತಿದ್ರು.... ಆ ಸಭೆಗೆ ಒಂದು ಸೊಳ್ಳೆ ಕೂಡ ಬಂದಿತ್ತು.. ಸರಿಯಾಗಿ ಕೇಳಿಸ್ತಿಲ್ಲಾಂತ ಅವರ ಹತ್ರಾನೆ ಹೋಯ್ತು.. ಉಪನ್ಯಾಸಕರಿಗೆ ಸೊಳ್ಳೆ ಯಾಕೋ ತುಂಬಾ ನಾಟಕ ಮಾಡ್ತಿದೆ ಅನಿಸ್ತು... ಚಟಾರಂತ ಒಂದು ಪೆಟ್ಟುಕೊಟ್ರು..... ಪಾಪ ಸೊಳ್ಳೆ ಕಮಕ್ ಕಿಮಕ್ ಕೂಡ ಮಾಡ್ದೆ ಸತ್ತೋಗಬಿಡ್ತು:)"

ಈ ಗೆಳೆಯನೇ ಹೀಗೆ ಸಪ್ತವಣ೯ ಎಂಬ ಹೆಸರಿನಿಂದ ಕವಿತೆ, ಚುಟುಕ, ಲಘು ಬರಹಗಳನ್ನು ಬರೆಯುತ್ತಲೇ ಪರೋಕ್ಷವಾಗಿ ಏನೋ ಒಂದು ಸಂದೇಶವನ್ನು ನಮಗೆ ನೀಡಿಬಿಡುತ್ತಾರೆ. ಈ ಗೆಳೆಯನ ಬ್ಲಾಗ್ ಹೆಸರನ್ನು ಸಪ್ತವರ್ಣ ಎನ್ನಬೇಕೋ ಅಥವಾ ಈ ಗೆಳೆಯನ ಹೆಸರಿನಿಂದಲೇ ಕರೆಯಬೇಕೋ ಗೊತ್ತಾಗುತ್ತಿಲ್ಲ. ಬ್ಲಾಗ್ ವಿಳಾಸದಲ್ಲಿರುವ ಸಪ್ತವರ್ಣ ಎಂಬುದು ಇವರ ಬ್ಲಾಗಿನ ಹೆಸರು ಎಂದುಕೊಳ್ಳೋಣ. ಅಂದ ಹಾಗೆ ಸಪ್ತವರ್ಣದ ಒಡೆಯರಾದ ಪ್ರತಾಪ್ ಬ್ರಹ್ಮಾವರ್ ಈ ವಾರದ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಗೆ ಅತಿಥಿಯಾಗಿ ಬಂದು ತಮ್ಮ ಮನದಾಳದ ಮಾತುಗಳನ್ನು ಹೀಗೆ ಹಂಚಿಕೊಂಡಿದ್ದಾರೆ.. ಅವರ ಮಾತುಗಳು ಸಹೃದಯಿಗಳೇ ಇಗೋ ನಿಮಗಾಗಿ.. 

ಪ್ರತಾಪ್ ಬ್ರಹ್ಮಾವರ್

"ಊರು ಬ್ರಹ್ಮಾವರ. ಓದು ಎಸ್ ಎಸ್ ಎಲ್ ಸಿ. ವೈಯಕ್ತಿಕ ಕಾರಣಗಳಿಂದ ಮುಂದೆ ಓದೋಕೆ ಆಗ್ಲಿಲ್ಲ. ಸದ್ಯಕ್ಕೆ ನನ್ನದೇ ಆದ ವ್ಯವಹಾರ. ಓದು ಇಷ್ಟ. ಪ್ರಕಾರಗಳಿಲ್ಲ. ಏನಾದ್ರು ಬರೆಯಬೇಕೆಂಬ ಅತಿಯಾದ ಒತ್ತಡವಿದ್ರೆ ಪೆನ್ನಿಗೆ ಜೀವ. ಹಾಳೆಗೆ ಅಕ್ಷರಗಳ ಬಣ್ಣ. ರವಿ ಮೂರ್ನಾಡು ಪ್ರೋತ್ಸಾಹ ಬ್ಲಾಗಿನಲಿ ಚಟುವಟಿಕೆ ಜಾಸ್ತಿಯಾಗಲು ಕಾರಣ. ಕತ್ತಲು ಬೆಳಕು ಇದ್ದ ಹಾಗೆ ಕೆಟ್ಟದ್ದು ಒಳ್ಳೇದು, ಎರಡನ್ನು ಒಪ್ಪಿಕೊಳ್ಳಬೇಕಾದುದು ಕಟು ಸತ್ಯ. ನಮ್ಮನ್ನು ನಾವು ತಿದ್ದಿಕೊಂಡ್ರೆ ಸಾಕು ಜಗತ್ತಿಗೆ ನಾವು ಮಾಡೋ ಉಪಕಾರ ಮತ್ತು ಒಳ್ಳೇದು ಅದೇ ಅಂದುಕೊಳ್ತೀನಿ. 
ಪ್ರತಾಪ್ ಬ್ರಹ್ಮಾವರ್

ಚಿಕ್ಕಂದಿನಿಂದಲೂ ಬಾಲಮಂಗಳ, ಚಂದಮಾಮ, ಸುಧಾ, ತರಂಗ, ಇಲ್ಲಾ ಯಾವುದೇ ಓದೋಕೆ ಸಿಕ್ಕಿದ್ರು ಓದೋ ಆಸಕ್ತಿ. ಕಾಲೇಜಿನಲ್ಲಿ ನಡೆದ ಕವಿಗೋಷ್ಠಿಯಿಂದ ಪ್ರೇರಿತ. ಕನ್ನಡ ಮೇಷ್ಟ್ರು ದಿವಂಗತ ಸರ್ವೋತ್ತಮ ಶೆಟ್ಟರ ಪ್ರೋತ್ಸಾಹ. ಕಾದಂಬರಿ ಸಿಕ್ರೆ ರಾತ್ರಿ ನಾಲ್ಕಾದ್ರು ಓದಿ ಮುಗಿಸೋ ಹುಚ್ಚು (ಈಗ ಹಂಗೇನಿಲ್ಲ). ಶಾಲಾ ಪುಸ್ತಕದ ಕವಿತೆಗಳಂತೆ ಬರೀತಿರಬೇಕು ಅನ್ನೋ ಆಸಕ್ತಿ. ಎಲ್ಲಾ ವಿಷಯಗಳಿಗಿಂತ ಹೆಚ್ಚು ಜೊತೆಯಾದುದು ಓದು ಓದು ಓದು.. 

ಸಂಯುಕ್ತ ಕರ್ನಾಟಕದಲ್ಲೊಮ್ಮೆ ಪ್ರೋತ್ಸಾಹ ಪರಿಚಯ ಬರಹ, ಕವಿತೆಗಳು ಪ್ರಕಟವಾಗಿತ್ತು."

ಎಂದು ಚಿಕ್ಕದಾಗಿ ಮಾತನಾಡಿ ಮಾತು ಮುಗಿಸಿದ ಈ ಗೆಳೆಯನನ್ನು ಮಾತನಾಡಿಸುವುದು ಬಹಳ ಕಷ್ಟದ ಕೆಲಸ. ಅವರು ಹೆಚ್ಚು ಮಾತನಾಡದಿದ್ದರೂ ಪರವಾಗಿಲ್ಲ. ಅವರ ಬ್ಲಾಗಿನಲ್ಲಿ ಅವರ ಮಾತುಗಳನ್ನು ಕೇಳಿಸಿಕೊಳ್ಳೋಣ.. ಗೆಳೆಯ ಪ್ರತಾಪ್ ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ ಸಹೃದಯಿಗಳೇ.. 
http://sapthavarna.blogspot.in/ 

ಗೆಳೆಯ ಪ್ರತಾಪ್ ಬ್ರಹ್ಮಾವರ್ ರವರ ಒಂದೆರಡು ಕವಿತೆಯ ಸಾಲುಗಳನ್ನು ಈ ಕೆಳಗೆ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ ಗೆಳೆಯರೇ..

ಅಜ್ಜ ನೆಟ್ಟ ಆಲದ ಮರವಂತ... 
ನೇಣು ಹಾಕ್ಕೋಳ್ಳೋದು ಯಾಕ್ರಿ... ? 

ನೀವು ನಿಮ್ಮ್ ಮೊಮ್ಮಕ್ಕಳು ಹಗ್ಗ ಕಟ್ಟಿ ಉಯ್ಯಾಲೆ ಆಡಿದ್ರೆ ಸಾಕ್ರಿ..
*****
ಕರಗೊ ಕತ್ತಲೆ 
ಮರುಗಬೇಡ... 
ನಿನಗೆ ನಾಳೆಯು ಜನನದ
ನಗುವಿದೆ... ಬೆಳಕಿನಂತೆ 
****
ಎಲ್ಲರೆಂದರು, ಅವಳು 
ಮರುಭೂಮಿಯ ಮರಳು, 
ಹಿಂಬಾಲಿಸಬೇಡ 
ಮರುಳನಾಗುವೆ. 
"ನಾನೆಂದೆ, 
ಮರುಳನಾದರು 
ಪರವಾಗಿಲ್ಲ, ನಾ 
ನಲ್ಲೆಗಾಗಿ, ನಾನಲ್ಲೆ 
ಮರಳಾಗುವೆ...
(ಅವಳು- ಜೀವನ , ಗುರಿ)
****

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಆಗಸ್ಟ್ 23, 2012


ಎಲೆ ಮರೆ ಕಾಯಿ 

ಷಟ್ಪದಿ ರಗಳೆಗಳನರಗಿಸಿಕೊಳಲು ನಾನರಿಯೆ. 
ಪಂಪರನ್ನರೇನಂದರೆಂದು ನಾ ತಿಳಿಯೆ. 
ಭಾಷೆ ಬರದ ತಬ್ಬಲಿ ನಾನಾದೆನೆಂದು ಬಿಕ್ಕುತಿರೆ,
ದತ್ತ ಕುವೆಂಪುರವರ ಕಂಪು ಎಲ್ಲೆಡೆ ಪಸರಿಸೆ,
ತಿಳಿಗನ್ನಡಾಂಬೆ ತಿರುಗಿ ಕೈ ಬೀಸಿ ಕರೆಯೆ, 
ತಾಯ್ಮಡಿಲ ಸುಖದಿ ನಿಟ್ಟುಸಿರಿಟ್ಟೆ, ಮನತಣಿಯೆ!

ನಮ್ಮ ನಡುವೆ ಕಾಣ ಸಿಗುವ ಹೆಚ್ಚಿನ ಬ್ಲಾಗಿಗರಲ್ಲಿ ಯಾರೂ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ನಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರಲ್ಲ. ಎಲ್ಲರೂ ಒಂದು ರೀತಿಯಲ್ಲಿ ತಮಗೆ ಅನಿಸಿದ್ದನ್ನು ಗೀಚುತ್ತಾ ಹೋದವರೇ. ಹಾಗೆ ಗೀಚುತ್ತಲೇ ಚಂದದ ಬರಹಗಾರರಾಗಿ ಕೆಲವರು ರೂಪುಗೊಂಡರೆ ಇನ್ನೂ ಕೆಲವರು ಗೀಚಿದ್ದು ಸಾಕೆಂದು ಬರೆದಿಟ್ಟಿದ್ದನ್ನು ಎತ್ತಿಟ್ಟವರು ಇದ್ದಾರೆ. ಒಬ್ಬ ಕನ್ನಡಿಗನಿಗೆ ತನಗಿಷ್ಟ ಬಂದ ಭಾವನೆಗಳಿಗೆ ಅಕ್ಷರಗಳ ರೂಪ ಕೊಡುವ ಶಕ್ತಿಯನ್ನು ನೀಡುವುದು ಕನ್ನಡಾಂಬೆ. ಆ ಶಕ್ತಿಯನ್ನು ನಿರಂತರವಾಗಿ ತುಂಬಿಕೊಳ್ಳುತ್ತಾ ಹೋಗುವವರೇ ಅಲ್ಲವೇ ಶಕ್ತ ಬರಹಗಾರರಾಗುವುದು. ಮೇಲಿನ ಕವನದ ಸಾಲುಗಳು "ಭಾವ ಸೆಲೆ" ಎಂಬ ಬ್ಲಾಗಿನಲ್ಲಿ ಕಂಡಾಗ ನನ್ನೊಳಗೆ ಹೀಗೊಂದು ಭಾವ ಲಹರಿ ಹರಿಯತೊಡಗಿತು. ಅಂದ ಹಾಗೆ ಆ ಬ್ಲಾಗಿನ ಮಾಲಿಕರು ತಮ್ಮ ಬ್ಲಾಗ್ ಕುರಿತು ಹೀಗೆ ಚಂದವಾಗಿ ಹೇಳಿದ್ದಾರೆ "ಭಾವನೆಗಳನ್ನು ಕವನಗಳ ಚೌಕಟ್ಟಿನಲ್ಲಿ ಜೋಡಿಸಿದಾಗ ಅನಿವರ್ಚನೀಯ ಆನಂದದ ಅನುಭವವಾಗುವುದು ಸಹಜವಿರಬಹುದು. ಮನದಲ್ಲಿ ಹರಿಯುವ ಹತ್ತು ಹಲವು ಭಾವಗಳಿಗೆ ಎಡೆಯೇ ಈ 'ಭಾವಸೆಲೆ'."

ಕನಸಿಗೆ ಉಣಿಸಿ, ಕೊಬ್ಬಿಸಿ ಬೆಳೆಸಿ
ಆಡಲಾಣತಿಯಿಟ್ಟೆ ಜೀವ ತುಂಬಿಸಿ
ಕುಸಿಯಿತಲ್ಲೇ ಹೊಸಿಲ ಕಂಡು ಹೆದರಿ!

ಭಾವವಿಹಂಗಕೆ ಹಿಡಿ ಜೀವ ನೀಡಿ,
ಹಾರಲಪ್ಪಣೆ ಕೊಟ್ಟೆ, ಸೇಚ್ಛೆಯಲಿ,
ರೆಕ್ಕೆ ಕಿತ್ತಿತು, ಪಂಜರವ ಬಿಡಲು ಹೆದರಿ!

ಪ್ರಾಸ ತುಂಬಿದ ಕವನಗಳನ್ನು ಒಮ್ಮೆಗೆ ನೋಡಿದರೆ ಕೆಲವರಿಗೆ ತುಂಬಾ ಸುಲಭವಾಗಿ ಕವನಗಳು ಅರ್ಥವಾಗಿ ಖುಷಿಯಾದರೆ, ಪ್ರಾಸವಿಲ್ಲದ ಕವಿತೆಗಳ ಓದಿ ಅಭ್ಯಾಸವಿರುವ ಇನ್ನೂ ಕೆಲವರು ಕವಿತೆ ಎಂದರೆ ಪ್ರಾಸವಲ್ಲ ಎಂದು ಹೇಳಿಬಿಡುತ್ತಾರೇನೋ. ಆದರೆ ಪ್ರಾಸಗಳಿಂದ ಕೂಡಿದ ಕವಿತೆಗಳೂ ಸಹ ಅರ್ಥಗಂಭಿತವಾಗಿರುತ್ತವೆ ಎಂದು ಬರೆದು ತೋರಿಸುವವರು ಕೆಲವೇ ಮಂದಿ. ಮೇಲಿನ ಕವನದ ಸಾಲುಗಳ ಬರೆದಿರುವ ನಮ್ಮ ನಡುವಿನ ಈ ಚಂದದ ಕವಯಿತ್ರಿಯ ಕವನಗಳು ಒಮ್ಮೆಗೆ ನೋಡಿದರೆ ಪ್ರಾಸಬದ್ದ ಕವಿತೆಗಳಂತೆ ಕಂಡರೂ ಒಬ್ಬ ಸಾಮಾನ್ಯ ಓದುಗನಾಗಿ ಇವರ ಕವನಗಳ ಓದಿದರೆ ನಿಜಕ್ಕೂ ಆ ಕವನಗಳು ನಮಗೆ ಹತ್ತಿರವಾಗುತ್ತವೆ.

ಬದುಕಲಿ ಸೇರಿದರು, ಚದುರಿದರು
ನೋವನಿತ್ತರು, ನಲಿವ ಕೊಟ್ಟರು.
ಕಣ್ಣೊರೆಸಿದರು, ಮನಮಿಡಿದರು.
ಯಾರಪ್ಪಣೆಯಿಲ್ಲದೇ ಬುತ್ತಿಯೊಳಹೊಕ್ಕರು!

ಮೇಲಿನ ಸಾಲುಗಳ ನೋಡುತ್ತಲೇ ನಮ್ಮ ಬದುಕಿನಲ್ಲಿ ಬಂದು ಹೋದ ಸಂಬಂಧಗಳೆಲ್ಲಾ ಒಮ್ಮೆ ಕಣ್ಣ ಮುಂದೆ ಹಾಯ್ದು ಹೋದಂತೆ ಅನಿಸುತ್ತಿದೆ ಅಲ್ಲವೇ.. ಅಂದ ಹಾಗೆ ಇಂತಹ ಚಂದದ ಕವನಗಳನ್ನು ಬರೆಯುತ್ತಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಅತಿಥಿ ಡಾ. ಲತಾ ದಾಮ್ಲೆಯವರು. ಇವರು ವೃತ್ತಿಯಲ್ಲಿ ವೈದ್ಯೆ ಜೊತೆಗೆ ಅಧ್ಬುತವಾದ ಚಿತ್ರ ಕಲಾವಿದೆ. ಇವರ ಕಲಾಕೃತಿಗಳು ನೋಡಲು ತುಂಬಾ ಮನಮೋಹಕವಾಗಿರುತ್ತವೆ. ಇವರು ಒಳ್ಳೆಯ ಹಾಡುಗಾರ್ತಿ ಸಹ. ಸಾಹಿತ್ಯ, ಸಂಗೀತ, ಕಲೆ ಮತ್ತು ಸೌಂದರ್ಯದ ಜೊತೆ ಮಾನವೀಯತೆ ಒಬ್ಬ ವ್ಯಕ್ತಿಯಲ್ಲಿ ಮಿಳಿತವಾಗಿ ಹೋದರೆ ಆ ವ್ಯಕ್ತಿಯ ವ್ಯಕ್ತಿತ್ವವೇ ಭಿನ್ನವಾಗಿ ಕಾಣುತ್ತದೆ ಅಲ್ಲವೇ.. ಸಹೃದಯಿಗಳೇ ಅಂತಹ ಸುಂದರ ವ್ಯಕ್ತಿತ್ವದ ಡಾ. ಲತಾ ದಾಮ್ಲೆಯವರು ತಮ್ಮ ಬಗ್ಗೆ ಕೊಟ್ಟಿರುವ ಕಿರು ಪರಿಚಯದ ತುಣುಕುಗಳು ಇಗೋ ನಿಮಗಾಗಿ..

ಡಾ. ಲತಾ ದಾಮ್ಲೆ

"ನನ್ನ ಬಗ್ಗೆ ಹೇಳಿಕೊಳ್ಳುವುದು ಎಲ್ಲದಕ್ಕಿಂತ ಅತ್ಯಂತ ಮುಜುಗರದ ಕೆಲಸ. ಆದರೂ ನಟರಾಜ್ ಮನಸ್ಸು ನೋಯಿಸಲಾರದೆ ಇದಕ್ಕೆ ಒಪ್ಪಿಕೊಂಡಿದ್ದೇನೆ. ನಾನು ಒಬ್ಬ ಆಯುರ್ವೇದ ವೈದ್ಯೆ ಹಾಗೂ ಔಷಧಿ ಸಂಶೋಧಕಿ. ಮೂಲತ: ಕುಂದಾಪುರದಲ್ಲಿರುವ ಬೈಂದೂರು ನನ್ನ ಹುಟ್ಟೂರು. ಸಧ್ಯಕ್ಕೆ ಕಳೆದ ೧೮ ವರ್ಷಗಳಿಂದ ಬೆಂಗಳೂರಿನ ವಿಜಯನಗರದಲ್ಲಿ ’ರೇರ್‍’ ಹೆಸರಿನ ಚಿಕಿತ್ಸಾಲಯ ನಡೆಸುತ್ತಿದ್ದೇನೆ. ಅನೇಕ ರೋಗಗಳಲ್ಲಿ ಸಂಶೋಧನೆ ನಡೆಸಿ ಆಯುರ್ವೇದ ಔಷಧಿಗಳನ್ನು ಕಂಡುಹಿಡಿಯುವತ್ತ ನಿರತವಾಗಿ ನಮ್ಮ ತಂಡ ಶ್ರಮಿಸುತ್ತಿದೆ. ಉದಾ: ಸೋರಿಯಾಸಿಸ್, ಮಧುಮೇಹ, ಅಸ್ತಮಾ ಇತ್ಯಾದಿಗಳು.

ಇನ್ನು ನನ್ನ ಸಾಹಿತ್ಯಾಸಕ್ತಿಯ ಬಗ್ಗೆ ಹೇಳುವುದಾದರೆ, ಭಾಷೆಯ ಬಗ್ಗೆ ವಿಶೇಷತ: ಕನ್ನಡದ ಮೇಲೆ ಎಂದಿನಿಂದಲೂ ಎಲ್ಲಿಲ್ಲದ ಒಲವು. ಬರೆಯುವ ಗೀಳು ಸದಾ ಇತ್ತು. ಅಗತ್ಯಕ್ಕೆ ತಕ್ಕಂತೆ ವಿಷಯ ಬದಲಾಗುತ್ತಿತ್ತು. ಈಗ ಸಾಧಾರಣವಾಗಿ ವೈದ್ಯಕೀಯ ವಿಷಯಗಳ ಬಗ್ಗಿನ ಲೇಖನಗಳೇ ಹೆಚ್ಚು. ಮನಸ್ಸಿನ ಭಾವನೆಗಳನ್ನು ತಮ್ಮಂಥ ಸಹೃದಯರೊಂದಿಗೆ ಹಂಚಿಕೊಳ್ಳಲು ಚಿಕ್ಕದಾಗಿ 'ಭಾವಸೆಲೆ' ಎಂಬ ಬ್ಲಾಗನ್ನು ಮಾಡಿದ್ದೇನೆ. ಇದಕ್ಕೂ ಒಂದು ರೀತಿಯಲ್ಲಿ ನಟರಾಜ್ ಅವರ ಪ್ರೀತಿಯ ಒತ್ತಾಯವೇ ಕಾರಣ ಎನ್ನಬಹುದು. ಇದಲ್ಲದೇ 'ಚಿತ್ರ ಕಲೆ' ಹಾಗೂ ಸಂಗೀತ ನನ್ನ ಇನ್ನಿತರ ಹವ್ಯಾಸಗಳು. ಇವೆರಡಕ್ಕೂ ಅಂತರ್ಜಾಲದಲ್ಲಿ ಪ್ರತ್ಯೇಕ ಸ್ಥಳಗಳನ್ನು ಇಟ್ಟಿದ್ದೇನೆ. ಆದರೆ ಸಮಯಾಭಾವದಿಂದ ಯಾವುದಕ್ಕೂ ಸಂಪೂರ್ಣ ಸಮಯ ನೀಡಲಾಗುತ್ತಿಲ್ಲ. ಬಿಡಲೂ ಆಗುತ್ತಿಲ್ಲ. ಒಂದು ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದೇನೆ. ತಮ್ಮೆಲ್ಲರ ಪ್ರೋತ್ಸಾಹದ ನುಡಿಗಳು ನನ್ನ ಈ ಎಲ್ಲ ಕಾರ್ಯಕ್ಕೆ ಬಲ್ಯದಾಯಿ. ಈ ಕನ್ನಡ ಬ್ಲಾಗ್ ಪರಿಚಯ ಆದಮೇಲೆ ನನ್ನ ಸಾಹಿತ್ಯ ಕೃಷಿ ಸ್ವಲ್ಪ ತ್ವರೆಗೊಂಡಂತಿದೆ. ಈ ತಾಣಕ್ಕೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಮ್ಮಿಯೇ. ಇದೊಂದು ಭುವನೇಶ್ವರಿಯ ಗುಡಿಯೇ ಹೌದು."

ಎಂದು ಮಾತು ಮುಗಿಸಿದ ಲತಾ ಅಕ್ಕನ ಮಾತುಗಳು ನಿಮಗೆ ಇಷ್ಟವಾದವು ಎಂದುಕೊಳ್ಳುವೆ.. ಅವರ ಸಾಹಿತ್ಯ, ಕಲೆ ಮತ್ತು ಸಂಗೀತಕ್ಕೆ ಸಂಬಂಧಿಸಿದ ಮೂರು ವೆಬ್ ತಾಣಗಳ ಕೊಂಡಿಯನ್ನು ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಕಣ್ಣಾಡಿಸಿ ಗೆಳೆಯರೇ..

http://dr-lathadamle.blogspot.in/

http://lathadamle.blogspot.in/

http://soundcloud.com/dr-latha-damle

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

ಗುರುವಾರ, ಆಗಸ್ಟ್ 16, 2012


ಎಲೆ ಮರೆ ಕಾಯಿ 

ನಿದ್ದೆ ಬಾರದೆ ಅಳುವ 
ತೊಟ್ಟಿಲಿನ ಕೂಸನ್ನು 
ಗಂಟೆಗಟ್ಟಲೆ
ತೂಗಿದ್ದೇ, ತೂಗಿದ್ದು !
ತೊಡೆಗೆ ಬಂದೊಡನೇ
ಮಗುವಿಗೆ ಸವಿ ನಿದ್ದೆ!

ಎಲೆ ಮರೆ ಕಾಯಿಗಳ ಜೊತೆ ಮಾತುಕತೆ ಅಂಕಣಕ್ಕೆ ಆಗಾಗ್ಗೆ ಹಿರಿಯರನ್ನು ಕರೆ ತರದಿದ್ದರೆ ಏನೋ ಅಪೂರ್ಣ ಭಾವನೆ ನನ್ನಲ್ಲಿ ಮೂಡುತ್ತದೆ. ಅದಕ್ಕೆ ಸರಳತೆಯಿಂದ ಕೂಡಿದ ಮೇಲಿನ ತರಹದ ಚಂದದ ಸಾಲುಗಳನ್ನು ಬರೆಯುತ್ತಾ ನಮಗೆ ಹೆಚ್ಚು ಹೆಚ್ಚು ಆಪ್ತವಾಗಿಬಿಡುವ ನಮ್ಮ ನಡುವಿನ ಹಿರಿಯರೊಬ್ಬರನು ಈ ಬಾರಿ ಕರೆತಂದಿರುವೆ. ಮೊದಲೊಮ್ಮೆ ಹೇಳಿದ ಹಾಗೆ ವೈದ್ಯರು, ವಕೀಲರು, ಪತ್ರಕರ್ತರು ಮತ್ತು ಪೋಲೀಸರು ನಿತ್ಯ ವಿಧ ವಿಧದ ಜನಗಳನು ಭೇಟಿಯಾಗುತ್ತಾರೆ. ಅವರಲ್ಲಿ ಆ ಭೇಟಿಗಳೆಲ್ಲಾ ಅನುಭವಗಳಾಗಿಬಿಡುತ್ತವೆ. ಅಂತಹ ಅನುಭವಗಳಿಗೆ ಅಕ್ಷರದ ರೂಪ ಕೊಟ್ಟರೆ ಒಂದು ಚಂದದ ಬರಹಗಳ ಸರಮಾಲೆ ರೆಡಿಯಾಗುತ್ತದೆ. ವೃತ್ತಿಯಲ್ಲಿ ವೈದ್ಯರಾಗಿದ್ದು ಅಗಾಧವಾದ ಜೀವಾನುಭವವನ್ನು ಹೊಂದಿ ಅವರ ಜೀವಾನುಭವಗಳನ್ನು ಪುಟ್ಟ ಪುಟ್ಟ ತುಣುಕುಗಳ ರೂಪದಲ್ಲಿ ನಮ್ಮೆದುರು ಹರಡಿಟ್ಟಿರುವ ಹಿರಿಯರ ಬ್ಲಾಗಿನ ಹೆಸರು ಕೊಳಲು. ಕೊಳಲಿಗೊಂದಿಗೆ ಹಿರಿಯರೇ ಕೊಟ್ಟಿರುವ ಉಪಶೀರ್ಷಿಕೆ ಕೊಳಲು ಕನ್ನಡದ ಕೊರಳು.. ಅಂದ ಹಾಗೆ ಈ ಹಿರಿಯರನು ಎಲೆ ಮರೆ ಕಾಯಿ ಎನ್ನಲಾಗದು.

ನನ್ನ ಎದೆಯಾಳದಲ್ಲಿ,
ಚುಚ್ಚುತ್ತಿರುವ ಮುಳ್ಳುಗಳೆಲ್ಲ
ಹೂವಾಗಿ ಅರಳಿ,
ಸುಗಂಧ  ಬೀರಲಿ ಸುತ್ತ!
ಸಹ್ಯವಾಗಲಿ ಬದುಕು,
ನನಗೂ, ಸರ್ವರಿಗೂ.

ತಣ್ಣಗೆ ಒಳಗೇ ಕೊರೆಯುವ  
ನೋವಿನ ಮಂಜು ಕರಗಿ,
ನೀರಾಗಿ, ಆವಿಯಾಗಿ
ಕಾಣದಂತಾಗಸಕ್ಕೇರಿ,
ಮಳೆ ಸುರಿಯಲಿ,
ತಂಪೆರೆಯಲಿ ----!

ಇಂತಹ ಚಂದದ ಭಾವನೆಗಳು ಎಲ್ಲರಲೂ ಮೂಡುವುದಿಲ್ಲ. ಬದುಕಿನ ವಿಸ್ತಾರವನು ತಮ್ಮದೇ ಬದುಕಿನಲೂ, ಇತರರ ಬದುಕಿನಲೂ, ಬರಹದಲೂ ನೋಡಿದಾಗ ನಮ್ಮೊಳಗೆ ಒಬ್ಬ ಜೀವನಮುಖಿ ಸುಮ್ಮನೆ ಹುಟ್ಟಿ ಬಿಡುತ್ತಾನೆ. ಹೆಚ್ಚು ಸಲ ಆ ಜೀವನಮುಖಿಯ ಮಾತುಗಳು ಕೇಳುಗರಿಗೂ, ಬರಹಗಳು ಓದುಗರಿಗೂ ತುಂಬಾ ಹತ್ತಿರವಾಗಿಬಿಡುತ್ತವೆ. ಅಂತಹ ಜೀವನಮುಖಿ ಬರಹಗಳು ಈ ಹಿರಿಯರದು ಎನ್ನಬಹುದು. ಒಂದೆಡೆ ವೈದ್ಯರಾಗಿ ವೃತ್ತಿಯಲ್ಲಿ ನಿರತರಾಗಿದ್ದು, ಮತ್ತೊಂದೆಡೆ ಸಮಯ ಸಿಕ್ಕಾಗಲೆಲ್ಲಾ ಪುಸ್ತಕಗಳ ಮೇಲೂ ಬ್ಲಾಗುಗಳ ಮೇಲೂ ಕಣ್ಣಾಡಿಸುವ ಇವರು ಒಬ್ಬ ಅಧ್ಬುತ ಓದುಗರು. ಇತರರ ಬರಹಗಳನ್ನು ಅದರಲ್ಲೂ ಕಿರಿಯರ ಬರಹಗಳನ್ನು ಎಳೆ ನಿಂಬೆ ಕಾಯಿಗಳ ಬರಹಗಳೆಂದು ಹಿರಿಯರೆನಿಸಿಕೊಂಡವರು ಓದಲು ಹಿಂದೆ ಮುಂದೆ ನೋಡುವ ಕಾಲ ಇದು. ಅಚ್ಚರಿಯೆಂದರೆ ಕಿರಿಯರ ಬದುಕಿನ ಮೇಲೂ ಬರಹದ ಮೇಲೂ ಕಣ್ಣಾಡಿಸದಿದ್ದರೆ ಹಿರಿಯರು ಏನನ್ನೋ ಸುಮ್ಮನೆ ಕಳೆದುಕೊಳ್ಳುತ್ತಾರೆ ಎನ್ನಬಹುದು. ಬೇರೆ ಹಿರಿಯರಿಗೆ ಹೋಲಿಸಿದರೆ ಈ ಹಿರಿಯರು ವಾರದಲ್ಲಿ ಕಡಿಮೆ ಎಂದರೂ ಎರಡು ಡಜನ್ ಬ್ಲಾಗುಗಳಿಗೆ ಭೇಟಿ ನೀಡುತ್ತಾರೆ. ಬ್ಲಾಗುಗಳು ತಮ್ಮ ಸಮ ವಯಸ್ಕರದೇ ಇರಬಹುದು ಕಿರಿಯ ಬರಹಗಾರರದೇ ಇರಬಹುದು ಸದ್ದಿಲ್ಲದೆ ಓದಿ ಬಿಟ್ಟಿರುತ್ತಾರೆ. ಅದಕ್ಕೆ ಸಾಕ್ಷಿ ಅವರ ಬ್ಲಾಗಿನಲಿ ಅವರು ಭೇಟಿಕೊಟ್ಟ ಬ್ಲಾಗುಗಳ ಪಟ್ಟಿ.

"ನಾನು ಬ್ಲಾಗ್ ಶುರು ಮಾಡಿದ್ದು 2010 february ಯಲ್ಲಿ. ನನಗೆ ಬ್ಲಾಗ್ ಲೋಕದ ಪರಿಚಯವೇ ಇರಲಿಲ್ಲ.. ನನ್ನ ಆತ್ಮೀಯ ಸ್ನೇಹಿತ ನಾರಾಯಣ ಭಟ್ಟರ ಸ್ನೇಹ ಪೂರ್ವಕ ಒತ್ತಾಸೆ ಇಲ್ಲದಿದ್ದರೆ ನಾನು ಬ್ಲಾಗ್ ಶುರು ಮಾಡುತ್ತಿರಲಿಲ್ಲ. ಅವರಿಗೆ ನನ್ನ ಕೃತಜ್ಞತೆಗಳು. ನನ್ನ ಬ್ಲಾಗ್ ಶುರು ಮಾಡಿಕೊಟ್ಟವರು ನನ್ನ ಪತ್ನಿ ಪದ್ಮ ಮತ್ತು ಮಗಳು ಪಲ್ಲವಿ. ನನಗೆ ಮೊದ ಮೊದಲು ಟೈಪ್ ಮಾಡಲೂ ಬರುತ್ತಿರಲಿಲ್ಲ. ತನ್ನೆಲ್ಲಾ ಮನೆ ಕೆಲಸದ ನಡುವೆ ನನ್ನ ಕಿರಿಕಿರಿಯನ್ನೂ ಸಹಿಸಿಕೊಂಡು ಸುಮಾರು ಬರಹಗಳನ್ನು ಬ್ಲಾಗಿಸಿದ ನನ್ನ ಅರ್ಧಾಂಗಿಗೆ ನನ್ನ ನಮನಗಳು. ಇನ್ನು, ಕಾಣದ ನನ್ನಲ್ಲಿ ಇಷ್ಟೊಂದು ಸ್ನೇಹ, ಪ್ರೀತಿ ಅಭಿಮಾನಗಳನ್ನು ತೋರಿಸಿ ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ ಎಲ್ಲಾ ಸಹಬ್ಲಾಗಿಗರಿಗೂ ಅನಂತ ವಂದನೆಗಳು."

ಎಂದು ತಮ್ಮ ಬ್ಲಾಗಿನ 75 ನೇ ಪ್ರಕಟಣೆಯಡಿ ಈ ಹಿರಿಯರು ಪ್ರೀತಿಯಿಂದ ಬರೆದುಕೊಂಡಿದ್ದಾರೆ. ಇವರ ಬ್ಲಾಗಿನಲಿ ಕವಿತೆ, ಲಘು ಲೇಖನ, ಹಾಸ್ಯ ಲೇಖನಗಳಿಂದ ಹಿಡಿದು ತಾವು ಓದಿದ ಪುಸ್ತಕಗಳ ಮೇಲಿನ ಪ್ರೀತಿಯ ಮಾತುಗಳು ಸಹ ಇವೆ. ಅಂದ ಹಾಗೆ ಇವತ್ತಿನ ಎಲೆ ಮರೆ ಕಾಯಿಗಳ ಮಾತುಕತೆಯ ವಿಶೇಷ ಅತಿಥಿ ಯಾರು ಎಂದು ನಿಮಗೆ ತಿಳಿದಿದೆ ಎಂದುಕೊಳ್ಳುವೆ. ತಿಳಿಯದಿದ್ದರೆ ಖಂಡಿತಾ ನಿಮಗೆ ಕುತೂಹಲ ಇದ್ದೇ ಇರುತ್ತದೆ. ಕೊಳಲು ಬ್ಲಾಗಿನ ಒಡೆಯರಾದ ಡಾ. ಡಿ. ಟಿ. ಕೃಷ್ಣ ಮೂರ್ತಿ ಸರ್ ಈ ದಿನದ ವಿಶೇಷ ಅತಿಥಿ. ಡಾ. ಡಿಟಿಕೆ ಅವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಡಾ. ಡಿ. ಟಿ. ಕೃಷ್ಣ ಮೂರ್ತಿ 

"ಹುಟ್ಟಿದ್ದು ದಾವಣಗೆರೆಯಲ್ಲಿ. 1953 ರಲ್ಲಿ. ಸಧ್ಯಕ್ಕೆ, ಕರ್ನಾಟಕದ ಪ್ರಸಿದ್ಧ ತಾಣವಾದ ಜೋಗ ಜಲಪಾದದಿಂದ ಐದು ಕಿ.ಮಿ.ದೂರದ ಕಾರ್ಗಲ್ ಎಂಬ ಪುಟ್ಟ ಊರಿನಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ ಆಸ್ಪತ್ರೆಯಲ್ಲಿ ಏಳು ವರ್ಷ ಗಳಿಂದ ಉಪ ವೈದ್ಯಕೀಯ ಅಧೀಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಐದು ಕಿ.ಮಿ.ದೂರದಲ್ಲಿ ಲಿಂಗನ ಮಕ್ಕಿ ಅಣೆ ಕಟ್ಟಿದೆ. ಸುಮಾರು ಮೂವತ್ತೈದು ವರ್ಷಗಳ ವೃತ್ತಿ ಸಮಾಧಾನ ತಂದಿದೆ. ಮುಂದಿನ ವರ್ಷ ನಿವೃತ್ತಿ. ವೃತ್ತಿ ಜೀವನದ ಹಲವಾರು ಘಟನೆಗಳನ್ನೂ ನನ್ನ ಬ್ಲಾಗ್ 'ಕೊಳಲು'ನಲ್ಲಿ ಹಂಚಿಕೊಂಡಿದ್ದೇನೆ. ಎರಡು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದೇನೆ. ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದರಿಂದ ಕನ್ನಡದ ಬಗ್ಗೆ ವಿಶೇಷ ಆಸಕ್ತಿ. ಮೊದಲಿಂದಲೂ ಮಂಕು ತಿಮ್ಮನ ಕಗ್ಗ ಓದುತ್ತಿದ್ದೇನೆ (ಸುಮಾರು ನಲವತ್ತು ವರ್ಷಗಳಿಂದ). ರತ್ನನ ಪದಗಳು ಮತ್ತೊಂದು ಹುಚ್ಚು ಹಿಡಿಸಿದ ಪುಸ್ತಕ.

ಮೊದಲ ಪದ್ಯ ಬರೆದ ಪ್ರಸಂಗ ವಿಶಿಷ್ಟವಾಗಿದೆ. ಸುಮಾರು ಇಪ್ಪತ್ತೆರಡು ವರ್ಷಗಳ ಕೆಳಗೆ ಸುಮಾರು ಹತ್ತು ಗಂಟೆ ಸಮಯ.ಆಸ್ಪತ್ರೆಗೆ ಹೊರಡುವ ಗಡಿಬಿಡಿಯಲ್ಲಿದ್ದೆ. ಪಕ್ಕದ ಮನೆಯ ಏಳನೇ ತರಗತಿಯ ಹುಡುಗಿಯೊಬ್ಬಳು, ಕುಟುಂಬ ಯೋಜನೆಯ ಬಗ್ಗೆ ಪದ್ಯವನ್ನು ಬರೆದುಕೊಂಡು ಬರಲು ಶಾಲೆಯಲ್ಲಿ ಹೇಳಿದ್ದಾರೆಂದೂ, ಬರೆದುಕೊಂಡು ಹೋಗದಿದ್ದರೆ ಶಾಲೆಯಲ್ಲಿ ಹೊಡಿಯುತ್ತಾರೆಂದೂ, ಅಳುತ್ತಾ ಹೇಳಿದಳು. ಸರಿ, ಅದೇನು ಸ್ಫೂರ್ತಿ ಬಂತೋ! ತಕ್ಷಣವೇ ಮೂರು ಚರಣಗಳ ಪದ್ಯವನ್ನು ಬರೆದುಕೊಟ್ಟೆ! ನಾನೂ ಕವನಗಳನ್ನು ಬರೆಯಬಲ್ಲೆ ಎಂದು ಆಗ ಅರಿವಾಯಿತು. ಅಲ್ಲಿಂದ ಸುಮಾರು ಕವನಗಳನ್ನು ಬರೆದಿದ್ದೇನೆ. ಹಲವಾರು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮೊದಲಿಂದಲೂ ಚಿತ್ರಕಲೆ, ನಾಟಕ, ಹಾಡುಗಾರಿಕೆ ಮತ್ತು ಶಟಲ್ ಬ್ಯಾಡ್ಮಿಂಟನ್ ಆಟದಲ್ಲಿ ವಿಶೇಷ ಆಸಕ್ತಿ. ನಿಸ್ಸಾರ್ ಅಹ್ಮದ್, ಶಿವರುದ್ರಪ್ಪ, ಕುವೆಂಪು, ಲಕ್ಸ್ಮಿನಾರಾಯಣ ಭಟ್ಟ, ಕಣವಿ, ಕಂಬಾರ, ಸಿದ್ದಯ್ಯ ಪುರಾಣಿಕರ ಕವನಗಳು ಇಷ್ಟ. ವಸುಧೇಂದ್ರರ ಬರವಣಿಗೆ ಇಷ್ಟ. ಕನ್ನಡದ ಹಲವಾರು ಬ್ಲಾಗುಗಳು ಚೆನ್ನಾಗಿವೆ. ನಾವು ಹಾಕಿದ ಬ್ಲಾಗ್ ಗಿಡಗಳು ಒಣಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕೆಲಸ. ಬ್ಲಾಗ್ ಲೋಕ ಹಲವಾರು ಸ್ನೇಹಿತರನ್ನು ಕೊಟ್ಟಿದೆ. ಅದಕ್ಕೆ ನಾನು ಚಿರ ಋಣಿ. ಆಧ್ಯಾತ್ಮಿಕತೆಯ ಬಗ್ಗೆಯೂ ಆಸಕ್ತಿ. DEEPAK CHOPRA,DR.WYENE DYER,EKHARDT TOLLE,ನೆಚ್ಚಿನ ಲೇಖಕರು. ಇಷ್ಟು ಮಾಹಿತಿ ಸಾಕೆಂದು ಕೊಂಡಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು. ನಮಸ್ಕಾರ."

ಎಂದು ಮಾತು ಮುಗಿಸಿದ ಡಾ.ಕೃಷ್ಣ ಮೂರ್ತಿ ಸರ್ ಅವರ ಮಾತುಗಳು ನಿಮಗೆ ಇಷ್ಟವಾಯಿತು ಅಲ್ಲವೇ ಸಹೃದಯಿಗಳೇ.. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಒಮ್ಮೆ ಭೇಟಿ ಕೊಡಿ. ನಿಮಗೆ ಖಂಡಿತಾ ಅವರ ಬ್ಲಾಗ್ ಇಷ್ಟವಾಗುವುದು..
http://dtkmurthy.blogspot.in/

ಡಾ.ಕೃಷ್ಣ ಮೂರ್ತಿ ಸರ್ ಅವರ ಹಾಸ್ಯವೊಂದರ ತುಣುಕು ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಟೀಚರ್ ಕ್ಲಾಸಿಗೆ ಬಂದಾಗ ಇಬ್ಬರು ಹುಡುಗರು ಜಗಳವಾಡುತ್ತಿದ್ದರು.
ಟೀಚರ್: ಯಾಕ್ರೋ ಜಗಳ?
ಒಬ್ಬ ಹುಡುಗ: ದಾರಿಯಲ್ಲಿ ಹೋಗುವಾಗ ಹತ್ತು ರೂಪಾಯಿ ಸಿಕ್ಕಿತು.ಯಾರು ಚೆನ್ನಾಗಿ  ಸುಳ್ಳು ಹೇಳುತ್ತಾರೋ ಅವರಿಗೇ ಹತ್ತು ರೂಪಾಯಿ ಅಂತ ಇಬ್ಬರೂ ಒಂದೊಂದು ಸುಳ್ಳು ಹೇಳಿದ್ವಿ.ಯಾರ ಸುಳ್ಳು ಚೆನ್ನಾಗಿತ್ತು ಅಂತ ಇನ್ನೂ ತೀರ್ಮಾನ ಆಗಿಲ್ಲಾ.ಅದಕ್ಕೇ ಜಗಳಾ.
ಟೀಚರ್:ಇಂತಹ ಪಂದ್ಯ ಕಟ್ಟೋಕೆ ನಿಮಗೆ ನಾಚಿಕೆ ಆಗಬೇಕು!ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಅಂದರೇನು ಅಂತಲೇ ಗೊತ್ತಿರಲಿಲ್ಲ!
ಇನ್ನೊಬ್ಬ ಹುಡುಗ:ಟೀಚರ್ ಈ ಹತ್ತು ರೂಪಾಯಿ ನೀವೇ ಇಟ್ಕೊಳ್ಳಿ !ಇದು ನಿಮಗೇ  ಸೇರಬೇಕು!
******

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

ಶುಕ್ರವಾರ, ಆಗಸ್ಟ್ 10, 2012

ಎಲೆ ಮರೆ ಕಾಯಿ ೫೧


ಇದು ಮನೆಯೇ ?
ಅಸ್ವಾಭಾವಿಕ ಏಕಾಂತಗಳ
ಭಯಾನಕ ಮೌನಗಳ
ಕತ್ತಲೆಯ ಕೋಣೆಗಳ

ಇದು ಮನೆಯೇ ?
ಹೊರಗಿನ ಊಟಗಳ
ಉರಿಯದ ಒಲೆಗಳ
ತೀರದ ಹಸಿವೆಗಳ

ಇದು ಮನೆಯೇ ?
ಪ್ರೀತಿ ಇಲ್ಲದ ಹೃದಯಗಳ
ಸುಳ್ಳು ಅನುಮಾನಗಳ
ಮುಗಿಯದ ಅಹಂಕಾರಗಳ

ಮೇಲಿನ ಸಾಲುಗಳಿರುವ ಬ್ಲಾಗನು ನೋಡಿ ನನಗೆ ಮೊದಲಿಗೆ ಆಶ್ಚರ್ಯವಾಗಿತ್ತು. ಇಸವಿ 2011 ರ ಜುಲೈನಿಂದ ಡಿಸೆಂಬರ್ ವರೆಗೆ ಈ ಬ್ಲಾಗಿನಲ್ಲಿ ಮುನ್ನೂರಕ್ಕು ಹೆಚ್ಚು ಕವಿತೆ ಲೇಖನಗಳು ಬರೆಯಲ್ಪಟ್ಟಿದ್ದವು. ಇಸವಿ 2012 ರಲ್ಲಿ ಜನವರಿಯಿಂದ ಇಲ್ಲಿಯವರೆಗೆ ನಾಲ್ಕು ನೂರು ಚಿಲ್ಲರೆ ಕವಿತೆಗಳು ಬರಹಗಳು!! ಬರೀ ಕ್ರಿಕೆಟ್ ನಲ್ಲಷ್ಟೇ ಮುನ್ನೂರು, ನಾನೂರು ರನ್ ಗಳನ್ನು ಕೇಳಿಯಷ್ಟೇ ಗೊತ್ತಿದ್ದ ನನಗೆ ಈ ರೀತಿ ಕವಿತೆಗಳ ಸೆಂಚುರಿಗಳನ್ನು ಸದ್ದಿಲ್ಲದೆ ಮಾಡುತ್ತಿರುವ ಈ ಅಣ್ಣನ ಕನ್ನಡದ ಮೇಲಿನ ಪ್ರೀತಿಗೆ ಹೀಗೊಂದು ಸಲಾಮು ನೀಡಬೇಕೆನಿಸಿತು. "ನಾನೊಬ್ಬ ಸಾಧಾರಣ ಬರಹಗಾರ. ಸಣ್ಣ ವಯಸ್ಸಿನಿಂದ ನನಗೆ ಓದುವುದು ಎಂದರೆ ತುಂಬಾ ಇಷ್ಟ. ಬಾಲ್ಯದಿಂದ ಮನದಲ್ಲಿದ್ದ ಇಚ್ಛೆಯನ್ನು ಹೊರ ತಂದು ಅದನ್ನು ಇಲ್ಲಿ ಗೀಚುತ್ತಿದ್ದೇನೆ. ನಿಮ್ಮ ಆಶೀವಾ೯ದ ಮತ್ತು ಪ್ರೋತ್ಸಾಹದೊಂದಿಗೆ ಬ್ಲಾಗ್ ಲೋಕದಲ್ಲಿ ನನ್ನ ಬರಹದ ಪ್ರಯಾಣ ಸಾಗಲಿ." ಎಂದು ತನ್ನ ಬ್ಲಾಗಿನಲಿ ತನ್ನ ಪರಿಚಯದ ನುಡಿ ನುಡಿದಿರುವ ಅಣ್ಣನ ಬ್ಲಾಗಿನ ಹೆಸರು ಇನ್ನೊಂದು ಜೀವನ..

ಸಂದೇಶ ಬರುವ ತನಕ ಪತ್ರ ಇನ್ನೊಂದು ಬರೆದು ಇಡುವೆ
ನನಗೆ ಗೊತ್ತಿದೆ ಅವಳು ಏನು ಬರೆದಿರಬಹುದು ಉತ್ತರದಲಿ

ನಾವು ಹೆಚ್ಚು ಜನ ಮಿರ್ಜಾ ಗಾಲಿಬ್ ರ ಹೆಸರನ್ನು ಕೇಳಿದ್ದೇವಾ ಹೊರತು ಓದಿಕೊಂಡಿರುವುದಿಲ್ಲ. ಅಂತಹ ಗಾಲಿಬ್ ರ ಚಂದದ ದ್ವಿಪದಿಗಳನ್ನು ಕನ್ನಡಕ್ಕೆ ಅನುವಾದಿಸುವ ಈ ಅಣ್ಣನ ಪ್ರಯತ್ನ ನೋಡಿ ನಿಜಕ್ಕೂ ಖುಷಿಯಾಯಿತು. ಗಾಲಿಬ್ ರ ಜೊತೆ ಜೊತೆಗೆ ಮಹಾತ್ಮ ಕಬೀರರ ದೋಹ, ಹಿಂದಿಯ ಚಿತ್ರಗೀತೆಗಳ ಕನ್ನಡಾನುವಾದ ಎಲ್ಲವನು ಶ್ರಧ್ದೆಯಿಂದ ಈ ಸಹೋದರ ಮಾಡುತ್ತಿರುವುದು ಖುಷಿಯ ಸಂಗತಿ.. ಅನುವಾದ ಎಷ್ಟು ಕಷ್ಟದ ಕೆಲಸ ಎಂದು ಅನುವಾದಿಸಲು ಪ್ರಯತ್ನಿಸಿದಾಗಲೇ ತಿಳಿಯುವುದು.. ಕಷ್ಟಕರವಾದ ಕೆಲಸವಾದ ಅನುವಾದಗಳ ಇವರು ಮಾಡಿರುವುದು ನಿಜಕ್ಕೂ ಶ್ಲಾಘನೀಯ..

ಅವನ ಅಪರಾಧ ಸಾಬೀತಾಯಿತು.
ಯಾರೋ ಅವನಿಗೆ ಕೇಳಿದರು.
"ನೀನು ಮಾಡಿದ ಅಪರಾಧ ಏನು ?
ಅವನು " ನನ್ನ ಅಪರಾಧ ನ್ಯಾಯಾಲಯದಲ್ಲಿ ಸತ್ಯ ಹೇಳಿದ್ದು"

ಪುಟಗಟ್ಟಲೇ ಕಥೆ ಕವನಗಳನ್ನು ಕುಳಿತು ಓದಿಕೊಳ್ಳಲು ಸಮಯವಿಲ್ಲದಿದ್ದಾಗ ನಮ್ಮನ್ನು ಒಮ್ಮೊಮ್ಮೆ ಓದಿಗೆ ಹಚ್ಚುವ ಸಾಹಿತ್ಯ ಪ್ರಕಾರಗಳು ಎಂದರೆ ಪುಟ್ಟ ಪುಟ್ಟ ಹನಿಗವನಗಳು ಹಾಗೂ ಮಿನಿ ಕಥೆಗಳು. ಈ ಸಹೋದರ ಮೇಲಿನ ತರಹದ ಮಿನಿ ಕಥೆಗಳ ಪ್ರಕಾರದ ಮೇಲೂ ಕೈಯಾಡಿಸಿದ್ದಾರೆ. ದೂರದ ದುಬೈನಲ್ಲಿದ್ದರೂ ಕನ್ನಡ ಮೇಲಿನ ಅಭಿಮಾನ ಇವರಲ್ಲಿ ನಮ್ಮೆಲ್ಲರಿಗಿಂತ ದುಪ್ಪಟ್ಟಿದೆ ಎನ್ನುವುದಕ್ಕೆ ಅವರ ರಚನೆಗಳೇ ಸಾಕ್ಷಿ.  ಕನ್ನಡದ ಒಬ್ಬ ಅಪ್ಪಟ ಪ್ರೇಮಿಯಾದ ಸಹೋದರ ಹರೀಶ್ ಶೆಟ್ಟಿ ಶಿರ್ವ ಅವರೊಂದಿಗೆ ನಡೆಸಿದ ಮಾತುಕತೆಯ ತುಣುಕುಗಳು ಇಗೋ ನಿಮಗಾಗಿ ಗೆಳೆಯರೇ..

Profile Picture
ಶ್ರೀ ಹರೀಶ್ ಶೆಟ್ಟಿ ಶಿರ್ವ

"ನಾನೊಬ್ಬ ಸಾಧಾರಣ ಬರಹಗಾರ.
ನನ್ನನ್ನು ಕವಿ ಎನ್ನುವುದು ಸೂಕ್ತವಲ್ಲ ಅಂಥ ನನ್ನ ಭಾವನೆ.
ನನ್ನ ಊರು ಉಡುಪಿ ಶಿರ್ವ, ಮಂಚಕಲ್, ನನ್ನ ಜನ್ಮ ಆದದ್ದು ಅಲ್ಲಿ, ಆದರೆ ನನ್ನ ಜನ್ಮದ ನಂತರ ನನ್ನ ಪಾಲಕರು ಮುಂಬೈಗೆ ಬಂದು ಅಲ್ಲಿ ಸೆಟಲ್ ಆದರು. ನನ್ನ ತಂದೆಯ ಹೋಟೆಲ್ ಇತ್ತು ಮುಂಬೈಯಲ್ಲಿ, ಅದರಿಂದ ನನ್ನ ಬಾಲ್ಯ, ಶಿಕ್ಷಣ ಎಲ್ಲ ಮುಂಬೈಯಲ್ಲೇ ಆದದ್ದು. ನಾನು ಕನ್ನಡ ಶಾಲೆಯಲ್ಲಿ ಕಲಿತ್ತದ್ದು ,ಆಗ ಮುಂಬೈಯಲ್ಲಿ ಕೆಲವೇ ಕನ್ನಡ ಶಾಲೆ ಇತ್ತು. ಅದರಲ್ಲಿ ಒಂದು ನಾನು ಕಲಿತ ಶಾಲೆ ಮುಂಬೈ ಮಾಹಿಮ್'ಲ್ಲಿ , ಸರಕಾರಿ ಶಾಲೆ, ಆದರೆ ಶಿಕ್ಷಣ ಉತ್ತಮವಾಗಿತ್ತು. ಶಾಲೆ ಮುಗಿಸಿ ಕಾಲೇಜ್ ತನಕ ಮುಂಬೈಯಲ್ಲೇ ನನ್ನ ಶಿಕ್ಷಣ. ಕಾಲೇಜ್ ಮುಗಿಸಿದ ನಂತರ ತಂದೆಯಂತೆ ಹೋಟೆಲ್ ವ್ಯಾಪಾರಕ್ಕೆ ಹೋಗದೆ ನಾನು ಹೊರಗೆ ಕೆಲಸ ಮಾಡಲು ಶುರು ಮಾಡಿದೆ, ಆದರೆ ಅಲ್ಲಿ ಸರಿ ಆಗದೆ ಪುನಃ ತಂದೆಯ ವ್ಯಾಪಾರಕ್ಕೆ ಬಂದೆ. ಹೀಗೆಯೇ ತುಂಬಾ ಸಮಯ ವ್ಯಾಪಾರದಲ್ಲಿ ಇದ್ದು ಪುನಃ ಬೇಜಾರಾಗಿ ಪುನಃ ಹೊರಗೆ ಅಕೌಂಟೆಂಟ್ ಆಗಿ ಕೆಲಸ ಸೇರಿದೆ. ಹೀಗೆಯೇ ಸಮಯ ಕಳೆದಂತೆ ಪರದೇಶಕ್ಕೆ ಬಂದು ಅಲ್ಲಿ ಕೆಲಸ ಸೇರಿದೆ. ರಜೆಗೆ ಎಂದು ಭಾರತಕ್ಕೆ ಬಂದವನು ಮದುವೆ ಆಗಿ ಪುನಃ ಮುಂಬೈಯಲ್ಲಿ ಸೆಟಲ್ ಆದೆ. ಆದರೆ ಜೀವನ ಚಕ್ರ ನನ್ನನ್ನು ಪುನಃ ಪರದೇಶಕ್ಕೆ ದೂಡಿ ಈಗ ಪರಿವಾರ ಸಮೇತ ನಾನು ದುಬೈಯಲ್ಲಿ ವಾಸಿಸುತ್ತಿದ್ದೇನೆ.

ಸತ್ಯ ಹೇಳಬೇಕೆಂದರೆ ಈ ಜೀವನದ ಜಂಜಾಟದಲ್ಲಿ ನಾನು ಕನ್ನಡದಿಂದ ತುಂಬಾ ತುಂಬಾ ದೂರ ಆಗಿದೆ. ಆದರೆ ಫೇಸ್ ಬುಕ್ ನಿನಗೆ ತುಂಬಾ ತುಂಬಾ ಧನ್ಯವಾದ. ೨೦೦೯'ಲ್ಲಿ ಫೇಸ್ ಬುಕ್'ಲ್ಲಿ ಅಕೌಂಟ್ ತೆರೆಯುವಾಗ , ನಾನು ಸ್ವಪ್ನದಲ್ಲೂ ಯೋಚಿಸಲಿಲ್ಲ ಇದು ನನ್ನನ್ನು ಕನ್ನಡದ ಇಷ್ಟು ಹತ್ತಿರ ತರಬಹುದೆಂದು. ಕನ್ನಡದ ಅನೇಕ ತಾಣಗಳನ್ನು ನೋಡುತ , ನನಗೆ ಅದರಲ್ಲಿ ರುಚಿಯಾಗಿ ನಾನು ಸಹ ನನ್ನದೆ "ಕರ್ನಾಟಕ ದಿನ ವಾರ್ತೆಗಳು" ಎಂಬ ಒಂದು ಕನ್ನಡ ತಾಣ ಶುರು ಮಾಡಿದೆ. ಹೀಗೆಯೇ ಅನ್ಯರ ಕವನ , ಕಾವ್ಯ , ಪೋಸ್ಟ್ ಮಾಡುತ ಮಾಡುತ ನಾನು ಸಹ ನನ್ನ ಜೀವನದ ಹಲವು ಘಟನೆಗಳನ್ನು ಫೇಸ್ ಬುಕ್ ನೋಟ್ಸ್ ನಲ್ಲಿ ಬರೆದೆ.

ಒಂದು ದಿವಸ ನಾನು ಬರೆದ ಒಂದು ಕಥೆ " ಪಕ್ಯ " "ಕರ್ನಾಟಕ ದಿನ ವಾರ್ತೆಗಳು" ದಲ್ಲಿ ಪೋಸ್ಟ್ ಮಾಡಿದೆ. ಇಲ್ಲಿ ಮಾನ್ಯ ಶ್ರೀ ರವಿ ಮೂರ್ನಡ್ ಅವರ ಕೃಪಾ ದೃಷ್ಟಿ ನನ್ನ ಹಾಗು ನನ್ನ ಈ ಕಥೆಯ ಮೇಲೆ ಮೇಲೆ ಬಿತ್ತು . ಅವರು ನನ್ನ ಈ ಕಥೆಯನ್ನು "ನಿಲುಮೆ"ಯಲ್ಲಿ ಕಳುಹಿಸಿ ಮುದ್ರಿಸಿದ್ದರು. ಇಂದನ್ನು ಕಂಡು ನನಗೆ ತುಂಬಾ ಆನಂದ ಹಾಗು ಇದರ ನಂತರ ಶ್ರೀ ರವಿ ಮೂರ್ನಡ್ ಅವರು ನನ್ನ ಇನ್ನೊಂದು ಕಥೆ "ಸರದಾರ್ ಅಂಕಲ್ " ಸಹ "ನಿಲುಮೆ"ಯಲ್ಲಿ ಮುದ್ರಿಸಿದ್ದರು. ಈ ಪ್ರೋತ್ಸಹನದಿಂದ ಮೆಲ್ಲ ಮೆಲ್ಲ ನಾನು ಕವಿತೆ ಬರೆಯಲು ಶುರು ಮಾಡಿದೆ ಹಾಗು ಸಂತ ಕಬೀರ್ ಅವರ ದೋಹಗಳನ್ನು ಅನುವಾದಿಸಲು ಶುರು ಮಾಡಿದೆ. ನನಗೆ ಬರೆಯುವ ಒಂದು ಚಟ ಆಯಿತು .ಆದರೆ ಕನ್ನಡದಿಂದ ಹಲವು ಸಮಯ ದೂರ ಇದ್ದ ಕಾರಣ ನಾನು ಬರೆಯುವಾಗ ಹಲವು ತಪ್ಪುಗಳು ಆಗುತಿತ್ತು. ಆದರೆ ತುಂಬಾ ತುಂಬಾ ಧನ್ಯವಾದಗಳು " ಕನ್ನಡ ಬ್ಲಾಗ್ " ಎಂಬ ಸುಂದರ ತಾಣದ ನಿರ್ವಾಹಕರಾದ ಮಾನ್ಯ ಶ್ರೀ ರವಿ ಮೂರ್ನಡ್ ಹಾಗು ನನ್ನ ಇತರ ಎಲ್ಲ ಮಿತ್ರರಿಗೆ ಅವರು ನನ್ನನ್ನು ತಿದ್ದಿ ತಿದ್ದಿ ನನ್ನನ್ನು ಸುಧಾರಿಸಿದರು. ಅವರಿಗೆಲ್ಲ ನನ್ನ ಕೋಟಿ ಕೋಟಿ ವಂದನೆಗಳು. ನನ್ನ ಅನೇಕ ಧನ್ಯವಾದಗಳು ನನ್ನ ಕವನಗಳನ್ನು ಅತಿ ಪ್ರೀತಿಯಿಂದ ಓದುವ ನನ್ನ ಓದುಗರಿಗೆ.

ಕೊನೆಗೆ ಕೇವಲ ಎರಡು ಮಾತು ....
ಕನ್ನಡ....
ನೀನೊಂದು ಭಾಷೆಯಲ್ಲ
ನನ್ನನ್ನು ನಿರ್ಮಿಸಿದ ಚಿತ್ರಕಾರ
ನಿನ್ನ ವಿನಃ ನಾನು ಅಪೂರ್ಣ
ನೀನು ಹೂವು ಆದರೆ ನಾನು ಕೇವಲ ದಾರ"

ಎಂದು ಚಂದವಾಗಿ ಮಾತನಾಡಿದ ಹರೀಶಣ್ಣನ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಅವರ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ. ಸಮಯವಿದ್ದಾಗ ಒಮ್ಮೆ ಅವರ ಬ್ಲಾಗಿಗೆ ಭೇಟಿ ಕೊಡಿ..

http://harishshettyshirva.blogspot.in/

ಹರೀಶಣ್ಣನ ಕೆಲವು ಹಿಂದಿ ಗೀತೆಗಳ ಅನುವಾದದ ಚಂದದ ಸಾಲುಗಳು.. ನಿಮಗಾಗಿ ಗೆಳೆಯರೇ ಖುಷಿಯಿಂದ ಓದಿಕೊಳ್ಳಿ..

ನಾನು ಕಂಡಿದ್ದೇನೆ
ಆ ಕಣ್ಣಲ್ಲಿ ಮಿಂಚುವ ಹೊಳಪು
ಕೈಯಿಂದ ಮುಟ್ಟಿ ಅದಕ್ಕೆ
ಸಂಬಂಧದ ಆರೋಪ ನೀಡ ಬೇಡ
(ಹಾಡು: ಹಮ್ ದೇಖಾ ಹೈ ಉನ್ ಆಂಖೋ ಮೆ)
****

ಜೀವನ ತುಂಬಿದ ನಿನ್ನ ಕಣ್ಣು
ಒತ್ತಾಯಿಸುತ್ತದೆ ಜೀವಿಸಲು ...ಜೀವಿಸಲು
ಸಾಗರವೂ ಹಂಬಲಿಸುತ ಇರುತ್ತದೆ
ನಿನ್ನ ರೂಪ ರಸವನ್ನು ಸವಿಯಲು ...ಸವಿಯಲು!

(ಹಾಡು: ಜೀವನ್ ಸೆ ಭರೀ ತೆರೀ ಆಂಕೆ)
*****

ಮತ್ತದೇ ಸಂಜೆ
ಅದೇ ದುಃಖ ಅದೇ ಏಕಾಂತವಿದೆ
ಹೃದಯ ಸಾವರಿಸಲು
ನಿನ್ನ ನೆನಪು ಪುನಃ ಬಂದಿದೆ
(ಹಾಡು: ಫಿರ್ ವಹೀ ಶಾಮ್ ವಹೀ ಘಮ್ ವಹೀ ತಹ್ನಾಯಿ ಹೈ)
*****

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))