ಗುರುವಾರ, ಅಕ್ಟೋಬರ್ 25, 2012


ಎಲೆ ಮರೆ ಕಾಯಿ ೬೨
"ಮತ್ತದೇ ಅಸ್ಪಷ್ಟ ದಾರಿ, ಮತ್ತದೇ  ಸಹ ಸ್ಪರ್ಧಿಗಳು, ಮತ್ತದೇ ಗುರಿ, ಮತ್ತವೇ  ತಂಗುದಾಣಗಳು, ಓಡುತ್ತಿದೇನೆ, ಓಡಬೇಕು, ವಿಶ್ರಮಿಸುವಂತಿಲ್ಲ.  ಇದಷ್ಟೇ  ತಲೆಯಲ್ಲಿ ಇಟ್ಟುಕೊಂಡು ಓಡುತ್ತಿರುವ  ನಾನು  ಯಾರಿಗೆ, ಏತಕ್ಕಾಗಿ  ಓಡುತ್ತಿದೇನೆ  ಎನ್ನುವುದನ್ನು  ವಿವರಿಸಲಾರೆ  ವಿಪರ್ಯಾಸ! ಆದರೆ  ಓಟ  ವ್ಯರ್ಥವೆನಿಸುತ್ತಿಲ್ಲ, ನಾನು ಓಡುತ್ತಲೇ ಇದ್ದೇನೆ, ಇನ್ನು ಅದೆಷ್ಟು ಹೊಸ ತಂಗು ದಾಣ ಗಳಲ್ಲಿ  ವಿಶ್ರಮಿಸಲ್ಲಿದ್ದೇನೋ? ಅಸ್ಪಷ್ಟ, ಅನಿಖರತೆ ... ಉತ್ತರದ  ನಿರಂತರ  ಹುಡುಕಾಟದಲ್ಲಿ  ಮತ್ತೆ ನನ್ನ ಓಟ, ಜತೆಯಲ್ಲಿ  ನೀವು  ಇರುವಿರಲ್ಲ ???"

ಪ್ರತಿ ಬಾರಿ ಎಲೆ ಮರೆ ಕಾಯಿಗಳ ಜೊತೆ ಮಾತುಕತೆ ಬರಹವನ್ನು ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದ ಲೇಖಕರ ಒಂದು ಕವನದಿಂದಲೇ ಶುರು ಮಾಡುವ ವಾಡಿಕೆಯನ್ನು ಪಾಲಿಸುತ್ತಾ ಬಂದಿದ್ದೆ. ಕೆಲವು ಸಾರಿ ಮಾತುಕತೆಗೆ ಬಂದ ಅತಿಥಿಗಳ ಬ್ಲಾಗಿನಲ್ಲಿ ಕವಿತೆಗಳು ಕಾಣದೇ ಇದ್ದಾಗ ಅವರ ಬರಹದಲ್ಲಿನ ಒಂದು ಸಾಲಿನ ಪದಗಳನ್ನೇ ಒಂದರ ಕೆಳಗೊಂದರಂತೆ ಜೋಡಿಸಿಟ್ಟು ಕವನದ ತರಹ ಕಾಣುವಂತೆ ಮಾಡಿ ಕವನದಿಂದಲೇ ಎಲೆ ಮರೆ ಕಾಯಿ ಬರಹವನ್ನು ಶುರು ಮಾಡುತ್ತಿದ್ದ ವಾಡಿಕೆಯನ್ನು ಸದ್ಯ ಮುರಿಯಲಿಲ್ಲ ಎಂದುಕೊಳ್ಳುತ್ತಿದ್ದೆ. ಇವತ್ತಿನ ಅತಿಥಿಯ ಬ್ಲಾಗಿನಲ್ಲಿ ಒಂದು ಕವಿತೆಯೂ ಕಾಣದಿದ್ದಾಗ ಚಂದದ ಬರಹದ ಒಂದೆರಡು ಸಾಲುಗಳ ಪದಗಳನ್ನು ಕವಿತೆಯ ಹಾಗೆ ಜೋಡಿಸದೇ ಆ ಸಾಲುಗಳು ಹೇಗಿದ್ದವೋ ಹಾಗೆ ನಿಮ್ಮ ಮುಂದಿಟ್ಟಿರುವೆ. ಒಮ್ಮೆ ನೋಡಿದರೆ ಮೇಲೆ ಬರೆದಿರುವ "ಮತ್ತದೇ ಅಸ್ಪಷ್ಟ ದಾರಿ, ಮತ್ತದೇ  ಸಹ ಸ್ಪರ್ಧಿಗಳು" ಎಂಬತಹ ಪದಗಳಿರುವ ಸಾಲುಗಳು ಕವಿತೆಯ ಹಾಗೆ ಓದಿಸಿಕೊಳ್ಳುವುದರಿಂದ ಕವಿತೆಯೊಂದಿಗೆ ಶುರುವಾಗುವ ಎಲೆ ಮರೆ ಕಾಯಿ ಲೇಖನದ ವಾಡಿಕೆಯನ್ನು ಈ ಬಾರಿ ಮುರಿದಿದ್ದರೂ ಮುರಿದಂತೆ ಅನಿಸುತ್ತಿಲ್ಲ. ಅಂದ ಹಾಗೆ ಮೇಲಿನ ಚಂದದ ಸಾಲುಗಳು ಕಣ್ಣಿಗೆ ಬಿದ್ದ ಬ್ಲಾಗಿನ ಹೆಸರು ಅಂತರ್ಮುಖಿ..

"ಬದುಕು ಒಂದು ಖಾಲಿ ಕ್ಯಾನ್ವಾಸ್ ಹಾಳೆಯಂತೆ! ಬೆಳಗ್ಗೆ ಎದ್ದು ಬ್ರಷ್ ಮಾಡಲು ಹೋದಾಗ ಖಾಲಿಯಾದ ಟೂಥ್ ಪೇಸ್ಟ್ ಟ್ಯೂಬ್ ಕಂಡು ಏನೇನೋ ವಿಚಾರಧಾರೆಗಳ ಸಂಚಲನ. ಎಲ್ಲ ಖಾಲಿಯಾದ ವಸ್ತುಗಳು replace ಆಗುತ್ತಲೇ ಇರುತ್ತವೆ. ನಾವು ಪ್ರತಿನಿತ್ಯ ಬಳಸುವ ಪದಾರ್ಥಗಳು, ಮಹಡಿ ಮೇಲಿನ syntax, ಯಾವುದೇ ಆಗಿರಲಿ ಖಾಲಿಯಾದಾಗಲೆಲ್ಲಾ ಅವುಗಳನ್ನು ಪುನಃ replace ಮಾಡಲಾಗುತ್ತದೆ. replace ಆದ ವಸ್ತುಗಳು ಒಂದು ದಿನ ಖಾಲಿಯಾಗುತ್ತ  ಹೋಗುತ್ತವೆ. ಇದನ್ನು ಗಮನಿಸದೆ ದಿನ ಕಳೆಯುವ ನಾವುಗಳು ದೈಹಿಕವಾಗಿ (ಕೆಲವೊಮ್ಮೆ ಮಾನಸಿಕವಾಗಿ ) ಖಾಲಿಯಾಗುತ್ತ ಹೋಗುತ್ತೇವೆ. ಎಂಥ ವಿಚಿತ್ರವಿದು?"

ಹೆಚ್ಚಿನವರಲ್ಲಿ ಬರಹಗಾರ ಹುಟ್ಟುವುದೇ ಕಾಲೇಜಿಗೆ ಸೇರಿದ ಮೇಲೆ. ಅಂದರೆ ಹದಿನೇಳು ಹದಿನೆಂಟು ವರ್ಷ ವಯಸ್ಸಿನಲ್ಲಿ. ಅವರ ಬರಹ ಕಾಲೇಜಿನ ದಿನಗಳಲ್ಲಿ ನಿರಂತರವಾಗಿದ್ದರೆ ಪಿಯುಸಿ ಮುಗಿಸಿ ಡಿಗ್ರಿಯ ಕೊನೆಯ ವರ್ಷಕ್ಕೆ ಬರುತ್ತಿದ್ದಂತೆ ಅವರೊಳಗಿನ ಬರಹಗಾರನ ಬರಹಗಳಿಗೆ ಒಂದು ಪಕ್ವತೆ ಬಂದುಬಿಡುತ್ತದೆ. ಪ್ರೇಮ, ಪ್ರಯಣದಂತಹ ನವಿರಾದ ಭಾವಗಳು ಬದುಕಿನ ಸಿದ್ದಾಂತಗಳ ರೂಪು ಪಡೆಯುವುದೇ ಆ ವಯಸ್ಸಿನಲ್ಲಿ ಎನ್ನಬಹುದು. ಬರಹಗಾರನ ಬದುಕಿನ ಆ ಕಾಲಘಟ್ಟ ಅವನ ಬರಹದ ಬದುಕಿನ ಬುನಾದಿ ಸಹ ಎನ್ನಬಹುದು. ಕಾಲೇಜಿನ ದಿನಗಳು ಕಳೆಯುತ್ತಿದ್ದಂತೆ ಬರಹದ ದಿನಗಳು ಕಳೆದು ಹೋದಂತೆ ಅನಿಸಿ ಒಬ್ಬ ವ್ಯಕ್ತಿಯೊಳಗಿನ ಬರಹಗಾರ ಒಮ್ಮೊಮ್ಮೆ ಸದ್ದಿಲ್ಲದೆ ಮಾಯವಾದರೂ, 18 ರಿಂದ 22 ನೇ ವಯಸ್ಸಿನಲ್ಲಿ  ಬರಹಗಾರನಾಗಿ ತನಗೆ ತಾನೇ ಹಾಕಿಕೊಂಡಿರುವ ಬರಹದ ಬುನಾದಿಯ ಮೇಲೆ ತಳಹದಿಯ ಮೇಲೆ ಮುಂದೊಂದು ದಿನ ಒಬ್ಬ ಬರಹಗಾರ ಚಂದದ ಬರಹದ ಮಹಲ್ಲೊಂದನ್ನು ಕಟ್ಟಲು ಸಾಧ್ಯವಾಗುತ್ತದೆ. ಆ ಕಾರಣಕ್ಕೆ 18 ರಿಂದ 22 ನೇ ವಯಸ್ಸಿನ ಕಾಲಘಟ್ಟವಿದೆಯೆಲ್ಲಾ ಅದು ಬರಹಗಾರನ ಬದುಕಿನ ಬಹು ಮುಖ್ಯ ಪರ್ವ ಎನ್ನಬಹುದು. ಆ ವಯಸ್ಸಿನಲ್ಲಿ ಮೂಡುವ ಬರಹಗಳಲ್ಲಿರುವ ಒಂದು ನವಿರಾದ ಭಾವಗಳು ಬದುಕಿನ ಬಗೆಗಿನ ವಿಧ ವಿಧವಾದ ದೃಷ್ಟಿಕೋನಗಳು ಮೇಲಿನ ಬರಹದಲ್ಲಿ ಎದ್ದು ಕಾಣುತ್ತಿದೆಯಲ್ಲವೇ ಸಹೃದಯಿಗಳೇ...

"ಸಾವು ನಿಶ್ಚಿತ! ಎಲ್ಲರಿಗು ಬಂದೆ ಬರುತ್ತೆ, ಕೆಲವರ ಬದುಕಿನಲ್ಲಿ, ಅಪಘಾತವಾಗಿ, ಆತ್ಮಹತೆಯಾಗಿ, ಕಾಯಿಲೆ ಯಾಗಿ, ವಯಸ್ಸಾಗಿ, ವ್ಯಸನಿಯಾಗಿ, ಇನ್ಯಾವುದೋ ರೂಪದಲ್ಲಿ ಬರಬಹುದು, ತಾಯಿ ಗರ್ಭ ಕೋಶದಿಂದ ಹೊರಬರುವ ಮೊದಲೇ ಅದೆಷ್ಟೋ ಜೀವಗಳು ಕಣ್ಮುಚ್ಚಿಕೊಂಡಿರುತ್ತವೆ, ಇವೆಲ್ಲವನ್ನೂ ನೋಡಿ, , you are lucky enough to see the different colours of life for twenty long years! ಅಲ್ವಾ? ಸಾವು   inevitable ಡೆವಿಲ್, ನಾವದರ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ, ಆದರೆ ಬದುಕುವುದು, ಪ್ರತಿಕ್ಷಣವನ್ನು ಅನುಭವಿಸುವುದು ನಮ್ಮ ಕೈಲಿದೆ. ಸಾವಿಗೂ ನಮ್ಮ ಜೀವನ ಪ್ರೀತಿ ಕಂಡು ಹೆದರಿಕೆ ಆಗೋ ಹಾಗೆ ಇರೋ ಕೆಲವೇ ದಿವಸಗಳನ್ನು ಬದುಕಿ ಬಿಡಬೇಕು."

ಇಪ್ಪತ್ತು ವರ್ಷ ವಯಸ್ಸಿಗೆ ಇಷ್ಟೊಂದು ಫಿಲಾಸಫಿಯುಳ್ಳ ಸಾಲುಗಳನ್ನು ಯಾರು ಬರೆದಿದ್ದು ಎಂದು ಅಚ್ಚರಿಪಡಬೇಡಿ.. ಯಾವುದೋ ಒಂದು ಪುಟ್ಟ ಘಟನೆಯನ್ನೋ ಇಲ್ಲ ತನ್ನ ಭಾವವನ್ನೋ ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತೋ ಇಲ್ಲ ಕಾಲ್ಪನಿಕ ಪ್ರಪಂಚದಲ್ಲಿ ವಿಹರಿಸುತ್ತಲೋ ನಮಗೆ ವಿವರಿಸಿ ಹೇಳುವ ಕಲೆ ಬಲ್ಲ ಒಬ್ಬ ಚಂದದ ಯುವ ಬರಹಗಾರ್ತಿ ಇಂದಿನ ನಮ್ಮ ಎಲೆ ಮರೆ ಕಾಯಿ ಅತಿಥಿ.. ಇವತ್ತಿನ ಅತಿಥಿಯ ಹೆಸರು ಅಶ್ವಿನಿ ದಾಸರೆ.. ಮುಂದೊಂದು ದಿನ ಚಂದದ ಬರಹಗಾರ್ತಿಯಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಅಶ್ವಿನಿಯವರೊಂದಿಗೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಅಶ್ವಿನಿ ದಾಸರೆ

"ಅಶ್ವಿನಿ ದಾಸರೆ...ಊರು ಧಾರವಾಡ, ನಮ್ಮದು ಸಂಸ್ಕೃತಿಯ ನಗರಿ ಎಂದೇ ಖ್ಯಾತವಾದ ಊರು, ಇಲ್ಲಿ ಯಾರೇ ಬಂದು ಕಲ್ಲು ಎಸೆದರೂ ಅದು ಹೋಗಿ ಒಬ್ಬ ಸಾಹಿತಿಗೆ ತಗಲುತ್ತದೆ ಎಂಬ ಮಾತೊಂದಿದೆ, ಬೇಂದ್ರೆ, ಚನ್ನವೀರ ಕಣವಿ, ವಿ.ಕೃ. ಗೋಕಾಕ, ಗಿರೀಶ್ ಕಾರ್ನಾಡ್ ಮುಂತಾದ ಸಾಹಿತಿಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಧಾರವಾಡದ ಕೊಡುಗೆ ಅಪಾರವಾದದ್ದು. ನಾನು ಈಗ ಸಧ್ಯ ಬೆಂಗಳೂರಿನಲ್ಲಿ ಎಂಟೆಕ್ ವ್ಯಾಸಾಂಗ ಮಾಡುತ್ತಿದ್ದೇನೆ, ನನ್ನ ಕ್ಷೇತ್ರ ತಂತ್ರಜ್ನ್ಯಾನ ಆದರೂ ನನ್ನ ನೆಚ್ಚಿನ ಕ್ಷೇತ್ರ ಸಾಹಿತ್ಯ ಹಾಗೂ ಸಂಗೀತ. ಅಪ್ಪ ಕೂಡ ಉತ್ತಮ ಬರಹಗಾರರು ಆದರೆ ಅವರ ಬರವಣಿಗೆ ನಮ್ಮ ಪರಿವಾರಕ್ಕೆ ಮಾತ್ರ ಸೀಮಿತ ವಾಗಿದ್ದು, ಹಿಂದೂ ಪತ್ರಿಕೆಯಲ್ಲಿ ಅವಗೋ ಇವಾಗೋ ಒಮ್ಮೆ ಅವರ ಲೇಖನಗಳು ಪ್ರಕಟವಾಗುತ್ತವೆ. ಚಿಕ್ಕಂದಿನಿಂದ ಅಪ್ಪ ಓದುತ್ತಿರುವ ಅನೇಕ ಪುಸ್ತಕಗಳನ್ನು ಸುಮ್ಮನೆ ಗಮನಿಸುತ್ತಿದೆ, ಓದಬೇಕು ಅಂತ ಅನಿಸಿದರು ಅರ್ಥವಾಗದ ವಯಸ್ಸದು.. ಆದರೂ ಪಟ್ಟು ಬಿಡದೆ ನಾನು ೫ ನೆ ತರಗತಿಯಲ್ಲಿರುವಾಗಲೇ ಗೃಹಭಂಗ ಓದಿದೆ, ಪೂರ್ಣ ಪ್ರಮಾಣದಲ್ಲಿ ಅರ್ಥವಾಗಿತ್ತೋ ಇಲ್ಲೋ ಸರಿಯಾಗಿ ನೆನಪಿಲ್ಲ ಆವಾಗಿಂದ ಬಿಟ್ಟು ಬಿಡದೆ ಭೈರಪ್ಪನವರ ಎಲ್ಲ ಕಾದಂಬರಿಗಳನ್ನ ಓದಲು ಶುರು ಮಾಡಿದೆ.

ಓದು ನಿರಂತರ ಇದ್ದೆ ಇತ್ತು, ಆದರೆ ಯಾವಾಗಲಾದರು ಬರೆಯವ ಪ್ರಯತ್ನ ಏನು ಮಾಡಿರಲಿಲ್ಲ, ನಾನು ೧೦ನೆ ತರಗತಿ ಮುಗಿಸುವ ಹೊತ್ತಿಗೆ, ಮತ್ತೆ ಮೀಸಲಾತಿಯ ಮೇಲೆ ಪಿಯುಸಿ ಪ್ರವೇಶಕ್ಕೂ ಕೆಲ ನಿಯಮ ರೂಪಿಸಲು ಮುಂದಾಗಿದ್ದ ಸರ್ಕಾರದ ವಿರುದ್ಧ ವಿಜಯ ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿ ವಾಚಕರ ವಿಜಯ ಅಂಕಣದಲ್ಲಿ ನನ್ನ ಪತ್ರ ಪ್ರಕಟವಾಗಿತ್ತು, ಅದಾದ ನಂತರ ಶಿಕ್ಷಕರ ದಿನಾಚರಣೆ ಅಂಗವಾಗಿ, ಮತ್ತೆ ಭೈರಪ್ಪನವರ ಕವಲು ಕುರಿತಾಗಿ ಚರ್ಚೆ ಅಂಕಣದಲ್ಲಿ ಪ್ರಕಟವಾದವು... ಪ್ರತಿ ಬಾರಿ ಬರೆದ ಲೇಖನಗಳು ಪ್ರಕಟವಾಗೊವರೆಗೂ ಕಾಯುವಷ್ಟು ಸಹನೆ ಇಲ್ಲದಿದ್ದರಿಂದ, ಬರೆಯೋದನ್ನ ನಿಲ್ಲ್ಲಿಸಿದ್ದೆ, ಹೀಗೆ ಒಂದು ದಿನ ಶ್ರೀವತ್ಸ ಜೋಷಿಯವರು ಫೇಸ್ ಬುಕ್ಕಿನಲ್ಲಿ ಸಿಕ್ಕಾಗ, ಬ್ಲಾಗ್ ಶುರು ಮಾಡುವಂತೆ ಸೂಚಿಸಿದರು, ಮೊದಲಿಗೆ ಆ ಬಗ್ಗೆ ಅಷ್ಟೇನೂ ಆಸಕ್ತಿ ತೋರದ ನಾನು ಆಮೇಲೆ ಒಂದು ಪ್ರಯತ್ನ ಮಾಡಿಯೇ ಬಿಡೋಣ ಅಂತ ಪ್ರಯತ್ನಿಸಿದೆ...ಮೊದಲಿಗೆ ಇಂಗ್ಲಿಷ್ನಲ್ಲಿ ಒಂದೆರಡು ಲೇಖನಗಳನ್ನು ಬರೆದೆ, ಆಮೇಲೆ ಯಾರೋ ಸ್ನೇಹಿತರು ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದರು, ನಂತರ ಕನ್ನಡದಲ್ಲಿ ಬರೆದ ಲೇಖನಗಳನ್ನು ಮೆಚ್ಚಿ ಪ್ರಕಾಶ್ ಹೆಗ್ಡೆ ಯವರು buzz ಮಾಡಿ, ಅವರ ಅನೇಕ ಫಾಲ್ಲೋವರ್ಸ್ಗಳಿಗೆ ನನ್ನ ಬ್ಲಾಗ್ ಪರಿಚಯಿಸಿ ಕೊಟ್ಟರು, ತದ ನಂತರ ಸಂಪಾದಕೀಯ ಬ್ಲಾಗ್ನಲ್ಲಿ ನಿರಂತರ ಚರ್ಚೆಯ ಕೇಂದ್ರ ಬಿಂದುವಾಗಿ ನಾನು ಹಾಕುತ್ತಿದ್ದ ಕಾಮೆಂಟ್ಸ್ ಗಳನ್ನೂ ನೋಡಿ ನನ್ನ ಬ್ಲಾಗ್ ಗೆ ಬಂದ ಸ್ನೇಹಿತರು ಅನೇಕ, ಹೀಗೆ ನನ್ನ ಬ್ಲಾಗ್ ಬೆಳೆದ ರೀತಿ.

ಪತ್ರಕರ್ತೆ ಯಾಗಬೇಕು ಎಂದು ಕನಸು ಕಂಡು ಕಡೆಗೆ ಇಂಜಿನಿಯರಿಂಗ್ ಓದೋ ಹಾಗಾಗಿ, ಕಡೆಗೆ ಈಗ ಎಂಟೆಕ್ ಅಂತಿಮ ವರ್ಷದ ವಿದ್ಯಾರ್ಥಿನಿ ಆಗಿರುವ ನನಗೆ, ತೇಜಸ್ವಿ, ನೆಚ್ಚಿನ ಲೇಖಕ, ಪತ್ರಕರ್ತೆಯಾಗುವ ಕನಸು ಕಂಡ ನಂಗೆ ಈಗ, ಆ ಕ್ಷೇತ್ರದಲ್ಲಾಗುತ್ತಿರುವ ಅನಾಹುತಕಾರಿ ಬೆಳವಣಿಗೆಗಳನ್ನು ಕಂಡು ಬೇಜಾರಾಗಿದೆ, ನಾನು ಹೀಗೆ ನನ್ನ ಹವ್ಯಾಸವಾಗಿ ಲೇಖನಗಳನ್ನು ಬರೆದು ಕೊಂಡು, ಇರ ಬಯಸುತ್ತೇನೆ. ಬರೆದದೆಲ್ಲವು ಓದಲು ಸಮಯವಿಲ್ಲ ನಿಜ ಆದರೆ, ನಿಜವಾಗಿಯೂ ಒಂದು ಚೆಂದದ ಲೇಖನ ಬರೆದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಅನೇಕ ಓದುಗರಿಗೆ ನಾನು ಚಿರ ಋಣಿ . ನಿಮ್ಮೆಲ್ಲರ ಪ್ರೀತಿ, ಹಾರೈಕೆ, ಮೆಚ್ಹುಗೆ ನನಗೆ ಸದಾ ಸ್ಫೂರ್ತಿ :)

ನನ್ನ ಬಗ್ಗೆ ಹೆಚ್ಚಿನದೇನೂ ಹೇಳುವಂಥದಿಲ್ಲ, ಸಾಮಾನ್ಯ ಹುಡುಗಿಯಂತೆ, ಕಂಗಳ ತುಂಬ ಕನಸು ಕಟ್ಟಿಕೊಂಡು, ಏನಾದರೂ ವಿಶಿಷ್ಟ ಅಭಿರುಚಿಯಿಂದ ದಿನವು ಹೊಸದನ್ನು ಕಲಿಯುವ ತವಕದಲ್ಲಿರುವ ನನಗೆ ನನ್ನ ಪಾಲಕರೇ ಮೊದಲ ಶಕ್ತಿ, ನನ್ನ ಪ್ರತಿ ಬೆಳವಣಿಗೆಯನ್ನು ಮೊದಲ ಯಶಸ್ಸು ಎನ್ನುವಂತೆ ಪ್ರೋತ್ಸಾಹಿಸುವ, ಪ್ರತಿ ಸೋಲಿನಲ್ಲು ನನ್ನ ಧೈರ್ಯ, ಆತ್ಮ ಸ್ಥೈರ್ಯ, ಹಾಗೂ ನನ್ನ ಪ್ರೇರಣೆ ಆಗಿರುವ ನನ್ನ ಅಪ್ಪ-ಅಮ್ಮ ನನ್ನ ಪಾಲಿಗೆ ಜೀವಂತ ದೈವಿ ಸ್ವರೂಪರು. ಅವರ ಮಗಳಾಗಿ ಹುಟ್ಟಿರುವುದು ನನ್ನ ಅದೃಷ್ಟ :)

ಕನ್ನಡ ಬ್ಲಾಗ್ ನ ಎಲ್ಲ ಕನ್ನಡ ಪ್ರೇಮಿಗಳಿಗೆ, ಮತ್ತು ಬ್ಲಾಗಿಗರಿಗೆ ಒಂದು ಉತ್ತಮ ವೇದಿಕೆಯಾಗಿದ್ದು, ನಟರಾಜು ಅವರು ಎಲೆ ಮರೆ ಕಾಯಿಗಳನ್ನು ಪರಿಚಯಿಸುವ ನಿರಂತರ ಪ್ರಯತ್ನದಲ್ಲಿರುವುದು ಶ್ಲಾಘನೀಯ. ನಿಮ್ಮ ಪ್ರಯತ್ನ ಹೀಗೆ ಜಾರಿಯಲ್ಲಿರಲಿ ಸರ್.
ಪ್ರೀತಿಯಿಂದ,
ಅಶ್ವಿನಿ ದಾಸರೆ"

ಎಂದು ಮಾತು ಮುಗಿಸಿದ ಅಶ್ವಿನಿಯವರ ಮಾತುಗಳು ನಿಮಗೆ ಇಷ್ಟವಾಯಿತೆಂದು ನಾನು ಭಾವಿಸುತ್ತೇನೆ.. ಅವರ ಬರಹಗಳಿರುವ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ..ನಿಮಗೆ ಅವರ ಬ್ಲಾಗ್ ಇಷ್ಟವಾಗಬಹುದು. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ ಫ್ರೆಂಡ್ಸ್..
http://antarmukhi-ashu.blogspot.in/

ಅಶ್ವಿನಿಯವರ ಬರಹಗಳ ಕುರಿತು ಅವರ ಬ್ಲಾಗಿನಲ್ಲಿ ಕಂಡು ಬಂದ ಓದುಗರ ಒಂದೆರಡು ಪ್ರತಿಕ್ರಿಯೆಗಳು ಇಗೋ ನಿಮಗಾಗಿ..

ಬರಿ, ಆದರೆ ಬರವಣಿಗೆ ಬಯಸುವ ಏಕಾಗ್ರತೆಯನ್ನು ಸಾಧಿಸಲು ಯತ್ನಿಸು. ಏನು ಬರೆಯಬೇಕೆಂಬುದನ್ನು ಕೊಂಚ ಧ್ಯಾನಿಸಿ ಮನಸಿನಲ್ಲೇ ಅದಕ್ಕೊಂದು ರೂಪ ಕೊಟ್ಟು ಅಕ್ಷರಗಳಿಗಿಳಿಸಿದಾಗ ಅದಕ್ಕೊಂದು ಬೇರೆಯದೇ ಆದ ಶಕ್ತಿ ಇರುತ್ತದೆ.-ಅಶೋಕ್ ಶೆಟ್ಟರ್

ನಿಮ್ಮ ಉಳಿದ ಬರಹಗಳನ್ನೂ ಓದುವ ಆಸೆ,
ಆದರೆ ಸಮಯ ಓಡುತ್ತಿದೆ, ಓದಗೊಡದಂತೆ
ನಾನು ನಾನಾಗೇ ಓಡುವಾಗ ಓದೀಯೇನು... -ರಘುನಂದನ ಕೆ. ಹೆಗಡೆ

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು

ಶುಕ್ರವಾರ, ಅಕ್ಟೋಬರ್ 19, 2012


ಎಲೆ ಮರೆ ಕಾಯಿ ೬೧
ಹಳೆಯ ಪತ್ರಗಳನ್ನೆಲ್ಲ
ಸಿಕ್ಕಿಸಿದ್ದ, ತಂತಿಯನ್ನು
ಬಿಸಾಡುವ ಮುನ್ನ
ಒಂದು ಪತ್ರ ಓದಿದೆ
ಬಾವ, ಅಕ್ಕನಿಗೆ ಬರೆದಿದ್ದು
"ನೀನು ನಾಳೆ ಬರದಿದ್ದರೆ
ಅಲ್ಲಿಯೇ ಇರಬಹುದು. ನನ್ನ ಮನೆಯ 
ಬಾಗಿಲು ಮುಚ್ಚಿದಂತೆ. ಹಣ ಇಲ್ಲದಿದ್ದರೆ
ನಿನ್ನ ಹೆಣ"
ಅಕ್ಕ ಈಗಿಲ್ಲ
ಬಾವನಿಗೆ ಇನ್ನೊಂದು ಮದುವೆಯಾಗಿದೆ

ಪ್ರೇಮ, ಸಂಸಾರ, ದೇವರು, ರಾಜಕೀಯ ಇವುಗಳ ಸುತ್ತ ಜನ ಗಿರಕಿ ಹೊಡೆಯುವ ಹಾಗೆ ಕೆಲವು ಬರಹಗಾರರ ಲೇಖನಗಳು ಕವಿತೆಗಳು ಇವುಗಳ ಸುತ್ತ ಗಿರಕಿ ಹೊಡೆಯುತ್ತವೆ. ಒಂದು ನಿರ್ದಿಷ್ಟ ಕಕ್ಷೆಯಲ್ಲೇ ಚಲಿಸುವಂತೆ ಆಣತಿ ಪಡೆದವರಂತೆ ಅಂತಹ ಬರಹಗಾರರು ಒಂದು ಪರಿಧಿಯನ್ನು ತಮ್ಮೊಳಗೆ ಕಟ್ಟಿಕೊಂಡು ತಮಗೆ ಗೊತ್ತಿಲ್ಲದೆ ಬಂಧಿತರಾಗಿಬಿಡುತ್ತಾರೆ. ಆ ಗಿರಕಿ ಹೊಡೆಯುವ ಕಕ್ಷೆಗಳು ಚಿಕ್ಕದಾದಷ್ಟು ಅವರ ಕವನಗಳು ಬರಹಗಳು ಏಕತಾನತೆಗೆ ಒಳಗಾಗಿ ಕ್ರಮೇಣ ಓದುಗರಿಗೆ ನೀರಸವೆನಿಸತೊಡಗುತ್ತವೆ. ತಮ್ಮ ಪರಿಧಿಯನ್ನು ಬಿಟ್ಟು ಹೊರ ಹಾರುವ ಸಾಮರ್ಥ್ಯ ಉಳ್ಳವರು ಒಂದು ಕಕ್ಷೆಯಿಂದ ಮತ್ತೊಂದು ಕಕ್ಷೆಗೆ ಜಿಗಿದು ಮತ್ತೊಂದು ಪರಿಧಿ ತಲುಪಿ ಅದರೊಳಗಿನ ಪ್ರಪಂಚವನ್ನು ನಮ್ಮೆದುರಿಗೆ ಬಿಚ್ಚಿಡುತ್ತಾ ಹೋಗುತ್ತಾರೆ. ಬಹುಶಃ ಉತ್ತಮ ಮತ್ತು ಶ್ರೇಷ್ಠ ಎನಿಸುವಂತಹ ವೈವಿಧ್ಯತೆಗಳಿಂದ ಕೂಡಿದ ಬರಹಗಳು ಕವಿತೆಗಳು ಮೂಡುವುದು ಅಂತಹವರಿಂದಲೇ ಎನಿಸುತ್ತೆ. ಶ್ರೇಷ್ಠ ಎನಿಸುವಂತಹುದನ್ನು ಅವರು ಎಲ್ಲಾ ಸಮಯದಲ್ಲೂ ಪದೇ ಪದೇ ಕಟ್ಟುವಲ್ಲಿ ವಿಫಲರಾದರೂ ಗುಣಮಟ್ಟದಲ್ಲಿ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳ ಬಲ್ಲವರು ಮಾತ್ರ ಎಲ್ಲೆಡೆ ಸಲ್ಲುತ್ತಲೇ ಹೋಗುತ್ತಾರೆ. ಮೇಲಿನ ಸಾಲುಗಳನ್ನು ಓದುತ್ತಲೇ ಹೀಗೊಂದು ಭಾವನಾ ಲಹರಿಗೆ ನಾನು ಒಳಗಾಗಲು ಕಾರಣಗಳಿವೆ. ಯಾಕೆಂದರೆ ಅಷ್ಟು ಗಂಭೀರವಾದ ಕವಿತೆಯಂತೆ ಕಾಣುವ ಮೇಲಿನ ಮನ ಮುಟ್ಟುವ ಕವಿತೆಯ ಬರೆಯುವ ನಮ್ಮ ಈ ಕವಿ ಸಹೋದರ ಗಂಭೀರವಾದ ಬರಹಗಾರ ಎಂದು ನಾವಂದುಕೊಂಡರೆ ನಮ್ಮ ಊಹೆಯನ್ನು ಸುಳ್ಳು ಮಾಡಲೆಂದು ಈ ಕೆಳಗಿನ ಬರಹದಂತಹ ಬರಹಗಳನ್ನು ಬರೆದುಬಿಡುತ್ತಾರೆ..
"ಭಾನುವಾರ ಬೆಳಗ್ಗೆ ಹತ್ತು ಗಂಟೆಗೆಲ್ಲಾ ಮುದ್ದೆ, ಬಸ್ಸಾರು ಉಂಡು ಟೀ .ವಿ. ಮುಂದೆ ತೂಕಡಿಸುತ್ತಿದ್ದ ಕಿರಿಕ್ ಕಿಸ್ನಮೂರ್ತಿ. ಟೀ .ವಿ ಯಲ್ಲಿ  "ಜುರಾಸಿಕ್ ಪಾರ್ಕ್" ಚಲನ ಚಿತ್ರ ಬರುತ್ತಿತ್ತು. ಕಿರಿಕ್ ಕಿಸ್ನಮೂರ್ತಿಗೆ ಅರೆಬರೆ ಎಚ್ಚರ. ಡೈನೊಸರಸ್ ಬೇಲಿಯಿಂದ ಆಚೆ ಬಂದು ಒಬ್ಬನನ್ನು ತಿಂದು ಹಾಕಿದ ಮೇಲೆ ಮತ್ತೆ ಬರುವ ಸದ್ದು. ಭೂಮಿ ಗಡಗಡ. ನಿಂತ ನೀರು ಅಲ್ಲಾಡುತ್ತಿತ್ತು. "ಡಮ್", "ಡಮ್" ಎನ್ನುವ ಶಬ್ದ, ಡೈನೊಸರಸ್ ಪ್ರತ್ಯಕ್ಷವಾಗಿ  "ಕೀಈಈಈಈಈಈಈಈಈ" ಎಂದು ಕಿರಿಚಿಕೊಳ್ಳುತ್ತಿದೆ, ಎಮ್ಮೆಗಳ ಕೂಗು, ನಾಯಿಗಳ ಬೊಗಳುವಿಕೆ, ನಿಜವಾಗಿ ಮನೆಯಲ್ಲಾ, ಭೂಮಿಯಲ್ಲಾ ನಡುಗಿದ ಹಾಗೆ, ಪ್ರಳಯವೊ, ಭೂಕಂಪವೊ ಆದಂತೆ  ಆಯಿತು. ಕೀರಿಕ್ ಕಿಸ್ನಮೂರ್ತಿಗೆ ಎಚ್ಚರವಾಗಿ ಭಯಗೊಂಡು "ಇದೇನು. ಜುರಾಸಿಕ್ ಪಾರ್ಕ್ ನಲ್ಲಿ ನಾಯಿಗಳು, ಎಮ್ಮೆಗಳೂ ಇಲ್ಲ ಶಬ್ದ ಮಾತ್ರ ಬರ್ತಾ ಇದೆಯಲ್ಲ," ಎಂದು ಕೊಂಡು  ವಾಲ್ಯೂಮ್ ಕಡಿಮೆ ಮಾಡಿದ ಆದರೂ ನಾಯಿಗಳು ಬೊಗಳುತ್ತಲೆ ಇದ್ದವು, ಎಮ್ಮೆಗಳು ಕೂಗುತ್ತಿದ್ದವು." 

ಮೇಲೆ ಕಂಡ ಕವಿತೆಯಲ್ಲಿ ಕಾಣುವ ಈ ಕವಿಯ ಗಂಭೀರ ಭಾವ ಮೇಲಿನ ಸಾಲಿನ ಲೇಖನದಲ್ಲಿ ಕಣ್ಮರೆಯಾದುದು ಹೇಗೆ ಎಂದು ಯೋಚಿಸಿದರೆ, ಒಂದು ಗಂಭೀರ ಭಾವದ ಕಕ್ಷೆಯಿಂದ ಹಾಸ್ಯದ ತುಂಟಾಟದ ಭಾವದ ಕಕ್ಷೆಗೆ ಜಿಗಿಯುವುದು ಈ ಕವಿಗೆ ಬರಹಗಾರನಿಗೆ ನೀರು ಕುಡಿದಷ್ಟೇ ಸಲೀಸು ಅನಿಸುತ್ತೆ.  ನಮ್ಮದೇ ಕನ್ನಡ ಚಿತ್ರರಂಗದಲ್ಲಿ ಒಮ್ಮೆ ಸಾಲು ಸಾಲು ಚಿತ್ರಗಳಲ್ಲಿ ಕಣ್ಣೀರ ಕೋಡಿಯನ್ನು ಹರಿಸುವ ಪಾತ್ರದಲ್ಲಿ ಕಾಣಿಸಿಕೊಂಡ ಚಿತ್ರನಟಿಯೊಬ್ಬರು ತಮ್ಮ ಕಣ್ಣೀರಿನ ಕಕ್ಷೆಯಿಂದ ಜಿಗಿದು ಹಾಸ್ಯ ಪ್ರಧಾನ ಚಿತ್ರಗಳಲ್ಲಿ ನಟಿಸಲು ಕಲಿತಿದ್ದು ಈಗ ಇತಿಹಾಸ. ತನ್ನ ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಒಂದು ಹಣೆಪಟ್ಟಿ ಪಡೆಯದೆ ಕಣ್ಣೀರು ಮತ್ತು ಹಾಸ್ಯ ಎರಡನ್ನೂ ನಿಭಾಯಿಸುವಂತಹ ಪಾತ್ರಗಳನ್ನು ಮಾಡಿದ್ದರೆ ಬಹುಶಃ ಆ ನಟಿ ಜನರ ಮನದಲ್ಲಿ ಇನ್ನೂ ಹೆಚ್ಚು ಕಾಲ ನಿಂತು ಬಿಡುತ್ತಿದ್ದರೇನೋ.. ಹಾಗೆ ನಮ್ಮ ಕವಿ ಸಹೋದರ ತಮ್ಮ ಸಾಹಿತ್ಯ ಕೃಷಿಯ ಮೊದಲ ದಿನಗಳಲ್ಲೇ ಒಂದೆಡೆ ಗಂಭೀರ ಮತ್ತೊಂಡೆಗೆ ಹಾಸ್ಯದ ಶೈಲಿಗಳಲ್ಲಿ ಕವಿತೆ ಮತ್ತು ಬರಹ ಎರಡೂ ಪ್ರಕಾರಗಳಲ್ಲಿ ಕೈಯಾಡಿಸುತ್ತಿದ್ದಾರೆ.  ಈ ಎರಡೂ ಪ್ರಕಾರಗಳು ಇವರಿಗೆ ಒಲಿಯುತ್ತಿರುವುದು ಒಲಿದಿರುವುದು ನಮ್ಮಂತಹ ಓದುಗರಿಗೆ ನಿಜಕ್ಕೂ ಖುಷಿಯ ಸಂಗತಿ.

ಚಿಕ್ಕದಾಗಿ, 
ಕವಿತೆಯಾಗು ಎಂದೆ, 
ಕತೆಯಾಗುತ್ತೇನೆ  ಎಂದಳು,
ಕತೆಯನ್ನು ಇಟ್ಟುಕೊಂಡು ಧಾರವಾಹಿ ಮಾಡುತ್ತಿದ್ದೇನೆ, 
ಕವಿತೆಗೆ ಬೇರೆಯವಳನ್ನು ಹುಡುಕುತ್ತಿದ್ದೇನೆ

ಮೇಲಿನ ಸಾಲುಗಳ ನೋಡಿ ಒಮ್ಮೆ ನಕ್ಕುಬಿಡಬೇಕು ಅನಿಸುತ್ತದಲ್ಲವೇ ಗೆಳೆಯರೇ.. ಹೀಗೆ ಒಮ್ಮೆ ನಗುವನ್ನು ಮತ್ತೊಮ್ಮೆ ಗಂಭೀರ ಮುಖ ಭಾವವನ್ನು ನಮ್ಮಲ್ಲಿ ಉಂಟು ಮೂಡುವಂತೆ ತನ್ನ ಕವಿತೆಗಳಿಗೆ ಹಾಸ್ಯ ಬರಹಗಳಿಗೆ ಆಣತಿಯಿತ್ತು ಕುಳಿತ್ತಲ್ಲಿಯೇ ಕಳ್ಳ ನಗೆ ಬೀರುವ ನಮ್ಮ ನಡುವಿನ ಬರಹಗಾರರ ಹೆಸರು ತುಂಟು ಕೃಷ್ಣ. ಇವರು ಬರೀ ತುಂಟಾಟ ಆಡೋದಿಲ್ಲ ಜೊತೆಗೆ ಕಿರಿಕ್ ಸಹ ಮಾಡುತ್ತಾರೆ. ಅದಕ್ಕೆ ಇವರ ಅಭಿಮಾನಗಳ ಕಣ್ಣಿನಲ್ಲಿ ಇವರು ಕಿರಿಕ್ ಕಿಸ್ನಣ್ಣ, ಈ ವಾರದ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ನಮ್ಮ ಕಿರಿಕ್ ಕಿಸ್ನಣ್ಣ ಅವರ ನಿಜವಾದ ಹೆಸರು ಕೃಷ್ಣಮೂರ್ತಿ.. ಕಿಸ್ನಣ್ಣನೊಡನೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ತುಂಟು ಕೃಷ್ಣ

"ನನ್ನ ಬಗ್ಗೆ ಬರೆದು ಕಳಿಸಿ ಎಂದು ನಟರಾಜ್ ಕೇಳಿದಾಗ ನನಗೆ ತುಂಬಾ ಸಂಕೋಚವಾಯಿತು. ಯಾಕೆಂದರೆ ನಾನು ಬರೆದಿರುವುದು ತುಂಬಾ ಕಡಿಮೆ ಅದರಲ್ಲಿ ಮೆಚ್ಚಿಗೆ ಪಡೆದ ಕವಿತೆಗಳು ಒಂದೋ, ಎರಡೋ, ಆದರೂ ನಟರಾಜ್ ಅವರ ಒತ್ತಾಯಕ್ಕೆ ಬರೆಯುತ್ತಿದ್ದೇನೆ.

ನಾನು ಹುಟ್ಟಿದ್ದು , ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ, ನನ್ನ ತಂದೆ ಸರ್ಕಾರಿ ಶಾಲೆಯ ಉಪಾದ್ಯಾಯರಾಗಿದ್ದರು. ವರ್ಗಾವಣೆ ಆದ ಕಡೆ ಒಬ್ಬರೇ ಹೋಗುತ್ತಿದ್ದರು, ನಮ್ಮಗಳ ವಿದ್ಯಾಬ್ಯಾಸಕ್ಕೆ ತೊಂದರೆ ಆಗುತ್ತದೆ ಎಂದು ಕರೆದುಕೊಂಡು ಹೋಗುತ್ತಿರಲಿಲ್ಲ. ಹಾಗಾಗಿ ಅಮ್ಮನೇ ಎಲ್ಲಾ. ನಮ್ಮ ಅಜ್ಜಿಗೆ ಮಧ್ಯಾಹ್ನದ ಸಮಯದಲ್ಲಿ ಅಮ್ಮ ಕಥೆ ಓದುತ್ತಿದ್ದರು. ಅನುಪಮ ನಿರಂಜನ, ಭೈರಪ್ಪ, ಕಾರಂತರು, ತ.ರಾ.ಸು, ತ್ರಿವೇಣಿ, ಎಂ.ಕೆ.ಇಂದಿರಾ, ಕುವೆಂಪು, ಇವರ ಕಥೆ ಗಳನ್ನು ಕೇಳಿ ಆನಂದಿಸುತ್ತಿದ್ದೆ. ಹೈಸ್ಕೂಲು ತಲುಪಿದಾಗ ಪತ್ತೇದಾರಿ ಕಾದಂಬರಿಗಳು, ಟಿ.ಕೆ. ರಾಮರಾವ್, ಎನ್. ನರಸಿಂಹಯ್ಯ ಮುಂತಾದವರು, ಪಾಠ ದಲ್ಲಿ ಬಂದ ಪದ್ಯ, ಕವಿತೆ, ಕಾವ್ಯದ ತುಣುಕು ಬಿಟ್ಟರೆ ಅದರ ತಂಟೆಗೆ ಹೋಗಿರಲಿಲ್ಲ. ಓದು ತುಂಬಾ ಹುಚ್ಚು..

ಫೇಸ್ ಬುಕ್ಕಿನಲ್ಲೇ ಕನ್ನಡವೇ ಸತ್ಯ ಗುಂಪಿನಲ್ಲಿ ನಾನು ಮೊದಲು ಕವಿತೆ ಬರೆದಿದ್ದು. ನನ್ನ ಮೊದಲ ಕವಿತೆ "ಅಮ್ಮ ಸತ್ತಾಗ ಅಳಲಿಲ್ಲ "

ಅಮ್ಮ ಸತ್ತಾಗ ಅಳಲಿಲ್ಲ
ಅವಳನ್ನೆತ್ತಿ ಚಟ್ಟದ ಮೇಲಿಟ್ಟಾಗಲೂ ಅಳಲಿಲ್ಲ
ಹೂಹಾರಗಳನ್ನೆಲ್ಲಾ ಎತ್ತಿ ಎಸೆದಾಗಲೂ ಅಳಲಿಲ್ಲ
ಆದರೆ ಅವಳ ಪ್ರದಕ್ಷಣೆ ಮಾಡಿ
ಪಾದಕ್ಕೆ ನಮಸ್ಕರಿಸುವಾಗ
ಅವಳ ಒಡೆದು ಹೋದ ಪಾದಗಳಿಂದ
ಒಸರಿದ್ದ ರಕ್ತದ ಹನಿಗಳನ್ನು ಕಂಡು
ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ

ಕನ್ನಡ ಬ್ಲಾಗ್, ನಿಲುಮೆ, ಭಾವುಕ ಮನಸ್ಸುಗಳ ವೇದಿಕೆ, ಕಥೆ ಕವನ ಕಾಲಹರಣ, ಮುಂತಾದ ಬ್ಲಾಗುಗಳಲ್ಲಿ ನನ್ನ ಕವಿತೆ ಹಾಕುತ್ತಿದ್ದೆ. ಕಾಗುಣಿತದ ತಪ್ಪುಗಳಿಂದ ಭಯಪಟ್ಟು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ, ಕನ್ನಡ ಬ್ಲಾಗಿನ ಶ್ರೀಯುತ ಪುಷ್ಪರಾಜ್ ಚೌಟ ನನ್ನ ತಪ್ಪುಗಳನ್ನು ತಿದ್ದಿ, ದಾರಿಗೆ ತಂದಿದ್ದಾರೆ, ಕೆಲವೊಮ್ಮೆ ಕಟುವಾಗಿ ಟೀಕಿಸಿದ್ದಾರೆ, ಅವರಿಗೆ ನನ್ನ ವಂದನೆಗಳು. ಅವರಂತೆ ಶ್ರೀಯುತ ಶ್ರೀಯುತ ಮೋಹನ್. ವಿ.ಕೊಳ್ಳೇಗಾಲ, ರವಿ ಮೊರ್ನಾಡ, ರವಿ ತಿರುಮಲೈ ಅಣ್ಣ, ಮುಂತಾದ ಅನೇಕರು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅವರಿಗೆಲ್ಲ ನನ್ನ ಪ್ರಣಾಮಗಳು. ನನ್ನನ್ನು ಮಾತನಾಡಿಸಿ ನನ್ನಲ್ಲಿರುವ ಸಾಹಿತ್ಯದ, ಸ್ನೇಹದ, ಕೀಳರಿಮೆಯನ್ನು ಸ್ವಲ್ಪವಾದರೂ ಕಡಿಮೆ ಮಾಡಿದ ತಮಗೂ ಮತ್ತು ಫೇಸ್ ಬುಕ್ಕಿನ ಅನೇಕ ಸ್ನೇಹಿತರಿಗೆ ನನ್ನ ಅನಂತಾನಂತ ಧನ್ಯವಾಧಗಳು. ."

ಎಂದು ಮಾತು ಮುಗಿಸಿದ ನಮ್ಮ ಕಿರಿಕ್ ಕಿಸ್ನಣ್ಣನ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗಿನ ಲಿಂಕ್ ಕೆಳಗೆ ನೀಡಿರುವೆ. ಕಿಸ್ನಣ್ಣ ಹೇಳುವಂತೆ ಟೈಪಿಂಗ್ ಮಾಡುವಾಗ ಅಲ್ಲಲ್ಲಿ ಕಾಗುಣಿತ ದೋಷಗಳಿದ್ದರೆ ಕಿಸ್ನಣ್ಣನನ್ನು ಕ್ಷಮಿಸಿಬಿಡಿ.. :)

ಕಿಸ್ನಣ್ಣನ ಬ್ಲಾಗಿನ ಹೆಸರು ಹಂಸಗೀತೆ..

http://hamasageethe.blogspot.in

ಕಿಸ್ನಣ್ಣನ ಒಂದೆರಡು ಕವಿತೆಯ ಸಾಲುಗಳು ಇಗೋ ನಿಮಗಾಗಿ ಗೆಳೆಯರೇ..

ಅಂದು, 
ನನಗೆ ಹೆಸರಿಡುವಾಗ ಅಪ್ಪ ನನಗೆ ಕಿವಿಯಲ್ಲಿ
ಮೂರು ಬಾರಿ ನನ್ನ ಹೆಸರು ಹೇಳಿದ್ದರು
ನನಗೆ ಕೇಳಿರಲಿಲ್ಲ 
ಇಂದು
ಮೃತ ಅಪ್ಪನ ಕಿವಿಯಲ್ಲಿ ನಾನು ಮೂರು ಬಾರಿ
ನಾರಾಯಣ, ಎಂದು ಹೇಳಿದೆ
ಅವರಿಗೂ ಕೇಳಲಿಲ್ಲ
ಅಂದು ಆರಂಭ,
ಇಂದು ಅಂತ್ಯ
*****
ಶಕುಂತಲೆಗೆ, ದುಷ್ಯಂತ ಉಂಗುರ ಕೊಟ್ಟು ಹೇಳಿದ
ನನ್ನನ್ನು ಮರೆಯಬೇಡ. 
ನಾನೂ, ಅವಳಿಗೆ ಉಂಗುರ ಕೊಟ್ಟು ಹೇಳಿದೆ
ನನ್ನನ್ನು ಮರೆತುಬಿಡು. 
ಶಕುಂತಲೆಯ ಉಂಗುರ ಸಿಕ್ಕಿತು ಮೀನಿನ ಹೊಟ್ಟೆಯಲ್ಲಿ
ನನ್ನ ಉಂಗುರ ಸಿಕ್ಕಿತು ಗೆಳೆಯನ  ಬೆರಳಿನಲ್ಲಿ
ದುಷ್ಯಂತನಿಗೆ ಶಕುಂತಲೆಯ ನೆನಪಾಯಿತು
ಮಗನನ್ನು ನೋಡಿ
ನನಗೂ ನನ್ನ ಗೆಳೆಯನಿಗೂ ಜಗಳ ಆಯಿತು
ಅವಳ ಮಗನನ್ನು ನೋಡಿ ....
*****
ಹಳೆಯ ಪತ್ರಗಳನ್ನೆಲ್ಲ
ಸಿಕ್ಕಿಸಿದ್ದ, ತಂತಿಯನ್ನು
ಬಿಸಾಡುವ ಮುನ್ನ
ಒಂದು ಪತ್ರ ಓದಿದೆ
ಬಾವ, ಅಕ್ಕನಿಗೆ ಬರೆದಿದ್ದು
"ನೀನು ನಾಳೆ ಬರದಿದ್ದರೆ
ಅಲ್ಲಿಯೇ ಇರಬಹುದು. ನನ್ನ ಮನೆಯ 
ಬಾಗಿಲು ಮುಚ್ಚಿದಂತೆ. ಹಣ ಇಲ್ಲದಿದ್ದರೆ
ನಿನ್ನ ಹೆಣ"
ಅಕ್ಕ ಈಗಿಲ್ಲ
ಬಾವನಿಗೆ ಇನ್ನೊಂದು ಮದುವೆಯಾಗಿದೆ
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಅಕ್ಟೋಬರ್ 11, 2012


ಎಲೆ ಮರೆ ಕಾಯಿ   
ಆನೆ ಅಂದದ ಮೊಗನೆ ಹರಸೆಮ್ಮ ಹೇರಂಬ
ಜಗದೊಳು ಸಕಲವು ನಿನ್ನಿಂದಲಾರಂಭ
ದುರಿತದ ಮೋದಕ ಭಂಜಿಸೊ ಭವಹರ
ಸುಖದೊಳು ಸಲಹೆಮ್ಮ ಶಂಕರಕುವರ

ಕಳೆದ ತಿಂಗಳು ಗಣಪತಿ ಪೂಜೆಯ ಸಮಯದಲ್ಲಿ ನಮ್ಮ ನಡುವಿರುವ ಕವಿ ಸಹೋದರರೊಬ್ಬರ ಈ ಸಾಲುಗಳ ನೋಡಿ ಅವರ ಬ್ಲಾಗಿನ ಮೇಲೆ ಕಣ್ಣು ಆಡಿಸಿದ್ದೆ. ಶ್ರೀ ಕೃಷ್ಣನ ನೂರಾರು ಗೀತೆಗಳು ಎಂಬ ತಲೆ ಬರಹವಿರುವ ಅವರ ಕವಿತೆಗಳ ನೋಡಿ ಅಚ್ಚರಿಯಾಗಿತ್ತು. ನಿಜ ಹೇಳಬೇಕು ಎಂದರೆ ಅವರ ಕವಿತೆಗಳನ್ನು ಅವತ್ತು ಗಣೇಶ ಚತುರ್ಥಿಯ ದಿನವೇ ಮೊದಲು ನೋಡಿದ್ದು. ಬಹುಶಃ ನನ್ನಲ್ಲಿ ಕಂಡೂ ಕಾಣದಂತಿರುವ ನಾಸ್ತಿಕತೆ ಅವರ ಭಕ್ತಿಯ ಗೀತೆಗಳ ಮೇಲೆ ಕಣ್ಣು ಹಾಯಿಸಲು ನಿರಾಕರಿಸಿತ್ತು ಎನಿಸುತ್ತೆ. ಯಾಕೆಂದರೆ ಹೆಚ್ಚು ಸಲ ಪ್ರೇಮಿಗೆ, ಪ್ರೇಮ ಕವಿತೆಯ ಗೀಚುವ ಕವಿಯ ಕಣ್ಣಿಗೆ ದೇವರು ಕಾಣುವುದಿಲ್ಲ. ಆದರೆ ಬನ್ನಿ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ತನ್ನ ಪ್ರೇಮಿ ಕರೆದರೆ ಪ್ರೇಮಿ ಅಥವಾ ಪ್ರೇಮ ಕವಿ ಎಂತಾ ನಾಸ್ತಿಕನೇ ಆದರೂ ತಾನು ಬರಲ್ಲ ಅನ್ನುವುದಿಲ್ಲ. ಪ್ರೇಮಕ್ಕೂ ದೇವರಿಗೂ ಇರುವ ಶಕ್ತಿಯೇ ಅಂತಹುದು. ಎರಡೂ ಒಂದರಲ್ಲಿ ಒಂದು ಮಿಳಿತವಾಗಿವೆ. ಅದಕ್ಕೇ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರೇಮದಲ್ಲಿ ದೈವವನ್ನೂ ದೈವದಲ್ಲಿ ಪ್ರೇಮವನ್ನೂ ಕಾಣಲು ಹಾತೊರೆಯುವುದು. ಆ ತರಹದ ಆತೊರೆಯುವಿಕೆ  ಕೆಲವರಲ್ಲಿ ಪ್ರೇಮ ಅಗಾಧತೆಯನ್ನು ಪಡೆದು ಅಕ್ಷರ ರೂಪದಲ್ಲಿ ಪ್ರೇಮ ಕಾವ್ಯವಾಗಿ ಹೊರ ಹೊಮ್ಮಿದರೆ, ಕೆಲವರಲ್ಲಿ ಭಕ್ತಿ ಅಗಾಧತೆಯನ್ನು ಪಡೆದು ಪ್ರಾರ್ಥನೆಗಳ ರೂಪದಲ್ಲಿ ಹೊರ ಹೊಮ್ಮುತ್ತದೆ. ಅಂತಹ ಭಕ್ತಿಯ ಅಗಾಧತೆಯನ್ನು ತನ್ನೊಳಗೆ ತುಂಬಿಕೊಂಡು ಒಂದು ವಿಭಿನ್ನವಾದ ಕಾವ್ಯ ಕೃಷಿಯಲ್ಲಿ ತೊಡಗಿರುವ ಸಹೋದರನ ಬ್ಲಾಗಿನ ಹೆಸರು ಶ್ರೀನಿವಾಸ ವಿಠ್ಠಲ.

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ಪ್ರೇಮವಿದ್ದೆಡೆ ಪ್ರಯಣವಿದ್ದಂತೆ ಭಕ್ತಿಯಿದ್ದೆಡೆ ಆಧ್ಯಾತ್ಮ ತಂತಾನೆ ಹುಟ್ಟಿಬಿಡುತ್ತದೆ. ಮೇಲಿನ ಸಾಲುಗಳು ಆಧ್ಯಾತ್ಮದ ಸಾಲುಗಳಂತೆ ಕಂಡರೂ ಅವು ಭಕ್ತಿಯ ಪ್ರಭಾವದಿಂದ ಮೂಡಿದ ಸಾಲುಗಳು ಎಂಬಂತೆ ಗೋಚರವಾಗುತ್ತವೆ. ದೇವರುಗಳು ನಮ್ಮ ಮೇಲೆ ಮೂಡಿಸುವ ಪರಿಣಾಮವಾಗಿ ನಾವು ಭಕ್ತರಾಗಿ ಭಕ್ತಿ ಗೀತೆಗಳ ರಚಿಸುವುದು, ದೇವರ ನಾಮ, ವಚನಗಳು, ದಾಸರ ಪದಗಳು, ಭಕ್ತಿ ಗೀತೆಗಳು, ಇವು ಬೀರುವ ಪ್ರಭಾವದಿಂದ ದೇವರ ನಾಮಗಳ ರಚಿಸುವುದು ಎರಡೂ ವಿಭಿನ್ನ ಸ್ವಾದವನ್ನು ಹೊಂದಿರುತ್ತವೆ. ಭಕ್ತಿ ಸ್ವಾಭಾವಿಕವಾಗಿದ್ದು ಹಾಗೆಯೇ ಹರಿದರೆ ಅದು ಬೀರುವ ಪರಿಣಾಮ ಬೇರೆ. ಬೇರೆ ರಚನೆಗಳ ಪ್ರಭಾವದಿಂದ ರಚಿಸಿದ ರಚನೆಗಳು ಬೀರುವ ಪರಿಣಾಮ ಬೇರೆ. ಹಾಗೆಯೇ ರಚಿಸಿದ ರಚನೆಗಳಿಗೆ ಈಗಾಗಲೇ ಸಂಗೀತ ಸಂಯೋಜನೆಗೆ ಒಳಗಾಗಿರುವ ನಮ್ಮ ಭಾಷೆಯ ಅಥವಾ ಬೇರೆ ಭಾಷೆಯ ಗೀತೆಗಳ ದಟ್ಟ ಛಾಯೆ ಕಾಣಬಾರದು. ಹಾಗಾದಾಗ ಮಾತ್ರ ಯಾವುದೇ ಗೀತೆಯಾಗಲಿ, ಭಕ್ತಿ ಗೀತೆಯಾಗಲಿ ತನ್ನ ಸ್ವಂತಿಕೆಯ ಸ್ವಾದದಿಂದ ಜನರಿಗೆ ಹತ್ತಿರವಾಗುವುದು. ನಮ್ಮ ಕವಿ ಸಹೋದರರ ರಚನೆಗಳು ಗೀತೆಗಳಾಗಿವೆ ಎಂದು ಕೇಳಿದ್ದೆ. ಅವರು ಕಳುಹಿಸಿದ ಮೂರ್ನಾಲ್ಕು ಗೀತೆಗಳ ಕೇಳಿದಾಗ ಯಾಕೋ ಈ ಕಿವಿ ಮಾತನ್ನು ಅವರಿಗೆ ಹೇಳಬೇಕು ಅನಿಸಿತು.

ಕತ್ತಲೆಯ ನಂತರ ಬೆಳಕಿದೆ ಗೆಳತಿ
ನಡೆದುಬಿಡು ಇನ್ನೊಂದೇ ಗಾವುದ
ಪೂರ್ವದ ರವಿಯೂರಿಗೆ
ಎದೆಗೂಡಲಿ ನಂಬುಗೆಯ ದೀಪ
ನಂದದಿರಲಿ ಅವನ ಬೇಡಿಕೊ
ಅಂಗೈ ತಡೆಗೋಡೆ ಮಾಡು
ಹಠಮಾರಿ ಗಾಳಿಗೆ

ಇವರು ಬರೀ ಭಕ್ತಿ ಗೀತೆಗಳನ್ನೇ ಬರೆಯುತ್ತಾರ ಎಂದು ನಾವಂದುಕೊಂಡರೆ ತಪ್ಪಾದೀತು. ಯಾಕೆಂದರೆ ಭಕ್ತಿ ಗೀತೆಗಳ ಜೊತೆ ಜೊತೆಗೆ ನಮ್ಮ ಕವಿ ಸಹೋದರ ಚಂದದ ಪ್ರೇಮ ಕವಿತೆ, ಬಂಡಾಯ ಕವಿತೆಗಳನ್ನು ಚಂದವಾಗಿ ರಚಿಸಿದ್ದಾರೆ. ಇಂದಿನ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ಸಹೋದರ ಎನ್ ಕೃಷ್ಣಮೂರ್ತಿಯವರನ್ನು ಎಲೆ ಮರೆ ಕಾಯಿ ಎಂದರೆ ತಪ್ಪಾದೀತು.. ಆದರೂ ಹಿರಿಯರ ಅನುಭವದ ಮಾತಗಳನ್ನು ಕೇಳೋಣ ಎಂದು ಅವರನ್ನು ವಿಶೇಷ ಅತಿಥಿಯಾಗಿ ಇಲ್ಲಿಗೆ ಕರೆತಂದಿದ್ದೇನೆ. ಕೃಷ್ಣಮೂರ್ತಿಯವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ...

ಎನ್ ಕೃಷ್ಣಮೂರ್ತಿ ಭದ್ರಾವತಿ

"ನನ್ನೂರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ನೆಲ್ಲೀಗೆರೆ ಹತ್ತಿರದ ತೊರೆಮಾವಿನಕೆರೆ ಗ್ರಾಮ. ಮಳೆ ಬಿದ್ದರೆ ನಮ್ಮ ಹೊಟ್ಟೆ ಒದ್ದೆಯಾಗುವ ಭೂಮಿ. ಅದನ್ನೇ ನಂಬಿದ ವಕ್ಕಲಿಗರ ಮನೆ. ಹೊಟ್ಟೆಪಾಡಿಗಾಗಿ ತಾತ, ತಂದೆ ಇಬ್ಬರೂ ಪೂಜ್ಯ ಹೆಚ್.ಎಲ್.ನಾಗೇಗೌಡರು ಭದ್ರಾವತಿಯ ಕಬ್ಬಿಣದ ಫ್ಯಾಕ್ಟರಿಯಲ್ಲಿ ಕೊಡಿಸಿದ ನೌಕರಿ ನಂಬಿ ಊರು ಬಿಟ್ಟವರು. ನಾನು ಹುಟ್ಟಿದ್ದು, ನನ್ನೂರು ತೊರೆಮಾವಿನಕೆರೆಯ ಎದುರಿನ ಕಾರಬೈಲಿನ ದೊಡ್ಡಪ್ಪ ಪಟೇಲ್ ಗಂಗಾಧರಗೌಡರ ಮನೆಯಲ್ಲಿ. ಬೆಳೆದಿದ್ದು, ಓದಿದ್ದು ಶಿವಮೊಗ ಜಿಲ್ಲೆಯ ಭದ್ರಾವತಿ. ಅಪ್ಪ ಅಟೆಂಡರ್. ಸಣ್ಣ ಸಂಬಳ. ಅಪ್ಪನ ನಂತರ ಏಳು ತಂಗಿಯರು. ಕಿತ್ತುತಿನ್ನುವ ಬಡತನ. ಅದರ ವಿರುದ್ಧ ಹೋರಾಡಲಿಕ್ಕಾಗಿಯೇ ಮನೆಯಲ್ಲಿ ದನ, ಎಮ್ಮೆ, ಕುರಿ ಸಾಕಣೆ. ಹಾಲು ವ್ಯಾಪಾರ, ಗುತ್ತಿಗೆ ಗದ್ದೆ ವ್ಯವಸಾಯ. ಬೇಸಿಗೆ ರಜೆಯಲ್ಲಿ ಹತ್ತಿರದ ರಾಮನಕೊಪ್ಪ ಕಾಡಿನಿಂದ ಸೌದೆ ಹೊರುವ ಅನಿವಾರ್ಯ. ಹರಿದ ಚಡ್ಡಿಯ ಹಿಂದನ್ನು ಪುಸ್ತಕಗಳಿಂದ ಮುಚ್ಚಿಕೊಂಡು, ಎಲ್ಲರಿಗೂ ಮೊದಲೇ ಶಾಲೆಯೊಳಗೆ ಕುಂತು, ಎಲ್ಲರೂ ಹೊರಹೊರಟ ನಂತರ ಕೊಠಡಿಯಿಂದ ಹೊರಬರುತ್ತಿದ್ದನು ನಾನು. ಭದ್ರಾವತಿಯ ಸೈಂಟ್ ಚಾರ್ಲ್ಸ್ ಕನ್ನಡ ಕಾನ್ವೆಂಟ್ನಲ್ಲಿ ಪ್ರಾಥಮಿಕ, ಸಿಲ್ವರ್ ಜ್ಯೂಬಿಲಿ ಸರ್ಕಾರಿ ಹೈಸ್ಕೂಲಿನಲ್ಲಿ ಹತ್ತನೆ ತರಗತಿಯವರೆಗೆ, ಸರ್.ಎಂ.ವಿಶ್ವೇಶ್ವರಾಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ., ನಂತರ ತೆರೆದ ಅಂಚೆಯಲ್ಲಿ ಮಾರುಕಟ್ಟೆ ನಿರ್ವಹಣೆಯ ಸ್ನಾತಕ ಡಿಪ್ಲೋಮ, ವ್ಯವಹಾರ ನಿರ್ವಹಣೆಯಲ್ಲಿ ಡಿಪ್ಲೋಮ ಹಾಗೂ ಸೆಕ್ರೆಟೇರಿಯಲ್ ಪ್ರಾಕ್ಟೀಸ್, ಕನ್ನಡ ಬೆರಳಚ್ಚು.

ಕಾಲೇಜುದಿನಗಳು. ಪ್ರೀತಿ ಬಗೆಗಿನ ಕನವರಿಕೆಯ ಚೈತ್ರಕಾಲ. ಮೊದಲನೆ ಬಿ.ಕಾಂನ ಪಠ್ಯಗಳಿಂದ ಇಂಗ್ಲೀಷ್ ಪದ್ಯವೊಂದನ್ನು ಭಾವಾನುವಾದ ಮಾಡಿದ್ದೆ. ಸಣ್ಣಕತೆಗಳೂ ಜೋಳಿಗೆಯೊಳಗಿದ್ದವು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನವರು ಪ್ರತಿವರ್ಷವೂ ಏರ್ಪಡಿಸುತ್ತಿದ್ದ ದ.ರಾ.ಬೇಂದ್ರೆ ಸ್ಮೃತಿ ಅಂತರಕಾಲೇಜು ಕವನಸ್ಪರ್ಧೆಯಲ್ಲಿ ಭಾಗವಹಿಸಲು, ನನ್ನ ಬಿಡಿಗವನಗಳ ಪ್ರತಿಯನ್ನು ನನಗೆ ಪಾಠಮಾಡುತ್ತಿದ್ದ ಪೂಜ್ಯ ಎಂ.ವಿ.ತಿರುಮಲೇಶ್ ಅವರಲ್ಲಿ ಕೊಟ್ಟೆ. ಅವರು ಅದನ್ನು ತಿರುಗಿಸಿಯೂ ನೋಡಲಿಲ್ಲ. ’ಏನ್ ಓದ್ತಿಯೊ? ಬಿ.ಕಾಂ.. ಹೋಗಿ ಬ್ಯಾಲೆನ್ಸ್ ಶೀಟ್ ಟ್ಯಾಲಿ ಮಾಡು’.. ಅಂದರು. ನಿರಾಶೆಯಾಗಲಿಲ್ಲ. ನನ್ನ ಪುಣ್ಯ. ನನಗೆ ಕನ್ನಡ ಪಾಠಮಾಡುತ್ತಿದ್ದ, ಕಾಲೇಜಿನ ಪ್ರಾಂಶುಪಾಲರಾದ, ಕರ್ನಾಟಕದ ಅಂಬೇಡ್ಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕರಾದ, ಪ್ರೊ.ಬಿ.ಕೃಷ್ಣಪ್ಪನವರಲ್ಲಿಗೆ ಹಸ್ತಪ್ರತಿ ಕೊಟ್ಟೆ. ಆಯ್ಕೆಮಾಡಿ ಸ್ಪರ್ಧೆಗೆ ಕಳುಹಿಸಿದರು. ನನ್ನ ಕವಿತೆ ಸ್ಪರ್ಧೆಯಲ್ಲಿ ಆಯ್ಕೆಯಾಗಿತ್ತು. ಆಯ್ಕೆ ಮಾಡಿದವರು ಶ್ರೀ ಕ.ವೆಂ.ರಾಜಗೋಪಾಲ. ಬಹುಮಾನ ಪಡೆದದ್ದು ರಾಷ್ಟ್ರಕವಿ ಕುವೆಂಪು ಅವರ ಅಮೃತಹಸ್ತಗಳಿಂದ, ಅವರ ಮೈಸೂರಿನ ಮನೆಯಲ್ಲಿ.

ಶಿವಮೊಗ್ಗದವನಾ. ನಮ್ಮ ಜಿಲ್ಲೆಯವನು. ಚೆನ್ನಾಗಿ ಬರೆ ಅಂತ ಅಪ್ಪಿಕೊಂಡರು ರಾಷ್ಟ್ರಕವಿ. ನಾನು ಅವರ ಪಾದಗಳಿಗೆ ಹಣೆಯಿಟ್ಟುಬಿಟ್ಟೆ. ಯಾವ ಸಾಹಿತ್ಯ ಪ್ರಶಸ್ತಿ ಈ ಪುಣ್ಯಕ್ಕಿಂತ ದೊಡ್ಡದು...? ಅಂದು ಕವಿಮಿತ್ರ ಎಸ್.ಮಂಜುನಾಥ ಅವರ ’ಹಕ್ಕಿಪಲ್ಟಿ’ ಕವನ ಸಂಕಲನ ಬಿಡುಗಡೆ. ಕುವೆಂಪುರವರ ಪುಣ್ಯಹಸ್ತಗಳಿಂದ. ಕವಿಮಿತ್ರರಾದ ಅಬ್ದುಲ್ ರಶೀದ್, ಮಮತಾ ಜಿ ಸಾಗರ, ಆರತಿ ಹೆಚ್.ಎನ್., ಜೊತೆಗಿದ್ದರು. ನಂತರ ಆಕಾಶವಾಣಿ, ಭದ್ರಾವತಿಯ ’ಯುವವಾಣಿ’ ಕಾರ್ಯಕ್ರಮದಲ್ಲಿ ನನ್ನ ಮೊದಲ ಕತೆ ’ಚೋಮ ನಕ್ಕ’ ಪ್ರಸಾರವಾಯಿತು. ರೆಕಾರ್ಡಿಂಗಿನ ದಿನ ಜೊತೆಗಿದ್ದವರು ಕನ್ನಡದ ಪ್ರಮುಖ ವಿಮರ್ಶಕರಾದ ಶ್ರೀ ಓ.ಎಲ್.ನಾಗಭೂಷಣ ಅವರು. ’ಕನ್ನಡ ಎಂ.ಎ. ಏನಯ್ಯ? ಚೆನ್ನಾಗಿ ಬರೆದಿದ್ದೀಯ’ ಅಂದ್ರು. ನಂಬಿಕೆ ಬಂತು. ಆಕಾಶವಾಣಿ ಕಾರ್ಯಕ್ರಮಗಳು ನಿರಂತರವಾದವು. ಅಲ್ಲೇ ತಾತ್ಕಾಲಿಕ ನಿರ್ಮಾಣ ಸಹಾಯಕನಾಗಿ ನೌಕರಿ ಕೆಲದಿನಗಳು. ಪ್ರೋತ್ಸಾಹಿಸಿದವರು ಈಗ ದೂರದರ್ಶನದಲ್ಲಿ ಉಪನಿರ್ದೇಶಕರಾಗಿರುವ ಶ್ರೀ ಸಿ.ಎನ್.ರಾಮಚಂದ್ರ ಅವರು. ತರುವಾಯ, ಕರುನಾಡಿನ ಎಲ್ಲಾ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ, ’ತಾಯಿನುಡಿ’ಯಂತಹ ಹೊರನಾಡಿನ ಪತ್ರಿಕೆಗಳಲ್ಲಿ, ಸಂಕ್ರಮಣ, ಶೂದ್ರ ಸಾಹಿತ್ಯಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟವಾದವು. ನನ್ನ ಕವಿತೆ ’ರಾಮಾಯಣ ಗೀತೆ’ಗೆ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಬಹುಮಾನ. ತುಷಾರ ಮಾಸಿಕದ ತಿಂಗಳ ಕವಿತಾ ಸ್ಪರ್ಧೆಯಲ್ಲಿ, ಶ್ರೀ ಜಿ.ಎಸ್.ಸಿದ್ದಲಿಂಗಯ್ಯ, ಶ್ರೀ ಹೆಚ್.ಎಸ್.ವಿ.ಯವರು ನನ್ನ ಕವಿತೆಗಳನ್ನ ಆಯ್ಕೆಮಾಡಿದ ಸಂತಸ ಮರೆಯಲಾರದವು. ಎಲ್ಲರೂ ಕೇಳುತ್ತಿದ್ದಿದೊಂದೆ "ಕನ್ನಡ ಎಂ.ಎ. ಏನಯ್ಯಾ.?"

ಕಾಲೇಜು ಓದಿನ ಜತೆಜತೆಗೆ ಲೋಹಿಯಾ, ಜೆ.ಪಿ., ಸಮಾಜವಾದಿ ವಿಚಾರಗಳನ್ನು ತಲೆಗೆ ತುರುಕಿದವರು ಪ್ರೊ.ಬಿ.ಕೃಷ್ಣಪ್ಪ ಹಾಗೂ ಕತೆಗಾರರಾದ ಭದ್ರಾವತಿಯ ಶ್ರೀ ಎಂ.ಚಂದ್ರಶೇಖರಯ್ಯ. ಪರಿಣಾಮ, ಚಿನ್ನಪ್ಪರೆಡ್ಡಿ ಮತ್ತು ವೆಂಕಟಸ್ವಾಮಿ ಆಯೋಗದ ವರದಿಗಳ ಸಂದರ್ಭದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ. ಚಂದ್ರಗುತ್ತಿಯ ಬೆತ್ತಲೆಸೇವೆ ತಡೆಯಲು ಹೋರಾಟ. ಈಗಿನ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ರಘುನಂದನ್ ಹಾಗೂ ನನ್ನ ನೆರೆಯ ಹೆಣ್ಣುಮಗಳು, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ, ಶ್ರೀಮತಿ ಸಿ.ಮಂಜುಳಾ, ನಾವೆಲ್ಲ ವಿದ್ಯಾರ್ಥಿ ಸಂಘಟನೆಗಳ ಹೋರಾಟಗಾರರು. ಎಂಥಾ ಚಿನ್ನದ ದಿನಗಳವು. ಇಂದು ನಾಯಕರುಗಳ ವೈಯಕ್ತಿಕ ಆಸೆಗಳಿಗೆ ಹರಿದು ಹಂಚಿಹೋಗಿರುವ ಸಂಘಟನೆಗಳನ್ನು ಕಂಡಾಗಲೆಲ್ಲ ಅಯ್ಯೋ ಅನ್ನಿಸುತ್ತೆ.

ಬಾಲ್ಯದಿಂದಲೂ ಓದುವ ಹಸಿವು. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಯಾವುದಾದರೂ ಸರಿ. ದಿನಪತ್ರಿಕೆಗಳ ಭಾನುವಾರದ ಸಾಪ್ತಾಹಿಕ ಪುರವಣಿಗಳಲ್ಲಿ ಬರುತ್ತಿದ್ದ ಕವಿತೆಗಳನ್ನ ಆಸಕ್ತಿಯಿಂದ ಓದುತ್ತಿದ್ದೆ...ಏನೋ ಹೊಳೆದಂತೆ.. ಮತ್ತೇನೊ ತಿಳಿದಂತೆ.. ಭದ್ರಾವತಿಯ ಕೇಂದ್ರ ಗ್ರಂಥಾಲಯ ನಿತ್ಯವಾಯಿತು. ಜೇಡ ಹಿಡಿದು ಕಪಾಟಿನೊಳಗಿದ್ದ, ಶ್ರೀರಾಮಾಯಣ ದರ್ಶನಂ, ಬೇಂದ್ರೆಯವರ ಕಾವ್ಯ, ಸು.ರಂ,ಎಕ್ಕುಂಡಿ, ಹೆಚ್.ಎಸ್.ವಿ., ಬಿ.ಆರ್.ಲಕ್ಷ್ಮಣರಾಯರು, ಡುಂಡಿರಾಜ್ ಅವರ ಸಾಹಿತ್ಯವನ್ನು ಓದಿ ಹಸಿವು ಇಂಗಿಸಿಕೊಂಡೆ. ಆಗ ಗ್ರಂಥಾಲಯದ ಪಾಲಕರಾಗಿದ್ದವರು ಶ್ರೀ ಬೆಳಗಲಿಯವರು. ಪುಣ್ಯಾತ್ಮ ಚೆನ್ನಾಗಿರಲಿ.

ಹೊಟ್ಟೆಪಾಡಿಗೆ ಮೊದಮೊದಲು ಬಿ.ಕಾಂ., ಮುಗಿದ ನಂತರ ಓದಿನ ಜೊತೆಗೆ, ಭದ್ರಾವತಿಯಲ್ಲಿ ಅಕೌಂಟ್ಸ ಬರೆಯುತ್ತಿದ್ದೆ. ಆಕಾಶವಾಣಿಯಲ್ಲಿ ತಾತ್ಕಾಲಿಕ ನೌಕರಿ. ಎಲ್.ಐ.ಸಿ.ಯಲ್ಲಿ ತಾತ್ಕಾಲಿಕ ನೌಕರಿ. ಸಣ್ಣ ದುಡಿಮೆಗೆ ಬದುಕು ಅಸಾಧ್ಯ ಅನಿಸಿತು. ನಡುನಡುವೆ ಸರ್ಕಾರಿ ನೌಕರಿ ಪ್ರಯತ್ನ. ಲಿಖಿತ ಪರೀಕ್ಷೆ ಪಾಸು. ಸಂದರ್ಶನದಲ್ಲಿ ನಪಾಸು. ಕಾರಣ ಈಗ ಅರಿವಾಗಿದೆ. ದಾಂಡೇಲಿಯಲ್ಲಿ ಒಂದೆರಡು ವರ್ಷ ದುಡಿದಿದ್ದಾಯ್ತು. ೧೯೯೩ರಲ್ಲಿ ಬೆಂಗಳೂರಿಗೆ ಬಂದುಬಿಟ್ಟೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ೧೬೦೦ ತಿಂಗಳ ಸಂಬಳ. ಸುರಕ್ಷತೆ ಹಾಗೂ ಗುಣಮಟ್ಟ ವಾರ್ಷಿಕ ಸ್ಪರ್ಧೆಗಳಲ್ಲಿ ಬಹುಮಾನಗಳು. ದೆಹಲಿಯ ಭಾರತೀಯ ಕೈಗಾರಿಕೆಗಳ ಮಹಾಮಂಡಳ (ಸಿ.ಐ.ಐ.)ನವರು ಏರ್ಪಡಿಸಿದ್ದ ಗುಣಮಟ್ಟದ ಬಗೆಗಿನ ಸ್ಲೋಗನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮೊದಲ ಬಹುಮಾನ. ೨೦೦೮ರಲ್ಲಿ ಕಂಪನಿಯಿಂದ ಹೊರಬಂದಾಗ ೬೦೦೦೦ ತಿಂಗಳ ಸಂಬಳ. ನಂತರ ೨ ವರ್ಷಗಳು ಬೆಂಗಳೂರಿನ ಕಂಪನಿಯೊಂದರಲ್ಲಿ ’ಮುಖ್ಯನಿರ್ವಹಣಾಧಿಕಾರಿ’ಯಾಗಿ ನೌಕರಿ. ಈಗ ನನ್ನದೇ ಕಂಪನಿ. ಕೈಗಾರಿಕಾ ಮತ್ತು ವಿದ್ಯುತ್ ಯೋಜನೆಗಳಿಗೆ ಮೂಲಸೌಕರ್ಯ ಸೇವೆ ನೀಡುತ್ತಿದ್ದೇವೆ. ಬೆಂಗಳೂರಿನಲ್ಲಿ ಸ್ವಂತ ಮನೆ. ಎರಡೊತ್ತಿನ ಊಟ. ಒಬ್ಬಳೇ ಮಡದಿ ನಾಗರತ್ನ. ಮುದ್ದಿನ ಎರಡು ಹೆಣ್ಣುಮಕ್ಕಳು - ಮಾಯಾ ಕೃಷ್ಣಮೂರ್ತಿ, ೯ನೇ ತರಗತಿ ಓದು. ಒಳ್ಳೆಯ ಅಥ್ಲೀಟ್. ಆಟ ಹಾಗೂ ಕ್ರಿಯೇಟಿವ್ ಡ್ರಾಯಿಂಗುಗಳಲ್ಲಿ ಚಿನ್ನದ ಪದಕಗಳನ್ನು ತಂದುಕೊಂಡಿದ್ದಾಳೆ. ಎರಡನೆಯವಳು, ೫ ವರ್ಷದ ಅಮಿಷಾ ರಾಜಿ ಮೂರ್ತಿ. ಸಂಗೀತ ವಿದುಷಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿಯವರ ಸಹೋದರಿ ಶ್ರೀಮತಿ ಸರಿತಾ ಕಟ್ಟಿಯವರಲ್ಲಿ ಹಿಂದೂಸ್ಥಾನಿ ಹಾಡುಗಾರಿಕೆ ಕಲಿಕೆ ಪ್ರಾರಂಭಿಸಿದ್ದಾಳೆ.

ನನ್ನ ಪ್ರಕಾರ, ದಾಸಸಾಹಿತ್ಯಕ್ಕೆ ಈ ತಲೆಮಾರಿನ ಕೊಡುಗೆ ಕಡಿಮೆ. ಆ ನಿಟ್ಟಿನಲ್ಲಿ ಒಂದು ಪ್ರಯತ್ನ ನನ್ನ ಭಕ್ತಿ ಹಾಗೂ ಭಕ್ತಿಭಾವಸಾಹಿತ್ಯ ರಚನೆ. ನಾನು ಭಗವಂತನನ್ನು ನಂಬುತ್ತೇನೆ. ಹಲವಾರು ಪ್ರಸಿದ್ಧ ಹಾಡುಗಾರರು ನನ್ನ ಕೃತಿಗಳನ್ನು ಕರ್ನಾಟಕದಾದ್ಯಂತ ಹಾಡಿದ್ದಾರೆ. ಹಾಡುತ್ತಿದ್ದಾರೆ. ಅವರ ಕೊರಳು ತಣ್ಣಗಿರಲಿ. ಇಲ್ಲಿಯವರೆಗೂ ೨೯೦ಕ್ಕೂ ಮಿಕ್ಕಿ ಕೃತಿಗಳ ರಚನೆ. ೨೦೧೦ರಲ್ಲಿ ’ಶ್ರೀಕೃಷ್ಣ ಗೀತೆಗಳು’ ಎನುವ ೨೩ ರಚನೆಗಳ ಪುಸ್ತಕದ ಬಿಡುಗಡೆಯ ಭಾಗ್ಯ. ನನ್ನ ಗುರುಗಳಾದ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿಯವರಿಂದ. ಅವರ ನಿರಂತರ ಪ್ರೋತ್ಸಾಹ. ನನ್ನೆಲ್ಲಾ ವ್ಯವಹಾರಗಳ ಗಡಿಬಿಡಿಯ ನಡುವಿನ ಸಮಯವೇ ’ನನ್ನ ಕವಿಸಮಯ’. ಆಗಲೇ ಮೂಡುವ ಸಾಲುಗಳು ಹಾಡುಗಳಾಗುತ್ತವೆ. ಭಗವಂತನ ಧ್ಯಾನಕ್ಕೆ ನಿಗದಿತ ಸಮಯವಿಲ್ಲ ಅಂದುಕೊಂಡವನು ನಾನು. ನನ್ನ ಪ್ರಕಾರ, ನವೋದಯ, ನವ್ಯ, ದಲಿತ, ಬಂಡಾಯ, ಭಕ್ತಿ, ಭಕ್ತಿ-ಭಾವ ಇನ್ನೆಲ್ಲ ಪ್ರಕಾರದ ಸಾಹಿತ್ಯಗಳು ಸಮಾಜದ ಒಳಿತನ್ನ ಬಯಸುವುದಾದರೆ ಸರ್ವಕಾಲಕ್ಕೂ ಅವು ಸ್ವೀಕೃತಾರ್ಹ.

ಎಲ್ಲಾ ಕನ್ನಡದ ಬ್ಲಾಗುಗಳನ್ನು ಪ್ರವೇಶಿಸಿದ್ದೇನೆ...ಓದಿ ಖುಶಿಗೊಂಡಿದ್ದೇನೆ. ಅಲ್ಲಿ ಚಿಗುರುಗಳಿವೆ...ಅವು ಬೆಳೆಯಲಿ. ಹಿರಿಯರು ಅವುಗಳಿಗೆ ಪ್ರೋತ್ಸಾಹದ ನೀರೆರೆಯುತ್ತಿರಲಿ...’ಕನ್ನಡಬ್ಲಾಗ್’ನ ನಿರ್ವಹಣೆ ಚೆನ್ನಾಗಿದೆ. ಅದರ ಅವಶ್ಯಕತೆಯೂ ಇದೆ. ’ಕನ್ನಡ ಬ್ಲಾಗ್’ನಿಂದಲೇ ಸ್ನೇಹಿತರಾದ ನೀವು, ತಿರುಮಲೈ ರವಿಯವರು, ವಾಜಪೇಯಿ ಸರ್, ಪುಷ್ಪರಾಜ್, ಮೋಹನ್ ಕೊಳ್ಳೆಗಾಲ, ಬದ್ರಿ, ಕೃಷ್ಣಪ್ರಸಾದ್ ಇನ್ನೆಲ್ಲರ ಪರಿಚಯವಾದುದು. ಶುಭವಾಗಲಿ.

ಭದ್ರಾವತಿಯ ರೈಲ್ವೆಕಂಬಿಗಳ ಪಕ್ಕದಲ್ಲಿ ನಿಂತು ಎಮ್ಮೆ, ಹಸು ಕಾಯುತ್ತಿದ್ದ ನನ್ನನ್ನು ಬದುಕು ಬೆಂಗಳೂರಿಗೆ ತಂದು ಬಿಟ್ಟುಬಿಟ್ಟಿದೆ. ಕಷ್ಟದ ದಿನಗಳು ಕಳೆದಿವೆ. ಇನ್ನೊಬ್ಬರ ಕಷ್ಟಕ್ಕೆ ಮಿಡಿವ ಹೃದಯ ಹಾಗೆ ಇದೆ. ಭದ್ರಾವತಿಯಲ್ಲಿ ಓದಿ, ಆಟೋ ಓಡಿಸುತ್ತಿದ್ದ, ವ್ಯರ್ಥಕಾಲ ಕಳೆಯುತ್ತಿದ್ದ ನೆರೆಹೊರೆಯವರಿಗೆ ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವ ಅವಕಾಶ ನನಗೆ ಸಿಕ್ಕು, ಅವರ ಬದುಕು ಬೆಳಕಾಗಿದೆ. ಅವರ ಹಾರೈಕೆಯ ಪುಣ್ಯ ನನ್ನ ಪಾಲಿಗಿದೆ. ಭಗವಂತ ನಾನಿರುವಷ್ಟು ದಿನ ಆ ಹೃದಯವನ್ನು ಹಾಗೆಯೇ ಇಟ್ಟಿರಲಿ. ಈಗ ಬೆಂಗಳೂರಿನ ವಿದ್ಯಾಮಾನ್ಯನಗರದಲ್ಲಿ ವಾಸ. ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷನಾಗಿ, ಜನರ ಸೇವೆ ಮಾಡುವ ಭಾಗ್ಯವನ್ನೂ ಆ ಭಗವಂತ ಕರುಣಿಸಿದ್ದಾನೆ."

ಎಂದು ಮಾತು ಮುಗಿಸಿದ ಸಹೋದರ ಕೃಷ್ಣಮೂರ್ತಿಯವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಸಮಯವಿದ್ದಾಗ ಅವರ ಭಕ್ತಿಯ ರಚನೆಗಳನ್ನು ಆಹ್ವಾದಿಸಿ.. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ..
www.enkrishna.blogspot.com

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಗುರುವಾರ, ಅಕ್ಟೋಬರ್ 4, 2012


ಎಲೆ ಮರೆ ಕಾಯಿ ೫೯

ಗೋರಿ ಕಟ್ಟುವ ಬನ್ನಿ
ನಾ ಮೇಲು ತಾ ಮೇಲೆಂದು
ಹೊಡೆದಾಡಿ ಸಾಯುತಿಹ
ಧರ್ಮಗಳಿಗೆ
ಗೋರಿ ಕಟ್ಟುವ ಬನ್ನಿ........

ಕವಿತೆಗಳಲ್ಲಿ, ಬರಹಗಳಲ್ಲಿ ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೋ, ಸಮಾಜದ ಬದಲಾವಣೆಗೋ ಕರೆ ನೀಡುವುದು ಸುಲಭದ ಕೆಲಸವಲ್ಲ. ನಾವು ನಿತ್ಯ ಯಾವುದ್ಯಾವುದೋ ಮೂಲೆಗಳಿಂದ ಕರೆಗಳನ್ನು ಕೇಳುತ್ತಲೇ ಇರುತ್ತೇವೆ. ದೇಶ, ಭಾಷೆ, ನೆಲ, ಜಲ ಎಲ್ಲದರ ಉಳಿವಿಗಾಗಿ ಕರೆಗಳು ಕೇಳುತ್ತಲೇ ಇರುತ್ತವೆ. ಇಲ್ಲಿ ಹೆಚ್ಚು ಸಲ ಕರೆಯ ಮಹತ್ವವೆಷ್ಟು ಎನ್ನುವುದರ ಬದಲಿಗೆ ಕರೆ ನೀಡಿದವರು ಯಾರು ಎಂಬುದರ ಮೇಲೆಯೇ ಕರೆಯ ಉದ್ದೇಶ ಸಫಲ ಅಥವಾ ವಿಫಲವಾಗುವ ಸಾಧ್ಯತೆಗಳಿರುತ್ತದೆ. ಬದಲಾವಣೆಯ ವಿಷಯ ಬಂದಾಗ ಎಲ್ಲರೂ ತಮ್ಮ ಸಣ್ಣ ಸಣ್ಣ ಗುಂಪುಗಳನ್ನು ಒಗ್ಗೂಡಿಸಿ ದೊಡ್ಡ ಸಮೂಹಗಳನ್ನು ಕಟ್ಟದ ಹೊರತು ಬದಲಾವಣೆ ಒಂದು ಕನಸಾಗಿಯೇ ಉಳಿದುಬಿಡುತ್ತದೆ. ಬದಲಾವಣೆಯ ಗಾಳಿ ಲೇಪಿಸಿಕೊಂಡು ಬಂದ ಕವಿತೆ ಬರಹಗಳು ಕಾಲ ಕ್ರಮೇಣ ಒಂದು ವರ್ಗಕ್ಕೆ ಮೀಸಲಾದಂತೆ ಹಣೆ ಪಟ್ಟಿ ಕಟ್ಟಿಕೊಂಡು ಎದುರು ನಿಂತಾಗ ಮತ್ತೊಂದು ವರ್ಗ ಇರುಸು ಮುರುಸಿಗೆ ಒಳಗಾಗುವುದು ಸಾಮಾನ್ಯ. ಅಂತಹ ಇರುಸು ಮುರುಸುಗಳನ್ನು ಓದುಗರಲ್ಲಿ ಹುಟ್ಟದಂತೆ ಮಾಡಿ ಮಾನವೀಯತೆ, ನೈತಿಕತೆ ತುಂಬಿದ ಸಮಾಜದಂತೆ ಒಂದು ಇಡೀ ಸಮೂಹವನ್ನೇ ಚಿಂತಿಸುವಂತೆ ಮಾಡುವುದು ಕವಿತೆಗಳ ಬರಹಗಳ ಉದ್ದೇಶವಾಗಬೇಕು. ಮೇಲೆ ಕಾಣಿಸಿದ ಕವಿತೆಯ ಸಾಲುಗಳು ಹಾಗೊಂದು ಮಾವನೀಯತೆ ಮೆರೆಯುವ ಆಶಯಗಳನ್ನು ಹೊತ್ತು ಎದುರು ನಿಂತಾಗ ಅದನ್ನು ಬಿಗಿದಪ್ಪುವ ಸಾಹಸವನ್ನು ಎಷ್ಟು ಜನ ಮಾಡುತ್ತಾರೋ ತಿಳಿಯದು. ಅಂದ ಹಾಗೆ ಹೀಗೊಂದು ಯೋಚನಾಲಹರಿಗೆ ನಾಂದಿ ಹಾಡುವಂತೆ ಮಾಡಿದ ಕವಿತೆಯ ಸಾಲುಗಳು ಕಂಡು ಬಂದದ್ದು ಬಿಸಿಲಿಗೆ ಸೆಡ್ಡು ಹೊಡೆದ ಜನಗಳ ನಾಡಿನವ.. ಎಂಬ ಅಡಿ ಬರಹವಿರುವ ಬಯಲ ಹುಡಿ ಎಂಬ ಬ್ಲಾಗಿನಲ್ಲಿ..

ನಾನು ಹುಟ್ಟಿದೊಡನೆ 
ಮೊದಲು ಖುಷಿಯ ಪಟ್ಟವನು
ನನ್ನಪ್ಪ.....
ಅಮ್ಮನಿಗಿಂತ ಮೊದಲು
ಮುತ್ತು ಕೊಟ್ಟವ,
ನನಗೆ ನಡಿಗೆಯ 
ಕಲಿಸಲು ಮೊದಲ
ಗುರುವಾದಾತ...

ಸಿನಿಮಾ ಮತ್ತು ನಾಟಕದ ಲೋಕದಲ್ಲಿ ಕಲಾವಿದರ ಮಕ್ಕಳು ಕಲಾವಿದರಾಗುವ ಸಾಧ್ಯತೆಗಳು ಬಹುಶಃ ಹೆಚ್ಚಿರುತ್ತವೆ. ಯಾಕೆಂದರೆ ತಮ್ಮ ಮಕ್ಕಳು ಸಿನಿಮಾದಲ್ಲಿ ನಾಟಕದಲ್ಲಿ ಅಭಿನಯಿಸುವುದು ಬೇಡ ಎಂಬ ತಡೆಗೋಡೆಗಳನ್ನು ಹೆಚ್ಚು ಜನ ಹಾಕುತ್ತಾರೆ. ಅಚ್ಚರಿಯೆಂದರೆ ಅವರ ಮಕ್ಕಳು ಆ ತಡೆ ಗೋಡೆಯ ಸಂಧಿಯಲ್ಲಿ ವಿಸ್ಮಯ ಪ್ರಪಂಚವನ್ನು ಇಣುಕಿ ನೋಡುತ್ತಲೇ ಒಮ್ಮೆ ಆ ಗೋಡೆಯನ್ನು ಮುರಿದೋ ಇಲ್ಲ ದಾಟಿಯೋ ವಿಸ್ಮಯ ಪ್ರಪಂಚವನ್ನು ಸೇರಿಬಿಡುತ್ತಾರೆ. ಅಂತಹ ಕಲಾವಿದರ ತಂದೆ ತಾಯಿಯರು ಎಷ್ಟೇ ಯಶಸ್ಸು ಗಳಿಸಿದ್ದರೂ ತಾವೂ ಯಶಸ್ಸಿನ ರುಚಿ ನೋಡುವುದು ರಾಜಕೀಯಗಳು ಇಲ್ಲವೆಂದರೆ ತಮ್ಮ ಕಲಾ ಸಾಮರ್ಥ್ಯದಿಂದಲೇ. ಸಾಹಿತ್ಯ ಲೋಕ ಹಾಗಲ್ಲ. ಸಾಹಿತಿಗಳ ಮಕ್ಕಳು ಸಾಹಿತಿಗಳಾಗುವುದು ಬಹುಶಃ ತುಂಬಾ ಕಮ್ಮಿ. ಯಾಕೆಂದರೆ ತಂದೆ ತಾಯಿಗಳು ಸಾಹಿತ್ಯ ಲೋಕದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಅವರ ಬರಹದ ಪ್ರಭಾವಕ್ಕೆ ಒಳಗಾಗದೆ ಈಗಾಗಲೇ ಅವರ ತಂದೆ ತಾಯಿಗಳ ಬರಹದ ಪ್ರಭಾವಕ್ಕೆ ಒಳಗಾಗಿರುವ ಓದುಗರನ್ನು ತಮ್ಮ ಓದುಗರಂತೆ ಮಾಡಿಕೊಳ್ಳುವುದು ತುಂಬಾ ತುಂಬಾ ಕಷ್ಟದ ಕೆಲಸ. ಆ ಕಷ್ಟದ ಕೆಲಸವನ್ನು ಸತತ ಪರಿಶ್ರಮದಿಂದ ಸಾಧಸಿ ತೋರಿಸಿದರು ತುಂಬಾ ವಿರಳ.. ಮೇಲಿನ ಕವಿತೆಯ ಸಾಲುಗಳಿಗೂ ಈ ಟಿಪ್ಪಣಿಗೂ ಏನು ಸಂಬಂಧವೆಂದು ನೀವು ಕೇಳುವ ಮೊದಲು ಸ್ವಲ್ಪ ಸಮಯದಲ್ಲೇ ಈ ಟಿಪ್ಪಣಿಯ ಉದ್ದೇಶ ನಿಮಗೆ ತಿಳಿಯುವುದು..

"ಚಂದ್ರನ ಬೆಳದಿಂಗಳೇ ಅವಳ ಮೈಯ ಬಣ್ಣವಾಗಿತ್ತೋ ಏನೋ!!!! ಮೊಗದ ಮೇಲಿನ ನಗುವು ಹೂವನ್ನೂ ನಾಚಿಸುವಷ್ಟು ಸುಂದರವಾಗಿತ್ತು, ಆಹ್ಹಾ! ಆ ಕಂಗಳಲ್ಲಿ ನಕ್ಷತ್ರಗಳ ಸಮೂಹವೇ ಇತ್ತೇನೋ, ಯಾರೇ ಅವಳ ನೋಡಿದರೂ ಪ್ರೇಮದ ಬಂದೀಖಾನೆಗೆ ಬೀಳದೇ ಇರರು, ಅಷ್ಟು ಸೌಂದರ್ಯವತಿ ನನ್ನ ಮನದರಸಿ......"

ನಾನೊಂದು ಹೂವಾಗುವೆ
ಏಕೆಂದರೆ ನನ್ನ ಹುಡುಗಿಗೆ
ಹೂವೆಂದರೆ ಇಷ್ಟವಂತೆ

ನಾನೊಂದು ಮುಗುಳು ನಗುವಾಗುವೆ
ಏಕೆಂದರೆ ನನ್ನ ಮನದನ್ನೆಗೆ
ನಗುವೆಂದರೆ ಇಷ್ಟವಂತೆ

ಒಂದೆಡೆ ಸಮಾಜವನ್ನು ತಿದ್ದುವ ಪಣ ತೊಟ್ಟ ಕವಿಯಂತೆ ಕಾಣುವ ಈ ಕವಿ ಮತ್ತೊಂದೆಡೆ ಪ್ರೇಮದಲ್ಲಿ ಮಗ್ನನಾಗದಂತೆಯೂ ಭಗ್ನನಾದಂತೆಯೂ ಕಾಣುತ್ತಾ ತನ್ನ ಕವಿತೆ ಬರಹಗಳಿಂದ ನಮ್ಮನ್ನು ಹಿಡಿದಿಡುವ ಈ ಕವಿ ಗೆಳೆಯ ಯಾರು ಎಂದು ನಿಮಗೆ ಬಹುಶಃ ಗೊತ್ತಿರುವುದಿಲ್ಲ. ಮೊನ್ನೆ ಮೊನ್ನೆ ಜನುಮ ದಿನ ಆಚರಿಸಿಕೊಂಡ ಹಿರಿಯ ಲೇಖಕರಾದ ಕುಂ. ವೀರಭದ್ರಪ್ಪ ನವರ ಕಿರಿಯ ಪುತ್ರ ಪ್ರವರ ಕೆ ವಿ ಇಂದಿನ ಎಲೆ ಮರೆ ಕಾಯಿಯ ಅತಿಥಿ. ಫೇಸ್ ಬುಕ್ ನಲ್ಲಿ ಪ್ರವರ ಕೊಟ್ಟೂರು ಎಂದು ಪರಿಚಿತವಾಗಿರುವ ಗೆಳೆಯ ಪ್ರವರನ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ..

ಪ್ರವರ ಕೆ ವಿ 

"ಬಯಲ ನಾಡು ಕೊಟ್ಟೂರಿನವ ನಾನು, ಹೆಸರು ಪ್ರವರ. ನನ್ನ ಸುತ್ತಲಿನ ಪರಿಸರ ನನ್ನನ್ನು ಬರೆಯುವಂತೆ ಮಾಡಿತು, ನಾಲ್ಕು ಕಾಸಿಗೋಸ್ಕರ ದಿನವಿಡೀ ದುಡಿಯುವ, ಕನಸುಗಳ ಅರ್ಥವೇ ಗೊತ್ತಿಲ್ಲದೊಂದಿಷ್ಟು ಜನರೂ ಇದ್ದಾರೆ ಹಾಗೆ ಇಂಥಹ ಮುಗ್ಧ ಜನರನ್ನ ಚಪ್ಪಲಿಗಿಂತಲೂ ಕಡೆಯಾಗಿ ನೋಡುವ, ಬಳಸಿಕೊಳ್ಳುವ ಅಧಿಕಾರಶಾಹಿ-ಬಂಡವಾಳಶಾಹಿಗಳೂ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬರೆಯಲಿಕ್ಕೆ ನನ್ನೊಳಗಿದ್ದ ಅಗಾಧ ಶಕ್ತಿಯೆಂದರೆ ನನ್ನಪ್ಪ, ಎಲ್ಲವನ್ನೂ ಮೆಟ್ಟಿ ನಿಲ್ಲಬೇಕೆಂಬ ಆತನ ಮಾತು......

ಮೊದಲು ಪ್ರೀತಿ-ಪ್ರೇಮದ ಕಡೆ ವಾಲಿದ್ದ ಕವಿತೆಗಳು, ಬರೆಯುತ್ತಾ ಹೋದಂತೆ ಬೇರೆಯೆಡೆಗೇ ಸೇಳೆದಂತಿತ್ತು. ಬರೆಯಲು ಶುರು ಮಾಡಿ ಮೂರು ವರುಷಗಳಾದವು, ಸಧ್ಯ ಎಮ್.ಸಿ.ಎ ಐದನೇ ಸೆಮಿಷ್ಟರ್ ನಲ್ಲಿ ಓದುತಿದ್ದೇನೆ. ಸಾಗಬೇಕಿರುವ ಹಾದಿ ತುಂಬಾ ಇದೆ ಹಾಗೆ ಅದು ನನ್ನನ್ನೇ ಕೆಕ್ಕರಿಸಿಕೊಂಡು ನೋಡಿದಂತೆ ಅನಿಸುತ್ತದೆ.

ಮೊದಲ ಕವನ

ನನ್ನ ಜನರಿವರು

ನನ್ನ ಕವಿತೆಗೆ ಎಣ್ಣೆ
ಎರೆದು ಹಣತೆ ಹಚ್ಚಿದವರು
ನನ್ನ ಜನ
ಜಾತಿ ಮತ ಕುಲವೇನೆಂದು
ತಿಳಿದಿಲ್ಲ
ತಿಳಿದಿರುವುದೊಂದೆ ಬಾಳಬೇಕೆಂಬ.........

ನೀರು ಕಾಣದೆ ಬಯಲು
ಬರಡಾಗಿರಲು ಜಾಲಿ ಗಿಡಗಳು
ಹಸಿರ ತೋರಿಸಿ ನಗುತಲಿವೆ
ಇದೆ ನಗುವ ನನ್ನ ಜನ
ನನಗೆ ಕಲಿಸಿದ್ದು.......

ಸುರಿದ ಬೆವರಿನ ನಾತ
ಆರುವ ಯಾವುದೇ ಸುಳಿವಿಲ್ಲ.
ಕಷ್ಟದಲ್ಲಿಳಿದ ಉಪ್ಪು ಬೆವರಿನಂತವರು
ನನ್ನ ಜನಗಳು ಕಪ್ಪು ಮಣ್ಣಿನಂತವರು
ಸುರಿದಷ್ಟು ತಂಪು... ಬೆಳೆದಷ್ಟು ಹರವು...

ಹಾಕಿರುವ ಕೆರಗಳು ಸವೆದು
ಸಣಕಲಾದರೂ ಬಿಡಲೊಲ್ಲದ ನನ್ನ ಜನ
ಜೀವನದ ಮೇಲಿನ ಆಸೆಯನು
ನನಗೆ ಕಲಿಸಿದ್ದು.....

ಹೊಟ್ಟೆ ತುಂಬಲಾರದ ಊಟ
ಉಂಡರೂ ಸರಿಯೇ ಪ್ರೀತಿ
ಸ್ನೇಹವ ಉಂಡು ಒಂದೊಮ್ಮೆ
ಡೇಗಿದರೆ......

ಕನಸಿಲ್ಲದ ಊರಿಗೆ ನಿದ್ರೆಯ ಪಯಣ
ಇಂಥವರು ನನ್ನ ಜನ
ಜೀವನದ ಪಾಠವ ಹೇಳಿಕೊಟ್ಟವರು.

ಉಳಿದಂತೆ ನನ್ನ ನೆಚ್ಚಿನ ಕವನಗಳ ಲಿಂಕನ್ನು ನಿಮಗೆ ಕಳಿಸಿರುತ್ತೇನೆ...... ಧನ್ಯವಾದಗಳು ಗೆಳೆಯ"

ಗೆಳೆಯ ಪ್ರವರನ ಮಾತು ತುಂಬಾ ತುಂಬಾ ಚಿಕ್ಕದಾಯಿತು ಎಂದುಕೊಳ್ಳುತ್ತಿದ್ದಂತೆ "ನಟಣ್ಣ ಹೇಳೋಕೆ ಜಾಸ್ತಿ ಇಲ್ವೇನೊ ಅನ್ನಿಸ್ತಿದೆ.... ಬೇಂದ್ರೆ ಕವನ ಸ್ಪರ್ಧೆಯಲ್ಲೂ ಎರಡು ಬಾರಿ ನನ್ನ ಕವನಗಳು ಸೆಲೆಕ್ಟ್ ಆಗಿದ್ವು...... ಬಂಡಾಯದ ಕಡೆ ಒಲವು" ಎಂದು ಹೇಳುತ್ತಾ ಮುಗಿಸಿದ ಅವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಹಿರಿಯ ಲೇಖಕರ ಮಗನಾಗಿದ್ದರೂ ತನ್ನ ಬರಹಗಳಿಂದ ತನ್ನದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗುತ್ತಿರುವ ಈ ಗೆಳೆಯನಿಗೆ ಶುಭವಾಗಲಿ. ಈ ಗೆಳೆಯ ಉತ್ತಮ ಛಾಯಾಗ್ರಾಹಕ ಸಹ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಗೆಳೆಯ ಪ್ರವರನ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಅಲ್ಲಿ ಅವರ ಕವಿತೆ, ಲೇಖನಗಳ ಜೊತೆ ಜೊತೆಗೆ ಅವರ ಕಾಲೇಜಿನ ದಿನಗಳ ವಿಡೀಯೋಗಳು ಮತ್ತು ಅವರದೇ ಕೈಯಿಂದ ಮೂಡಿರುವ ಪೆನ್ನು ಪೆನ್ಸಿಲ್ ನಿಂದ ಬರೆದ ಚಂದದ ಚಿತ್ರಗಳಿವೆ. ಕವಿತೆಗಳ ಓದಿ, ಚಿತ್ರಗಳ ವಿಡಿಯೋಗಳ ನೋಡಿ ಖುಷಿ ಪಡಿ..

http://kumveepravara.blogspot.in/

ಪ್ರವರ ಅವರ ಕವಿತೆಗಳ ಒಂದೆರಡು ಕವಿತೆಗಳ ಕೆಲವು ಸಾಲುಗಳು ಈ ಕೆಳಗಿನಂತಿವೆ.. ಖುಷಿಯಿಂದ ಓದಿಕೊಳ್ಳಿ..

ಏಕೆ,
ಮೊನ್ನೆ ಕೆರೆ ಏರಿಯ ಮೇಲೆ
ಬರುವೆನೆಂದು ಏಕೆ ಬರಲಿಲ್ಲ?
ಏನಾದರು ಮನೆಯಲ್ಲಿ
ತೊಂದರೆಯಾಯ್ತೆ?
ಅಥವಾ
ನಾನೆ ಮರೆತುಹೋದೆನೆ
*****
ನಿನ್ನ ನಗುವ ಕಂಡ 
ಮಾರನೇ ದಿನ
ಮನಸು ಹೊಚ್ಚ ಹೊಸತಂತಾಗಿದೆ
ಮುಂಗಾರಿನ ಮೊದಲ ಮಳೆಗೆ
ಘಮಗುಡುವ ಮಣ್ಣಿನಂತೆ.....
ಮಳೆಯ ಸ್ಪರ್ಷಕೆ
ಮೊಗವ ಅರಳಿಸಿ ನಗುವ
ಹಸಿರ ಚಿಗುರ ಎಲೆಯ ಮೇಲಿನ 
ಹನಿಗಳಂತೆ....
*****
ನಿನ್ನ ಕೆಂಪ್ ತುಟಿ ನೋಡಿದಾಗ್ಲೆಲ್ಲಾ
ಗುಲಾಬಿ ಹೂವ ನೆನಪಾಗ್ತೈತಿ
ದುಂಬಿ ಬಂದು ಅದರ್ ಮ್ಯಾಲೆ ಕುಂತಾಗ
ನಿನ್ನ ತುಟಿಗೆ ನೋವಾತೇನ ಅನಸ್ತೈತಿ
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :)))