ಗುರುವಾರ, ಅಕ್ಟೋಬರ್ 11, 2012


ಎಲೆ ಮರೆ ಕಾಯಿ   
ಆನೆ ಅಂದದ ಮೊಗನೆ ಹರಸೆಮ್ಮ ಹೇರಂಬ
ಜಗದೊಳು ಸಕಲವು ನಿನ್ನಿಂದಲಾರಂಭ
ದುರಿತದ ಮೋದಕ ಭಂಜಿಸೊ ಭವಹರ
ಸುಖದೊಳು ಸಲಹೆಮ್ಮ ಶಂಕರಕುವರ

ಕಳೆದ ತಿಂಗಳು ಗಣಪತಿ ಪೂಜೆಯ ಸಮಯದಲ್ಲಿ ನಮ್ಮ ನಡುವಿರುವ ಕವಿ ಸಹೋದರರೊಬ್ಬರ ಈ ಸಾಲುಗಳ ನೋಡಿ ಅವರ ಬ್ಲಾಗಿನ ಮೇಲೆ ಕಣ್ಣು ಆಡಿಸಿದ್ದೆ. ಶ್ರೀ ಕೃಷ್ಣನ ನೂರಾರು ಗೀತೆಗಳು ಎಂಬ ತಲೆ ಬರಹವಿರುವ ಅವರ ಕವಿತೆಗಳ ನೋಡಿ ಅಚ್ಚರಿಯಾಗಿತ್ತು. ನಿಜ ಹೇಳಬೇಕು ಎಂದರೆ ಅವರ ಕವಿತೆಗಳನ್ನು ಅವತ್ತು ಗಣೇಶ ಚತುರ್ಥಿಯ ದಿನವೇ ಮೊದಲು ನೋಡಿದ್ದು. ಬಹುಶಃ ನನ್ನಲ್ಲಿ ಕಂಡೂ ಕಾಣದಂತಿರುವ ನಾಸ್ತಿಕತೆ ಅವರ ಭಕ್ತಿಯ ಗೀತೆಗಳ ಮೇಲೆ ಕಣ್ಣು ಹಾಯಿಸಲು ನಿರಾಕರಿಸಿತ್ತು ಎನಿಸುತ್ತೆ. ಯಾಕೆಂದರೆ ಹೆಚ್ಚು ಸಲ ಪ್ರೇಮಿಗೆ, ಪ್ರೇಮ ಕವಿತೆಯ ಗೀಚುವ ಕವಿಯ ಕಣ್ಣಿಗೆ ದೇವರು ಕಾಣುವುದಿಲ್ಲ. ಆದರೆ ಬನ್ನಿ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ತನ್ನ ಪ್ರೇಮಿ ಕರೆದರೆ ಪ್ರೇಮಿ ಅಥವಾ ಪ್ರೇಮ ಕವಿ ಎಂತಾ ನಾಸ್ತಿಕನೇ ಆದರೂ ತಾನು ಬರಲ್ಲ ಅನ್ನುವುದಿಲ್ಲ. ಪ್ರೇಮಕ್ಕೂ ದೇವರಿಗೂ ಇರುವ ಶಕ್ತಿಯೇ ಅಂತಹುದು. ಎರಡೂ ಒಂದರಲ್ಲಿ ಒಂದು ಮಿಳಿತವಾಗಿವೆ. ಅದಕ್ಕೇ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರೇಮದಲ್ಲಿ ದೈವವನ್ನೂ ದೈವದಲ್ಲಿ ಪ್ರೇಮವನ್ನೂ ಕಾಣಲು ಹಾತೊರೆಯುವುದು. ಆ ತರಹದ ಆತೊರೆಯುವಿಕೆ  ಕೆಲವರಲ್ಲಿ ಪ್ರೇಮ ಅಗಾಧತೆಯನ್ನು ಪಡೆದು ಅಕ್ಷರ ರೂಪದಲ್ಲಿ ಪ್ರೇಮ ಕಾವ್ಯವಾಗಿ ಹೊರ ಹೊಮ್ಮಿದರೆ, ಕೆಲವರಲ್ಲಿ ಭಕ್ತಿ ಅಗಾಧತೆಯನ್ನು ಪಡೆದು ಪ್ರಾರ್ಥನೆಗಳ ರೂಪದಲ್ಲಿ ಹೊರ ಹೊಮ್ಮುತ್ತದೆ. ಅಂತಹ ಭಕ್ತಿಯ ಅಗಾಧತೆಯನ್ನು ತನ್ನೊಳಗೆ ತುಂಬಿಕೊಂಡು ಒಂದು ವಿಭಿನ್ನವಾದ ಕಾವ್ಯ ಕೃಷಿಯಲ್ಲಿ ತೊಡಗಿರುವ ಸಹೋದರನ ಬ್ಲಾಗಿನ ಹೆಸರು ಶ್ರೀನಿವಾಸ ವಿಠ್ಠಲ.

ಸುಲಭವಲ್ಲ ಪಯಣ ಮುಂದೆ
ಬಂಡೆಗಲ್ಲಿಗೆ ಮೈ ತರಚಿ ಪೊದರುಗಳಲಿ ಕೈಕಾಲು
ಪರಚಿ ಜಾರು ಜವುಗು ಮಣ್ಣು ಜಿಗಣೆ
ಕಾರಣವಿರದೆ ಕೂಗುವ ಜೀರುಂಡೆ ಸುಂಯ್ಯೆನುವ
ಸೊಳ್ಳೆ ಬೇಡದ ಗಾನ ಜೀವನ

ಪ್ರೇಮವಿದ್ದೆಡೆ ಪ್ರಯಣವಿದ್ದಂತೆ ಭಕ್ತಿಯಿದ್ದೆಡೆ ಆಧ್ಯಾತ್ಮ ತಂತಾನೆ ಹುಟ್ಟಿಬಿಡುತ್ತದೆ. ಮೇಲಿನ ಸಾಲುಗಳು ಆಧ್ಯಾತ್ಮದ ಸಾಲುಗಳಂತೆ ಕಂಡರೂ ಅವು ಭಕ್ತಿಯ ಪ್ರಭಾವದಿಂದ ಮೂಡಿದ ಸಾಲುಗಳು ಎಂಬಂತೆ ಗೋಚರವಾಗುತ್ತವೆ. ದೇವರುಗಳು ನಮ್ಮ ಮೇಲೆ ಮೂಡಿಸುವ ಪರಿಣಾಮವಾಗಿ ನಾವು ಭಕ್ತರಾಗಿ ಭಕ್ತಿ ಗೀತೆಗಳ ರಚಿಸುವುದು, ದೇವರ ನಾಮ, ವಚನಗಳು, ದಾಸರ ಪದಗಳು, ಭಕ್ತಿ ಗೀತೆಗಳು, ಇವು ಬೀರುವ ಪ್ರಭಾವದಿಂದ ದೇವರ ನಾಮಗಳ ರಚಿಸುವುದು ಎರಡೂ ವಿಭಿನ್ನ ಸ್ವಾದವನ್ನು ಹೊಂದಿರುತ್ತವೆ. ಭಕ್ತಿ ಸ್ವಾಭಾವಿಕವಾಗಿದ್ದು ಹಾಗೆಯೇ ಹರಿದರೆ ಅದು ಬೀರುವ ಪರಿಣಾಮ ಬೇರೆ. ಬೇರೆ ರಚನೆಗಳ ಪ್ರಭಾವದಿಂದ ರಚಿಸಿದ ರಚನೆಗಳು ಬೀರುವ ಪರಿಣಾಮ ಬೇರೆ. ಹಾಗೆಯೇ ರಚಿಸಿದ ರಚನೆಗಳಿಗೆ ಈಗಾಗಲೇ ಸಂಗೀತ ಸಂಯೋಜನೆಗೆ ಒಳಗಾಗಿರುವ ನಮ್ಮ ಭಾಷೆಯ ಅಥವಾ ಬೇರೆ ಭಾಷೆಯ ಗೀತೆಗಳ ದಟ್ಟ ಛಾಯೆ ಕಾಣಬಾರದು. ಹಾಗಾದಾಗ ಮಾತ್ರ ಯಾವುದೇ ಗೀತೆಯಾಗಲಿ, ಭಕ್ತಿ ಗೀತೆಯಾಗಲಿ ತನ್ನ ಸ್ವಂತಿಕೆಯ ಸ್ವಾದದಿಂದ ಜನರಿಗೆ ಹತ್ತಿರವಾಗುವುದು. ನಮ್ಮ ಕವಿ ಸಹೋದರರ ರಚನೆಗಳು ಗೀತೆಗಳಾಗಿವೆ ಎಂದು ಕೇಳಿದ್ದೆ. ಅವರು ಕಳುಹಿಸಿದ ಮೂರ್ನಾಲ್ಕು ಗೀತೆಗಳ ಕೇಳಿದಾಗ ಯಾಕೋ ಈ ಕಿವಿ ಮಾತನ್ನು ಅವರಿಗೆ ಹೇಳಬೇಕು ಅನಿಸಿತು.

ಕತ್ತಲೆಯ ನಂತರ ಬೆಳಕಿದೆ ಗೆಳತಿ
ನಡೆದುಬಿಡು ಇನ್ನೊಂದೇ ಗಾವುದ
ಪೂರ್ವದ ರವಿಯೂರಿಗೆ
ಎದೆಗೂಡಲಿ ನಂಬುಗೆಯ ದೀಪ
ನಂದದಿರಲಿ ಅವನ ಬೇಡಿಕೊ
ಅಂಗೈ ತಡೆಗೋಡೆ ಮಾಡು
ಹಠಮಾರಿ ಗಾಳಿಗೆ

ಇವರು ಬರೀ ಭಕ್ತಿ ಗೀತೆಗಳನ್ನೇ ಬರೆಯುತ್ತಾರ ಎಂದು ನಾವಂದುಕೊಂಡರೆ ತಪ್ಪಾದೀತು. ಯಾಕೆಂದರೆ ಭಕ್ತಿ ಗೀತೆಗಳ ಜೊತೆ ಜೊತೆಗೆ ನಮ್ಮ ಕವಿ ಸಹೋದರ ಚಂದದ ಪ್ರೇಮ ಕವಿತೆ, ಬಂಡಾಯ ಕವಿತೆಗಳನ್ನು ಚಂದವಾಗಿ ರಚಿಸಿದ್ದಾರೆ. ಇಂದಿನ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ಸಹೋದರ ಎನ್ ಕೃಷ್ಣಮೂರ್ತಿಯವರನ್ನು ಎಲೆ ಮರೆ ಕಾಯಿ ಎಂದರೆ ತಪ್ಪಾದೀತು.. ಆದರೂ ಹಿರಿಯರ ಅನುಭವದ ಮಾತಗಳನ್ನು ಕೇಳೋಣ ಎಂದು ಅವರನ್ನು ವಿಶೇಷ ಅತಿಥಿಯಾಗಿ ಇಲ್ಲಿಗೆ ಕರೆತಂದಿದ್ದೇನೆ. ಕೃಷ್ಣಮೂರ್ತಿಯವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ...

ಎನ್ ಕೃಷ್ಣಮೂರ್ತಿ ಭದ್ರಾವತಿ

"ನನ್ನೂರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ನೆಲ್ಲೀಗೆರೆ ಹತ್ತಿರದ ತೊರೆಮಾವಿನಕೆರೆ ಗ್ರಾಮ. ಮಳೆ ಬಿದ್ದರೆ ನಮ್ಮ ಹೊಟ್ಟೆ ಒದ್ದೆಯಾಗುವ ಭೂಮಿ. ಅದನ್ನೇ ನಂಬಿದ ವಕ್ಕಲಿಗರ ಮನೆ. ಹೊಟ್ಟೆಪಾಡಿಗಾಗಿ ತಾತ, ತಂದೆ ಇಬ್ಬರೂ ಪೂಜ್ಯ ಹೆಚ್.ಎಲ್.ನಾಗೇಗೌಡರು ಭದ್ರಾವತಿಯ ಕಬ್ಬಿಣದ ಫ್ಯಾಕ್ಟರಿಯಲ್ಲಿ ಕೊಡಿಸಿದ ನೌಕರಿ ನಂಬಿ ಊರು ಬಿಟ್ಟವರು. ನಾನು ಹುಟ್ಟಿದ್ದು, ನನ್ನೂರು ತೊರೆಮಾವಿನಕೆರೆಯ ಎದುರಿನ ಕಾರಬೈಲಿನ ದೊಡ್ಡಪ್ಪ ಪಟೇಲ್ ಗಂಗಾಧರಗೌಡರ ಮನೆಯಲ್ಲಿ. ಬೆಳೆದಿದ್ದು, ಓದಿದ್ದು ಶಿವಮೊಗ ಜಿಲ್ಲೆಯ ಭದ್ರಾವತಿ. ಅಪ್ಪ ಅಟೆಂಡರ್. ಸಣ್ಣ ಸಂಬಳ. ಅಪ್ಪನ ನಂತರ ಏಳು ತಂಗಿಯರು. ಕಿತ್ತುತಿನ್ನುವ ಬಡತನ. ಅದರ ವಿರುದ್ಧ ಹೋರಾಡಲಿಕ್ಕಾಗಿಯೇ ಮನೆಯಲ್ಲಿ ದನ, ಎಮ್ಮೆ, ಕುರಿ ಸಾಕಣೆ. ಹಾಲು ವ್ಯಾಪಾರ, ಗುತ್ತಿಗೆ ಗದ್ದೆ ವ್ಯವಸಾಯ. ಬೇಸಿಗೆ ರಜೆಯಲ್ಲಿ ಹತ್ತಿರದ ರಾಮನಕೊಪ್ಪ ಕಾಡಿನಿಂದ ಸೌದೆ ಹೊರುವ ಅನಿವಾರ್ಯ. ಹರಿದ ಚಡ್ಡಿಯ ಹಿಂದನ್ನು ಪುಸ್ತಕಗಳಿಂದ ಮುಚ್ಚಿಕೊಂಡು, ಎಲ್ಲರಿಗೂ ಮೊದಲೇ ಶಾಲೆಯೊಳಗೆ ಕುಂತು, ಎಲ್ಲರೂ ಹೊರಹೊರಟ ನಂತರ ಕೊಠಡಿಯಿಂದ ಹೊರಬರುತ್ತಿದ್ದನು ನಾನು. ಭದ್ರಾವತಿಯ ಸೈಂಟ್ ಚಾರ್ಲ್ಸ್ ಕನ್ನಡ ಕಾನ್ವೆಂಟ್ನಲ್ಲಿ ಪ್ರಾಥಮಿಕ, ಸಿಲ್ವರ್ ಜ್ಯೂಬಿಲಿ ಸರ್ಕಾರಿ ಹೈಸ್ಕೂಲಿನಲ್ಲಿ ಹತ್ತನೆ ತರಗತಿಯವರೆಗೆ, ಸರ್.ಎಂ.ವಿಶ್ವೇಶ್ವರಾಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ., ನಂತರ ತೆರೆದ ಅಂಚೆಯಲ್ಲಿ ಮಾರುಕಟ್ಟೆ ನಿರ್ವಹಣೆಯ ಸ್ನಾತಕ ಡಿಪ್ಲೋಮ, ವ್ಯವಹಾರ ನಿರ್ವಹಣೆಯಲ್ಲಿ ಡಿಪ್ಲೋಮ ಹಾಗೂ ಸೆಕ್ರೆಟೇರಿಯಲ್ ಪ್ರಾಕ್ಟೀಸ್, ಕನ್ನಡ ಬೆರಳಚ್ಚು.

ಕಾಲೇಜುದಿನಗಳು. ಪ್ರೀತಿ ಬಗೆಗಿನ ಕನವರಿಕೆಯ ಚೈತ್ರಕಾಲ. ಮೊದಲನೆ ಬಿ.ಕಾಂನ ಪಠ್ಯಗಳಿಂದ ಇಂಗ್ಲೀಷ್ ಪದ್ಯವೊಂದನ್ನು ಭಾವಾನುವಾದ ಮಾಡಿದ್ದೆ. ಸಣ್ಣಕತೆಗಳೂ ಜೋಳಿಗೆಯೊಳಗಿದ್ದವು. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನವರು ಪ್ರತಿವರ್ಷವೂ ಏರ್ಪಡಿಸುತ್ತಿದ್ದ ದ.ರಾ.ಬೇಂದ್ರೆ ಸ್ಮೃತಿ ಅಂತರಕಾಲೇಜು ಕವನಸ್ಪರ್ಧೆಯಲ್ಲಿ ಭಾಗವಹಿಸಲು, ನನ್ನ ಬಿಡಿಗವನಗಳ ಪ್ರತಿಯನ್ನು ನನಗೆ ಪಾಠಮಾಡುತ್ತಿದ್ದ ಪೂಜ್ಯ ಎಂ.ವಿ.ತಿರುಮಲೇಶ್ ಅವರಲ್ಲಿ ಕೊಟ್ಟೆ. ಅವರು ಅದನ್ನು ತಿರುಗಿಸಿಯೂ ನೋಡಲಿಲ್ಲ. ’ಏನ್ ಓದ್ತಿಯೊ? ಬಿ.ಕಾಂ.. ಹೋಗಿ ಬ್ಯಾಲೆನ್ಸ್ ಶೀಟ್ ಟ್ಯಾಲಿ ಮಾಡು’.. ಅಂದರು. ನಿರಾಶೆಯಾಗಲಿಲ್ಲ. ನನ್ನ ಪುಣ್ಯ. ನನಗೆ ಕನ್ನಡ ಪಾಠಮಾಡುತ್ತಿದ್ದ, ಕಾಲೇಜಿನ ಪ್ರಾಂಶುಪಾಲರಾದ, ಕರ್ನಾಟಕದ ಅಂಬೇಡ್ಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕರಾದ, ಪ್ರೊ.ಬಿ.ಕೃಷ್ಣಪ್ಪನವರಲ್ಲಿಗೆ ಹಸ್ತಪ್ರತಿ ಕೊಟ್ಟೆ. ಆಯ್ಕೆಮಾಡಿ ಸ್ಪರ್ಧೆಗೆ ಕಳುಹಿಸಿದರು. ನನ್ನ ಕವಿತೆ ಸ್ಪರ್ಧೆಯಲ್ಲಿ ಆಯ್ಕೆಯಾಗಿತ್ತು. ಆಯ್ಕೆ ಮಾಡಿದವರು ಶ್ರೀ ಕ.ವೆಂ.ರಾಜಗೋಪಾಲ. ಬಹುಮಾನ ಪಡೆದದ್ದು ರಾಷ್ಟ್ರಕವಿ ಕುವೆಂಪು ಅವರ ಅಮೃತಹಸ್ತಗಳಿಂದ, ಅವರ ಮೈಸೂರಿನ ಮನೆಯಲ್ಲಿ.

ಶಿವಮೊಗ್ಗದವನಾ. ನಮ್ಮ ಜಿಲ್ಲೆಯವನು. ಚೆನ್ನಾಗಿ ಬರೆ ಅಂತ ಅಪ್ಪಿಕೊಂಡರು ರಾಷ್ಟ್ರಕವಿ. ನಾನು ಅವರ ಪಾದಗಳಿಗೆ ಹಣೆಯಿಟ್ಟುಬಿಟ್ಟೆ. ಯಾವ ಸಾಹಿತ್ಯ ಪ್ರಶಸ್ತಿ ಈ ಪುಣ್ಯಕ್ಕಿಂತ ದೊಡ್ಡದು...? ಅಂದು ಕವಿಮಿತ್ರ ಎಸ್.ಮಂಜುನಾಥ ಅವರ ’ಹಕ್ಕಿಪಲ್ಟಿ’ ಕವನ ಸಂಕಲನ ಬಿಡುಗಡೆ. ಕುವೆಂಪುರವರ ಪುಣ್ಯಹಸ್ತಗಳಿಂದ. ಕವಿಮಿತ್ರರಾದ ಅಬ್ದುಲ್ ರಶೀದ್, ಮಮತಾ ಜಿ ಸಾಗರ, ಆರತಿ ಹೆಚ್.ಎನ್., ಜೊತೆಗಿದ್ದರು. ನಂತರ ಆಕಾಶವಾಣಿ, ಭದ್ರಾವತಿಯ ’ಯುವವಾಣಿ’ ಕಾರ್ಯಕ್ರಮದಲ್ಲಿ ನನ್ನ ಮೊದಲ ಕತೆ ’ಚೋಮ ನಕ್ಕ’ ಪ್ರಸಾರವಾಯಿತು. ರೆಕಾರ್ಡಿಂಗಿನ ದಿನ ಜೊತೆಗಿದ್ದವರು ಕನ್ನಡದ ಪ್ರಮುಖ ವಿಮರ್ಶಕರಾದ ಶ್ರೀ ಓ.ಎಲ್.ನಾಗಭೂಷಣ ಅವರು. ’ಕನ್ನಡ ಎಂ.ಎ. ಏನಯ್ಯ? ಚೆನ್ನಾಗಿ ಬರೆದಿದ್ದೀಯ’ ಅಂದ್ರು. ನಂಬಿಕೆ ಬಂತು. ಆಕಾಶವಾಣಿ ಕಾರ್ಯಕ್ರಮಗಳು ನಿರಂತರವಾದವು. ಅಲ್ಲೇ ತಾತ್ಕಾಲಿಕ ನಿರ್ಮಾಣ ಸಹಾಯಕನಾಗಿ ನೌಕರಿ ಕೆಲದಿನಗಳು. ಪ್ರೋತ್ಸಾಹಿಸಿದವರು ಈಗ ದೂರದರ್ಶನದಲ್ಲಿ ಉಪನಿರ್ದೇಶಕರಾಗಿರುವ ಶ್ರೀ ಸಿ.ಎನ್.ರಾಮಚಂದ್ರ ಅವರು. ತರುವಾಯ, ಕರುನಾಡಿನ ಎಲ್ಲಾ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ, ’ತಾಯಿನುಡಿ’ಯಂತಹ ಹೊರನಾಡಿನ ಪತ್ರಿಕೆಗಳಲ್ಲಿ, ಸಂಕ್ರಮಣ, ಶೂದ್ರ ಸಾಹಿತ್ಯಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟವಾದವು. ನನ್ನ ಕವಿತೆ ’ರಾಮಾಯಣ ಗೀತೆ’ಗೆ ಸಂಕ್ರಮಣ ಸಾಹಿತ್ಯ ಸ್ಪರ್ಧೆಯ ಬಹುಮಾನ. ತುಷಾರ ಮಾಸಿಕದ ತಿಂಗಳ ಕವಿತಾ ಸ್ಪರ್ಧೆಯಲ್ಲಿ, ಶ್ರೀ ಜಿ.ಎಸ್.ಸಿದ್ದಲಿಂಗಯ್ಯ, ಶ್ರೀ ಹೆಚ್.ಎಸ್.ವಿ.ಯವರು ನನ್ನ ಕವಿತೆಗಳನ್ನ ಆಯ್ಕೆಮಾಡಿದ ಸಂತಸ ಮರೆಯಲಾರದವು. ಎಲ್ಲರೂ ಕೇಳುತ್ತಿದ್ದಿದೊಂದೆ "ಕನ್ನಡ ಎಂ.ಎ. ಏನಯ್ಯಾ.?"

ಕಾಲೇಜು ಓದಿನ ಜತೆಜತೆಗೆ ಲೋಹಿಯಾ, ಜೆ.ಪಿ., ಸಮಾಜವಾದಿ ವಿಚಾರಗಳನ್ನು ತಲೆಗೆ ತುರುಕಿದವರು ಪ್ರೊ.ಬಿ.ಕೃಷ್ಣಪ್ಪ ಹಾಗೂ ಕತೆಗಾರರಾದ ಭದ್ರಾವತಿಯ ಶ್ರೀ ಎಂ.ಚಂದ್ರಶೇಖರಯ್ಯ. ಪರಿಣಾಮ, ಚಿನ್ನಪ್ಪರೆಡ್ಡಿ ಮತ್ತು ವೆಂಕಟಸ್ವಾಮಿ ಆಯೋಗದ ವರದಿಗಳ ಸಂದರ್ಭದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ. ಚಂದ್ರಗುತ್ತಿಯ ಬೆತ್ತಲೆಸೇವೆ ತಡೆಯಲು ಹೋರಾಟ. ಈಗಿನ ಎಬಿವಿಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ರಘುನಂದನ್ ಹಾಗೂ ನನ್ನ ನೆರೆಯ ಹೆಣ್ಣುಮಗಳು, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ, ಶ್ರೀಮತಿ ಸಿ.ಮಂಜುಳಾ, ನಾವೆಲ್ಲ ವಿದ್ಯಾರ್ಥಿ ಸಂಘಟನೆಗಳ ಹೋರಾಟಗಾರರು. ಎಂಥಾ ಚಿನ್ನದ ದಿನಗಳವು. ಇಂದು ನಾಯಕರುಗಳ ವೈಯಕ್ತಿಕ ಆಸೆಗಳಿಗೆ ಹರಿದು ಹಂಚಿಹೋಗಿರುವ ಸಂಘಟನೆಗಳನ್ನು ಕಂಡಾಗಲೆಲ್ಲ ಅಯ್ಯೋ ಅನ್ನಿಸುತ್ತೆ.

ಬಾಲ್ಯದಿಂದಲೂ ಓದುವ ಹಸಿವು. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ ಯಾವುದಾದರೂ ಸರಿ. ದಿನಪತ್ರಿಕೆಗಳ ಭಾನುವಾರದ ಸಾಪ್ತಾಹಿಕ ಪುರವಣಿಗಳಲ್ಲಿ ಬರುತ್ತಿದ್ದ ಕವಿತೆಗಳನ್ನ ಆಸಕ್ತಿಯಿಂದ ಓದುತ್ತಿದ್ದೆ...ಏನೋ ಹೊಳೆದಂತೆ.. ಮತ್ತೇನೊ ತಿಳಿದಂತೆ.. ಭದ್ರಾವತಿಯ ಕೇಂದ್ರ ಗ್ರಂಥಾಲಯ ನಿತ್ಯವಾಯಿತು. ಜೇಡ ಹಿಡಿದು ಕಪಾಟಿನೊಳಗಿದ್ದ, ಶ್ರೀರಾಮಾಯಣ ದರ್ಶನಂ, ಬೇಂದ್ರೆಯವರ ಕಾವ್ಯ, ಸು.ರಂ,ಎಕ್ಕುಂಡಿ, ಹೆಚ್.ಎಸ್.ವಿ., ಬಿ.ಆರ್.ಲಕ್ಷ್ಮಣರಾಯರು, ಡುಂಡಿರಾಜ್ ಅವರ ಸಾಹಿತ್ಯವನ್ನು ಓದಿ ಹಸಿವು ಇಂಗಿಸಿಕೊಂಡೆ. ಆಗ ಗ್ರಂಥಾಲಯದ ಪಾಲಕರಾಗಿದ್ದವರು ಶ್ರೀ ಬೆಳಗಲಿಯವರು. ಪುಣ್ಯಾತ್ಮ ಚೆನ್ನಾಗಿರಲಿ.

ಹೊಟ್ಟೆಪಾಡಿಗೆ ಮೊದಮೊದಲು ಬಿ.ಕಾಂ., ಮುಗಿದ ನಂತರ ಓದಿನ ಜೊತೆಗೆ, ಭದ್ರಾವತಿಯಲ್ಲಿ ಅಕೌಂಟ್ಸ ಬರೆಯುತ್ತಿದ್ದೆ. ಆಕಾಶವಾಣಿಯಲ್ಲಿ ತಾತ್ಕಾಲಿಕ ನೌಕರಿ. ಎಲ್.ಐ.ಸಿ.ಯಲ್ಲಿ ತಾತ್ಕಾಲಿಕ ನೌಕರಿ. ಸಣ್ಣ ದುಡಿಮೆಗೆ ಬದುಕು ಅಸಾಧ್ಯ ಅನಿಸಿತು. ನಡುನಡುವೆ ಸರ್ಕಾರಿ ನೌಕರಿ ಪ್ರಯತ್ನ. ಲಿಖಿತ ಪರೀಕ್ಷೆ ಪಾಸು. ಸಂದರ್ಶನದಲ್ಲಿ ನಪಾಸು. ಕಾರಣ ಈಗ ಅರಿವಾಗಿದೆ. ದಾಂಡೇಲಿಯಲ್ಲಿ ಒಂದೆರಡು ವರ್ಷ ದುಡಿದಿದ್ದಾಯ್ತು. ೧೯೯೩ರಲ್ಲಿ ಬೆಂಗಳೂರಿಗೆ ಬಂದುಬಿಟ್ಟೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ೧೬೦೦ ತಿಂಗಳ ಸಂಬಳ. ಸುರಕ್ಷತೆ ಹಾಗೂ ಗುಣಮಟ್ಟ ವಾರ್ಷಿಕ ಸ್ಪರ್ಧೆಗಳಲ್ಲಿ ಬಹುಮಾನಗಳು. ದೆಹಲಿಯ ಭಾರತೀಯ ಕೈಗಾರಿಕೆಗಳ ಮಹಾಮಂಡಳ (ಸಿ.ಐ.ಐ.)ನವರು ಏರ್ಪಡಿಸಿದ್ದ ಗುಣಮಟ್ಟದ ಬಗೆಗಿನ ಸ್ಲೋಗನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮೊದಲ ಬಹುಮಾನ. ೨೦೦೮ರಲ್ಲಿ ಕಂಪನಿಯಿಂದ ಹೊರಬಂದಾಗ ೬೦೦೦೦ ತಿಂಗಳ ಸಂಬಳ. ನಂತರ ೨ ವರ್ಷಗಳು ಬೆಂಗಳೂರಿನ ಕಂಪನಿಯೊಂದರಲ್ಲಿ ’ಮುಖ್ಯನಿರ್ವಹಣಾಧಿಕಾರಿ’ಯಾಗಿ ನೌಕರಿ. ಈಗ ನನ್ನದೇ ಕಂಪನಿ. ಕೈಗಾರಿಕಾ ಮತ್ತು ವಿದ್ಯುತ್ ಯೋಜನೆಗಳಿಗೆ ಮೂಲಸೌಕರ್ಯ ಸೇವೆ ನೀಡುತ್ತಿದ್ದೇವೆ. ಬೆಂಗಳೂರಿನಲ್ಲಿ ಸ್ವಂತ ಮನೆ. ಎರಡೊತ್ತಿನ ಊಟ. ಒಬ್ಬಳೇ ಮಡದಿ ನಾಗರತ್ನ. ಮುದ್ದಿನ ಎರಡು ಹೆಣ್ಣುಮಕ್ಕಳು - ಮಾಯಾ ಕೃಷ್ಣಮೂರ್ತಿ, ೯ನೇ ತರಗತಿ ಓದು. ಒಳ್ಳೆಯ ಅಥ್ಲೀಟ್. ಆಟ ಹಾಗೂ ಕ್ರಿಯೇಟಿವ್ ಡ್ರಾಯಿಂಗುಗಳಲ್ಲಿ ಚಿನ್ನದ ಪದಕಗಳನ್ನು ತಂದುಕೊಂಡಿದ್ದಾಳೆ. ಎರಡನೆಯವಳು, ೫ ವರ್ಷದ ಅಮಿಷಾ ರಾಜಿ ಮೂರ್ತಿ. ಸಂಗೀತ ವಿದುಷಿ ಶ್ರೀಮತಿ ಸಂಗೀತಾ ಕಟ್ಟಿ ಕುಲಕರ್ಣಿಯವರ ಸಹೋದರಿ ಶ್ರೀಮತಿ ಸರಿತಾ ಕಟ್ಟಿಯವರಲ್ಲಿ ಹಿಂದೂಸ್ಥಾನಿ ಹಾಡುಗಾರಿಕೆ ಕಲಿಕೆ ಪ್ರಾರಂಭಿಸಿದ್ದಾಳೆ.

ನನ್ನ ಪ್ರಕಾರ, ದಾಸಸಾಹಿತ್ಯಕ್ಕೆ ಈ ತಲೆಮಾರಿನ ಕೊಡುಗೆ ಕಡಿಮೆ. ಆ ನಿಟ್ಟಿನಲ್ಲಿ ಒಂದು ಪ್ರಯತ್ನ ನನ್ನ ಭಕ್ತಿ ಹಾಗೂ ಭಕ್ತಿಭಾವಸಾಹಿತ್ಯ ರಚನೆ. ನಾನು ಭಗವಂತನನ್ನು ನಂಬುತ್ತೇನೆ. ಹಲವಾರು ಪ್ರಸಿದ್ಧ ಹಾಡುಗಾರರು ನನ್ನ ಕೃತಿಗಳನ್ನು ಕರ್ನಾಟಕದಾದ್ಯಂತ ಹಾಡಿದ್ದಾರೆ. ಹಾಡುತ್ತಿದ್ದಾರೆ. ಅವರ ಕೊರಳು ತಣ್ಣಗಿರಲಿ. ಇಲ್ಲಿಯವರೆಗೂ ೨೯೦ಕ್ಕೂ ಮಿಕ್ಕಿ ಕೃತಿಗಳ ರಚನೆ. ೨೦೧೦ರಲ್ಲಿ ’ಶ್ರೀಕೃಷ್ಣ ಗೀತೆಗಳು’ ಎನುವ ೨೩ ರಚನೆಗಳ ಪುಸ್ತಕದ ಬಿಡುಗಡೆಯ ಭಾಗ್ಯ. ನನ್ನ ಗುರುಗಳಾದ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿಯವರಿಂದ. ಅವರ ನಿರಂತರ ಪ್ರೋತ್ಸಾಹ. ನನ್ನೆಲ್ಲಾ ವ್ಯವಹಾರಗಳ ಗಡಿಬಿಡಿಯ ನಡುವಿನ ಸಮಯವೇ ’ನನ್ನ ಕವಿಸಮಯ’. ಆಗಲೇ ಮೂಡುವ ಸಾಲುಗಳು ಹಾಡುಗಳಾಗುತ್ತವೆ. ಭಗವಂತನ ಧ್ಯಾನಕ್ಕೆ ನಿಗದಿತ ಸಮಯವಿಲ್ಲ ಅಂದುಕೊಂಡವನು ನಾನು. ನನ್ನ ಪ್ರಕಾರ, ನವೋದಯ, ನವ್ಯ, ದಲಿತ, ಬಂಡಾಯ, ಭಕ್ತಿ, ಭಕ್ತಿ-ಭಾವ ಇನ್ನೆಲ್ಲ ಪ್ರಕಾರದ ಸಾಹಿತ್ಯಗಳು ಸಮಾಜದ ಒಳಿತನ್ನ ಬಯಸುವುದಾದರೆ ಸರ್ವಕಾಲಕ್ಕೂ ಅವು ಸ್ವೀಕೃತಾರ್ಹ.

ಎಲ್ಲಾ ಕನ್ನಡದ ಬ್ಲಾಗುಗಳನ್ನು ಪ್ರವೇಶಿಸಿದ್ದೇನೆ...ಓದಿ ಖುಶಿಗೊಂಡಿದ್ದೇನೆ. ಅಲ್ಲಿ ಚಿಗುರುಗಳಿವೆ...ಅವು ಬೆಳೆಯಲಿ. ಹಿರಿಯರು ಅವುಗಳಿಗೆ ಪ್ರೋತ್ಸಾಹದ ನೀರೆರೆಯುತ್ತಿರಲಿ...’ಕನ್ನಡಬ್ಲಾಗ್’ನ ನಿರ್ವಹಣೆ ಚೆನ್ನಾಗಿದೆ. ಅದರ ಅವಶ್ಯಕತೆಯೂ ಇದೆ. ’ಕನ್ನಡ ಬ್ಲಾಗ್’ನಿಂದಲೇ ಸ್ನೇಹಿತರಾದ ನೀವು, ತಿರುಮಲೈ ರವಿಯವರು, ವಾಜಪೇಯಿ ಸರ್, ಪುಷ್ಪರಾಜ್, ಮೋಹನ್ ಕೊಳ್ಳೆಗಾಲ, ಬದ್ರಿ, ಕೃಷ್ಣಪ್ರಸಾದ್ ಇನ್ನೆಲ್ಲರ ಪರಿಚಯವಾದುದು. ಶುಭವಾಗಲಿ.

ಭದ್ರಾವತಿಯ ರೈಲ್ವೆಕಂಬಿಗಳ ಪಕ್ಕದಲ್ಲಿ ನಿಂತು ಎಮ್ಮೆ, ಹಸು ಕಾಯುತ್ತಿದ್ದ ನನ್ನನ್ನು ಬದುಕು ಬೆಂಗಳೂರಿಗೆ ತಂದು ಬಿಟ್ಟುಬಿಟ್ಟಿದೆ. ಕಷ್ಟದ ದಿನಗಳು ಕಳೆದಿವೆ. ಇನ್ನೊಬ್ಬರ ಕಷ್ಟಕ್ಕೆ ಮಿಡಿವ ಹೃದಯ ಹಾಗೆ ಇದೆ. ಭದ್ರಾವತಿಯಲ್ಲಿ ಓದಿ, ಆಟೋ ಓಡಿಸುತ್ತಿದ್ದ, ವ್ಯರ್ಥಕಾಲ ಕಳೆಯುತ್ತಿದ್ದ ನೆರೆಹೊರೆಯವರಿಗೆ ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವ ಅವಕಾಶ ನನಗೆ ಸಿಕ್ಕು, ಅವರ ಬದುಕು ಬೆಳಕಾಗಿದೆ. ಅವರ ಹಾರೈಕೆಯ ಪುಣ್ಯ ನನ್ನ ಪಾಲಿಗಿದೆ. ಭಗವಂತ ನಾನಿರುವಷ್ಟು ದಿನ ಆ ಹೃದಯವನ್ನು ಹಾಗೆಯೇ ಇಟ್ಟಿರಲಿ. ಈಗ ಬೆಂಗಳೂರಿನ ವಿದ್ಯಾಮಾನ್ಯನಗರದಲ್ಲಿ ವಾಸ. ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷನಾಗಿ, ಜನರ ಸೇವೆ ಮಾಡುವ ಭಾಗ್ಯವನ್ನೂ ಆ ಭಗವಂತ ಕರುಣಿಸಿದ್ದಾನೆ."

ಎಂದು ಮಾತು ಮುಗಿಸಿದ ಸಹೋದರ ಕೃಷ್ಣಮೂರ್ತಿಯವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಸಮಯವಿದ್ದಾಗ ಅವರ ಭಕ್ತಿಯ ರಚನೆಗಳನ್ನು ಆಹ್ವಾದಿಸಿ.. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ..
www.enkrishna.blogspot.com

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

1 ಕಾಮೆಂಟ್‌:

  1. ಎನ್ ಕೃಷ್ಣಮೂರ್ತಿ ಭದ್ರಾವತಿ, ಅವರು ಮೊದಲಿಂದಲೂ ನನಗೆ ವಿಶೇಷವೆನಿಸುವ ಕವಿ. ಇತ್ತಿಚೆಗೆ ನಾನು ಓದಿಕೊಳ್ಳುವ ಕವಿಗಳ ಕಾವ್ಯದಲ್ಲಿ ನವೋದಯದ ಇಣುಕು ಮತ್ತು ಮುಚ್ಚಟೆ ಎನಿಸುವ ಪದ ಪ್ರಯೋಗ ಅವದು.

    "ನಿನ್ನ ಶ್ರೀಚರಣದೊಳು" ಕವನದಲಿ,

    ’ತೀಡುವ ತಂಗಾಳಿ ತಿಳಿಯ ಹೇಳಿತೊ ಹರಿಯೆ
    ಜೀವ ಜೀವದ ಉಸಿರು ನೀನೆ ಎಂದು
    ತಿಳಿಹರಿವ ಜಲರಾಶಿ ನಕ್ಕು ನುಡಿಯಿತೊ ತಾನು
    ಹರಿಯ ಶ್ರೀಪಾದವನು ತೊಳೆವೆನೆಂದು (೧)’

    ಎನ್ನುವಾಗ ಆ ಪದ ಲಾಲಿತ್ಯಕ್ಕೆ ನಾನು ಮೂಕವಾಗುವವನು.

    ಇವರ ಕವನ ಶೈಲಿ ಮುಂದೆ ನನ್ನದು ’ತರವಲ್ಲ ತೆಗಿ ನಿನ್ನ ತಂಬೂರಿ...’

    ಪ್ರತ್ಯುತ್ತರಅಳಿಸಿ