ಶುಕ್ರವಾರ, ಸೆಪ್ಟೆಂಬರ್ 7, 2012

ಎಲೆ ಮರೆ ಕಾಯಿ ೫೫

ಕುಂತಿಯ ಮನದಿ
ಮೂಡಿತು ಪ್ರಶ್ನೆ,
ಮುನಿಯ ಮಂತ್ರದ
ಸತ್ವಪರೀಕ್ಷೆ,
ಗಂಗಜಳದಿ; ಸ್ನಾನವ ಮಾಡೇ,
ಸೂರ್ಯನ ಮಂತ್ರವ ಜಪಿಸಿದೂಡೆ,
ಫಲಿಸಿತು ಮಗುವಿನ ರೂಪದಲಿ

ನಾವೆಲ್ಲಾ ಪೂರ್ತಿಯಾಗಿ ರಾಮಾಯಣ ಮಹಾಭಾರತ ಕೃತಿಗಳ ಓದಿಲ್ಲದಿದ್ದರೂ ಆ ಕೃತಿಗಳಲ್ಲಿನ ಕಥೆಗಳ ಕೇಳಿದ್ದೇವೆ, ಒಂದು ಕಾಲದಲ್ಲಿ ನಮ್ಮೂರುಗಳಲ್ಲಿ ನಡೆಯುತ್ತಿದ್ದ ನಾಟಕಗಳ ಡ್ರಾಮಾ ಸೀನರಿಗಳ ಬ್ಯಾಕ್ ಗ್ರೌಂಡ್ ನಲ್ಲಿ, ಟೀವಿಯ ಪರದೆಗಳಲ್ಲಿ ಬರುತ್ತಿದ್ದ ಹಿಂದಿ ಧಾರಾವಾಹಿಗಳಲ್ಲಿ ಆ ಪಾತ್ರಗಳನ್ನು ಬೆರಗುಗಣ್ಣುಗಳಿಂದ ನೋಡಿ ಆನಂದಿಸಿದ್ದೇವೆ. ಅಚ್ಚರಿಪಟ್ಟಿದ್ದೇವೆ ಸಹ. ಅವತ್ತಿನ ದಿನಗಳಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿದ್ದ ಆ ಅಧ್ಬುತ ಪಾತ್ರಗಳನು ಇಂದಿನ ನಾಟಕ ಧಾರಾವಾಹಿಗಳಲ್ಲಿ ಹುಡುಕಿದರೂ ಸಿಗವು. ಖುಷಿಪಡುವ ಸಂಗತಿ ಎಂದರೆ ಇಂದಿನ ಮಕ್ಕಳಿಗೆ ಆ ಮಹಾಕಾವ್ಯಗಳ ಕೆಲವು ಪಾತ್ರಗಳ ಅವತಾರಗಳು ಕೆಲವು ಟೀವಿಗಳಲ್ಲಿ ಕಡೇ ಪಕ್ಷ ಕಾರ್ಟೂನ್ ಕ್ಯಾರೆಕ್ಟರ್ ಗಳಲ್ಲಾದರು ಜೀವಂತವಾಗಿವೆ. ಆ ಪಾತ್ರಗಳು ಹೀಗೆ ನಮ್ಮ ಮನಃಪಟಲದಲ್ಲಿ ಇನ್ನೂ ಜೀವಂತವಾಗಿವೆ ಎಂದರೆ ಆ ಮಹಾಕಾವ್ಯಗಳಲ್ಲಿ ಏನೋ ಒಂದು ವಿಶೇಷತೆ ಇದೆ ಮತ್ತು ಅವುಗಳಲ್ಲಿ ನಮಗೆ ಕಂಡೂ ಕಾಣದಂತಿರುವ ಎಷ್ಟೋ ಜೀವನದ ರಹಸ್ಯಗಳು ಅಡಕವಾಗಿವೆ ಎನಿಸುತ್ತೆ. ಅದಕ್ಕೆ ಆ ಮಹಾಕಾವ್ಯಗಳಿಗೆ ಮತ್ತು ಅವುಗಳಲ್ಲಿ ಬರುವ ಕೆಲವು ಪಾತ್ರಗಳಿಗೆ ನಮ್ಮಲ್ಲಿ ಪೂಜ್ಯನೀಯ ಭಾವವಿದೆ. ನಮ್ಮ ದೇಶದ ಸಂಸ್ಕೃತಿಯ ಪ್ರತೀಕದಂತಿರುವ ಅಂತಹ ಮಹಾಕಾವ್ಯಗಳಲ್ಲಿನ ಪಾತ್ರಗಳ ತೆಗೆದುಕೊಂಡು ತಮ್ಮ ಬ್ಲಾಗುಗಳಲ್ಲಿ ಕವಿತೆಗಳ ಬರೆಯುವವರು ತುಂಬಾ ತುಂಬಾ ವಿರಳ. ಅಂತಹ ವಿರಳವಾಗಿ ಸಿಗುವ ಕವಿತೆಗಳಲ್ಲಿ ಕರ್ಣನ ಕುರಿತ ಮೇಲಿನ ಕವಿತೆಯ ಸಾಲು ಇತ್ತೀಚೆಗೆ ಓದಿಗೆ ಸಿಕ್ಕಿದ್ದು ಮಧುರ ಭಾವ ಎಂಬ ಬ್ಲಾಗಿನಲಿ.

ಮುದುರಿಕೊಂಡು ಚಾಪೆ ಮೇಲೆ ಮಲಗಿಕೊಂಡಿರುವ 
ಸಾವಿರ ಕನಸುಗಳೊಂದಿಗೆ, ಕಮರಿದ ಬದುಕ ಹಿಡಿದು
ಆಳದ ಮನಸಲ್ಲಿ ಉಳಿದ ದೀಪದ ಪ್ರಜ್ವಲತೆಯಲ್ಲಿ
ಮುನಿದ ಕತ್ತಲೆಗೆ ಶರಣು ಹೋದ ನಿನ್ನ ಏನನ್ನಬೇಕು 

ಕವಿಗಳೆಂದರೆ ನಮಗೆ ಒಂದು ಗೌರವ ಭಾವನೆ ಹುಟ್ಟುವುದು ಕವಿಗಳು ತಮ್ಮ ಭಾವನೆಗಳಿಗೆ ಅಕ್ಷರದ ರೂಪಕೊಡುವ ಮೋಡಿಗೆ ಅನಿಸುತ್ತೆ. ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಹುಟ್ಟದ ಅಂತಹ ಭಾವನೆಗಳು ಕವಿಗಳಲ್ಲಿ ಹೇಗೆ ಹುಟ್ಟುವುದೋ ದೇವರೇ ಬಲ್ಲ. ನಾವು ಒಬ್ಬರೊಡನೆ ಮಾತಿಗೆ ಕುಳಿತರೆ ನಮ್ಮೊಳಗಿನ ಪದಗಳೇ ಖಾಲಿಯಾದಂತೆ ಅನಿಸಿಬಿಡುತ್ತದೆ. ಆದರೆ ಕೆಲವು ಕವಿಗಳಲ್ಲಿ ಭಾವನೆಗಳು ಕವಿತೆಗಳ ರೂಪ ಪಡೆದಷ್ಟು ಮತ್ತಷ್ಟು ಕವಿತೆಗಳು ಇನ್ಯಾವುದೋ ಭಾವದಲ್ಲಿ ಅವರೊಳಗೆ ಹುಟ್ಟುತ್ತಲೇ ಇರುತ್ತವೆ. ಅದಕ್ಕೆ ಹೇಳೋದು ಕವಿ ಯಾರೇ ಆಗಿದ್ದರೂ ಅವನೊಳಗಿನ ಕವಿಗೆ ನಾವು ನಮಿಸಲೇ ಬೇಕು. ಒಮ್ಮೆ ಇವರ ಕವಿತೆಗಳ ಓದಿದರೆ ನಮ್ಮನ್ನು ಒಂದು ಭಾವನಾ ಪ್ರಪಂಚದಲ್ಲೇ ಗಿರಕಿ ಹೊಡೆಯುವಂತೆ ಮಾಡುವೆ ಈ ಕವಯತ್ರಿಗೆ ಒಂದು ನಮನ..

"ಪ್ರೀತಿಯ ಮಾತುಗಳಿಗೆ ಮನಸೋಲದವರು ಯಾರು? ನಾನು ಕೆಲವು ಸಂಬಂಧಗಳನ್ನು ಗೌರವಿಸುತ್ತೇನೆ.. ಆರಾಧಿಸುತ್ತೇನೆ.. ಪ್ರೀತಿಸುತ್ತೇನೆ... ಸೋಲುತ್ತೇನೆ.. ನನಗೆ ತುಂಬಾ ಇಷ್ಟ ಎಂದರೆ ನನ್ನ ಅಮ್ಮ. ಅವಳೆಂದರೆ ನನ್ನ ಜೀವಕಿಂತ ಮಿಗಿಲು, ಹಾಗೆ ನನಗೆ ನೋವಾದಾಗ, ಆ ನೋವಿನ ಸ್ಪರ್ಶ ಯಾರಿಗೂ ಸೋಕಬಾರದು, ಕಣ್ಣೀರು ತಡವರಿಸದೆ ಬಂದಾಗ ಆ ನೀರ ಅಲೆಗಳು ಬಂದು ಯಾರಿಗೂ ಗೋಚರಿಸದೆ ಎಲ್ಲವನ್ನು ತನ್ನ ಮಡಿಲಿನಲ್ಲಿ ಅಡಗಿಸಿಕೊಳ್ಳಲಿ, ಎಂಬ ಆಶಯ.. ಹಾಗೆಯೇ ನನಗೆ ಬಲುಬೇಗ ಕೋಪ ಬರುತ್ತದೆ, ಆದರೆ ಕಾರಣವಿಲ್ಲದೆ ಯಾರ ಮನಸ್ಸಿಗೂ ನೋವನ್ನುಂಟು ಮಾಡಲಾರೆ, ನನಗೆ ವಿಪರೀತ ಕನಸುಗಳು.. ಆ ಕನಸುಗಳ ಸರಮಾಲೆಯಲ್ಲಿ ಯಾವುದೊಂದು ನನ್ನ ಬೆನ್ನು ಹತ್ತಿ ಕರೆಯುವುದೋ ಎಂಬ ಆಸೆ ಕಂಗಳಿಂದ ಇದಿರು ನೋಡುತ್ತಿದ್ದೇನೆ..."

ಹೀಗೆ ಭಾವನಾತ್ಮಕವಾಗಿ ಬರೆಯುತ್ತಲೇ ನಮಗೆ ಹೆಚ್ಚಾಗಿ ಭಾವ ತುಂಬಿದ ಕವಿತೆಗಳನ್ನು ಕಟ್ಟಿಕೊಟ್ಟಿರುವ ಈ ಸಹೋದರಿ ನಮ್ಮ ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯ ಅತಿಥಿ. ಅಂದ ಹಾಗೆ ಈ ಭಾವ ಜೀವಿ ಯಾರು ಎಂಬ ಕುತೂಹಲ ನಿಮಗಿರಬಹುದು. ಅವರ ಹೆಸರು ಮಾಲಿನಿ ಭಟ್.. ಸಹೋದರಿ ಮಾಲಿನಿ ಯವರೊಡನೆ ನಡೆಸಿದ ಮಾತುಕತೆಯ ತುಣುಕುಗಳು ಸಹೃದಯಿಗಳೇ ಇಗೋ ನಿಮಗಾಗಿ...

 ಮಾಲಿನಿ ಭಟ್

"ನನ್ನ ಬಗ್ಗೆ ಹೇಳಬೇಕೆಂದರೆ ನಮ್ಮದು ಕರಾವಳಿಯ ಪ್ರದೇಶವಾದ ಭಟ್ಕಳದ ಶಿರಾಲಿ ಗ್ರಾಮ. ನಮ್ಮೂರು ತುಂಬಾ ಸುಂದರವಾದ ಪ್ರಕೃತಿಯ ಸೊಬಗಿನಿಂದ ತುಳುಕುತ್ತಿದೆ. ನಾನು ಬಾಲ್ಯದಿಂದಲೂ ತುಂಬಾ ಚೂಟಿ ಹುಡುಗಿ ಎಂದು ನಮ್ಮ ಶಿಕ್ಷಕರು ಇಂದಿಗೂ ಹೇಳುವಾಗ ನನ್ನ ಬಾಲ್ಯವನ್ನು ನಾ ಮರಳಿ ಪಡೆಯ ಬೇಕೆಂಬ ಹಂಬಲ ನನ್ನನ್ನು ಅತಿಯಾಗಿ ಕಾಡುತ್ತದೆ. ಹಾಗೆಯೇ ಬಾಲ್ಯದಲ್ಲಿ ನನ್ನ ತಂದೆಯನ್ನು ಕಳೆದುಕೊಂಡ ಕೊರಗು ನನ್ನ ಮನಸಿನಲ್ಲಿ ಘಾಸಿಯಾಗೆ ಉಳಿದಿದೆ. ನನ್ನ ಕನಸುಗಳು ತುಂಬಾ ಇದ್ದರೂ ಯಾವ ಕನಸು ನನಸು ಮಾಡಿಕೊಳ್ಳಲಾಗದೆ ಹತಾಶೆಯ ಹೊಂದಿದಾಗ, ನನ್ನ ಮನಸಿನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಬರೆಯತೊಡಗಿದೆ. ನಾನು ನನ್ನ ಮೊದಲ ಕವನ ನಾ ಹೈಸ್ಕೂಲ್ ಬಿಟ್ಟಿದ್ದ ಸಂಧರ್ಭದಲ್ಲಿ ನಮ್ಮ ಶಿಕ್ಷರನ್ನು ಮನಸಿನಲ್ಲಿ ಇಟ್ಟುಕೊಂಡು, "ನನ್ನ ಭಾವನೆಗಳಿಗೆ " ಎಂಬ ಕವನ ಬರೆದೆ.

ನಂತರ ಕಾಲೇಜು ಶಿಕ್ಷಣ ಹೇಳುವಷ್ಟು ಮಧುರವಾಗಿರಲಿಲ್ಲ, ಹೇಗೋ ತಿಳಿಯದು ಕಾಲೇಜು ಶಿಕ್ಷಣ ಮುಗಿದೇ ಹೋಯಿತು.. ೨ ವರ್ಷ ಏನನ್ನು ಬರೆಯದೆ ಕಳೆದೆ... ನಂತರ ೪ ಕಾದಂಬರಿಗಳನ್ನು ಬರೆದೆ, ಹಾಗೆಯೇ ಕವನ. ಇವೆಲ್ಲದರ ಮಧ್ಯೆ ಬರವಣೆಗೆ ನನ್ನ ಉಸಿರಾಗಿ ಹೋಯಿತು, .ಬರವಣಿಗೆಯನ್ನು ಉತ್ತಮವಾಗಿ ಮೈಗೂಡಿಸಿಕೊಂಡು ಒಳ್ಳೆಯ ಕೃತಿಗಳನ್ನು ಕೊಡಬೇಕೆಂಬುದು ನನ್ನ ಮನದಾಳದ ಆಸೆ.. ಅದಕ್ಕೆ ನಿರಂತರ ಪರಿಶ್ರಮ ಪಡುವೆ.

ನನ್ನ ವೃತ್ತಿ ಓದಿದ್ದು M.A.Economics, ಈಗ ಪ್ರಾಥಮಿಕ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ಮೊದಲು ಫೇಸ್ ಬುಕ್ ಓಪನ್ ಮಾಡಿದಾಗ, ಇದರಲ್ಲಿ ನನ್ನ ಪ್ರತಿಭೆಗೆ ಒಳ್ಳೆ ಅವಕಾಶ ಸಿಗಬಹುದೆಂದು ತುಂಬಾ ಸಂತೋಷವಾಯಿತು, ಹಾಗೆಯೇ ನನ್ನನ್ನು ಪ್ರೋತ್ಸಾಹಿಸಿದವರು ಹಲವಾರು ಮಂದಿ. ಕನ್ನಡಕ್ಕಾಗಿ ಹಲವಾರು ಗ್ರೂಪ್ ಗಳು ಪರಿಶ್ರಮಿಸುತ್ತಿವೆ, ಅದರಿಂದ ಹಲವಾರು ಪ್ರತಿಭೆಗೆ ಅವಕಾಶ ಸಿಗುವಂತಾಗಿದೆ. ಎಲ್ಲಾರಿಗೂ ನನ್ನ ವಂದನೆಗಳು ..."

ಎಂದು ಮಾತು ಮುಗಿಸಿದ ಸಹೋದರಿ ಮಾಲಿನಿಯವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಸಹೃದಯಿಗಳೇ.. ಅವರ ಬ್ಲಾಗಿನ ಕೊಂಡಿ ಈ ಕೆಳಗೆ ನೀಡಿರುವೆ.. ಸಮಯವಿದ್ದಾಗ ಅವರ ಬ್ಲಾಗಿನ ಮೇಲೊಮ್ಮೆ ಒಮ್ಮೆ ಕಣ್ಣಾಡಿಸಿ ನಿಮಗೆ ಅವರ ಕವಿತೆಗಳು ಖಂಡಿತಾ ಇಷ್ಟವಾಗಬಹುದು..

www.madhurabava.blogspot.com

ಸಹೋದರಿ ಮಾಲಿನಿಯವರ ಒಂದೆರಡು ಕವಿತೆಯ ಸಾಲುಗಳನು ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ನನ್ನ ಕಣ್ಣುಗಳ ಕಟ್ಟೆಯಲ್ಲಿ
ತುಂಬು ನೀರಿನ ಹರಿವಿದೆ
ರಭಸದಿ ಸೋಕಿದ ಗಾಳಿಯಲ್ಲಿ
ನೆನಪಿನ ರಸವು ಜಾರುವುದೆಂಬ ಭಯ 
****
ಮನಸ ತುಮುಲ ಎಲ್ಲ ಅಕ್ಷರವಾಗದು
ಹೇಳುವೆನೆಂದರೂ ಎಲ್ಲ ಹೇಳಲಾಗದು
ಅರಿಯದಂತೆ ಮೌನವಾಗುವುದು
ಉತ್ತರ ಹೇಳದೆ ನೀ ಸರಿದ ರೀತಿ ..
*****

ಮತ್ತೆ ಸಿಗೋಣ

ಪ್ರೀತಿಯಿಂದ
ನಟರಾಜು :))

3 ಕಾಮೆಂಟ್‌ಗಳು:

  1. ಮಧುರ ಭಾವ..ಆ ಭಾವವೇ ಸುಂದರ...ಅದು ಮಧುರವಾಗಿದ್ದರೆ ಇನ್ನಷ್ಟು ಸುಂದರ...ಆನಂದ್ ಚಿತ್ರದಲ್ಲಿ ಹೇಳುವಂತೆ..हर हसीके पीछे गम भी होता है बाबु मोशाय...ಸಮುದ್ರದಾಳಕ್ಕೆ ಇಳಿದರೆ ಸಿಗುವುದು ಮುತ್ತು..ಸುಮಧುರ ಬ್ಲಾಗ್ ಇದು...ಈ ಬ್ಲಾಗಿನ ಮಾಲಿಕರಿಗೆ ಅಭಿನಂದನೆಗಳು..
    ಇಂತಹ ಮಧುರವಾದ ಮಾಣಿಕ್ಯವನ್ನು ಪರಿಚಯಿಸಿದ ನಿಮಗೆ ಅಭಿನಂದನೆಗಳು..ಹಾಗು ಧನ್ಯವಾದಗಳು..

    ಪ್ರತ್ಯುತ್ತರಅಳಿಸಿ