ಗುರುವಾರ, ಡಿಸೆಂಬರ್ 13, 2012


ಎಲೆ ಮರೆ ಕಾಯಿ ೬೭
ಬದುಕಿನ ಕಾಲಘಟ್ಟದಲ್ಲಿ ಒಂದಷ್ಟು ದಿನಗಳಿರುತ್ತವೆ. ಏನಾದರು ಸಾಧಿಸಲೇಬೇಕು ಎಂಬ ಹಂಬಲದಿಂದ ಕಷ್ಟಪಡುತ್ತಲೇ ಯಶಸ್ಸಿನತ್ತ ದೃಷ್ಟಿ ನೆಟ್ಟು ಧ್ಯಾನಿಸುವ ಕನಸು ಕಾಣುವ ದಿನಗಳವು. ಅಂತಹ ಧ್ಯಾನಕ್ಕೆ ಕುಳಿತವರು ತಾವು ಪಟ್ಟ ಕಷ್ಟವನ್ನು ತಮ್ಮ ಮಕ್ಕಳು ಪಡಬಾರದು ಎಂದುಕೊಳ್ಳುತ್ತಲೇ ತಮ್ಮ ಬದುಕನ್ನು ಚಂದವಾಗಿ ಕಟ್ಟುತ್ತಾರೆ ಎನ್ನುವುದಕ್ಕಿಂತ ತಮ್ಮ ಮಕ್ಕಳಿಗೆ ಭವಿಷ್ಯವೊಂದನ್ನು ಕಟ್ಟಿಕೊಡುತ್ತಾರೆ ಎನ್ನಬಹುದು. ಬಡತನದ ದಿನಗಳನ್ನು ಕಳೆದು ತನ್ನ ಆರ್ಥಿಕ ಮಟ್ಟವನ್ನು ಉತ್ತಮ ಸ್ಥಿತಿಗೆ ತಂದುಕೊಂಡಿರುವ ಪ್ರತಿಯೊಬ್ಬರ ಒಳಗೂ ತಾವೇ ಬರೆದಿಟ್ಟುಕೊಂಡ ಡೈರಿಗಳಂತೆ ಕಾಣುವ ಮನದ ಮಾತುಗಳು ಸಾವಿರವಿರುತ್ತವೆ. ಎಂದಾದರು ಅಂತಹವರನ್ನು ಮಾತಿಗೆ ಎಳೆದರೆ ತಾವು ಕಷ್ಟಪಟ್ಟು ಉತ್ತಮ ಸ್ಥಿತಿಗೆ ಬೆಳೆದು ಬಂದ ದಿನಗಳನ್ನು ಅವರು ನೆನೆಸಿಕೊಳ್ಳುವಾಗ ಅವರ ಬಗ್ಗೆ ನಮಗೆ ಹೆಮ್ಮೆ ಹಾಗು ಗೌರವ ಮೂಡಿಬಿಡುತ್ತದೆ. ಇವತ್ತು ಓದಿಗೆ ಸಿಕ್ಕಿದ ಚಿನ್ಮಯಧಾರೆ ಎಂಬ ಬ್ಲಾಗಿನ ಲೇಖನವೊಂದರಲ್ಲಿ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿಕೊಂಡಿರುವ ಗೆಳೆಯ ಚಿನ್ಮಯ್ ಅವರ ಮನದ ಈ ಕೆಳಗಿನ ಮಾತುಗಳು ತುಂಬಾ ಇಷ್ಟವಾದವು...

"ಸಂಜೆ ಅಪರೂಪಕ್ಕೊಮ್ಮೆ ಸುತ್ತಾಡಲು ಹೋಗುತ್ತಿದ್ದ ನಾವು ಎಲ್ಲರಂತೆ ಹೊರಗಡೆ ಏನಾದರು ತಿನ್ನೋಣ ಅಂದುಕೊಂಡಾಗಲೆಲ್ಲ ಕೂಡಿಸಿ, ಕಳೆದು, ಗುಣಿಸಿ, ಬಾಗಿಸಿ ಕೊನೆಗೆ ಚಹಾ ಕುಡಿಯೋಣ ಎಂಬ ಒಕ್ಕೊರಲಿನ ತಿರ್ಮಾಣಕ್ಕೆ ಬರುತಿದ್ದೆವು. ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾವನ್ನು ಮೂರು ಜನ ಕುಡಿಯುತ್ತಿದ್ದೆವು ಅಂದರೆ, ಒಂದು ರೂಪಾಯಿ ಬೆಲೆಯ ಎರಡು ಅರ್ಧ ಚಹಾ ಮೂರು ಜನರ ಪಾಲು..!! ಜೇಬಿನಲ್ಲಿ ಒಂದೊಂದು ರೂಪಾಯಿಗೂ ಘನವಾದ ಬೆಲೆ ಸಂದಾಯವಾಗುವಂಥ ಸಮಯ ಅದು..!!"

ಗೆಳೆಯ ಚಿನ್ಮಯ್ ಅವರ ಚಹಾ ದಿನಗಳ ಕುರಿತ ಮೇಲಿನ ಸಾಲುಗಳನ್ನು ಓದುತ್ತಲೇ ನೆಪೋಲಿಯನ್ ಹಿಲ್ ರವರ "ನಮ್ಮಪ್ಪ ಶ್ರೀಮಂತನಾಗಲು ಬಯಸಿರಲಿಲ್ಲ ಆದ್ದರಿಂದ ನಾವು ಬಡವರಾಗಿದ್ದೆವು" ಎಂಬ ಸಾಲೊಂದು ನೆನಪಾಯಿತು. ನಮ್ಮಪ್ಪ ಬಡವನಾಗಿದ್ದ ನಾವು ಬಡವರಾಗಿ ಉಳಿಯಬಾರದು ಎಂಬ ಕಿಚ್ಚು ನಮ್ಮಲ್ಲಿ ಹುಟ್ಟಿದ ದಿನವಲ್ಲವೇ ನಾವು ಯಶಸ್ಸಿನತ್ತ ಪಯಣ ಬೆಳೆಸುವುದು. ಅಂತಹ ಯಶಸ್ಸಿನತ್ತ ಪಯಣ ಬೆಳೆಸಿದ ದಿನಗಳ ಕುರಿತು ಗೆಳೆಯ ಚಿನ್ಮಯ್ ತನ್ನ ಬ್ಲಾಗಿನಲ್ಲಿ ಬರೆದುಕೊಂಡಿರುವುದು ಖುಷಿಯ ವಿಚಾರ..

ನನ್ನ ಮುಗ್ಧ ಗೆಳತಿಗೆ          
ಹೇಳಿದೆ. ಪೆದ್ದು, ನಮ್ಮ
ಹೃದಯದಲಿ ನಾಲ್ಕು
ಕವಾಟುಗಳಿವೆಯೆಂದು
ನಸುನಗುತ ಕೇಳಿದಳಾಕೆ
ಒಂದರಲ್ಲಿ ನಾನು ಇನ್ನು
ಉಳಿದವುಗಳಲಿ ಯಾರಿಹರೆಂದು..

ಕವಿತೆ, ಚುಟುಕಗಳನ್ನು ಬರೆಯುವ ಕವಿ ಕಾಲಾಂತರದಲ್ಲಿ ಓದುಗರ ಓದುವ ರುಚಿಯನ್ನು ಅರ್ಥೈಸಿಕೊಂಡು ತನ್ನ ಕಾವ್ಯ ಕೃಷಿಯಲ್ಲಿ ಬದಲಾವಣೆಯನ್ನು ಹೇಗೆ ಕಂಡುಕೊಳ್ಳುತ್ತಾನೆ ಎನ್ನುವುದಕ್ಕೆ ಈ ಕವಿ ಗೆಳೆಯನ ಮೇಲಿನ ಸಾಲುಗಳು ಉತ್ತಮ ಉದಾಹರಣೆ.. ಚುಟುಕಗಳಲ್ಲೇ ತಮ್ಮನ್ನು ಗುರುತಿಸಿಕೊಳ್ಳಲು ತೊಡಗಿರುವ ಕವಿಗಳ ಸಂಖ್ಯೆ ದಿನ ದಿನಕ್ಕೆ ಅದರಲ್ಲೂ ಫೇಸ್ ಬುಕ್ ತಾಣದಲ್ಲಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಉಳಿದವರಿಗಿಂತ ವಿಭಿನ್ನವಾಗಿ ನಿಲ್ಲುವುದು ಕಷ್ಟದ ಕೆಲಸ.. ಆ ವಿಭಿನ್ನತೆ ನಮ್ಮ ಬರಹಗಳಲ್ಲಿ ಕಂಡ ದಿನ ಜನ ಮೆಚ್ಚುಗೆ ತಾನಾಗಿಯೇ ಸಿಕ್ಕಿಬಿಡುತ್ತದೆ ಎನ್ನಬಹುದು. ಗೆಳೆಯ ಚಿನ್ಮಯ್, ತಮ್ಮ ವೃತ್ತಿಯ ನಿಮಿತ್ತ ವಿವಿಧ ಜಾಗಗಳನ್ನು ಸುತ್ತಿ ಬಂದವರು. ಅವರು ಚುಟುಕ ಮತ್ತು ಕಾವ್ಯಗಳಲ್ಲೇ ಹೆಚ್ಚು ತೊಡಗಿಕೊಂಡಿದ್ದಾರ ಹೊರತು ತಮ್ಮ ಬದುಕಿನ ಅನುಭವಗಳ ದಾಖಲಿಸುವ ಪ್ರಯತ್ನ ಮಾಡಿಲ್ಲ. ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಲು ತೊಡಗಿದರೆ ಅವರು ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಬದುಕನ್ನು ತಮ್ಮ ಬರಹಗಳಲ್ಲಿ ಕಟ್ಟಿಕೊಡಬಲ್ಲರು. ಇತ್ತೀಚೆಗಷ್ಟೇ ಗುಜರಾತ್ ನಿಂದ ಮತ್ತೆ ಕರ್ನಾಟಕಕ್ಕೆ ಬಂದಿರುವ ಅವರ ಬರಹಗಳಲ್ಲಿ ಗುಜರಾತ್ ಕುರಿತ ಅವರ ಅನುಭವ ಲೇಖನಗಳು ಹೊರ ಬರಲಿ ಎಂದು ಆಶಿಸುತ್ತಾ ಚಿನ್ಮಯ್ ರವರ ಕಿರು ಪರಿಚಯ ಎಲೆ ಮರೆ ಕಾಯಿಗಾಗಿ ಗೆಳೆಯರೇ ಇಗೋ ನಿಮ್ಮ ಮುಂದೆ..

[Image1075.jpg]
ಚಿನ್ಮಯ್ ಮಠಪತಿ

"ಮಾತೆ ಭುವನೇಶ್ವರಿ ಮತ್ತು ಸಹೃದಯಿ ಕನ್ನಡ ಕವಿ ಹೃದಯಗಳಿಗೆ ನಮಿಸುತ್ತಾ…
ಮೊದಲನೆಯದಾಗಿ ಕನ್ನಡ ಬ್ಲಾಗ್ ಮುಖಾಂತರ ಯುವ ಬರಹಗಾರರನ್ನು ನಾಡಿಗೆ “ಎಲೆ ಮರೆ ಕಾಯಿಗಳ ಜೊತೆ ಮಾತುಕತೆ” ಅಂಕಣದ ಮೂಲಕ ಪರಿಚಯಿಸುತ್ತಿರುವ ಸಹೃದಯಿ ಅಂಕಣಕಾರ ಮತ್ತು ಯುವ ಕವಿ ಮಿತ್ರರಾದ ನಟರಾಜು ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ನಟರಾಜು ಅವರಿಂದ ನಿಮ್ಮ ಬ್ಲಾಗ್ ಮತ್ತ ನಿಮ್ಮ ಕುರಿತು “ಎಲೆ ಮರೆ ಕಾಯಿಗಳ ಜೊತೆ ಮಾತುಕತೆ” ಅಂಕಣದಲಿ ಪರಿಚಯಿಸಲು ಇಚ್ಚಿಸಿದ್ದೇನೆ ಆದ್ದರಿಂದ ನಿಮ್ಮ ಸ್ವ ಪರಿಚಯವನ್ನು ಕಳುಯಿಸಿ ಕೊಡಿ ಎಂದು ಸಂದೇಶ ಬಂದಾಗ, ಆ ಸಂದೇಶವನು ನೋಡಿ ನನಗೆ ಸಂತಸಕ್ಕಿಂತ ಅಶ್ಛರ್ಯವೇ ದ್ವಿಗುಣವಾಗಿ ಕಾಡಿತು. ಕಾರಣಗಳು ಸಾವಿರಾರು, ನನ್ನಂಥ ಪುಟ್ಟ ಬರಹಗಾರನಿಗೆ ಇಂತಹ ಮಾನ್ಯತೆ ನಿಜವಾಗಲೂ ದೊಡ್ಡದಾದ ಬಿರುದು ಬಹುಮಾನಕ್ಕಿಂತಲೂ ಮಿಗಿಲಾದದ್ದು. ಅವರ ಪ್ರೀತಿತುಂಬಿದ ಮನವಿಯನ್ನು ಸಂಕೋಚದಿಂದಲೆ ಒಪ್ಪಿಕೊಂಡು ನನ್ನ ಪರಿಚಯವನ್ನು ಹಂಚಿಕೊಳ್ಳುತ್ತಿದ್ದೇನೆ.

ನಾನು ಹುಟ್ಟಿದ್ದು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ತಲ್ಲೂರು ಎಂಬ ಪುಟ್ಟ ಗ್ರಾಮದಲಿ. ತಂದೆ ಶ್ರೀ. ಸಿದ್ದಯ್ಯ ಮತ್ತು ತಾಯಿ ಶ್ರಿಮತಿ.ಗುರುಸಿದ್ದಮ್ಮ. ನನ್ನ ಹುಟ್ಟೂರೆಂದರೆ ನನಗೆ ಅತೀವ ಪ್ರೀತಿ ಮತ್ತು ಅಭಿಮಾನ ಕೂಡ. ಸುತ್ತಲೂ ನಾಲ್ಕು ಕಡೆಗಳಿಂದ ಹಸುರಿನ ಬೆಟ್ಟಗಳ ನಡುವೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ನನ್ನ ಹುಟ್ಟೂರಲಿ ದೇಸಾಯಿ ಒಡೆತನದ ಒಂದು ಸುಂದರ ಅರಮನೆ (ವಾಡೆ) ಇದೆ. ಆ ಕಾರಣಕ್ಕಾಗಿ ಕನ್ನಡದ ಹಲವಾರು ಚಲನ ಚಿತ್ರಗಳು ನನ್ನೂರಲ್ಲಿ ಚಿತ್ರಿಕರಣಗೊಂಡಿವೆ. ಕಾರಣಾಂತರಗಳಿಂದ ನಮ್ಮೂರಲ್ಲಿ ನಾನು ಇದುವರೆಗೂ ಜೀವನ ಕಳೆದದ್ದು ಕೇವಲ ಎರಡು ವರ್ಷ. ಧಾರವಾಡದಲ್ಲಿ ನನ್ನ ಸಹೋದರ ನೆಲೆಸಿರುವುದರಿಂದ ಸಧ್ಯಕ್ಕೆ ಸಾಹಿತ್ಯ ನಗರಿ ಧಾರವಾಡ ನನ್ನೂರಾಗಿ ಹೋಗಿದೆ. ಅಂದ ಹಾಗೆ ನಾನು ಓದಿದ್ದು ಎಂ.ಎಸ್.ಸಿ ನರ್ಸಿಂಗ್. ನನ್ನ ಓದು ಉದ್ಯೋಗ ಮತ್ತು ಸಾಹಿತ್ಯಾಸಕ್ತಿಗೂ ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಕೊಂಡರು ತಪ್ಪಿಲ್ಲ.

ಮಾತೃ ಭಾಷೆ ಕನ್ನಡ ನನ್ನೆದೆಯಾಳಕ್ಕೆ ಇಳಿದು ನನ್ನ ಉಸಿರಾಗಿದ್ದು ನನ್ನ ಬಾಲ್ಯದ ದಿನಗಳಲಿ. ಮೂಲತಃ ಕನ್ನಡ ಮಾದ್ಯಮದಲಿ ಹತ್ತನೆಯ ತರಗತಿವರೆಗೆ ಓದಿದ ನಾನು, ಮಾಧ್ಯಮಿಕ ಶಾಲೆಯಲ್ಲಿರುವಾಗಲೇ ಕನ್ನಡದ ಸಾಹಿತ್ಯ ಪ್ರಕಾರಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಂಡೆ. ಅದರಲ್ಲಿ ಪ್ರಥಮ ಭಾಷೆ ಕನ್ನಡ ವಿಷಯ ನನ್ನ ಅಚ್ಚು ಮೆಚ್ಚಿನ ವಿಷಯವಾಗಿತ್ತು. ನಾನು ಎಂಟನೆಯ ತರಗತಿಯಲ್ಲಿದ್ದಾಗ ಸಾಕ್ಷರತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವಂತಹ ಒಂದು ಪುಟ್ಟ ನಾಟಕವನ್ನು ಬರೆದು ನನ್ನ ಸ್ನೇಹಿತರೊಡಗೂಡಿ ಹಳ್ಳಿಯಲಿ ನಾಟಕವಾಡಿದ್ದೆ. ತದನಂತರ ಜೀವನದ ಒಂದಿಷ್ಟು ಅಹಿತಕರ ತಿರುವುಗಳಲ್ಲಿ ನನ್ನ ಬದುಕಿನ ಮುಕ್ಕಾಲು ಭಾಗ ಸೆವೆಸಿದ ಕಾರಣ ಹೃದಯ ಗೂಡಲ್ಲಿ ಕನ್ನಡ ತಾಯಿನ ನುಡಿ ಸೇವೆಯ ವಾಂಛೆ ಸಂಘರ್ಷದ ಬದುಕಿನಲಿ ಕನಸಾಗಿಯೇ ಉಳಿದು ಹೋಗಿತ್ತು. ನನ್ನ ಎಂ.ಎಸ್.ಸಿ ಓದು ಮುಗಿದ ನಂತರ ಜೀವನಕೆ ಒಂದು ನೆಲೆ ಸಿಕ್ಕಿತು.ಇತ್ತೀಚಿನ ಆರೆಂಟು ತಿಂಗಳುಗಳಿಂದ ನನ್ನ “ಚಿನ್ಮಯಧಾರೆ”ಯಲಿ ನನ್ನ ಪುಟ್ಟ ಕಥೆ, ಕವನ, ಚುಟುಕುಗಳ ಮುಖಾಂತರ ಅಕ್ಷರ ಕಲಿಸಿಕೊಟ್ಟ ಕನ್ನಡಮ್ಮನ ಸೇವೆಯಲಿ ತೊಡಗಿದ್ದೇನೆ.

ಇನ್ನು ಕನ್ನಡ ಬ್ಲಾಗುಗಳೆಂದರೆ ಅವು ಆಧುನಿಕ ಸಾಹಿತ್ಯ ಲೋಕದ ಆವಿಷ್ಕಾರಗಳು. ಇದ್ದಲ್ಲಿಯೇ ಸಾಹಿತ್ಯಾಮೃತವನ್ನು ನೀಡುವ ಅಕ್ಷ(ರ)ಯ ಪಾತ್ರೆಗಳು.

ಕೊನೆಯದಾಗಿ ನನ್ನೆಲ್ಲ ಗೌರವಾನ್ವಿತ ಹಿರಿಯ ಬರಹಗಾರರಲ್ಲಿ ನನ್ನ ವಿನಮ್ರ ವಿನಂತಿ. ನಿಮ್ಮ ಅನುಭವಧಾರೆಯಿಂದ ನನ್ನಂತಹ ಯುವ ಬರಹಗಾರರನ್ನು ತಿದ್ದಿ ತೀಡಿ ಅವರನ್ನು ನಿಮ್ಮಂತೆಯೇ ಒಬ್ಬ ಪಕ್ವ ಬರಹಗಾರನನ್ನಾಗಿಸಿ. ನಾನು ಸಹ ನಿಮ್ಮ ಸಲಹೆ ಸೂಚನೆಗಳಿಗೆ ತಲೆಬಾಗಿ ಇನ್ನು ಒಂದಿಷ್ಟು ಸಮಾಜಮುಖಿ ಸಾಹಿತ್ಯವನ್ನು ಮಾತೃ ಭಾಷೆ ಕನ್ನಡಮ್ಮನ ಅಕ್ಷರ ರೂಪದಲ್ಲಿ ಓದು ಮುಕ್ಕಾಲಾಗಿಸಿಕೊಂಡು ಬರಹ ಒಕ್ಕಾಲಾಗಿಸಿಕೊಂಡು ಅಳಿಲು ಸೇವೆ ನೀಡುವೆ.ಶುಭಕಾಮನೆಗಳೊಂದಿಗೆ."

ಎಂದು ಚಂದದ ಮಾತನಾಡಿದ ಗೆಳೆಯ ಚಿನ್ಮಯ್ ರವರ ಕನ್ನಡ ಪ್ರೇಮಕ್ಕೆ ನಮನಗಳು..
ಸಹೃದಯಿ ಗೆಳೆಯರೇ, ಗೆಳೆಯ ಚಿನ್ಮಯ್ ರವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ. ಅವರ ಬ್ಲಾಗಿನ ಲಿಂಕ್ ಈ ಕೆಳಗೆ ನೀಡಿರುವೆ. ಸಮಯವಿದ್ದಾಗ ಕಣ್ಣಾಡಿಸಿ..
http://chinmayadhare.blogspot.in/

ಚಿನ್ಮಯ್ ರವರ ಚಂದದ ಒಂದೆರಡು ಚುಟುಕಗಳು ಇಗೋ ನಿಮಗಾಗಿ.. ಖುಷಿಯಿಂದ ಓದಿಕೊಳ್ಳಿ..

ಪ್ರೀತಿಯ ಪರೀಕ್ಷೆಯಲಿ
ಇಬ್ಬರೂ ನಕಲು ಮಾಡಿಯೇ
ಉತ್ತೀರ್ಣರಾದೆವು…
ಈಗ ನಕಲು ಪ್ರೀತಿಯಿಂದ
ಜೀವನವೇ ನಕಲು ನಕಲು.
*****
ಅಳಿದು ಹೋಗುತ್ತಿರುವ
ಮನುಜ ಸಂಬಂಧಗಳ
ಮೂರ್ತಿಯ ಮಾಡಿ
ಗುಡಿಯ ಕಟ್ಟಬೇಕು,
ದೇವರೆಂಬ ಭಯದಿ
ಕಠೋರ ಹೃದಯಗಳು
ತಲೆಬಾಗಿ ನಮಿಸ ಬಹುದು..!!
*****

ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :))

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ