ಶನಿವಾರ, ಡಿಸೆಂಬರ್ 22, 2012


ಎಲೆ ಮರೆ ಕಾಯಿ ೬೮
ಕೆಲವು ಹಿರಿಯರ ಮುಂದೆ ಯಾಕೋ ಮೌನ ವಹಿಸಬೇಕು ಎನಿಸುತ್ತೆ. ಯಾಕೆಂದರೆ ಅವರ ಜೀವನದ ಅನುಭವಗಳ ಎದುರು ನಾವು ತುಂಬಾ ತುಂಬಾ ಚಿಕ್ಕವರು. ಅಂತಹ ಜೀವನದ ಅನುಭವವುಳ್ಳ ಹಿರಿಯರು ಮಾತನಾಡುವಾಗ ಅವರು ಮಾತುಗಳನ್ನು ಶ್ರದ್ಧೆಯಿಂದ ಕೇಳಬೇಕು ಎನಿಸುತ್ತದೆಯೇ ಹೊರತು ಮಧ್ಯೆ ಮಾತನಾಡಬೇಕು ಎನಿಸುವುದಿಲ್ಲ. ಈ ದಿನ ಎಲೆ ಮರೆ ಕಾಯಿಗೆ ಅತಿಥಿಯಾಗಿ ಬಂದಿರುವ ಹಿರಿಯರ ಮಾತುಗಳನ್ನು ಕೇಳಿದಾಗ ನಾನು ಮೌನಕ್ಕೆ ಶರಣಾದೆ. ಅವರ ಮಾತುಗಳನ್ನು ಕೇಳಿ ನನ್ನ ಹಾಗೆ ಮೌನಕ್ಕೆ ಶರಣಾಗುವ ಸರದಿ ನಿಮ್ಮದೂ ಸಹ ಆಗಲಿ.. ಇವತ್ತಿನ ಎಲೆ ಮರೆ ಕಾಯಿ ಅಂಕಣಕ್ಕೆ ವಿಶೇಷ ಅತಿಥಿಯಾಗಿ ಬಂದಿರುವ ಹಿರಿಯರಾದ ಪಾರ್ಥಸಾರಥಿ ಸರ್ ಅವರ ಜೊತೆ ನಡೆಸಿದ ಮಾತುಕತೆಯ ತುಣುಕುಗಳು ಇಗೋ ನಿಮಗಾಗಿ...

ಪಾರ್ಥಸಾರಥಿ ನರಸಿಂಗರಾವ್

-ಪ್ರಿಯ ನಟರಾಜುರವರೆ
’ಎಲೆ ಮರೆಕಾಯಿಗಳ ಜೊತೆ ಮಾತುಕತೆ ಅಂಕಣಕ್ಕಾಗಿ ನಿಮ್ಮ ಕಿರು ಪರಿಚಯವೊಂದನು ದಯಮಾಡಿ ಮೆಸೇಜ್ ಮಾಡಿ.” ಎಂಬ ನಿಮ್ಮ ಕೋರಿಕೆ ನನಗೆ ಸ್ವಲ್ಪ ಗೊಂದಲ ಮೂಡಿಸಿತು. ಯಾರ ಕಣ್ಣಿಗೂ ಬೀಳದಂತೆ ಇದ್ದು ಸಮಾಜಕ್ಕೆ ಉಪಯೋಗಿಯಾಗಿರುವರನ್ನು ಎಲೆಮರೆ ಕಾಯಿ ಅನ್ನುವರೇನೊ. ನಾನು ಎಲ್ಲರಿಗೆ ಪರಿಚಯ ಮಾಡಿಕೊಡುವಂತ ದೊಡ್ಡ ಸಾಧನೆಯೇನು ಮಾಡಿಲ್ಲ ಎನ್ನುವ ಭಾವ ಒಮ್ಮೆ, ’ನನಗೆ ಅದೆಲ್ಲ ಇಷ್ಟವಿಲ್ಲ’ ಎಂದು ಹೇಳಿದರೆ ಅಹಂಕಾರವಾಗುವದೇನೊ ಎಂಬ ಭಾವ ಮತ್ತೊಮ್ಮೆ , ಈ ದ್ವಂದ್ವದಲ್ಲಿಯೆ ನಿಮ್ಮ ಆತ್ಮೀಯ ಕೋರಿಕೆ ಸ್ವೀಕರಿಸಿದೆ.

ಕತೆ ಕವನ ಕಾದಂಬರಿ ಇವೆಲ್ಲ ಚಿಕ್ಕ ವಯಸ್ಸಿನಲ್ಲಿಂದಲೆ ಪ್ರಾರಂಬವಾದ ಹುಚ್ಚು. ಚಂದಮಾಮದ ’ಭೇತಾಳ’ ವಾಗಲಿ ಸುಧಾ ಪತ್ರಿಕೆಯ ’ಡಾಬು’ ವಾಗಲಿ ನನಗೆ ಅಚ್ಚುಮೆಚ್ಚೆ ಆಗಿತ್ತು. ಏನನ್ನು ಓದಬೇಕೆಂಬ ಕಲ್ಪನೆ ಇಲ್ಲದೆ ಸಿಕ್ಕಿದ್ದನೆಲ್ಲ ಓದುತ್ತಿದ್ದ ನನ್ನ ಓದನ್ನು ಸರಿ ದಾರಿಗೆ ತಿರುಗಿಸಿದವರು ನಮ್ಮ ತಂದೆಯೆ. ಒಮ್ಮೆ ಜಿಂದೆನಂಜುಂಡಸ್ವಾಮಿಯವರ ’ಜಂಟಿ ಪ್ರೇಯಸಿ’ ಪುಸ್ತಕವನ್ನು ಓದುತ್ತಿದ್ದಾಗ ಇಣುಕಿ ನೋಡಿದವರು, ’ನಿನಗೆ ಓದಲೆ ಬೇಕೆಂಬ ಆಸಕ್ತಿ ಇದ್ದಲ್ಲಿ ಸಾಕಷ್ಟು ಇದೆ ಓದು ’ ಎಂದು ಹಲವು ವಿಷಯ ತಿಳಿಸಿ, ಅವರು ’ಮೂಕಜ್ಜಿಯ ಕನಸು’ ಪುಸ್ತಕ ತಂದು ಕೊಟ್ಟಾಗ ನಾನಿನ್ನು ಏಳನೆ ತರಗತಿ. ಆಗ ಪ್ರಾರಂಬವಾದ ಓದು ಕನ್ನಡದ ಬಹುತೇಕ ಎಲ್ಲ ಸಾಹಿತಿಗಳ ಬರಹಗಳನ್ನು ಓದುವಂತೆ ಮಾಡಿತು. ಬೈರಪ್ಪ, ಕಾರಂತ, ಎಂ.ಕೆ. ಇಂದಿರ, ತರಾಸು, ಅನಾಕೃ, ಬೀಚಿ, ಟಿ.ಕೆ.ರಾಮರಾವ್ ಎಲ್ಲರು ನನ್ನ ಸುತ್ತಲು ಸುತ್ತುತ್ತಿದ್ದರು. ಕಡೆಗೆ ಅಂಗಡಿಯಲ್ಲಿ ಕಡ್ಲೆಕಾಯಿ ಕಟ್ಟಿಕೊಟ್ಟರೆ , ತಿನ್ನುತ್ತ ಕಡ್ಲೆಕಾಯಿ ಕಟ್ಟಿದ್ದ ಆ ಪೇಪರಿನ ತುಂಡಿನಲ್ಲಿ ಏನಿದೆ ಎಂದು ಓದುವ ಅಕ್ಷರದಾಹ.....ಹಹ್ಹಹ್ಹ,,

ಹುಟ್ಟಿದ್ದು ತುಮಕೂರು ಜಿಲ್ಲೆಯಾದರು, ತಂದೆಯವರು ಉಪಾದ್ಯಾಯ ವೃತ್ತಿಯಲ್ಲಿದ್ದು ತುಮಕೂರು, ಹಾಸನ, ಚಿಕ್ಕಮಂಗಳೂರು,ಬೆಂಗಳೂರಿನ ಜಿಲ್ಲೆಯ ಹಲವು ಸ್ಥಳ ಸುತ್ತುವಂತಾಗಿತ್ತು. ಹಾಗಾಗಿ ನನಗೆ ಕರ್ನಾಟಕದ ಯಾವುದೆ ಸ್ಥಳವು ಪ್ರಿಯವೆ. ಕೆಲಸಕ್ಕೆ ಸೇರಿ ಕನಕಪುರದಲ್ಲಿ ಎಂಟು ವರ್ಷ ಕಳೆದು, ಬೆಂಗಳೂರಿನಲ್ಲಿ ನೆಲೆಸಿರುವೆ. ಪತ್ನಿ ಹಾಗು ಒಬ್ಬಳು ಮಗಳು ಇರುವ ಪುಟ್ಟ ಸಂಸಾರ.
ಸಾಹಿತ್ಯದ ಪ್ರಾಕಾರದಲ್ಲಿ ಏನನ್ನಾದರು ಬರೆಯಬಲ್ಲೆ ಎಂದು ಯಾವ ಕನಸು ಕಂಡಿರಲಿಲ್ಲ. ಎರಡು ವರ್ಷದ ಕೆಳಗೆ ತಮ್ಮನ ಮಗಳು ದೆವ್ವದ ಕತೆ ಹೇಳಿ ಎಂದು ದುಂಬಾಲು ಬಿದ್ದಾಗ, ಸುಮ್ಮನೆ ಅಂತರ್ಜಾಲದಲ್ಲಿ ಹುಡುಕಿದೆ. ಆಗ ಕಣ್ಣಿಗೆ ಬಿದ್ದಿದ್ದು ’ಸಂಪದ’ ತಾಣ. ಅಲ್ಲಿಯವರೆಗು ಅಂತರ್ಜಾಲದಲ್ಲಿ ಕನ್ನಡ ಅಕ್ಷರವಿರಬಹುದು ಎಂಬ ಕಲ್ಪನೆಯು ಇರದಿದ್ದ ನನಗೆ ಸಂತಸವೆನಿಸಿ, ಅಲ್ಲಿ ಏನಾದರು ಬರೆಯುವ ಕುತೂಹಲ ಮೂಡಿತು. ಹಾಗೆ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿ ಕೊಂಡಿರುವ ಹಲವು ಸಹೃದಯಿಗಳ ಪರಿಚಯವಾಯಿತು. ’ಸಂಪದದಲ್ಲಿ’ ಸುಮ್ಮನೆ ಬರೆಯುತ್ತ ಹೋದೆ,

ನಾನು ಬರೆದುದ್ದನ್ನೆಲ್ಲ ಓದಿ ಬೆನ್ನು ತಟ್ಟಲು ಹಲವರಿದ್ದರು. ತಪ್ಪು ತಿದ್ದಿದವರು ಇದ್ದರು. ಸಣ್ಣಕತೆಗಳ ರಚನೆಯಲ್ಲಿ ಹೆಚ್ಚು ಆಸಕ್ತಿ . ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯಸೇವೆ ನಡೆಸುತ್ತಿರುವ ಹತ್ತು ಹಲವು ಗೆಳೆಯರ ನಡುವೆ ನಾನೊಬ್ಬ , ಇನ್ನು ತಪ್ಪು ಹೆಜ್ಜೆ ಇಡುತ್ತಿರುವ ’ಶಿಶು’ ಎಂದೆ ನನ್ನ ಭಾವನೆ. ಸಾಹಿತ್ಯ ಸೇವೆ , ಕನ್ನಡಸೇವೆ ಅನ್ನುವದೆಲ್ಲ ದೊಡ್ಡ ಪದಗಳು, ನನ್ನೊಳಗಿನ ಏನನ್ನೊ ತೃಪ್ತಿಪಡಿಸಲು, ನನ್ನೊಳಗೆ ಹುಟ್ಟುವ ಭಾವನೆಗಳನ್ನು ಹೊರಹಾಕಲು ಇದೊಂದು ಮಾರ್ಗವಷ್ಟೆ.

ನನ್ನದೊಂದು ‘ಕರಿಗಿರಿ’ ಎಂಬ ಅಂತರ್ಜಾಲಪುಟವಿದೆ , ಸಣ್ಣಕತೆಗಳಿಗಷ್ಟೆ ಹೆಚ್ಚು ಒತ್ತುಕೊಟ್ಟಿರುವ ಪುಟವದು , ಆಸಕ್ತಿ ಇರುವವರು ಬೇಟಿಕೊಡಬಹುದು www.narvangala.blogspot.in

ನಾನು ಬರೆದ ಕವನಗಳಲ್ಲಿ ನನಗೆ ಅಚ್ಚುಮೆಚ್ಚು :ಮನೆ ಎಂದರೆ ಅದು ಬರಿ ಮನೆಯಲ್ಲ (೨೦೧೧) , ತರಕಾರಿ ಹುಡುಗಿ ಮತ್ತು ನಾನು (೨೦೧೨) ನನ್ನ ಬಾಲ್ಯದ ಗೆಳತಿ (೨೦೧೧)
ಹಾಗೆ ಕತೆಗಳಲ್ಲಿ ನಾನು ಇಷ್ಟಪಟ್ಟಿದ್ದು ವಿಕ್ಷಿಪ್ತ(೨೦೧೦) ಪ್ರಮಥಿನಿ (೨೦೧೦) ಲೌಕಿಕ ಅಲೌಕಿಕ (೨೦೧೧) ದೂರತೀರದ ಕರೆ (೨೦೧೨)

ತಮ್ಮ ವಿನಯದ ಮಾತುಗಳಿಂದಲೆ, ನಮ್ಮೊಳಗೆ ಹಿರಿತನ ತುಂಬುವ ಮಾತಿನ ಜಾಣ ನಟರಾಜುರವರಿಗೆ, ಅಭಿನಂದಿಸುತ್ತ
ಎಲ್ಲ ಸಾಹಿತ್ಯ ಪ್ರೇಮಿಗಳಿಗು ವಂದನೆಗಳನ್ನು ಅರ್ಪಿಸಲು ಈ ಅವಕಾಶ ಬಳಸಿಕೊಳ್ಳುತ್ತ
ನಮಸ್ಕಾರಗಳೊಡನೆ
ಪಾರ್ಥಸಾರಥಿ"

ಎಂದು ಚಂದವಾಗಿ ಮಾತನಾಡಿದ ಹಿರಿಯರಾದ ಪಾರ್ಥಸಾರಥಿ ಸರ್ ಅವರ ಮಾತುಗಳು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ.. ಅವರು ತಿಳಿಸಿದ ಅವರ "ಕರಿಗಿರಿ" ಬ್ಲಾಗಿಗೆ ಭೇಟಿ ನೀಡಿ ಅವರ ಬರಹಗಳನ್ನು ಓದಿ ಆಹ್ವಾದಿಸಿ..

ಪಾರ್ಥಸಾರಥಿ ಸರ್ ಅವರ ಬ್ಲಾಗಿನಿಂದ ಆಯ್ದ ಒಂದೆರಡು ಕವನಗಳ ತುಣುಕುಗಳನ್ನು ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..

ಅಮ್ಮ  ಕೈಯ ತೋರಿ ಹೇಳಿದಳು
'ಅಲ್ಲಿ ಹೋಗಿ ತಾ'
ಎಡವುತ್ತ ನಡೆದು ಹೋದೆ
"ಏನು ಬೇಕು ಪುಟ್ಟಾ?"
ಕೇಳಿದಳು ಅವಳು
ತರಕಾರಿ ಮಾರುವವಳು
"ಕೊತ್ತಂಬರಿ ತೊಪ್ಪು" ತೊದಲಿತು ಬಾಯಿ
"ಅಯ್ಯೊ ನನ್ನ ಬಂಗಾರ"
ಉಲಿದಳು ಆಕೆ ಜೊತೆಗೆ ಒಂದು ಸೇಬು
'ತಿನ್ನು ಪುಟ್ಟು' ಎಂದು
*****

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದ್ದು ತಿನ್ನಲು
ಆದರೆ
ಅಮ್ಮನ ಕೈಯ ತುತ್ತು ತಿನ್ನುವ ಸೌಭಾಗ್ಯವಿತ್ತು

ಅಂದು ಸ್ವಾತಂತ್ರ್ಯವಿರಲಿಲ್ಲ ಬೇಕಾದಲ್ಲಿ ಓಡಾಡಲು
ಆದರೆ
ಅಪ್ಪನ ಕೈ ಬೆರಳ ಹಿಡಿದು ನಡೆಯುವ ಸೌಲಭ್ಯವಿತ್ತು
*****

ಶುಭವಾಗಲಿ

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))

2 ಕಾಮೆಂಟ್‌ಗಳು:

 1. ಹಿರಿಯರ ಪರಿಚಯ ಸಾಹಿತ್ಯ ಗರಿಮೆಯೊಂದಿಗೆ ಚೆನ್ನಾಗಿ ಮೂಡಿ ಬಂದಿದೆ. ಅವರ ತುಂಬು ಜೀವನಾನುಭವದದೊಂದಿಗೆ ಇನ್ನಷ್ಟು ಸಾಹಿತ್ಯ ಪ್ರಕಾರಗಳು ಮೂಡಿ ಬರಲಿ.
  ಚೆಂದದ ಪರಚಯಕ್ಕೆ ಧನ್ಯವಾದಗಳು- ಗೆಳೆಯ (ನಟರಾಜು)

  ಪ್ರತ್ಯುತ್ತರಅಳಿಸಿ
 2. ಗುರುಗಳ ಹಲವು ಬರಹಗಳನ್ನು ಸಂಪದದಲ್ಲಿ ಓದಿರುವೆ.ಹಾಗೆಯೇ ಅದೇ ಬರಹಗಳನ್ನು ಅವರ ಕರಿಗಿರಿ ಬ್ಲಾಗ್ನಲ್ಲಿ ಓದಿರುವೆ...
  ಸಂಪದದಲ್ಲಿ ಅತಿ ಚಟುವಟಿಕೆಯ-ಸೃಜನಶೀಲ ಬರಹಗಾರರಲಿ ಒಬ್ಬರು..
  ಅವರ ಮಾಸದಲ್ಲಿ ಸಂಪದ -ಇದೇ ತಿಂಗಳಲ್ಲಿ ಬಂದ ಬರಹಗಳ ತೌಲನಿಕ ನೋಟ..
  ಮತ್ತು ದೆವ್ವ ಭೂತಗಳ ಬಗೆಗಿನ ಬರಹಗಳು -ಹಾಗೆಯೇ ಪ್ರಚಲಿತ ವಿಷಯಗಳ ಬಗ್ಗೆ ಆಗಾಗ ಸಕಾಲಿಕ ಬರಹಗಳು..
  ನನ್ನ ಫೆವರೀಟ್ ..
  ಅದ್ನ ನಾವ್ ಈಗ ಭಲೇ ಮಿಸ್ ಮಾಡಿಕೊಳ್ಳುತ್ತಿರುವೆವು ...
  ಅವರ ಒಂದು ಅಪರಿಮಿತ ಅರ್ಥದ -ಸುಂದರ ಪದ್ಯವನ್ನು ಇಲ್ಲಿ ಹಂಚಿಕೊಂಡು -ಅವರ ವಿವರಗಳನ್ನು ನೀಡಿದ ನಿಮಗೆ ನನ್ನ ನನ್ನಿ ..
  ನಿಮ್ಮ ಈ ಎಲೆಮರಿ ಕಾಯಿಗಳನ್ನು ಪರಿಚಯಿಸುವ ಸರಣಿ ಇಷ್ಟ ಆಯ್ತು..
  ವಿಭಿನ್ನ -ವಿಶಿಸ್ತ -ವಿಶೇಷ ಪ್ರಯತ್ನ
  ನಮ್ಮ ಸಹಕಾರ ಬೆಂಬಲ ಮೆಚ್ಚುಗೆ ಸದಾ ನಿಮಗಿದೆ..

  ಶುಭವಾಗಲಿ..
  \|/

  ಪ್ರತ್ಯುತ್ತರಅಳಿಸಿ