ಮಂಗಳವಾರ, ಜನವರಿ 1, 2013


ಎಲೆ ಮರೆ ಕಾಯಿ ೬೯
ಮೆಚ್ಕಂಡ್ ಮದ್ವಾತರೆ
ವರ್ಷ ತುಂಬಂಗಿಲ್ಲ
ಕಚ್ಚಾಡ್ಕಂಡ್ ದೂರಾತಾರೆ..!

ದಿನ್ವಿಡೀ ದುಡಿತರೆ
ಹೊಟ್ತುಂಬ ತಿನ್ನಕ್ಕಿಲ್ಲ
ಮೈ ತುಂಬ ತ್ವಡಾಕಿಲ್ಲ....!

ಯೋನ್ ಇಲ್ದಿದ್ರೂ ಅವಾಗ್ ನೆಮ್ದಿತ್ತು ಕನ
ಈಗ್ ನೋಡ್ರೆ ನಂಬ್ಕೂ ಇಲ್ಲ ನೆಮ್ದೂ ಇಲ್ಲ ಅಲ್ವೇನಾ..?!?

ಮೇಲಿನ ಆಡು ಭಾಷೆಯ ಸೊಗಡನ್ನು ತನ್ನೊಳಗೆ ತುಂಬಿಕೊಂಡು ಇಂತಹ ಕವಿತೆಗಳು ಎದುರು ನಿಂತಾಗ ಅಚ್ಚರಿಯಿಂದ ಈ ಕವಿ ಗೆಳೆಯನ ಕವಿತೆಗಳನ್ನು ಓದಿಕೊಂಡಿದ್ದೇನೆ. ಮಯಾಸ ಅನ್ನೋ ಹೆಸರಿನಲ್ಲಿ ಈ ಕವಿತೆಗಳು ಮೊದಲ ಬಾರಿಗೆ ನನ್ನ ಕಣ್ಣಿಗೆ ಬಿದ್ದಾಗ ದೇವನೂರ ಮಹಾದೇವರ "ಅಮಾಸ" ಜ್ಞಾಪಕಕ್ಕೆ ಬಂದಿದ್ದ. ದೇವನೂರ ಮಹಾದೇವರ ಬರಹದ ಶೈಲಿಯನ್ನು ಅನುಸರಿಸುವ ಪ್ರಯತ್ನ ಈ ಗೆಳೆಯನದೇ ಎಂದು ನಾನಂದುಕೊಂಡು ಇವರ ಕವಿತೆಗಳನ್ನು ಓದತೊಡಗಿದಾಗ ನಮ್ಮ ಮಯಾಸರಿಗೆ ಅವರದೇ ಆದ ಶೈಲಿ ಇದೆ ಎನಿಸಿತು. ಈ ಗೆಳೆಯನ ಪ್ರತಿ ಕವಿತೆಗಳನ್ನು ನೋಡಿದಾಗ ಸದ್ದಿಲ್ಲದೆ ಕಣ್ಮರೆಯಾಗುತ್ತಿರುವ ನಮ್ಮ ಊರುಗಳ ಸಂಸ್ಕೃತಿ, ಅಲ್ಲಿಯ ಜನರ ಭಾಷೆ, ಅವರ ಮುಗ್ಧತೆ ಕಣ್ಣ ಮುಂದೆ ಬಂದಂತಾಗುತ್ತದೆ. ಮೊದಲೊಮ್ಮೆ ಹೇಳಿದಂತೆ ಒಂದು ಪೀಳಿಗೆಯ ಬರಹಗಾರರು ನಮಗೆ ತಮ್ಮ ಬಾಲ್ಯದ ಯೌವನದ ದಿನಗಳ ಬದುಕುಗಳನ್ನು ನಮಗೆ ನೆನಪುಗಳ ಹಾಗೆ ಕಟ್ಟಿಕೊಟ್ಟಿದ್ದಾರೆ. ಹಾಗೆಯೇ ಅವರ ಮುಂದಿನ ಪೀಳಿಗೆಯ ಬರಹಗಾರರು ಸಹ ತಮ್ಮ ನೆಲದ ಸಂಸ್ಕೃತಿಯ ಸೊಗಡನ್ನು ತಮ್ಮ ಬರಹಗಳಲ್ಲಿ ಬರೆಯುತ್ತಾ ಹೋದರೆ ಕಳೆದು ಹೋಗುತ್ತಿರುವ ನಮ್ಮ ಸಂಸ್ಕೃತಿಗಳು ಮುಂದಿನ ಪೀಳಿಗೆಗೆ ಬರಹದ ರೂಪದಲ್ಲಾದರೂ ಸಿಗುತ್ತವೆ. ಮಯಾಸನ ಕವಿತೆಗಳ ಓದಿದಾಗ ಪ್ರತೀ ಬರಹಗಾರ ತನ್ನ ಸುತ್ತ ಮುತ್ತಲ ಪರಿಸರದ ಚಿತ್ರಣವನ್ನು ತನ್ನ ಸಂಸ್ಕೃತಿಯನ್ನು ತನ್ನ ಬರಹಗಳಲ್ಲಿ ಈ ರೀತಿ ಚಂದವಾಗಿ ಕಟ್ಟಿಕೊಟ್ಟರೆ ಅದೆಷ್ಟು ಚಂದವಿರುತ್ತದೆ ಎನಿಸಿತ್ತದೆ. ಮಯಾಸನ ಪ್ರತೀ ಕವಿತೆಯೂ ಅವರ ಸರಣಿ ನೆನಪುಗಳ ಆಗರವನ್ನೇ ನಮ್ಮ ಮುಂದೆ ತೆರೆದಿಡುತ್ತಾ ಹೋಗುವುದು ನಿಜಕ್ಕೂ ಅನನ್ಯ..

ಮಳೆ ಜ್ವತಿಗೆ ಗಾಳಿ ಬಂದ್ರೆ
ಅಣ್ಬೆ ಏಳ್ತಾವೆ...!

ಬಿಸಿಲು ಮಳೆ ಒಟ್ಟಿಗ್ ಹೂದ್ರೆ
ಬಿಲ್ದೊಳ್ಗಿನ್ ಹಾವು ಈಚಿಗ್ ಬತ್ತಾದೆ..!

ಸಿಡ್ಲು ಜ್ವತಿಗೆ ಗುಡುಗ್ ಬಂದ್ರೆ
ಹಾಲೇಡಿ ಗದ್ದೆ ಬದೀಗೆ ಬತ್ತವೆ..!

ಬಿಸಿಲ್ ಮುಗ್ದು ಟಿಸಿಲ್ ಹೊಡ್ದ್ರೆ
ಬಿದ್ರು ಮಣ್ಕೆಲಿ ಕಳ್ಲೆ ಸಿಗ್ತಾವೆ..!

ಇಟ್ಗೆ ಗುಂಡಿಗೆ ನೀರ್ ತುಂಬ್ಸಿ
ಹೊಳಿಳ್ದ್ರೆ- ಮಳ್ಳಿ ಮೀನ್ ಸಿಗ್ತಾವೆ..!

ಅಬ್ಬಾ..! ಮಲ್ನಾಡೊಳ್ಗೆ
ಎಲ್ಲಾ ಐತೆ...ನಾನಿಲ್ಲ ಕನ..!?!

ಮೇಲಿನ ಸಾಲುಗಳ ಓದುತ್ತಿದ್ದಂತೆ ಮಯಾಸ ಏನ್ ಸೂಪರ್ ಆಗಿ ಬರೆದಿದ್ದಾರೆ ಅನಿಸುತ್ತಲ್ವಾ? ಅಣಬೆ ನೋಡಿ ಅದೆಷ್ಟು ವರ್ಷ ಆಗಿ ಹೋಯಿತು ಅಂದುಕೊಳ್ತಾ ಹಳೆಯ ನೆನಪುಗಳಿಗೆ ನಾವು ಜಾರಿದರೆ ಹಳ್ಳ ಕೊಳ್ಳಗಳ ಮೀನು, ಎಂದೋ ಎದುರಾಗಿದ್ದ ಹಾವುಗಳು, ಗೆಡ್ಡೆ ಗೆಣಸು ಬೆಟ್ಟ ಗುಡ್ಡ ಏನೆಲ್ಲಾ ಕಣ್ಣ ಮುಂದೆ ಬಂದು ನಿಂತು ಬಿಡುತ್ತವೆ. ನಮ್ಮ ಸಂಸ್ಕೃತಿಗಳು ಒಬ್ಬ ಪ್ರೇಯಸಿಯ ಹಾಗೆ ನಮ್ಮನ್ನು ಕಾಡಲು ಶುರು ಮಾಡದ ಹೊರತು ಆ ಸಂಸ್ಕೃತಿ ಕುರಿತ ಬರಹಗಳು ನಮ್ಮ ಬರಹಗಳಲ್ಲಿ ಎಂದಿಗೂ ಕಾಣಿಸಿಕೊಳ್ಳಲಾರವು. ಹಾಗೆ ಪ್ರೇಯಸಿಯ ಹಾಗೆ ಕಾಡಲು ತೊಡಗಿದ ನಮ್ಮ ಸಂಸ್ಕೃತಿಯ ನೆನಪುಗಳು ಇನ್ನಿಲ್ಲದಂತೆ ಚಂದವಾಗಿ ಬರೆಸಿಕೊಳ್ಳುತ್ತವೆ. ಅಂತಹ ಚಂದವಾಗಿ ಕಾಡಿಸಿಕೊಂಡು ಮೂಡಿದ ಬರಹಗಳು ಸದಾ ಕಾಲ ನೆನಪುಗಳಲ್ಲಿ ಉಳಿಯುವಂತ ಬರಹಗಳಾಗಿ ಹೊಮ್ಮಿಬಿಡುತ್ತವೆ. ನೀವು ಏನೇ ಹೇಳಿ ನಮ್ಮ ಭಾಷೆಗೆ ಸಂಸ್ಕೃತಿಗೆ ಅದರದೇ ಆದ ವೈಶಿಷ್ಟ್ಯತೆ ಇದೆ. ನಮ್ಮ ಭಾಷೆಯನ್ನು ಉಳಿಸಬೇಕು ಅಂತ ಎಷ್ಟೇ ಹೋರಾಟಗಳು ನಡೆದರೂ ಮಯಾಸ ನಂತಹ ಕವಿಗಳು ತಮ್ಮ ಬರಹಗಳಲ್ಲಿ ನಮ್ಮ ಸಂಸ್ಕೃತಿಯನ್ನು ಸದ್ದಿಲ್ಲದೆ ತಮ್ಮದೇ ರೀತಿಯಲ್ಲಿ ಉಳಿಸಿಕೊಂಡು ಹೋಗುತ್ತಿದ್ದಾರೆ. ಇಂತಹ ಬೆಳವಣಿಗೆ ನಿಜಕ್ಕೂ ಆರೋಗ್ಯಕರ. ಮಯಾಸ ರಂತಹ ಕವಿಗಳ ಬರಹಗಳು ಹೆಚ್ಚು ಹೆಚ್ಚು ಜನರನ್ನು ತಲುಪಬೇಕು. ಪ್ರಶಸ್ತಿ ಪುರಸ್ಕಾರಗಳು ಇಂತಹ ಚಂದದ ಕವಿಗೆ ಸಿಗಬೇಕು.

ಬಯಸಿದ್ನ
ಪಡ್ಕಾಬ್ಯಾಕಾ...?
ಬುಟ್ಬುಡ್ಬ್ಯಾಕಾ..?
ಪಡ್ಕಂಡ್ರೆ ಹೆಂಗ್ ಸಂಬಾಳ್ಸೋದು..?
ಬುಟ್ಬುಟ್ರೆ ಹೆಂಗ್ ತಡ್ಕಳ್ಳೋದು..?
ಇಂತವ್ ನೂರ್ ಪ್ರಶ್ನೆ ಮೂಡ್ತವೆ ಕನ
ಯೋನ್ ಮಾಡ್ಲಿ..???
ಉತ್ರುವೇ ಸಿಗಬಾರ್ದು ಅನ್ಕಂಡೀವ್ನಿ ಕನ...!!!

ಪ್ರತಿ ಬಾರಿ ಮಯಾಸ ಇಂತಹ ಕವಿತೆಗಳನ್ನು ಬರೆದು ನಮ್ಮ ಎದುರಿಗೆ ಇಟ್ಟಾಗ ಇವರ ನೆನಪಿನ ಶಕ್ತಿಗೆ, ತನ್ನ ನೆಲದ ಭಾಷೆಯ ಮೇಲಿರುವ ಇವರ ಪ್ರೀತಿಗೆ ಹ್ಯಾಟ್ಸ್ ಆಫ್ ಹೇಳಬೇಕು ಎನಿಸುತ್ತೆ. ಪತ್ರಿಕಾ ರಂಗದಲ್ಲಿ ಅಪಾರ ಅನುಭವ ಹೊಂದಿರುವ ಮಯಾಸ ಖಂಡಿತಾ ಎಲೆ ಮರೆ ಕಾಯಿಯಲ್ಲ. ಅಂದ ಹಾಗೆ ಮಯಾಸನ ನಿಜವಾದ ಹೆಸರು ಜ್ಞಾನೇಂದ್ರ ಕುಮಾರ್. ಮಯಾಸನ ಕವಿತೆಗಳು ನಮಗೆ ಎಷ್ಟು ಆಪ್ತವಾದಂತೆ ಕಾಣುತ್ತವೆಯೋ ಅಷ್ಟೇ ಆಪ್ತ ಅವರ ಮಾತುಗಳು.. ಇಗೋ ಮಯಾಸರ ಜೊತೆ ಎಲೆ ಮರೆ ಕಾಯಿಗಾಗಿ ನಡೆಸಿದ ಮಾತುಕತೆಯ ತುಣುಕುಗಳು ನಿಮಗಾಗಿ..

 ಜ್ಞಾನೇಂದ್ರ ಕುಮಾರ್ ಪಿ.ಬಿ. (ಮಯಾಸ)

"ಮಲೆನಾಡ ಮಡಿಲು ಕಾಫಿ ಏಲಕ್ಕಿಯ ತವರೂರು ಹೇಮಾವತಿ ನದಿ ತೀರದ ಸಕಲೆಶಪುರ ತಾಲ್ಲಕೂಕಿನ ಹೆತ್ತೂರು ಹೋಬಳಿಯ ವಣಗೂರು ಅಂಚೆಯ ಬಿಸಲೆ ಅಭಯಾರಣ್ಯದ ತಪ್ಪಲಿನ ಕುಗ್ರಾಮ 'ಪಟ್ಲ' ನನ್ನ ಹುಟ್ಟೂರು. ತಂದೆ ಪಿ. ಸಿ ಬಸವಯ್ಯ ವೃತ್ತಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಸೀನಿಯರ್ ಹೆಲ್ತ್ ಇನ್ಸ್ ಫೆಕ್ಟರ್ ಆಗಿದ್ದವರಾದರೂ ಕಡುಬಡತನದ ರುಚಿ ಕಂಡವರು. ತಂದೆ ಚಿಕ್ಕವಯಸ್ಸಿನಿಂದಲೂ ಸವರ್ಣೀಯರ ಶೋಷಣೆಯ ವಿರುದ್ದ ಸ್ವಾಭಿಮಾನದ ನ್ಯಾಯಬದ್ದ ಹೋರಾಟ ನಡೆಸಿಕೊಂಡೇ ಬಂದವರಾದ್ದರಿಂದ 1980 ರ ದಲಿತ ಸಂಘಟನೆ ಉಛ್ರಾಯ ಘಟ್ಟದಲಿದ್ದವೇಳೆ. ನೌಕರಿಯ ನಡುವೆಯೂ ದಸಂಸ ದಲ್ಲಿ ಸಕ್ರೀಯರಾಗಿದ್ದರ ಪರಿಣಾಮ ನಾನು 15 ನೇ ವಯಸ್ಸಿಗೆ ದಸಂಸ ಮುಖೇನ ವಿಧ್ಯಾರ್ಥಿ ದೆಸೆಯಲ್ಲೇ ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡೆ. ಸಾಮಾನ್ಯರ ನಡುವೆ ಸಾಮಾನ್ಯವಾಗಿ ಬೆರೆಯುವ..ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ದ ಸಿಡಿಮಿಡಿಗೊಳ್ಳತೊಡಗಿದೆ. ಅಪ್ಪನ ಓದು ಮತ್ತು ಬರವಣಿಗೆಯ ಹವ್ಯಾಸ ಓದು ಮತ್ತು ಬರವಣಿಗೆಗೆ ಆಕರ್ಷಿಸಿತಾದರೂ ಅಪ್ಪ ಓದುತಿದ್ದ ಲೆನಿನ್ನು..ಕಾರ್ಲ್ ಮಾರ್ಕ್ಷ್..ಭಗತ್ ಸಿಂಗ್ ಅಜಾದ್ ಚಂದ್ರಶೇಖರ್ ಅಂಬೇಡ್ಕರ್..ಬಸವಣ್ಣ..ಕುವೆಂಪು ತೇಜಸ್ವಿ...ಯಾವುದೂ ಅರ್ಥವಾಗುತ್ತಿರಲಿಲ್ಲ...

ಅಪ್ಪನ ಓದೆಂಬ ಭಯಕ್ಕೆ ಮನೆಯಲಿರುತಿದ್ದ 'ಲಂಕೇಶ್' ಕೈಗೆತ್ತಿಕೊಂಡು ಕೂರುತಿದ್ದೆ..ಪದೇ ಪದೇ ನೀಲು ಪಧ್ಯಗಳ ಮೇಲೆ ಕಣ್ಣಾಯಿಸುತಿದ್ದೆ. ಕಾಲೇಜಿಗೆ ಬರುವಷ್ಟರಲ್ಲಿ ಹನಿಕವಿತೆಗಳ ಬರೆವ ಪ್ರಯತ್ನಪಟ್ಟೆ...ಈ ನಡುವೆ ಜೀವದ ಗೆಳೆಯ ನನ್ನೂರಿನ ದಿನೇಶ್ ಕುಮಾರ್ ಎಸ್. ಸಿ. ಸಂವಹನ ವೇದಿಕೆ ಎಂಬ ಸಾಂಸ್ಕೃತಿಕ ಸಂಘಟನೆಯಲ್ಲಿ ಕ್ರಿಯಾಶೀಲನಾಗಿದ್ದು ಆಗಾಗ್ಗೆ ಆಯೋಜಿಸುವ ಸಾಹಿತ್ಯ ಸಮಾರಂಭಗಳಿಗೆ ಕರೆದೊಯ್ಯಲು ಆರಂಬಿಸಿದಾಗ ಸಾಹಿಯ್ಯದ ಮಜಲುಗಳ ಪರಿಚಯವಾಗತೊಡಗಿತು ಸಂವಾದಗಳಲ್ಲಿ ಭಾಗವಹಿಸೋದು ಕವಿಗೋಷ್ಟಿಗೋಸ್ಕರ ಕವಿತೆ ಬರೆಯೋದು..ವಾಚಿಸೋದು ಹಿಂಗೆ ಶುರುವಾದ ಸಾಹಿತ್ಯ ಕೃಷಿ...ಬಿಎ ಪದವೀಧರನಾದ ನನ್ನಲ್ಲಿ ಸಾಂಸ್ಕೃತಿಕ ಅಭಿರುಚಿಗಳನ್ನು ಪರಿಚಯಿಸತೊಡಗಿತು. ಗೆಳೆಯ ದಿನೇಶ್ ಆದಿನಗಳಲ್ಲೇ ಹವ್ಯಾಸಿ ಪತ್ರಕರ್ತ. ಈತನ ಸಹವಾಸದಿಂದ ಇಂದು ಪತ್ರಿಕಾವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ. ವಾರಪತ್ರಿಕೆ..ದಿನಪತ್ರಿಕೆಗಳಲ್ಲಿ ವರದಿಗಾರಿಕೆ ಮಾಡಿದ್ದೇನೆ. ಹಾಲಿ ರಕ್ಷಣಾವೇದಿಕೆ ಮುಖವಾಣಿ 'ಕರವೇ ನಲ್ನುಡಿ' ಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿದ್ದಾನೆ. ಓದುವ ಛಾಳಿಯಿದೆ. ತೋಚಿದಕ್ಕೆ ಬಣ್ಣ ಕಟ್ಟಿ ಗೀಚುತ್ತೇನೆ.

ನಂಗೆ ಎರಡ್ ಹೆಸ್ರು. ಮನೆಲಿ ಮಹೇಶ ಅಂತ್ ಕರೆಯೋರು. ಇಸ್ಕೂಲಲ್ಲಿ ಜ್ಞಾನೇಂದ್ರ ಕುಮಾರ್ ಪಿ.ಬಿ. ಅಂತ ಕರ್ಯೋರು. ಪಿ.ಬಿ. ಒಂದ್ ದಶಕದ ಕೆಳ್ಗೆ ನಾನೇ ಪ.ಬ ಮಾಡ್ಕಂಡೆ. ಮೂರ್ ದಶಕದ ಕೆಳ್ಗೆ ನನ್ ವಾರಗೆಯವರು ಸರಿಯಾಗಿ ಉಚ್ಚಾರ ಮಾಡಕ್ಕಾಗದೆ....ನನ್ನುನ್ನ ಮಯಾಸ ಅಂತ ಕರ್ಯೋರು....ಹಂಗಾಗಿ ಮಯಾಸ ಹೆಸರಲ್ಲಿ ಏನಾರ ಬರೆದ್ರೆ ಅದುನ್ನ ಮಡಗಕ್ಕೆ ಒಂದ್ ಕಣಜಬೇಕಲ್ಲ ಅದ್ಕೆ ಈ ಜೋಕಾಲಿ ಕಣಜ. ಬುದ್ವಂತ್ರು ಓದೋ ಚನಾಗಿರೋದ್ನಓದ್ತೀನಿ. ವ್ಯಾಕರಣ ಪಾಕರಣ ಗೊತ್ತಿಲ್ಲ ತೋಚಿದನ್ನ ಗೀಚಾಕೋ ಛಾಳಿ ಇದೆ. ಗುಂಪಲ್ಲಿ ಪಸಂದಾಗ್ ಹಾಡ್ತೀನಿ ರಾಗ ವಸಿ ದೊಡ್ದು. ಸುಮಾರಿಕೆ ಬಡಿಯಕ್ಕೆ ಬರುತ್ತೆ. ನನ್ನೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ 'ಪಟ್ಲ' ಹಳ್ಳಿಲುಟ್ಟಿರು ಪ್ಯಾಟೆಲೆ ಬೆಳದಿರೋದು. ಸದ್ಯಕ್ಕೆ ಕೆಟ್ಟು ಬೆಂಗಳೂರ್ ಪಟ್ಣ ಸೇರೀವ್ನಿ. ಅಮಾಯಕನೂ ಮುಗ್ಧನೂ ಆದ ನನಗೆ ನಿಮ್ಮಂತ ನಾಕ್ ಜನ ಸಿಕ್ಕವ್ರೆ. ಸುಳ್ಳೇಳಿರೂ ಗೊತ್ತಾಗದ ಹೆಂಡತಿ ಜೊತೆಗವ್ಳೆ. ಈಗ್ ತಾನೆ ಪಿಳಿಪಿಳಿ ಕಣ್ ಬಿಡ್ತಾ ಇರೋ ಎಂಡ್ ಮಕ್ಕಳಿವೆ. ಮರೆತ ಹುಡ್ಗೀರ್ ಹೆಸರು ಒಂದು ನೆನಪಿಲ್ಲ.

ಗಣ-ಮಾತ್ರೆಗಳು..ಛಂದಸ್ಸುಗಳು ತದ್ಭವ ತತ್ಸಮಗಳ ಹಂಗಿಲ್ಲದೇ ಆಡುಭಾಷೆಯಲ್ಲಿ ಯಥಾವಥ್ ಪಧ್ಯಬರೀಬೇಕು ಅನಿಸ್ತು. ಬರ್ಯೋಕೆ ಆರಂಭಿಸಿದೆ. ಅವನೆಲ್ಲಾ ಒಂದೆಡೆ ಕಲೆಹಾಕಬೇಕು ಅನಿಸ್ತು' ಜೆಕೆ ಜೋಕಾಲಿ ನರ್ಕೆ ಮನೆ ಅಂತ ಒಂದ್ ಬ್ಲಾಗ್ ಮಾಡಿದೆ. ಸರಳತೆ ಮತ್ತು ಸಹಜತೆ ನನಗೆ ಇಷ್ಟ. ಆದುನಿಕ ಭರಾಟೆ ನಡುವೆ ಕಳೆದೋದೆ ಅನಿಸುತ್ತೆ.ಆಗೆಲ್ಲ ಹಳೆದಿಗಳ ಮೆಲುಕು ಹಾಕ್ತೇನೆ. ಬಂದ ಭಾವನೆಗೆ ಮಯಾಸ ಜೀವ ತುಂಬ್ತಾನೆ. ನನಗಿಷ್ಟ ಆಗೋಹಾಗೆ ಬರೆಯೋ ಪ್ರಯತ್ನದಲ್ಲಿದ್ದೇನೆ."

ಎಂದು ಮಾತು ಮುಗಿಸಿದ ಗೆಳೆಯ ಮಯಾಸ "ಜಾಸ್ತಿ ಅನಿಸಿದ್ದನ್ನ ಮುಲಾಜಿಲ್ಲದೆ ಕಿತ್ತೆಸಿರಿ ಸಾ...ಯಾವ್ದಾರ ಬಿಟ್ಟೀನಿ ಅಂದ್ರ ಒಂದ್ ಪೋನ್ ಹಚ್ಚಿ ಆಪ್ ದ ರೆಕಾರ್ಡ್ ಕೂಡ ಹ್ಯೋಳ್ತೀನಿ ನನ್ ಜೀವನದಲ್ಲಂತು ಮಜಬೂತ್ ಕತೆಗಳಿವೆ. ಹೋರಟಕ್ಕೋಸ್ಕರ 23 ಕೇಸು ಅನುಭವಿಸಿದ್ದೀನಿ. ನಂದು ಹಿಂಗೆ ಅಂತ ಕ್ಯಾರೆಕ್ಟರ್ ಇಲ್ಲ ಸಾ..ನನ್ ಮನ್ಸಿಗೆ ಹಿಡ್ಸೋದೆಲ್ಲಾ ಮಾಡ್ತೀನಿ. ಸಖತ್ ಸ್ವಾಭಿಮಾನಿ..ನಿಯತ್ತು ಅಂತ ಮಾತ್ರ ಅನ್ಕಂಡೀವ್ನಿ." ಅಂತ ಥೇಟ್ ಹಳ್ಳಿ ಹೈದನ ತರಹ ಮಾತನಾಡುವಾಗ ಅವರ ಮಾತುಗಳನ್ನು ಇನ್ನಷ್ಟು ಹೊತ್ತು ಕೇಳಿಸಿಕೊಳ್ಳಬೇಕು ಅನಿಸುತ್ತೆ. ಏನು ಮಾಡೋದು ಇಲ್ಲಿ ಹೆಚ್ಚು ಮಾತನಾಡಲಾಗದು. ಆ ಕಾರಣದಿಂದ ಅವರ ಮಾತುಗಳನ್ನೆಲ್ಲಾ ಅವರ ಬ್ಲಾಗಿನಲ್ಲೇ ಕೇಳಿಸಿಕೊಳ್ಳೋಣ..

ಮಯಾಸ ಅವರ "ಜೆ ಕೆ ಜೋಕಾಲಿ" ಎಂಬ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ. ಸಮಯವಿದ್ದಾಗ ತಪ್ಪದೇ ಕಣ್ಣಾಡಿಸಿ..
http://jkjokaali.blogspot.in/

ಮಯಾಸ ಅವರ ಒಂದೆರಡು ಸೂಪರ್ ತುಣುಕುಗಳು ನಿಮಗಾಗಿ...

ಇಬ್ರೂ ಸೇರ್ಕಂಡೆ
ಒಪ್ಕಂಡೆ ಪಿರೂತಿ ಮಾಡಿದ್ವಿ
ನನ್ ಮರ್ತ್ ನೀ-
ಗಟ್ಮುಟ್ಟಾಗ್ ಗುಂಡ್ಕಲ್ ಇದ್ದಂಗಿದ್ದೀ
ಮತ್ ನಾ ಯಾಕ್ 
ಕಣ್ಣೀರಾಕಂಡ್ ಗೋಳಾಡ್ಕಂಡ್
ಕಾಲ ತಳ್ಲೀ ಮಾರಾಗಿತ್ತಿ
ನಗ್ಸೋರ್ ಸಿಕ್ಕೇ ಸಿಗ್ತಾರ
ನಕ್ಕಂಡ್ ನಕ್ಕಂಡೆ
ಕಾಲಕಳಿತೀನ್ ಬುಡತ್ಲೆಗೆ...!
*****
ಕವ್ಲಿ ನೀರಲ್ ಕೈ ತೊಕ್ಕಂದ್
ಗದ್ದೆ ಬದೀಲ್ಕುಂತು
ಬುತ್ತಿ ಬಿಡಿಸ್ಕಂಡು
ಬಾಳೆಲೆ ಹರ್ಡ್ಕಂಡ್ ಬಡಿಸ್ಕಂಡ್
ಬಾರ್ಸೋ ಮಜ ಪ್ಲೇಟ್ ಮೀಲ್ಸಲಿಲ್ಲ ಕನ..!

ಸೌದೆವಲೀಲಿ, ಮಣ್ಣಿನ್ಮಡ್ಕೆಲಿ
ಮುಳ್ ಹೊಡ್ಸಿದ್ ಒಳ್ಕಲಲ್ಲಿ
ಕಾರಕಡ್ದು , ರುಬ್ ಮಾಡ್ತಿದ್
ಸೊಪ್ಸಾರಿನ್ಗಮ ಮಿಕ್ಸಿ, ಗ್ರೈಂಡರ್
ಬಳ್ಸಮಾಡ್ರೆ ಗಮ್ಗುಡಲ್ಲ ಕನ...!
*****
ಮತ್ತೆ ಸಿಗೋಣ

ನಿಮ್ಮ ಪ್ರೀತಿಯ
ನಟರಾಜು :))


4 ಕಾಮೆಂಟ್‌ಗಳು:

 1. ಚುಟುಕು ಅಂಕಣದ ಮೂಲಖ ನನಗೆ ತುಸು ಹತ್ತಿರವಾದವರು ನೀವು ಜೆ.ಕೆ ಸರ್ ...ತುಸು ಆಡು ಮಾತಿನಲಿ ಕವನ ಗೀಚಿದರೂ ಮೂಲತಃ ತುಂಬು ಪ್ರಜ್ಞಾವಂತರು ಎನ್ನುವುದು ನನ್ನ ಅಭಿಮತ. ನಿಮ್ಮ ಕವಿತೆಗಳನು ಸವಿದಿದ್ದೇನೆ, ಮುಂದೆಯು ನಿಮ್ಮ ಸಾಹಿತ್ಯವನು ಸವಿಯುವೆನು. ಊರು ಏನೇ ಅಂದು ಕೊಂಡುರೇನು ನೀವು ಬರೀರಿ ಜೆ.ಕೆ ಸರ್.ನಾವು ನಿಮ್ಮ ಕಾವ್ಯ ವೈಭವವನು ಸವಿಯುತ್ತೇವೆ. ಪರಿಚಯ ಚೆಂದಾಗಿ ಮೂಡಿ ಬಂದಿದೆ ಗೆಳೆಯ, ನಟರಾಜು ....ಶುಭವಾಗಲಿ.............

  ಪ್ರತ್ಯುತ್ತರಅಳಿಸಿ
 2. ಸರಳ ಭಾಷೆಯಲ್ಲಿ ಸಾಹಿತ್ಯ ಬರೆಯುವುದು ನನ್ನ ಬಹಳ ಇಷ್ಟದ ಪ್ರಕಾರಗಳಲ್ಲಿ ಒಂದು. ಅದರಲ್ಲೂ ನಮ್ಮ ಹಳ್ಳಿ ಭಾಷೆಯಲ್ಲಿ ಅದನ್ನು ಬರೆದರೆ, ಅದನ್ನು ಓದೋ ಮಜಾನೇ ಬೇರೆ. ನಿಮ್ಮ ಸಾಹಿತ್ಯ ಕೃಷಿ ಹೀಗೆ ಮುಂದುವರೆಯಲಿ ಮಯಾಸರವರೇ!!

  ಏನ್ಲಾ ನಟ್ಟು, ನಿನ್ ಬಗ್ಗೆ ಬರೀತ್ಲೇ ಇವ್ನಿ. ಇನ್ನೊಂದ್ ಕಿತ ಹೇಳ್ತಿವ್ನಿ. ಪಸಂದಾಗದೆ!! :)

  ಪ್ರತ್ಯುತ್ತರಅಳಿಸಿ
 3. ಪಟ್ಣದ ಪ್ರತಿಭೆ ಜ್ಞಾನೇಂದ್ರ ಕುಮಾರ್ ಪಿ.ಬಿ. (ಮಯಾಸ) ಅವರ ಗ್ರಾಮೀಣ ಸೊಗಡಿನ ಕಾವ್ಯ ಶೈಲಿ ಮತ್ತು ಅದರ ಹೂರಣ ನೆಚ್ಚಿಗೆಯಾಯ್ತು.

  ವರ್ಷಾರಂಭಕ್ಕೆ ಪರಿಚಯಿಸಿದ ಸಮರ್ಥ ಕವಿ.

  ಪ್ರತ್ಯುತ್ತರಅಳಿಸಿ