ಎಲೆ ಮರೆ ಕಾಯಿ ೭೦
ಕಣ್ಮುಂದೆ ಕಣ್ತುಂಬುವಂತೆ ನಿಂತ ನಾನು
ಕಾಣಬಾರದೆಂದು ಕಣ್ಮುಚ್ಚಬೇಡ
ಭ್ರಮೆಯ ಕವಚ ಸುರಕ್ಷವೆಂದು
ನಾನಿಲ್ಲದ ಸುಳ್ಳಿನೊಳಹೊಕ್ಕಬೇಡ
ಕಾಲಲೊದ್ದಾದರೂ ಒಮ್ಮೆ ನೋಡು
ನಾನಿರುವ ಆ ಸ್ಪರ್ಶ ನಿನಗರಿವಾದರೆ ಸಾಕು
ಪ್ರೀತಿ ಕುರಿತ ಮೇಲಿನ ಚಂದದ ಸಾಲುಗಳು ಅನುಭಾವಶರಧಿ ಎಂಬ ಬ್ಲಾಗಿನಲ್ಲಿ ಕಣ್ಣಿಗೆ ಬಿದ್ದಾಗ "ಅಬ್ಬಾ! ಎಂಥಾ ಸಾಲುಗಳು" ಎನಿಸಿತ್ತು. ಕಾವ್ಯಧಾರೆಯಲ್ಲೇ ನಿತ್ಯ ಮುಳುಗೇಳುವ ಕವಿಯ ಹಾಗೆ ಕಾಣುವ ಈ ಬರಹದ ಸೃಷ್ಟಿಕರ್ತಳ ಪದಪಯೋಗ, ಭಾವನೆಗಳ ಹೊರ ಹರಿವು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಕಾವ್ಯಲೋಕದಲ್ಲಿ ಕಂಡುಕೊಂಡ ಲೋಕ ನಮಗೆ ಖಂಡಿತಾ ಕಾಣಲಾರದು ಎನಿಸಿಬಿಡುತ್ತದೆ. ಕವಿತೆ ಬರೆಯುತ್ತಾ ಬರೆಯುತ್ತಾ ಈ ಲೋಕದಿಂದ ಮತ್ತೊಂದು ಲೋಕಕ್ಕೆ ಹೋಗಿ ಅಲ್ಲಿ ವಿಹರಿಸುತ್ತಾ ಆ ಲೋಕದ ಸೌಂದರ್ಯವನ್ನು ಸವಿಯುತ್ತಾ ನಮಗೂ ಕಾವ್ಯರೂಪದಲ್ಲಿ ಅವರ ಅನುಭವಗಳ ಮಾಲೆಗಳನ್ನು ಕಟ್ಟಿಕೊಡುವ ಇಂತಹ ಕವಿಗಳಿಗೆ ನಮನಗಳು. "ಭಾವಗಳ ಅನುಭವಿಸಿ ..... ಅನುಭವವ ಅನುಭಾವವಾಗಿಸಿದ ಅನುಭಾವಶರಧಿ" ಎಂದು ತಮ್ಮ ಬ್ಲಾಗಿಗೊಂದು ವ್ಯಾಖ್ಯಾನ ನೀಡಿರುವ ಈ ಕವಿಯತ್ರಿಯ ಕವನಗಳು ಸುಂದರ ಅನುಭಾವ ಉಳ್ಳ ಸಾಲುಗಳು.
"ನಾಲ್ಕು ಗೋಡೆಗಳ ನಡುವೆ ಕಡಿಮೆಯೆಂದರೆ ಸುಮಾರು ಹತ್ತು ಹದಿನೈದು ವರ್ಷ ನಾವು ಶೈಕ್ಷಣಿಕವಾಗಿ ಕಲಿಯುವುದು, ಪದವೀಧರರಾಗುವುದು, ಎಂದು ಯಾವುದನ್ನು ಹೇಳುತ್ತೇವೋ ಅದು ಕಲಿಯುವ ಪ್ರಕ್ರಿಯೆಯನ್ನು ಕಲಿಯಲಿಕ್ಕೆ ಮಾತ್ರ ಎಂದು ನನ್ನ ಭಾವನೆಯೂ ಹೌದು, ಅನುಭವವೂ ಹೌದು. ಅದರೊಳಗಿನ ವಸ್ತುವಿಷಯದ ಮುಖಾಂತರಕ್ಕಿಂತ ಹೆಚ್ಚು ಅದನ್ನು ಅಭ್ಯಸಿಸಿದ ರೀತಿ, ಬೇಕಾದ ಶ್ರದ್ಧೆ, ಸಾಧನೆಗೆ ಇರಬೇಕಾದ ಬದ್ಧತೆ, ಪರಿಶ್ರಮದ ಗುಟ್ಟು, ಮತ್ತು ಸೋಲುಗೆಲುವಿನ ರುಚಿ-ಇವುಗಳ ಮೂಲಕ ಮುಂದಿನ ಜೀವನಕ್ಕೆ ಸಹಾಯ ಒದಗುವುದೆಂದು ನನ್ನ ಭಾವನೆ."
ಎನ್ನುವ ಕವಯತ್ರಿಯ ಗದ್ಯ ಪ್ರಯೋಗವೂ ಭಾವನೆಗಳಿಂದ ತುಂಬಿ ತುಳುಕುತ್ತಿವೆ ಅನಿಸಿಬಿಡುತ್ತದೆ. ಅದಕ್ಕೇ ಸಾಕ್ಷಿ ಮೇಲಿನ ಸಾಲುಗಳು.
ಉರಿಸುವುದಕೇ ಕೆಲವು, ಬೇಯುವುದಕೇ ಕೆಲವು.
ಪಾತ್ರ ಹಂಚಿಕೆಯಾಗಿಬಿಟ್ಟಿದೆ, ನಾಟಕವೂ ಸುರುವಾಗಿದೆ,
ಬದಲಾಗುವುದು, ಹಿಂತೆಗೆಯುವುದು- ಈಗಾಗದು.
ಎಂದು ಬರೆಯುವ ಕವಯತ್ರಿ ಅನುರಾಧ ಪಿ ಸಾಮಗ ಅವರನ್ನು ಎಲೆ ಮರೆ ಕಾಯಿ ಎನ್ನಲಾಗದು. ಗದ್ಯಕ್ಕಿಂತ ಹೆಚ್ಚು ಪದ್ಯಗಳನ್ನು ಬರೆಯಲು ಇಚ್ಚಿಸುವ ಈ ಕವಯತ್ರಿ ಚಂದದ ಗದ್ಯಗಳನ್ನೂ ಸಹ ಬರೆಯಬಲ್ಲರು. ಇವರ ಗದ್ಯ ಪದ್ಯಗಳ ಪಯಣ ಹೀಗೆಯೇ ಸಾಗುತ್ತಿರಲಿ. ನನ್ನ ಬಗ್ಗೆ ಎಂದು ತಮ್ಮ ಬ್ಲಾಗಿನಲ್ಲಿ "ನಾನೊಬ್ಬ ಮನುಷ್ಯಳು. ಅದಕ್ಕಿಂತ ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ." ಎಂದು ಬರೆದುಕೊಂಡಿರುವ ಇವರು ಮನುಷ್ಯರೇನೋ ಸರಿ ಆದರೆ ಕವಿತೆಗಳ ಬರೆಯುವ ಇವರು ನಮ್ಮ ಪಾಲಿಗೆ ಕವಯತ್ರಿ. ಸಹೃದಯಿಗಳೇ.. ಅನುರಾಧ ಮೇಡಂ ರವರ ಬಗ್ಗೆ ಅವರದೇ ಮಾತುಗಳು ಇಂದಿನ ಎಲೆ ಮರೆ ಕಾಯಿಗಳ ಜೊತೆ ಮಾತುಕತೆಯಲ್ಲಿ ಇಗೋ ನಿಮಗಾಗಿ..
ಅನುರಾಧ ಪಿ. ಸಾಮಗ |
"ಎಲೆ ಮರೆ ಕಾಯಿ ಅಂಕಣಕ್ಕಾಗಿ ನಿಮ್ಮ ವಿವರಗಳನ್ನು ಕೊಡಿ ಎಂದು ಸಹೋದರ ನಸೀಮ ಅವರು ಕೇಳಿದಾಗ ನನಗೆ ಮೊದಲು ಅನ್ನಿಸಿದ್ದು- ಎಲೆಮರೆಯದ್ದೇನೋ ಹೌದು, ಆದರೆ ನನ್ನ ವ್ಯಕ್ತಿತ್ವ ಅಥವಾ ಬರವಣಿಗೆಯ ಕ್ಷೇತ್ರದಲ್ಲಿ ನಾನು ಕಾಯಿಯ ಘಟ್ಟ ತಲುಪಿದ್ದು ಹೌದಾ...? ಹೊರಬರಲಿರುವ ನನ್ನ ಅಂಬೆಗಾಲಿನ ಕವನಸಂಕಲನಕ್ಕೆ ನಾನು ಯೋಚಿಸಿರುವ ಹೆಸರು ’ಮೊಗ್ಗು ಮಾತಾಡಿತು’ ಅಂತ.. ಅಂದರೆ ನಾನಿನ್ನೂ ಮೊಗ್ಗು, ಮಾತಾಡುವ ಹಂತಕ್ಕಷ್ಟೇ ತಲುಪಿದ್ದೇನೆ, ಅರಳಿ ಹೂವಾಗಿ ಕಾಯಾಗುವ ಕ್ಷಣ ಇನ್ನೂ ತುಂಬಾ ದೂರ ಇದೆ ಅನ್ನುವುದೇ ನನ್ನ ಅನಿಸಿಕೆ. ಆ ದಾಕ್ಷಿಣ್ಯದಿಂದಲೇ ಸ್ವಪರಿಚಯ ಮಾಡಿಕೊಳ್ಳುತ್ತಿದ್ದೇನೆ.
ಉಡುಪಿ ಜಿಲ್ಲೆಯ ಕಾಪುವಿನ ಒಂದು ಸಣ್ಣ ಹಳ್ಳಿ, ಉಳಿಯಾರು ನನ್ನೂರು, ಮಾತೃಭಾಷೆ ತುಳು. ಅಪ್ಪ ಶ್ರೀ ಯು. ಅನಂತಕೃಷ್ಣ ಭಟ್ ರವರು ಭಾರತೀಯ ಜೀವನ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತರು, ಅಮ್ಮ ಶ್ರೀಮತಿ ಗಾಯತ್ರಿ ಭಟ್, ನನಗೆ ಇಬ್ಬರು ತಂಗಿಯರು. ಕರಾವಳಿಯ ಅದರಲ್ಲೂ ನಮ್ಮೂರಿನ ಪ್ರಕೃತಿ ಸೌಂದರ್ಯ ನಾನು ಜೀವನದಲ್ಲಿ ಅತ್ಯಂತ ಹೆಚ್ಚು ಆಸ್ವಾದಿಸಿದ ವಿಷಯ. ಭೋರ್ಗರೆಯುತ್ತ ದಡ ಮುಟ್ಟಲು ಹವಣಿಸಿ ಬರುವ ಮತ್ತು ದಡ ಮುಟ್ಟಿದ ಕ್ಷಣ ತಟ್ಟನೆ ಶಾಂತವಾಗುವ ಸಾಗರದ ಅಲೆಗಳು, ಮಳೆಗಾಲದಲ್ಲಿ ಗದ್ದೆಬಯಲನ್ನೆಲ್ಲ ಆವರಿಸಿ ಹರಿವ ಕೆಂಬಣ್ಣದ ಅಗಾಧ ನೀರಿನ ಹರಿವು (ತುಳುವಿನ "ಬೊಳ್ಳ" ) ಅತ್ಯಂತ ಪ್ರೀತಿಪಾತ್ರ ಮತ್ತು ಆಸಕ್ತಿ ಕೆರಳಿಸಿದ ಬಾಲ್ಯದ ಅಂಗಗಳು. ನೀರು ಪ್ರತಿ ಘಟ್ಟದಲ್ಲೂ ಒಂದಲ್ಲ ಒಂದು ತರ ಹೋಲಿಕೆಯಾಗಿ, ಮಾದರಿಯಾಗಿ, ಪಾಠವಾಗಿ... ಹೀಗೆ ಹಲವು ರೂಪದಲ್ಲಿ ನನ್ನ ಯೋಚನೆಯ ಅವಿಭಾಜ್ಯ ಭಾಗವಾಗಿರುವುದು ಸಮುದ್ರತಟದಲ್ಲಿ ಕಳೆದ ಬಾಲ್ಯದ ಪರಿಣಾಮ ಅನ್ನಿಸುತ್ತದೆ. ಈಗ ನೆಲೆಸಿರುವುದು ಮೈಸೂರು, ಪತಿ ಪ್ರಶಾಂತ್ ಸಾಮಗರವರು ಕಿರ್ಲೋಸ್ಕರ್ ಇಲೆಕ್ಟ್ರಿಕ್ ಕಂಪನಿಯಲ್ಲಿ ಇಂಜಿನಿಯರ್ ಹಾಗೂ ಮಗಳು ಅರ್ಪಿತಾ ಮೂರನೆಯ ತರಗತಿಯ ವಿದ್ಯಾರ್ಥಿನಿ.
ಒಂದನೇ ತರಗತಿ ಮತ್ತು ಹತ್ತನೇ ತರಗತಿಯನ್ನು ಕಾರಣಾಂತರಗಳಿಂದ ಉಡುಪಿಯ ಸಂತ ಸಿಸಿಲಿ ಕಾನ್ವೆಂಟ್ ನಲ್ಲಿ ಓದಿದೆ, ಉಳಿದ ಮಧ್ಯದ ಭಾಗ ಕರಂದಾಡಿಯ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಾಪುವಿನ ಮಹಾದೇವಿ ಪ್ರೌಢ ಶಾಲೆಯಲ್ಲಿ ಓದಿದೆ. ಈ ಮಧ್ಯಭಾಗದಲ್ಲಿಯೇ ನನ್ನ ವ್ಯಕ್ತಿತ್ವದೊಳಕ್ಕೆ ಬರವಣಿಗೆ, ಅಭಿನಯ ಮತ್ತು ಹಾಡುವಿಕೆ ಸೇರ್ಪಡೆಯಾದದ್ದು. ಅಳಿದವರಲ್ಲಿ ಉಳಿದವನೇ ಗೌಡ ಎಂಬಂತೆ ಆ ಹಳ್ಳಿಯ ವಾತಾವರಣದಲ್ಲಿ ನಾನು ಮಾಡಿದ ಪ್ರತಿಯೊಂದು ಪಠ್ಯ ಹಾಗೂ ಪಾಠ್ಯೇತರ ಚಟುವಟಿಕೆಗಳಿಗೆ ಸಿಗಬೇಕಾದ್ದಕ್ಕಿಂತ ಹೆಚ್ಚೇ ಪ್ರಶಂಸೆ ಸಿಕ್ಕಿ ಬಹುಶಃ ಆ ಪ್ರೋತ್ಸಾಹವೇ ನನ್ನನ್ನು ಇಂದಿಗೂ ಮುನ್ನಡೆಸುತ್ತಿರುವುದು. ಅಪ್ಪ ಹಲವಾರು ಭಕ್ತಿಗೀತೆಗಳು ಮತ್ತು ತತ್ವಪದಗಳನ್ನು ರಚಿಸಿರುತ್ತಾರೆ, ಹಾಗಾಗಿ ಅವರಿಂದ ರಕ್ತಗತವಾಗಿ ಬರವಣಿಗೆಯೆಡೆಗೆ ಒಲವು ನನ್ನಲ್ಲಿ ಬಂದಿದೆ, ಮತ್ತು ದೇವರ ಅನುಗ್ರಹದಿಂದ ಇತ್ತೀಚೆಗೆ ಬರೆಯುವ ಕಡೆಗಿನ ದಾಹ ತುಸು ಜಾಸ್ತಿಯಾಗಿದೆ. ನಾನು ಓದಿದ್ದು ಬಿ. ಎಸ್. ಸಿ., ಹಿಂದಿಯನ್ನು ಎರಡನೇ ಐಚ್ಚಿಕ ಭಾಷಾವಿಷಯವಾಗಿರಿಸಿಕೊಂಡು, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತದೊಂದಿಗೆ. ಪಠ್ಯ ವಿಷಯವಾಗಿ ಕನ್ನಡದ ಓದು ಹತ್ತನೇ ತರಗತಿಗೆ ಕೊನೆಗೊಂಡಿದ್ದು ಈಗ ಅದನ್ನು ಕನ್ನಡ ಎಮ್. ಎ.(ಮೊದಲನೇ ವರ್ಷ ಮುಗಿಯಿತು) ಮಾಡುವ ಮೂಲಕ ಮುಂದುವರೆಸುತ್ತಿದ್ದೇನೆ.
ಸಾಹಿತ್ಯಕೃಷಿಯ ಬಗ್ಗೆ ತಿಳಿಸಿ ಅಂದಿದ್ದಾರೆ, ನಟರಾಜ್ ಅವರು. ನಾನು ಸಾಹಿತ್ಯಿಕವಾಗಿ ಹೆಚ್ಚೇನೂ ಓದಿಕೊಂಡಿಲ್ಲ. ಸಣ್ಣವಯಸ್ಸಿನಲ್ಲಿ ಚಂದಮಾಮ, ಬಾಲಮಿತ್ರಗಳ ಜೊತೆ ಸುಧಾ, ಪ್ರಜಾಮತ, ತುಷಾರ, ಮಲ್ಲಿಗೆಯಂಥ ಪುಸ್ತಕಗಳ ಓದು ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಕದ್ದುಮುಚ್ಚಿ ಕಾದಂಬರಿಗಳನ್ನು ಓದಿದ್ದೂ ಇದೆ. ಅದರಲ್ಲೂ ನವೋದಯ ಕವಿಗಳಾದ ಕುವೆಂಪು, ಬೇಂದ್ರೆ, ಕೆ ಎಸ್ ನ, ಎನ್ ಎಸ್ ಎಲ್, ಜಿ ಎಸ್ ಎಸ್ ರವರೇ ಮೊದಲಾದ ಕವಿಗಳ ಕವನಗಳನ್ನು ಓದಿ ಮೊದಲು ಬರೆಯಲಿಕ್ಕೆ ಶುರು ಮಾಡಿದ್ದು ಅದೇ ಪ್ರಾಸಬದ್ಧ, ಗೇಯತೆಯ ಗುಣವುಳ್ಳ ಮಾತ್ರಾಬದ್ಧತೆಯ ಕವನಗಳನ್ನು. ಹತ್ತನೇ ವರ್ಷದಲ್ಲಿ ಮೊದಲ ಕವನ "ಅಜ್ಜನಗಡ್ಡ" ಬರೆದಿದ್ದೆ. ಆಮೇಲೆ ಕಾಲೇಜುದಿನಗಳಲ್ಲೂ (ಉಡುಪಿಯ ಪೂರ್ಣಪ್ರಜ್ಞ ಕಾಲೇಜು) ಸ್ವಲ್ಪ ಬರೆದಿದ್ದೆ. ಇತ್ತೀಚೆಗೆ ಬಿ. ಎಸ್. ಎನ್. ಎಲ್. ನ ಸಬ್ ಡಿವಿಜನಲ್ ಇಂಜಿನಿಯರ್ ಹುದ್ದೆಯಿಂದ ಐಚ್ಚಿಕನಿವೃತ್ತಿ ಪಡೆದ ನಂತರ ಪುನಃ ಬರೆಯಲು ಶುರು ಮಾಡುವಾಗ ಬಹುಶಃ ನವ್ಯದ ಮಾದರಿಯಲ್ಲಿ ಬರೆಯಲು ಆರಂಭಿಸಿದ್ದೇನೆ. ಪ್ರಾಸತ್ಯಾಗವೇ ಮೊದಲಾದ ಸಡಿಲಿಕೆಗಳು ರಚನೆಯಲ್ಲಿ ಕಟ್ಟುಪಾಡುಗಳಿಲ್ಲದ ಮುಕ್ತತೆಗೆ ಹಾದಿಯಾಗುವ ಮತ್ತು ವಸ್ತುವಿನ ಗೋಪ್ಯತೆ ಕಾಯ್ದುಕೊಳ್ಳುವ ಮೂಲಕ ರಚನೆಗಳನ್ನು ಸ್ವಲ್ಪ ಮಟ್ಟಿಗೆ ಕ್ಲಿಷ್ಟವಾಗಿಸುವ ಶೈಲಿ ನವ್ಯದ್ದು. ಸಾಧ್ಯವಾದಷ್ಟು ಅದನ್ನು ಪಾಲಿಸಲು ಪ್ರಯತ್ನಿಸುತ್ತಿದ್ದೇನೆ. ತೊದಲುನುಡಿಯನ್ನೂ ಆಸ್ಥೆಯಿಂದ ಆಲಿಸಿ ಮೆಚ್ಚುವುದು ನಮ್ಮ ತೀರಾ ಹತ್ತಿರದ ಅನುಬಂಧಗಳಿಗಷ್ಟೇ ಸಾಧ್ಯ. ಅಂಥ ಓದುಗವರ್ಗ ಇಲ್ಲಿ ಎಫ್. ಬಿ. ಮತ್ತು ಕನ್ನಡ ಬ್ಲಾಗ್ನಲ್ಲಿ ನನಗೆ ಸಿಕ್ಕಿ ಅವರೆಲ್ಲರ ಮೆಚ್ಚುಗೆಯಿಂದ, ಪ್ರೋತ್ಸಾಹದಿಂದ ಮುನ್ನಡೆಯುತ್ತಿದ್ದೇನೆ. ನನ್ನ ಬ್ಲಾಗ್ ಅನುಭಾವಶರಧಿಯಲ್ಲಿ (http://bhaavasharadhi.blogspot.com)
ಎಲ್ಲ ಬರಹಗಳನ್ನು ಒತ್ತಟ್ಟಿಗೆ ಸೇರಿಸಿಟ್ಟಿದ್ದೇನೆ.
ಇನ್ನು ಬರವಣಿಗೆಯ ಮುಂದಿನ ಕನಸಿನ ಬಗ್ಗೆ ..... ಬರವಣಿಗೆಗೇ ಅಂತ ಪ್ರತ್ಯೇಕವಾಗಿ ನಾನು ಕನಸು ಹೆಣೆದಿಲ್ಲ, ಬರೆಯುವ ಮುಂಚಿನಿಂದಲೂ ಇದ್ದ, ಈಗಲೂ ಇರುವ ಕನಸು ಒಂದೇ... ಇತರರನ್ನು ನೋಯಿಸದೇ ಬದುಕಬೇಕು, ಪ್ರತಿಕ್ಷಣವನ್ನೂ ಮಾನವನಾಗಿ ಹುಟ್ಟಿಸಿದ ವಿಧಿಗೆ ಕೃತಜ್ಞತಾಪೂರ್ವಕವಾಗಿ, ಸಂತೋಷದಿಂದ ಕಳೆಯುವ ಮುಕ್ತವಾದ ಸರಳಜೀವನ ನನ್ನದಾಗಬೇಕು, ಆ ನಿಟ್ಟಿನಲ್ಲಿ ಮುಂದಿರುವ ಗಳಿಗೆಗೆ ಒದಗಬೇಕು ಅದನ್ನು ಒದಗಿಸಿಕೊಳ್ಳಬೇಕು- ಅಷ್ಟೇ. ಯೋಚಿಸಿದ್ದನ್ನೇ ಆಡುವ ಹಾಗೂ ಆಡಿದಂತೆ ಬದುಕುವ, ನಾನು ತುಂಬಾ ಪ್ರೀತಿಸುವ ಜೀವನರೀತಿ ನನ್ನದು, ಕಲಿತು ಬಂದದ್ದಲ್ಲ ಸಹಜವಾಗಿ ಬಂದದ್ದು. ಅದರಿಂದ ಹಾನಿಗೊಳಗಾದರೂ ಅದನ್ನು ಕೈಬಿಡದೆ ಕೊನೆಯತನಕ ಬಾಳುವ ಕನಸೂ ಇದೆ.
ಬಹುಶಃ ನನ್ನ ಬಗ್ಗೆ ಇಷ್ಟೇ ಹೇಳಲಿಕ್ಕಿರುವುದು... ಈ ಮೂಲಕ ನಟರಾಜು ಮತ್ತು ಉಳಿದ ಎಲ್ಲಾ ಇಲ್ಲಿನ ಸನ್ಮಿತ್ರರಿಗೆ ನನ್ನಂಥ ಎಲ್ಲಾ ಕಿರಿಯ ಬರಹಗಾರನ್ನು ಪ್ರೋತ್ಸಾಹಿಸುತ್ತಿರುವುದಕ್ಕಾಗಿ ಮನಸಾರೆ ನಮನಗಳನ್ನು, ಕೃತಜ್ಞತೆಗಳನ್ನು ತಿಳಿಸುತ್ತೇನೆ."
ಎಂದು ಮಾತು ಮುಗಿಸಿದ ಅನುರಾಧ ಮೇಡಂ ರವರ ಮಾತು ನಿಮಗೆ ಇಷ್ಟವಾಯಿತು ಎಂದುಕೊಳ್ಳುವೆ ಗೆಳೆಯರೇ.. ಅವರ ಬ್ಲಾಗ್ ಲಿಂಕನ್ನು ತಮ್ಮ ಮಾತಿನಲ್ಲಿ ತಿಳಿಸಿದ್ದಾರೆ. ಅವರ ಬ್ಲಾಗ್ ಅನುಭಾವಶರಧಿ'ಯಲ್ಲಿ ನೀವು ಒಂದಷ್ಟು ವಿಹರಿಸಿ ಖುಷಿಪಡಿ..
ಅನುರಾಧ ಮೇಡಂ ರವರ ಒಂದೆರಡು ಕವನಗಳ ತುಣುಕುಗಳ ನಿಮಗಾಗಿ ನೀಡಿರುವೆ.. ಖುಷಿಯಿಂದ ಓದಿಕೊಳ್ಳಿ..
ಉತ್ತರವಿಲ್ಲವೆಂದಲ್ಲ, ದನಿಯಿಲ್ಲ....
ನಗಲಾರೆ, ನಗುವಿಲ್ಲವೆಂದಲ್ಲ, ಮೊಗವಿಲ್ಲ...
ಆಡಲಾರೆ, ಮಾತಿಲ್ಲವೆಂದಲ್ಲ, ಬಾಯಿಲ್ಲ....
ಅಳಲಾರೆ, ನೋವಿಲ್ಲವೆಂದಲ್ಲ, ಕಣ್ಣೀರಿಲ್ಲ...
ನಿನ್ನೆಡೆಗೇ ಹೊರಟದ್ದು, ತಲುಪಲಾಗಲಿಲ್ಲ...
ಕಾಲಿಲ್ಲವೆಂದಲ್ಲ, ದಾರಿಯಿಲ್ಲ....
ನೀನಂದದ್ದು ಕೇಳಿಸಿತು, ಅರಗಲಿಲ್ಲ,
ಮೆಚ್ಚಿಲ್ಲವೆಂದಲ್ಲ, ಕೆಚ್ಚಿಲ್ಲ....
ಲೋಕದಲಿದಕಿಂತ ಬೇರಿಲ್ಲ ಉಸಿರೇ..
ಹಾರಲೆಳಸುವ ರೆಕ್ಕೆ,
ಹಾಡಲೆಳಸುವ ನಾಲಿಗೆ,
ತುಂಡಾಗುವುದು.. ಮತ್ತು....
ಸತ್ಯ ಅಲ್ಲೆಲ್ಲ ಸೋಲುವುದು
*****
ನನಗೆ ತಾಗಲೆಂದೇ ನೀ ಕಳಿಸಿದ್ದು
ಬಂದು ತಲುಪಿದೆ, ಧನ್ಯವಾದಗಳು.
ಅಲ್ಲಿ ಬಿಸಿಯಾಗಿಯೇ ಹುಟ್ಟಿದ್ದರೂ,
ನನ್ನ ತಲುಪಿದಾಗ ಬಿಸಿಯಿರಲಿಲ್ಲ.
ಅಲ್ಲಿ ಚುಚ್ಚಲೆಂದೇ ಹೊರಟ ಬಾಣವಾದರೂ,
ಇಲ್ಲಿ ತಲುಪಿದ್ದು ಹೂವ ಹಿತಸ್ಪರ್ಶವಾಗಿ.
ಅಲ್ಲಿ ಸಿಟ್ಟು ಅದಕವಳಿಯಾಗಿ ಹುಟ್ಟಿದ್ದರೂ,
ಇಲ್ಲಿಗದು ನನ್ನನೆಮ್ಮದಿಯ ಜೊತೆ ಬಂದಿತ್ತು.
ಕೋಪಿಸಿಕೊಂಡಾದರೂ ಸರಿ, ಜೀವವೆ
ನೆನೆಯುತಿರು, ತೊರೆಯದಿರು,
ತೊರೆದು, ಮರೆಯದಿರು.
*****
ಕಾಯುತಿದ್ದ ಕಾದ ಭೂಮಿಯ ಮೇಲೆ
ಹಲಕಾಲದ ನಂತರ ಬಿದ್ದ ಕೆಲವೇ
ತುಂತುರು ಮಳೆಹನಿ
ಮಣ್ಣಿನೊಳ ಹೊಕ್ಕು ಕೂತಿದ್ದ
ವಾಸನೆಯ ಹೆಕ್ಕಿ ತಂದು
ಹಿತವಾದ ಪರಿಮಳವಾಗಿಸಿದವು
*****
ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು :)